Aero india 2023: ಯಲಹಂಕದಲ್ಲಿ ಮಾಂಸ ಮಾರಾಟಕ್ಕೆ ಮಾತ್ರ 22 ದಿನ ನಿಷೇಧ, ಹೋಟೆಲ್‌ಗಳಲ್ಲಿ ಮಾಂಸದೂಟ ಇರುತ್ತೆ!
Feb 04, 2023 07:22 PM IST
Aero india 2023: ಯಲಹಂಕದಲ್ಲಿ ಮಾಂಸ ಮಾರಾಟಕ್ಕೆ ಮಾತ್ರ 22 ದಿನ ನಿಷೇಧ
- ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಮಾಂಸ ಮಾರಾಟ, ಹೋಟೆಲ್‌ಗಳಲ್ಲಿ ಮಾಂಸದೂಟಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಈ ಕುರಿತು ಬಿಬಿಎಂಪಿ ಸ್ಪಷ್ಟನೆ ನೀಡಿದ್ದು, ಹೋಟೆಲ್‌ಗಳಲ್ಲಿ ಮಾಂಸಹಾರ ಮಾರಾಟ ಮಾಡಲು ಷರತ್ತುಬದ್ಧ ಅನುಮತಿ ನೀಡಿದೆ.
ಬೆಂಗಳೂರು: ಉದ್ಯಾನನಗರಿಯ ಯಲಹಂಕ ವ್ಯಾಪ್ತಿಯ ಮಾಂಸಪ್ರಿಯರಿಗೆ ಜನವರಿ 31ರಿಂದ ಫೆಬ್ರವರಿ 20ರವರೆಗೆ ಮಾಂಸದ ಅಡುಗೆ ಮಾಡುವಂತೆ ಇಲ್ಲ. ಫೆಬ್ರವರಿ13ರಿಂದ 17ರವರೆಗೆ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಮಾಂಸ ಮಾರಾಟ, ಹೋಟೆಲ್‌ಗಳಲ್ಲಿ ಮಾಂಸದೂಟಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಈ ಕುರಿತು ಬಿಬಿಎಂಪಿ ಸ್ಪಷ್ಟನೆ ನೀಡಿದ್ದು, ಹೋಟೆಲ್‌ಗಳಲ್ಲಿ ಮಾಂಸಹಾರ ಮಾರಾಟ ಮಾಡಲು ಷರತ್ತುಬದ್ಧ ಅನುಮತಿ ನೀಡಿದೆ.
ವಿಮಾನಗಳಿಗೆ ಹಕ್ಕಿಗಳು ಪ್ರಮುಖ ಶತ್ರು. ಮಾಂಸ ಮಾರಾಟ, ಮಾಂಸ ತ್ಯಾಜ್ಯಗಳು ಇರುವಲ್ಲಿ ಹಕ್ಕಿಗಳ ಹಾರಾಟ ಹೆಚ್ಚಿರುತ್ತದೆ. ಇದರಿಂದ ವಿಮಾನಗಳಿಗೆ ಅಪಾಯವಾಗುತ್ತದೆ. ಹೀಗಾಗಿ, ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಹೋಟೆಲ್‌ಗಳಲ್ಲಿ ಮಾಂಸದ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಷರತ್ತಿಗೆ ಒಳಪಟ್ಟು ಮಾಂಸಹಾರ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಈ ಕುರಿತು ಬಿಬಿಎಂಪಿಯು ಈ ಮುಂದಿನಂತೆ ಪ್ರಕಟಣೆ ನೀಡಿದೆ. "ಯಲಹಂಕ ವಲಯದ ಉದ್ದಿಮೆದಾರರಿಗೆ ಹಾಗೂ ನಾಗರಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಏರೋ ಇಂಡಿಯಾ-2023 ಪ್ರದರ್ಶನದ ವೇಳೆ ವಿಮಾನಗಳ ಹಾರಾಟದ ನಡುವೆ ಸುರಕ್ಷತೆಯ ದೃಷ್ಟಿಯಿಂದ ಹಕ್ಕಿಗಳ ಹಾರಾಟವನ್ನು ತಡೆಗಟ್ಟುವ ಸಲುವಾಗಿ ಯಲಹಂಕ ವಾಯುನೆಲೆ ಪ್ರದೇಶದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ದಿನಾಂಕ: 30.01.2023 ರಿಂದ 20.02.2023 ರವರೆಗೆ ಎಲ್ಲಾ ಮಾಂಸ ಮಾರಾಟದ ಉದ್ದಿಮೆಗಳಲ್ಲಿ ಎಲ್ಲಾ ತರಹದ ಮಾಂಸ ಮಾರಾಟ ನಿಷೇಧಿಸಿರುವ ಬಗ್ಗೆ ದಿನಾಂಕ: 17.01.2023 ರಂದು ಸಾರ್ವಜನಿಕ ಪ್ರಕಟಣೆಯ ಮೂಲಕ ಆದೇಶವನ್ನು ಹೊರಡಿಸಲಾಗಿತ್ತು" ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
"ಯಲಹಂಕ ವಾಯುನೆಲೆ ಪ್ರದೇಶದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಳಿಗೆಗಳನ್ನು ಯಥಾಸ್ಥಿತಿ ನಿಷೇಧಿಸಲಾಗಿದ್ದು, ಯಲಹಂಕ ವಾಯುನೆಲೆಯ Wing Commander station aerospace safety and inspection officer, AF station Yalahanka, Bangalore – 560063 ರವರ ಪತ್ರ ಸಂಖ್ಯೆ: ASFYEL/5430/1/AS BM-1 ದಿನಾಂಕ: 03.02.2023ರ ಹೆಚ್ಚುವರಿ ಆದೇಶದಂತೆ, ಯಲಹಂಕ ವಾಯುನೆಲೆ ಪ್ರದೇಶದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ವಿವಿಧ ಮಾಂಸಹಾರಿ ಹೋಟೆಲ್/ಉದ್ದಿಮೆಗಳನ್ನು ತೆರೆದು, ಸದರಿ ಹೋಟೆಲ್/ಉದ್ದಿಮೆಗಳಲ್ಲಿ ಉತ್ಪತ್ತಿಯಾಗುವ ಮಾಂಸಹಾರಿ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡದೆ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಷರತ್ತಿಗೆ ಒಳಪಡಿಸಿ ಹೋಟೆಲ್/ಉದ್ದಿಮೆ ನಡೆಸಲು ಅವಕಾಶ ಕಲ್ಪಿಸಲಾಗಿರುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ಮೇಲೆ ಉಲ್ಲೇಖಿಸಲಾಗಿರುವ ಅಂಶಗಳನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಎರ್‌ಕ್ರಾಪ್ಟ್ ರೂಲ್ಸ್ 1937 ರ ರೂಲ್ 91 ರೀತ್ಯಾ ಕ್ರಮವಹಿಸಲಾಗುವುದು" ಎಂದು ಯಲಹಂಕ ವಲಯ ಜಂಟಿ ಆಯುಕ್ತರಾದ ಶ್ರೀಮತಿ ಪೂರ್ಣಿಮಾ ಅವರು ಸಾರ್ವಜನಿಕ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
ಏಷ್ಯಾದ ಅತಿದೊಡ್ಡ ಏರ್ ಶೋ ‘ಏರೋ ಇಂಡಿಯಾ- 2023’ ಫೆಬ್ರವರಿ 13 ರಿಂದ 17 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಏರ್ ಶೋಗೆ ಆತಿಥ್ಯ ವಹಿಸಿರುವ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 14ನೇ ಆವೃತ್ತಿಯೂ ನಡೆಯಲಿದೆ ಎಂದು ರಕ್ಷಣಾ ಉತ್ಪಾದನಾ ಸಂಸ್ಥೆ ಹೇಳಿದೆ. ಕೇಂದ್ರ ರಕ್ಷಣಾ ಇಲಾಖೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಇದಾಗಿದ್ದು, ಏರ್ ಶೋ ಪ್ರದರ್ಶನ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಗ್ಗಳಿಕೆಗಳಲ್ಲೊಂದಾಗಿದೆ.
ಕೇಂದ್ರ ರಕ್ಷಣಾ ಸಚಿವಾಲಯದ ಭಾಗವಾದ ‘ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಸೇಷನ್’ ವತಿಯಿಂದ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಹಲವು ದೇಶ, ವಿದೇಶಗಳ ಯುದ್ಧ ವಿಮಾನಗಳ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಬಾನಂಗಳದಲ್ಲಿ ಲೋಹದ ಹಕ್ಕಿಗಳು ಬಣ್ಣದ ಚಿತ್ತಾರ ಬಿಡಿಸಲಿವೆ.
2019 ರಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ವೇಳೆ ಸಂಭವಿಸಿದ ಅಗ್ನಿ ಅವಗಢದಲ್ಲಿ ಕಾರುಗಳು ಬೆಂಕಿಗಾಹುತಿಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕರಿಗೆ ವಿಮಾ ಕಂಪನಿಗಳು ಪರಿಹಾರ ವಿತರಣೆ ಮಾಡಿದ್ದವು.
ಬೆಂಗಳೂರಿನಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೆ ಮೊದಲ ಬ್ಯಾಚ್ ವಿಮಾನಗಳು ಫೆಬ್ರವರಿ 7ಕ್ಕೆ ಆಗಮಿಸಲಿವೆ. ಉಳಿದ ವಿಮಾನಗಳು ಫೆಬ್ರವರಿ 8-12ರ ನಡುವೆ ಆಗಮಿಸಲಿವೆ. ದರ್ಶನದಲ್ಲಿ ಭಾಗಿಯಾಗುವ ವಿಮಾನಗಳು ಫೆ.8 ರಿಂದ ಪೂರ್ವಾಭ್ಯಾಸ ನಡೆಸಲಿವೆ. ಫೆ.11ಕ್ಕೆ ಅಂತಿಮ ಹಂತದ ಪೂರ್ವಾಭ್ಯಾಸ ನಡೆಯಲಿದೆ.