ಆ್ಯಪ್‌ನಲ್ಲಿ ಜಿಪಿಎಸ್ ಮ್ಯಾಪ್ ಆಫ್ ಮಾಡಿ ಬೆಳೆ ಸಮೀಕ್ಷೆ ಮಾಡೋದು ಹೇಗೆ, ಇದಕ್ಕೂ ಉಂಟು ಅವಕಾಶ; ಅಕ್ಟೋಬರ್ 15 ಕಡೆ ದಿನ
Oct 11, 2024 11:10 AM IST
ಬೆಳೆ ಸಮೀಕ್ಷೆ ಆ್ಯಪ್ ಬಳಕೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಪ್ರಮುಖ ಸೂಚನೆ ನೀಡಿದೆ.
- ಕರ್ನಾಟಕದಲ್ಲಿ ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆ ಆ್ಯಪ್ ಇದ್ದರೂ ಅದು ಸರಿಯಾಗಿ ಬಳಕೆಯಾಗದೇ ಇರುವುದರಿಂದ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕುರಿತು ಬರಹಗಾರ ಅರವಿಂದ ಸಿಗದಾಳ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ಕೊಪ್ಪ ತಾಲೂಕು, ಹರಿಹರಪುರ ಹೋಬಳಿ ಭಂಡಿಗಡಿ ಗ್ರಾಮ ಪಂಚಾಯತಿಯ ಬಹುತೇಕ ಸರ್ವೇ ನಂಬರ್‌ಗಳ ಜಮೀನಿನ ಮಾಲಿಕ ರೈತರಿಗೆ ಬೆಳೆ ಸರ್ವೆ ಮಾಡಲಾಗದೆ ಇದ್ದ ಸಮಸ್ಯೆಗೆ ಒಂದು ತಾತ್ಕಾಲಿಕ ಪರಿಹಾರದ ದಾರಿ ನಿರ್ಮಿಸಿಕೊಡಲಾಗಿದೆ.
ರೈತರ ಸ್ವಂತ ಭೂಮಿಯಲ್ಲಿ ಹೋಗಿ ನಿಂತರೂ "ನೀವು ನಿಮ್ಮ ಜಮೀನಿನಿಂದ 4 ಕಿ.ಮೀ. ದೂರದಲ್ಲಿದ್ದೀರಿ ಅಂತ ಅಸಂಬದ್ದ ಮಾಹಿತಿ ಕೊಟ್ಟು, ದಿಕ್ಕು ತಪ್ಪಿಸುತ್ತಿದ್ದ ಬೆಳೆ ಸಮೀಕ್ಷೆ ಆ್ಯಪ್‌ನ ಜಿಪಿಎಸ್ ಮ್ಯಾಪ್‌ನ್ನು ತಾತ್ಕಾಲಿಕವಾಗ ಆಫ್ ಮಾಡಿ, ಜಿಪಿಎಸ್ ಮ್ಯಾಪ್ ಸಹಾಯ ಇಲ್ಲದೆ, ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ತಿಂಗಳುಗಟ್ಟಲೆ ಶ್ರಮ ವಹಿಸಿದರೂ, ಬೆಳೆ ಸಮೀಕ್ಷೆ ಆ್ಯಪ್‌ನ ಜಿಪಿಎಸ್ ಮ್ಯಾಪ್‌ನಲ್ಲಿರುವ ದೋಷಗಳನ್ನು ಸರಿ ಪಡಿಸಲು ಇಲಾಖೆಗಳಿಗೆ ಸಾಧ್ಯವಾಗದ ಕಾರಣ, ತಾತ್ಕಾಲಿಕವಾಗಿ, ಜಿಪಿಎಸ್ ಆಫ್ ಮಾಡುವ ಡೀವಿಯೇಷನ್ ದಾರಿಯಲ್ಲಿ ಬೆಳೆ ಸಮೀಕ್ಷೆಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ರೈತರಿಗೆ ಅವಕಾಶ ಮಾಡಿಕೊಟ್ಟಿವೆ.
ಬೆಳೆ ಸಮೀಕ್ಷೆಗೆ ಈ ತಿಂಗಳ 15ರ ವರೆಗೆ ಅವಕಾಶ ವಿಸ್ತರಿಸಿದ್ದು, ಇನ್ನು ಐದು ದಿನಗಳ ಒಳಗೆ ಭಂಡಿಗಡಿ ಗ್ರಾಮದ ರೈತರು ಬೆಳೆ ಸಮೀಕ್ಷೆಯನ್ನು ಸ್ವತಃ ತಾವೇ ಅಥವಾ ಕ್ಷೇತ್ರದ ಪಿಆರ್ ಗಳ ಸಹಾಯ ಪಡೆದು ಮಾಡಿಕೊಳ್ಳಬಹುದು.
ಜಿಪಿಎಸ್ ಮ್ಯಾಪ್ ಆಫ್ ಮಾಡಿರುವುದರಿಂದ ಈಗ ರೈತರು ಎಲ್ಲಿ ಬೇಕಾದರು ಕುಳಿತುಕೊಂಡು ತಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು. ಯಾರದ್ದೋ ತೋಟದ ಫೋಟೋ ತೆಗೆದು ಅಪ್‌ಲೋಡ್ ಮಾಡಿದ್ರೂ ನೆಡೆಯುತ್ತೆ. ಒಟ್ಟಿನಲ್ಲಿ ನಾಮ್‌ಕಾ ವಾಸ್ತೆ ಒಂದು ಬೆಳೆ ಸಮೀಕ್ಷೆ ಅಂತ ಆದ್ರೆ ಆಯ್ತು!!! ಎಲ್ಲ ಕಡೆ ಇಂಟರ್‌ನೆಟ್ ಇಲ್ಲದಿರುವುದರಿಂದ ಈ ಡೀವಿಯೇಷನ್ ದಾರಿ ಅವೈಜ್ಞಾನಿಕವಾದರೂ ಅನುಕೂಲವೇ ಆಗಿದೆ!!
ವಿಷಯ ಹೀಗಿದೆ ಅಂತ ಹೇಳಿದಾಗ, ಇಷ್ಟು ದಿನಗಳಿಂದ ಜಿಪಿಎಸ್ ಮ್ಯಾಪ್ ಸಮಸ್ಯೆಯಿಂದ ಬೆಳೆ ಸಮೀಕ್ಷೆ ಮಾಡಲಾಗದ ಭಂಡಿಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿಕರೊಬ್ಬರು, ಚಿಕ್ಕಮಗಳೂರಿನಿಂದ ಬರ್ತಾ ಇರುವಾಗ ಬಾಳೆಹೊನ್ನೂರು ಬಳಿ ಯಾರದ್ದೋ ಒಂದು ತೋಟದ ಬಳಿ ಗಾಡಿ ನಿಲ್ಲಿಸಿಕೊಂಡು ಭಂಡಿಗಡಿ ಜಮೀನಿಗೆ ಯಶಸ್ವಿಯಾಗಿ ಬೆಳೆ ಸಮೀಕ್ಷೆ ಮಾಡಿಕೊಂಡು
ಬಂದಿದಾರಂತೆ!!!
ಈ ಬೆಳೆ ಸಮೀಕ್ಷೆ ಆ್ಯಪ್, ಅದರ ಸಪೋರ್ಟಿಂಗ್ ದಿಶಾಂಕ್ ಆ್ಯಪ್, ಮತ್ತು ಅದರಲ್ಲಿರುವ ಸಮಸ್ಯೆಗಳನ್ನು ನಾಲ್ಕೈದು ವರ್ಷಗಳಾದರೂ ಸರಿಪಡಿಸಲಾಗದ ಅವಸ್ಥೆ ನೋಡಿದರೆ ನಗಬೇಕೋ ಅಳಬೇಕೋ ಗೊತ್ತಾಗಲ್ಲ!!!
ಇರಲಿ, ರೈತರು ಬೆಳೆ ಸಮೀಕ್ಷೆ ಮಾಡಿದ ನಂತರ, ಕ್ಷೇತ್ರದ ವಿಎ ಅಥವಾ ತಾಲೂಕು ಕೃಷಿ ಅಧಿಕಾರಗಿಳಿಗೆ ಸಂಪರ್ಕಿಸಿ ಮಾಡಿದ ಬೆಳೆ ಸಮೀಕ್ಷೆಯನ್ನು ಅಪ್ರೂವಲ್ ಮಾಡಿಸಿಕೊಳ್ಳಬಹುದು.
ಮಾಡಿರುವ ಬೆಳೆ ಸಮೀಕ್ಷೆ ಮತ್ತು ಅಪ್ರೂವಲ್ ಸ್ಟೇಟಸ್‌ನ್ನು ಬೆಳೆ ದರ್ಶಕ್ ಆ್ಯಪ್‌ನಲ್ಲಿ ಪರಿಶೀಲಿಸಿಕೊಳ್ಳಬಹುದು. ಬೇಗ ಬೆಳೆ ಸಮೀಕ್ಷೆ ಮುಗಿಸಿಕೊಳ್ಳಿ ಎಂದು ಚಿಕ್ಕಮಗಳೂರು ಜಿಲ್ಲೆಯ ಮೇಲುಕೊಪ್ಪದ ಬರಹಗಾರ ಅರವಿಂದ ಸಿಗದಾಳ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ