Siddaramaiah: ಮೋದಿಯವರ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ: ಸಿದ್ದರಾಮಯ್ಯ
Apr 11, 2023 03:41 PM IST
ಮುಖ್ಯಮಂತ್ರಿ ಸಿದ್ದರಾಮಯ್ಯ (ಫೋಟೋ-ಫೈಲ್)
ಅಮಿತ್‍ಶಾ ಅವರು ರಾಜ್ಯಗಳಲ್ಲಿರುವ ಹಾಲು ಮಹಾಮಂಡಳಿಗಳನ್ನು ಒಗ್ಗೂಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು. ಅದರ ಭಾಗವಾಗಿ ಈಗ ರಾಜ್ಯಕ್ಕೆ ಅಮುಲ್ ವಕ್ಕರಿಸಿಕೊಂಡಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ನಂದಿನಿ ವರ್ಸಸ್ ಅಮುಲ್ (Nandini vs Amul) ವಿಚಾರದಲ್ಲಿ ಕಾಂಗ್ರೆಸ್ (Congress) ನಾಯಕರ ಆಕ್ರೋಶ, ಅಮಾಧಾನ ಮುಂದುವರೆದಿದ್ದು, ಇಂದು ಕೂಡ ವಿಪಕ್ಷ ನಾಯಕ ಸಿದ್ದರಾಮಯ್ಯ (Opposition leader Siddaramaiah) ಬಿಜೆಪಿ ಸರ್ಕಾರವನ್ನು (BJP Govt.) ತರಾಟೆಗೆ ತೆಗೆದುಕೊಂಡಿದ್ದಾರೆ.
ಇವತ್ತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಕಳೆದ ಕೆಲವು ವರ್ಷಗಳಿಂದ ನಮ್ಮ ರಾಜ್ಯದ ಹಾಲು ಉತ್ಪಾದಕ ರೈತರ ಬೆನ್ನೆಲುಬನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಾನು 2020 ರಿಂದ ಹೇಳುತ್ತಲೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಪತ್ರಗಳನ್ನು ಬರೆದು ಎಚ್ಚರಿಸಿದ್ದೇನೆ. ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ನನ್ನ ಸಲಹೆ, ಎಚ್ಚರಿಕೆ ಮತ್ತು ವಿರೋಧವನ್ನು ಬಿಜೆಪಿ ಸರ್ಕಾರ ಪರಿಗಣಿಸುವ ಬದಲು ರೈತರನ್ನು ಶತ್ರುಗಳು ಎಂದು ಭಾವಿಸಿ ಅವರ ಆರ್ಥಿಕ ಚೈತನ್ಯವನ್ನು ಮುರಿದು ಹಾಕಲು ಸನ್ನದ್ಧವಾಗಿ ನಿಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋದಿಯವರ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ. ಈಗ ಬೇರೆ ದೇಶಗಳಿಂದ ಆಮದು ಮಾಡಿಕೊಂಡರೂ ಅಂಬಾನಿಯ ಮೂಲಕವೇ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೆ ಅಮುಲ್‍ನ ಎಂಡಿಯಾಗಿದ್ದ ಆರ್ ಎಸ್ ಸೋಧಿಯವರನ್ನು ಆಪರೇಷನ್ ಮಾಡಿ ರಿಲಯನ್ಸ್ ಕಂಪನಿಗೆ ಸೇರಿಸಿಕೊಂಡಿದ್ದಾರೆ.
ಅಮುಲ್ ಅನ್ನೂ ಮುಳುಗಿಸಲು ಯೋಜನೆ ಹಾಕಿಕೊಂಡಿರುವಂತೆ ಕಾಣಿಸುತ್ತಿದೆ
ಅಮಿತ್‍ಶಾ ಅವರು ರಾಜ್ಯಗಳಲ್ಲಿರುವ ಹಾಲು ಮಹಾಮಂಡಲಗಳನ್ನು ಒಗ್ಗೂಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು ಅದರ ಭಾಗವಾಗಿ ಈಗ ರಾಜ್ಯಕ್ಕೆ ಅಮುಲ್ ವಕ್ಕರಿಸಿಕೊಂಡಿದೆ. ಈಗ ನಂದಿನಿ ಆತಂಕ ಎದುರಿಸುತ್ತಿದೆ. ಮೋದಿ ಮತ್ತು ಅಮಿತ್ ಶಾ ಅವರು ನಮ್ಮ ನಂದಿನಿಯನ್ನಷ್ಟೆ ಅಲ್ಲ ಅಮುಲ್ ಅನ್ನೂ ಸಹ ಮುಳುಗಿಸಲು ಯೋಜನೆ ಹಾಕಿಕೊಂಡಿರುವಂತೆ ಕಾಣಿಸುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇತ್ತೀಚೆಗೆ ಗುಜರಾತಿನಲ್ಲಿ ಮಾಲ್ದಾರಿ ಎಂಬ ಪಶುಪಾಲಕ ಸಮುದಾಯದವರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರು. ಯಾವುದಾದರೂ ಹಸು ನಗರಗಳಲ್ಲಿ ಕಾಣಿಸಿಕೊಂಡರೆ ಅದರ ಮಾಲಿಕನಿಗೆ 5,000 ದಿಂದ 50,000 ರೂಪಾಯಿ ದಂಡ ಹಾಕುವ, ವರ್ಷಗಟ್ಟಲೆ ಜೈಲಿಗೆ ಅಟ್ಟುವ ಕಾನೂನುಗಳನ್ನು ಗುಜರಾತಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ಹಾಗೆಯೆ ಅಲ್ಲಿಯೂ ಕೂಡ ಗೋಮಾಳಗಳು, ಹುಲ್ಲುಗಾವಲುಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದನಗಳು ಮೇಯಲು ಹುಲ್ಲು ಇಲ್ಲ. ಆಹಾರ ಹುಡುಕಿ ಬೀದಿಗಳಿಗೆ ಬಂದರೆ ಅವುಗಳ ಮಾಲಿಕರಿಗೆ ಜೈಲು ಮತ್ತು ದಂಡ ವಿಧಿಸಲಾಗುತ್ತಿದೆ. ಬಿಜೆಪಿಯ ಈ ಮನೆಹಾಳು ಕಾನೂನಿಗೆ ಬೇಸತ್ತು ಅಲ್ಲಿನ ಜನ ಹಸುಗಳನ್ನು ಸಾಕುವುದನ್ನೆ ನಿಲ್ಲಿಸುತ್ತಿದ್ದಾರೆ. ಹಾಗಾಗಿಯೆ ಇತ್ತೀಚೆಗೆ ಗುಜರಾತಿನ ಪಶುಪಾಲಕ ಸಮುದಾಯಗಳು ಮಹಾ ಪಂಚಾಯತ್ ಮಾಡಿ “ಬಿಜೆಪಿ ಎಂದರೆ ಹಸುಗಳ ವಿರೋಧಿ, ಬಿಜೆಪಿ ಎಂದರೆ ಪಶುಪಾಲಕ ವಿರೋಧಿ, ಬಿಜೆಪಿಯು ಹಸುಗಳ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ, ಬಿಜೆಪಿಯು ನಂಬಿಕಾರ್ಹವಲ್ಲ” ಎಂದು ಘೋಷಣೆ ಕೂಗಿದ್ದರು. ತಾವು ಪಶು ಸಾಕಣೆಯ ಪರವಾಗಿದ್ದೇವೆಂದು ಹೇಳಿಕೊಳ್ಳುವ ಬಿಜೆಪಿ ಎಂದಿಗೂ ಪಶುಪಾಲಕರ ಪರವಾಗಿಲ್ಲ ಅಂತ ಹೇಳಿದ್ದಾರೆ.
ಅವರು ಅದಾನಿ ಅಂಬಾನಿಗಳ ಬ್ಯುಸಿನೆಸ್ ಪರವಾಗಿದ್ದಾರೆ. ಹಾಗಾಗಿ ಮೊದಲು ನಂದಿನಿಯನ್ನು ಮುಳುಗಿಸಿ ನಂತರ ಅಮುಲ್ ಅನ್ನು ಮುಳುಗಿಸುತ್ತಾರೆ. ರಾಜ್ಯದಲ್ಲಿ ಸುಮಾರು 1 ಕೋಟಿ ಗ್ರಾಮೀಣ ಜನರ ಬದುಕು ಹಾಲಿನ ಮೇಲೆ ನಿಂತಿದೆ. ರೈತರು, ಹಿಂದುಳಿದವರು ಮತ್ತು ದಲಿತ ಸಮುದಾಯಗಳ ಅನೇಕರ ಮಕ್ಕಳ ಶಿಕ್ಷಣ ಹೈನುಗಾರಿಕೆಯ ಮೇಲೆ ನಿಂತಿದೆ.
ಗ್ರಾಮೀಣ ಕರ್ನಾಟಕದ ಹೆಣ್ಣುಮಕ್ಕಳು 1-2 ಹಸುಗಳನ್ನು ಸಾಕಿ ತಮ್ಮ ಕುಟುಂಬಗಳನ್ನು ನಿಭಾಯಿಸುತ್ತಿದ್ದಾರೆ. ಇದರ ಮೇಲೆ ಈಗ ಮೋದಿ, ಅಮಿತ್ ಶಾ, ಬಿಜೆಪಿ ಮತ್ತು ಅದಾನಿ, ಅಂಬಾನಿಗಳ ಕಣ್ಣು ಬಿದ್ದಿದೆ ಎಂದಿದ್ದಾರೆ.
ಬಿಜೆಪಿಯವರು ನಾಡದ್ರೋಹಿಗಳಾಗಿ ಪರಿವರ್ತನೆ
ರಾಜ್ಯದ ಬಿಜೆಪಿಯವರು ಗುಜರಾತಿನ ಅದಾನಿ, ಅಂಬಾನಿಗಳ ಹಿತಾಸಕ್ತಿಯ ಪರವಾಗಿ ನಿಂತು ರಾಜ್ಯದ ರೈತರ ಮೇಲೆ ಯುದ್ಧ ಸಾರಿದ್ದಾರೆ. ಅದಕ್ಕಾಗಿಯೆ ನಂದಿನಿ ಉತ್ಪನ್ನಗಳ ಮೇಲೆ ದಾಳಿ ನಡೆಸಲು ತಾವೆ ಅಮುಲ್ ರಾಯಭಾರಿಗಳಾಗಿದ್ದಾರೆ. ಈ ಬಿಜೆಪಿಗರ ರಾಷ್ಟ್ರಪ್ರೇಮವೆಂದರೆ ಅದು ಅದಾನಿ, ಅಂಬಾನಿ ಮತ್ತು ಗುಜರಾತಿನ ಕಾರ್ಪೊರೇಟ್ ಬಂಡವಾಳಿಗರ ಮೇಲಿನ ಪ್ರೇಮ ಮಾತ್ರ. ಹಾಗಾಗಿ ಕರ್ನಾಟಕದ ಅಷ್ಟೂ ಬಿಜೆಪಿಯವರು ನಾಡದ್ರೋಹಿಗಳಾಗಿ ಪರಿವರ್ತನೆಯಾಗಿದ್ದಾರೆ.