ಗೋಬಿ, ಕಾಟನ್ ಕ್ಯಾಂಡಿ, ಕಬಾಬ್ ಬಳಿಕ ಇದೀಗ ಕೇಕ್ ಗುಣಮಟ್ಟ ಪರೀಕ್ಷೆ: ಇಲ್ಲಿಯೂ ನಿಲ್ಲದ ಕೃತಕ ಬಣ್ಣ, ರಾಸಾಯನಿಕಗಳ ಬಳಕೆ
Oct 03, 2024 10:25 AM IST
ಗೋಬಿ, ಕಾಟನ್ ಕ್ಯಾಂಡಿ, ಕಬಾಬ್ ಬಳಿಕ ಇದೀಗ ಕೇಕ್ ಗುಣಮಟ್ಟ ಪರೀಕ್ಷೆಗೆ ಮುಂದಾದ ರಾಜ್ಯ ಸರ್ಕಾರ
ಕೇಕ್ ಮೇಲಿನ ಕೃತಕ ಬಣ್ಣಗಳತ್ತ ಗಮನನೆಟ್ಟಿರುವ ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ರಾಜ್ಯಾದ್ಯಂತ 235 ಕೇಕ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದೆ. ಅವುಗಳಲ್ಲಿ 1 ರಲ್ಲಿ ಕಾರ್ಸಿಯೋಜೆನಿಕ್ ಪದಾರ್ಥಗಳನ್ನು ಸೇರ್ಪಡೆ ಮಾಡಿರುವುದನ್ನು ಪತ್ತೆ ಮಾಡಿದೆ. (ವರದಿ: ಎಚ್. ಮಾರುತಿ)
ಬೆಂಗಳೂರು: ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಪಾನಿಪೂರಿ, ಕಬಾಬ್ ಹಾಗೂ ಶವರ್ಮಾದಲ್ಲಿ ಕೃತಕ ಬಣ್ಣವನ್ನು ಬೆರೆಸುವುದನ್ನು ನಿಷೇಧಿಸಿದ ನಂತರ ಇದೀಗ ರಾಜ್ಯ ಸರ್ಕಾರ ಕೇಕ್‍ಗಳ ಮೇಲೆ ಗಮನ ಹರಿಸಿದೆ. ಎಲ್ಲಾ ಬೇಕರಿಗಳಲ್ಲೂ ಹತ್ತಾರು ಬಣ್ಣದ ತರೇಹವಾರಿ ಕೇಕ್‍ಗಳಿರುವುದನ್ನು ಕಾಣಬಹುದು. ಆದರೆ, ಈ ಕೇಕ್‍ಗಳ ಬಣ್ಣ ಕೃತಕವೇ ಎಂಬ ಬಗ್ಗೆ ಮಾತ್ರ ಕೇಕ್ ಪ್ರಿಯರು ಯೋಚಿಸುವುದಿಲ್ಲ. ಹುಟ್ಟುಹಬ್ಬ, ವಿವಾಹ ಅಥವಾ ವಿವಾಹ ವಾರ್ಷಿಕೋತ್ಸವ ಇತ್ಯಾದಿಗಳಿಗೆ ಕೇಕ್ ಇಲ್ಲಾಂದ್ರೆ ಹೇಗೆ. ತಮಗಿಷ್ಟವಾದ ಬಣ್ಣದ ಕೇಕ್ ತಂದು ಕಟ್ ಮಾಡಿ ತಿನ್ನುತ್ತಾರೆ. ಆದರೆ, ಬಗೆ-ಬಗೆಯ ಕೇಕ್‍ಗಳಲ್ಲಿರುವ ಬಣ್ಣಗಳು ಎಲ್ಲಿಂದ ಬರುತ್ತವೆ ಎಂದು ಮಾತ್ರ ಕೇಕ್ ಪ್ರಿಯರು ಯೋಚಿಸುವುದಿಲ್ಲ. ಹಾಗೆ ಯೋಚಿಸಿದ್ದರೆ ನಿಜಕ್ಕೂ ಕೇಕ್ ತಿನ್ನುವುದನ್ನು ಕಡಿಮೆ ಮಾಡುತ್ತಿದ್ದರೇನೋ.
ಕೇಕ್ ಮೇಲಿನ ಕೃತಕ ಬಣ್ಣಗಳತ್ತ ಗಮನನೆಟ್ಟಿರುವ ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ರಾಜ್ಯಾದ್ಯಂತ 235 ಕೇಕ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದೆ. ಅವುಗಳಲ್ಲಿ 1 ರಲ್ಲಿ ಕಾರ್ಸಿಯೋಜೆನಿಕ್ ಪದಾರ್ಥಗಳನ್ನು ಸೇರ್ಪಡೆ ಮಾಡಿರುವುದನ್ನು ಪತ್ತೆ ಮಾಡಿದೆ. ಈ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆಯುಕ್ತ ಕೆ. ಶ್ರೀನಿವಾಸ್ ಹಾನಿಕಾರಕ ರಾಸಾಯನಿಕ ಮತ್ತು ಕೃತಕ ಬಣ್ಣಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.
ಸಾಮಾನ್ಯವಾಗಿ ಬೇಕರಿಗಳಲ್ಲಿ ಜನಪ್ರಿಯ ಕೇಕ್‍ಗಳೆಂದರೆ ರೆಡ್ ವೆಲ್ವೆಟ್ ಮತ್ತು ಬ್ಲಾಕ್ ಫಾರೆಸ್ಟ್. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವ ಕೇಕ್‍ಗಳಿವು. ದುರಂತ ಎಂದರೆ ಅತಿ ಹೆಚ್ಚು ಜನಪ್ರಿಯ ಪಡೆದಿರುವ ಈ ಎರಡೂ ಕೇಕ್‍ಗಳಿಗೆ ಕೃತಕ ಬಣ್ಣಗಳ ಬಳಕೆ ಹೆಚ್ಚಾಗಿದೆ. ಈ ಕೃತಕ ಬಣ್ಣ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ವೈದ್ಯರು ಹೇಳಿದ್ದಾರೆ.
235 ಕೇಕ್ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಕ್ಯಾನ್ಸರ್‌ಗೆ ಕಾರಣವಾಗುವ 12 ಅಂಶಗಳನ್ನು ಬಳಸಲಾಗಿದೆ ಎನ್ನುವುದು ಪತ್ತೆಯಾಗಿವೆ. ಈ 12 ಮಾದರಿ ಕೇಕ್‍ಗಳಲ್ಲಿ ಅಲ್ಲೂರಾ ರೆಡ್, ಸನ್ ಸೆಟ್ ಯೆಲ್ಲೋ, ಟಾರ್ಟಾಝೈನ್, ಪ್ಯಾಂಸೂ 4 ಆರ್ ಮತ್ತು ಕಾರ್ಮೋಸಿನ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಇಲಾಖೆಯು ಪನೀರ್‌ನ 221 ಮತ್ತು ಖೋವಾದ 65 ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ತಲಾ ಒಂದು ಮಾದರಿಯಲ್ಲಿ ಕಳಪೆ ಗುಣಮಟ್ಟದ ಅಂಶಗಳನ್ನು ಬಳಕೆ ಮಾಡಲಾಗಿದೆ. ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂದು ಸೆಪ್ಟೆಂಬರ್‌ನಲ್ಲಿ 142 ರೈಲ್ವೇ ನಿಲ್ದಾಣಗಳ ಹೋಟೆಲ್‍ಗಳು ಮತ್ತು ಪ್ರಮುಖ 35 ಪ್ರವಾಸಿ ತಾಣಗಳ ಹೋಟೆಲ್‍ಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.
ಈ ತಪಾಸಣೆ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಅಡಿಯಲ್ಲಿ ಇಂತಹ ಕೃತಕ ಬಣ್ಣ ಮತ್ತು ರಾಸಾಯನಿಕಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಗುಣಮಟ್ಟವನ್ನು ಕಾಪಾಡಿಕೊಳ್ಳದಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಚಹಾ, ಕಬಾಬ್, ಗೋಬಿ ಮಂಚೂರಿ, ಶವರ್ಮಾ, ಚಹಾ ಸೇರಿದಂತೆ ಬಹುತೇಕ ಆಹಾರ ಪದಾರ್ಥಗಳಲ್ಲಿ ರುಚಿ ಮತ್ತು ಬಣ್ಣ ಹೆಚ್ಚಿಸಲು ಕೀಟನಾಶಕ ಮತ್ತು ರಸಗೊಬ್ಬರಗಳಲ್ಲಿ ಬಳಸುವ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಈ ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎನ್ನುವುದನ್ನು ಪತ್ತೆ ಹಚ್ಚಿ ನಿಷೇಧ ಹೇರಿತ್ತು.
ವಿಷಕಾರಕ ಎಂದು ಪರಿಗಣಿಸಲ್ಪಟ್ಟಿರುವ ರೋಡಮೈನ್-ಬಿ ಮತ್ತು ಕಾರ್ಮೋಸಿನ್‌ಗಳನ್ನು ಆಹಾರ ಪದಾರ್ಥಗಳಲ್ಲಿ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಚಹಾದ್ದೂ ಇದೇ ವ್ಯಥೆ. ಚಹಾದಲ್ಲಿ ಅಧಿಕ ಪ್ರಮಾಣದ ಕೀಟನಾಶಕ ಮತ್ತು ಬಣ್ಣವನ್ನು ಬಳಸುವುದನ್ನು ಪತ್ತೆ ಹಚ್ಚಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಸಿಗುವ ಚಹಾವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪರೀಕ್ಷೆಗೊಳಪಡಿಸಿದ್ದು, ಚಹಾದಲ್ಲಿ ಅಧಿಕ ಪ್ರಮಾಣದ ಕೀಟನಾಶಕ ಮತ್ತು ಬಣ್ಣವನ್ನು ಬಳಸುವುದನ್ನು ಪತ್ತೆ ಹಚ್ಚಿತ್ತು.