AMUL in Bengaluru: ಬೆಂಗಳೂರು ಮನೆಗಳಿಗೆ ಹಾಲು, ಮೊಸರು ಸರಬರಾಜು ಆರಂಭಿಸಿದ ಅಮೂಲ್; ಕೆಎಂಎಫ್ ಎದುರು ಹೊಸ ಸವಾಲು
Apr 06, 2023 09:46 AM IST
ನಂದಿನ ಪಾರ್ಲರ್ (ಎಡಚಿತ್ರ), ಅಮೂಲ್ ಟ್ವೀಟ್ (ಬಲಚಿತ್ರ)
- KMF Nandini: ಬೇಡಿಕೆಯಷ್ಟು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪೂರೈಸಲು ಸಾಧ್ಯವಾಗದೆ ಪರಿತಪಿಸುತ್ತಿರುವ ಕೆಎಂಎಫ್‌ಗೆ ಹಲವು ಹೊಸ ಸವಾಲುಗಳು ಎದುರಾಗಲಿದೆ.
ಬೆಂಗಳೂರು: ಕರ್ನಾಟಕ ಸೇರಿದಂತೆ ಇಡೀ ದೇಶದ ಹೈನು ಉದ್ಯಮದ (Dairy Industry) ಮೇಲೆ ಪರಿಣಾಮ ಬೀರುವ ಮೂರು ಮಹತ್ವದ ಬೆಳವಣಿಗೆಗಳು ಇತ್ತೀಚೆಗೆ ನಡೆದಿವೆ. ಭಾರತದ ಅತಿದೊಡ್ಡ ಡೇರಿ ಬ್ರಾಂಡ್ ಅಮೂಲ್ (AMUL) ಬೆಂಗಳೂರು ನಗರದ ಮನೆಗಳಿಗೆ ಹಾಲು ಮತ್ತು ಮೊಸರು ಪೂರೈಕೆ ಆರಂಭಿಸಿದೆ ಎನ್ನುವುದು ಅದರಲ್ಲಿ ಮೊದಲನೆಯದು. ಅಮೂಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಆರ್.ಎಸ್.ಸೋಧಿ ರಿಲಯನ್ಸ್ ಸಮೂಹ (RS Sodhi joins Reliance Retail) ಸೇರ್ಪಡೆಯಾದರು ಎನ್ನುವುದು ಎರಡನೆಯದು. ಕರ್ನಾಟಕದ ಮಿಲ್ಕ್ ಪಾರ್ಲರ್‌ಗಳಿಗೆ ಬೇಡಿಕೆಯಷ್ಟು ಹಾಲು-ಮೊಸರು ಪೂರೈಸಲು ಕೆಎಂಎಫ್‌ಗೆ (KMF) ಸಾಧ್ಯವಾಗುತ್ತಿಲ್ಲ ಎನ್ನುವುದು ಮೂರನೆಯದು. ಚುನಾವಣೆ ಹೊಸಿಲಲ್ಲಿರುವ ಕರ್ನಾಟಕದಲ್ಲಿ ಹಾಲಿನ ಉದ್ಯಮ ಪ್ರಬಲವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶದ ಮತದಾರರ ಮೇಲೆ ಹಿಡಿತ ಹೊಂದಿರುವ, ಲಕ್ಷಾಂತರ ಮಂದಿಯ ಜೀವನಕ್ಕೆ ಆಧಾರವಾಗಿರುವ ಈ ಉದ್ಯಮ ಸಹಕಾರ ಕ್ಷೇತ್ರದಲ್ಲಿದ್ದರೂ ಇಲ್ಲಿ ಆಗುವ ಯಾವುದೇ ಬೆಳವಣಿಗೆ ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಣಯಿಸುವಷ್ಟು ಪ್ರಭಾವಶಾಲಿ. ಈ ಮೂರೂ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಕರ್ನಾಟಕದ ಮೇಲೆ ಏನೆಲ್ಲಾ ಪರಿಣಾಮ ಬೀರಬಹುದು ಎಂಬ ಚುಟುಕು ವಿಶ್ಲೇಷಣೆ ಇಲ್ಲಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಅಮೂಲ್ ಸದ್ದು
'ಭಾರತದ ರುಚಿ' (Taste of India) ಎಂದು ಅಮೂಲ್ ಬ್ರಾಂಡ್ ಮೂಲಕ ದೇಶಾದ್ಯಂತ ಮನೆಮಾತಾಗಿರುವ 'ಗುಜರಾತ್ ಸಹಕಾರ ಹಾಲು ಉತ್ಪಾದಕರ ಸಹಕಾರ ಮಹಾಮಂಡಳ' ಇದೀಗ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಹಾಲು-ಮೊಸರಿನ ಚಿಲ್ಲರೆ ಮಾರುಕಟ್ಟೆ ಪ್ರವೇಶಿಸಿದೆ. Amul Kannada (ಅಮೂಲ್ ಕನ್ನಡ) ಹೆಸರಿನಲ್ಲಿ ಪ್ರತ್ಯೇಕ ಟ್ವಿಟರ್, ಫೇಸ್‌ಬುಕ್ ಖಾತೆ ತೆರೆದಿರುವ ಕಂಪನಿ, 'ಹಾಲು ಮೊಸರಿನ ತಾಜಾತನದ ಹೊಸ ಅಲೆ ಬೆಂಗಳೂರಿಗೆ ಬರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆರ್ಡರ್ ಮಾಡಬಹುದು. ನಿಮ್ಮ ಮನೆ ಬಾಗಿಲಿಗೆ ತಾಜಾ ಹಾಲು ಮತ್ತು ಮೊಸರು ಲಭ್ಯವಾಗಲಿದೆ' ಎಂದು ಟ್ವೀಟ್ ಮಾಡಿದೆ. ಈ ಟ್ವೀಟ್‌ನೊಂದಿಗೆ ಬಳಕೆಯಾಗಿರುವ 'ಕರ್ನಾಟಕದ ರುಚಿ' (#tasteofkarnataka) ಹ್ಯಾಷ್‌ಟ್ಯಾಗ್ ಬಳಕೆಯಾಗಿರುವುದು ಗಮನ ಸೆಳೆಯುವಂತಿದೆ. ಆದರೆ ಹಾಲು-ಮೊಸರಿನ ದರ ಎಷ್ಟು ಎಂದು ಪ್ರಕಟಿಸಿಲ್ಲ.
ಕರ್ನಾಟಕದಲ್ಲಿ ಹಾಲು ಉತ್ಪಾದಕರ ಆಧಾರಸ್ತಂಭವಾಗಿರುವ ಕೆಎಂಎಫ್ ಈ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ. 'ಕರ್ನಾಟಕದ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಈಗಾಗಲೇ ಅಮೂಲ್ ಹಾಲು ಪೂರೈಕೆಯಾಗುತ್ತಿದೆ. ಅವರು ಹೆಚ್ಚಿನ ದರ ನಿಗದಿಪಡಿಸಿದ್ದಾರೆ. ಹೀಗಾಗಿ ನಮ್ಮ ವಹಿವಾಟಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಕೆಎಂಎಫ್ ಸಹ ನಂದಿನಿ ಬ್ರಾಂಡ್ ಮೂಲಕ ದೆಹಲಿ ಮತ್ತು ಮುಂಬೈನಲ್ಲಿ ಹಾಲು ಮಾರಾಟ ಮಾಡುತ್ತಿದೆ' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಎಂಎಫ್‌ನ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ಹಾಲನ್ನು ಜಿಲ್ಲಾ ಒಕ್ಕೂಟಗಳು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿವೆ. ಈಗ ದೇಶದ ಅತಿದೊಡ್ಡ ಬ್ರಾಂಡ್ ಒಂದು ಬೆಂಗಳೂರಿನಲ್ಲಿ ವಹಿವಾಟು ಆರಂಭಿಸಿದೆ. ಬೆಂಗಳೂರಿನಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾದರೆ ಅದರ ಪರಿಣಾಮಗಳು ಈ ಒಕ್ಕೂಟಗಳ ಮೇಲೆ, ತನ್ಮೂಲಕ ರೈತರ ಮೇಲೆ ಆಗುವುದು ಸಹಜ. ಕೆಎಂಎಫ್ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತುಮಕೂರು ಜಿಲ್ಲೆ ತೋವಿನಕೆರೆಯ ರೈತರಾದ ಪದ್ಮರಾಜು ಒತ್ತಾಯಿಸಿದರು.
ಹೈನು ಉದ್ಯಮಕ್ಕೆ ಚರ್ಮಗಂಟು ಬಾಧೆ, ಹಾಲು ಪೂರೈಕೆ ಕುಂಠಿತ
ಕರ್ನಾಟಕದ ಜಾನುವಾರುಗಳಲ್ಲಿ ಚರ್ಮಗಂಟು ಕಾಯಿಲೆ ವ್ಯಾಪಿಸಿದ ನಂತರ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. 'ಮೊದಲು ನಾವು ಹಾಕುವ ಇಂಡೆಂಟ್‌ಗೆ (ಬೇಡಿಕೆ) ಸರಿಯಾಗಿ ಹಾಲು-ಮೊಸರು ಬರುತ್ತಿತ್ತು. ಆದರೆ ಈಗ ಪ್ರಮಾಣ ಕಡಿಮೆಯಾಗಿದೆ. ತುಪ್ಪ, ಸ್ವೀಟ್‌ಗಳು ಸರಬರಾಜು ಸರಿಯಾಗಿ ಆಗುತ್ತಿಲ್ಲ. ನಮ್ಮಂಥ ಪಾರ್ಲರ್‌ಗಳವರಿಗೆ ಉತ್ತರಿಸಿ ಉತ್ತರಿಸಿ ಮ್ಯಾನೇಜರ್‌ಗಳು ಹೈರಾಣಾಗಿದ್ದಾರೆ. ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ, ವಹಿವಾಟು ಕಡಿಮೆಯಾಗುತ್ತಿದೆ' ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ನಂದಿನಿ ಪಾರ್ಲರ್ ಮಾಲೀಕರು ಬೇಸರ ತೋಡಿಕೊಂಡರು.
ರಿಲಯನ್ಸ್ ತೆಕ್ಕೆಗೆ ಅಮೂಲ್‌ನ ನಿವೃತ್ತ ಎಂಡಿ
ಗುಜರಾತ್ ಹಾಲು ಉತ್ಪಾದಕರ ಮಹಾಮಂಡಳ ನಿರ್ವಹಿಸುವ 'ಅಮೂಲ್' ಅನ್ನು ಭಾರತದ ಅತಿದೊಡ್ಡ ಬ್ರಾಂಡ್ ಆಗಿ ಬೆಳೆಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಆರ್.ಎಸ್.ಸೋಧಿ ರಿಲಯನ್ಸ್ ಸಮೂಹ ಸೇರುವುದು ಬಹುತೇಕ ಖಚಿತವಾಗಿದೆ. ಈ ಕುರಿತು ವರದಿ ಮಾಡಿರುವ ರಾಯಿಟರ್ಸ್ ಸುದ್ದಿಸಂಸ್ಥೆ, 'ಈ ವಿಚಾರವನ್ನು ನಮಗೆ ಅಧಿಕೃತ ಮೂಲಗಳು ಖಚಿತಪಡಿಸಿವೆ' ಎಂದು ಹೇಳಿದೆ. ಆದರೆ ಈ ಕುರಿತು ರಿಲಯನ್ಸ್ ಪ್ರತಿನಿಧಿಗಳು ಮತ್ತು ಸೋಧಿ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
ಇತ್ತೀಚೆಗಷ್ಟೇ ಸೋಧಿ ಅವರು ಗುಜರಾತ್ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದರು. ಜೂನ್ 2010ರಲ್ಲಿ ಇವರು ಗುಜರಾತ್ ಒಕ್ಕೂಟದ ಎಂಡಿ ಆದಾಗ ಅಮೂಲ್ ವಹಿವಾಟು ವರ್ಷಕ್ಕೆ 8,000 ಕೋಟಿ ರೂಪಾಯಿ ಇತ್ತು. ಇವರು ನಿವೃತ್ತರಾದಾಗ ಅಮೂಲ್‌ನ ವಹಿವಾಟು 7 ಪಟ್ಟು ಹೆಚ್ಚಾಗಿ, 61 ಸಾವಿರ ಕೋಟಿ ದಾಟಿತ್ತು. 1982ರಲ್ಲಿ ಅಮೂಲ್‌ನ ಸೇಲ್ಸ್ ಮ್ಯಾನೇಜರ್ ಆಗಿ ವೃತ್ತಿಜೀವನ ಆರಂಭಿಸಿದ ಸೋಧಿ, 2000ನೇ ಇಸವಿಯಲ್ಲಿ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) ಹುದ್ದೆಗೇರಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಸ್ತುತ ಇವರು 'ಭಾರತೀಯ ಡೇರಿ ಒಕ್ಕೂಟ'ದ (Indian Dairy Association - IDA) ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ದೃಢ ಛಾಪು ಮೂಡಿಸಲು ರಿಲಯನ್ಸ್ ಯತ್ನಿಸುತ್ತಿದೆ. ರಿಲಯನ್ಸ್‌ನ ಈ ಪ್ರಯತ್ನಗಳಿಗೆ ಸೋಧಿ ಮುಂದಿನ ದಿನಗಳಲ್ಲಿ ಒತ್ತಾಸೆಯಾಗಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹಾಲು ಪೂರೈಕೆಗೆ ಸಮಸ್ಯೆ