logo
ಕನ್ನಡ ಸುದ್ದಿ  /  ಕರ್ನಾಟಕ  /  Opinion: ಜನರಿಗೆ ಅರ್ಥಶಾಸ್ತ್ರದ ಪಾಠಕ್ಕಿಂತ ಅಕ್ಕಿ ಮುಖ್ಯ; ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡ ಬಿಜೆಪಿ ನಾಯಕರಿಗೆ ಇದೇಕೆ ಅರ್ಥವಾಗಲಿಲ್ಲ

Opinion: ಜನರಿಗೆ ಅರ್ಥಶಾಸ್ತ್ರದ ಪಾಠಕ್ಕಿಂತ ಅಕ್ಕಿ ಮುಖ್ಯ; ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡ ಬಿಜೆಪಿ ನಾಯಕರಿಗೆ ಇದೇಕೆ ಅರ್ಥವಾಗಲಿಲ್ಲ

HT Kannada Desk HT Kannada

Jun 29, 2023 06:00 AM IST

google News

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ

    • Karnataka Politics: ಅಕ್ಕಿ ನೀಡುವುದು ರಾಜ್ಯ ಸರ್ಕಾರದ ಜವಾಬ್ಧಾರಿ ಎಂದು ಬಿಜೆಪಿ ಮುಖಂಡರು ವಾದ ಮಂಡಿಸುತ್ತಿದ್ದಾರೆಯೇ ಹೊರತು ಕೇಂದ್ರ ಸರ್ಕಾರವು ಅಕ್ಕಿ ನೀಡಿದರೆ ಆಗುವ ಅನಾಹುತಗಳೇನು ಎಂದು ವಿವರಣೆ ನೀಡುತ್ತಿಲ್ಲ. ಬಿಪಿಎಲ್ ಚೀಟಿ ಹೊಂದಿರುವವರಿಗೆ ಅಕ್ಕಿ ಮುಖ್ಯವೇ ಹೊರತು ಅರ್ಥಶಾಸ್ತ್ರ ಅಲ್ಲ ಎನ್ನುತ್ತಾರೆ ಹಿರಿಯ ಪತ್ರಕರ್ತ ಎಚ್.ಮಾರುತಿ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ

ಅಧಿವೇಶನ ಆರಂಭಕ್ಕೂ ಮುನ್ನವೇ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಬೇಕೆಂದು ಹಟ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಕ್ಕಿಯ ಬದಲಾಗಿ ನಗದು ಹಣವನ್ನು ಪಡಿತರ ಚೀಟಿದಾರರ ಖಾತೆಗೆ ವರ್ಗಾಯಿಸಲು ತೀರ್ಮಾನಿಸಿದೆ. ಈ ದಿಢೀರ್ ನಿರ್ಧಾರ ಪ್ರತಿಪಕ್ಷ ಬಿಜೆಪಿಯನ್ನೂ ಬೆಚ್ಚಿ ಬೀಳಿಸಿದೆ. ಅನ್ನ ಭಾಗ್ಯ ಯೋಜನೆಗೆ ಅಕ್ಕಿ ದೊರೆಯದಿದ್ದರೆ ಕಾಂಗ್ರೆಸ್ ಮಾನವನ್ನು ಸದನದ ಒಳಗೆ ಮತ್ತು ಹೊರಗೆ ಹರಾಜು ಹಾಕಬಹುದೆಂಬ ಬಿಜೆಪಿಯ ಕನಸು ಕಮರಿ ಹೋಗಿದೆ. ಖಾತೆಗೆ ಹಣ ವರ್ಗಾವಣೆಯಾಗುವುದರಿಂದ ಖಾತೆದಾರನಿಗೆ ಸಂತೋಷವೇ ಹೊರತು ಆತ ಅಕ್ಕಿ ಕೊಡಲಿಲ್ಲ ಎಂದು ಕೊರಗುವ ಪ್ರಮೇಯವೇ ಉಂಟಾಗುವುದಿಲ್ಲ.

ಅಕ್ಕಿ ಅಥವಾ ನಗದು ಯಾವುದೇ ರೂಪದಲ್ಲಿ ನೀಡಿದರೂ ಸರ್ಕಾರದ ಹಣವೇ ವೆಚ್ಚವಾಗುತ್ತಿತ್ತು. ಹಾಗೆ ನೋಡುವುದಾದರೆ ನಗದು ರೂಪದಲ್ಲಿ ಹಣವನ್ನು ವರ್ಗಾವಣೆ ಮಾಡುವುದರಿಂದ ಸರಕಾರಕ್ಕೆ ಕಿರಿಕಿರಿ ತಪ್ಪುತ್ತದೆ. ಅಲ್ಲಲ್ಲಿ ಅಕ್ಕಿ ಸಿಗಲಿಲ್ಲ ಎಂದು ಸರ್ಕಾರದ ಮೇಲೆ ಮುಗಿ ಬೀಳುವ ಪ್ರಕರಣಗಳು ಕಡಿಮೆಯಾಗುತ್ತವೆ. ಅಕ್ಕಿ ಖರೀದಿ, ಸಂಗ್ರಹಣೆ, ಪಡಿತರ ಕೇಂದ್ರಗಳಿಗೆ ವಿತರಣೆ ಸೇರಿ ಸರಕಾರಕ್ಕೆ ಕೆಲಸದ ಹೊರೆ ಕಡಿಮೆಯಾಗಿದೆ. ಪ್ರತಿ ಕೆಜಿಗೆ ಸಾಗಾಣಿಕೆ ವೆಚ್ಚ 2.60 ರೂಪಾಯಿ ಉಳಿತಾಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಬಾಯಿ ಮುಚ್ಚಿಸಲು ಸಾಧ್ಯವಾಗಿದೆ.

ಅಕ್ಕಿ ಅಲಭ್ಯ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಜುಲೈ 1ರಿಂದ ಅಕ್ಕಿ ನೀಡುವ ಭರವಸೆ ನೀಡಲಾಗಿತ್ತು. ಪ್ರತಿ ತಿಂಗಳು 2,29,000 ಮೆಟ್ರಿಕ್ ಟನ್ ಅಕ್ಕಿ ಬೇಕಾಗಿರುತ್ತದೆ. ಇಷ್ಟು ಪ್ರಮಾಣದ ಅಕ್ಕಿಯನ್ನು ಪೂರೈಸಲು ಯಾವ ರಾಜ್ಯಕ್ಕೂ ಸಾದ್ಯವಾಗುತ್ತಿಲ್ಲ. ಆದರೂ ಅಕ್ಕಿಯನ್ನು ಖರೀದಿಸಿ ವಿತರಣೆ ಮಾಡಿಯೇ ಮಾಡುತ್ತೇವೆ. ಅಕ್ಕಿ ಮೌಲ್ಯದ ಹಣ ನೀಡುವುದು ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದಿದ್ದಾರೆ.

ಮಹತ್ವದ ನಿರ್ಧಾರ

ರಾಜ್ಯದಲ್ಲಿ 1.51 ಕೋಟಿ ರೇಷನ್ ಕಾರ್ಡ್‌ಗಳಿದ್ದು 5.18 ಕೋಟಿ ಜನರು ಈ ಕಾರ್ಡ್‌ಗಳ ವಾಪ್ತಿಗೆ ಒಳಪಡುತ್ತಾರೆ. ಇದರಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರ ಸಂಖ್ಯೆ 1.16 ಕೋಟಿಯಷ್ಟಿದ್ದು 3.88 ಕೋಟಿ ಜನರು ಈ ಕಾರ್ಡ್‌ಗಳ ವ್ಯಾಪಿಗೆ ಬರಲಿದ್ದಾರೆ. ಇವರೆಲ್ಲರಿಗೂ ಉಚಿತ ಅಕ್ಕಿ ನೀಡಬೇಕಾಗಿರುತ್ತದೆ. ಈ ರೀತಿ ಅಕ್ಕಿ ಅಥವಾ ಅದರ ಮೌಲ್ಯದ ಹಣ ನೀಡಲು ರಾಜ್ಯ ಸರ್ಕಾರಕ್ಕೆ ವಾರ್ಷಿಕ 10,000 ಕೋಟಿ ರೂಪಾಯಿಗಳ ಅವಶ್ಯಕತೆ ಇರುತ್ತದೆ.

ಒಬ್ಬರಿಗೆ 5 ಕೆಜೆ ಅಕ್ಕಿ ಕೊಡಲು ನಿಗದಿ ಪಡಿಸಿರುವ ವೆಚ್ಚ 170 ರೂಪಾಯಿ. ಈ ಲೆಕ್ಕದಲ್ಲಿ ಕುಟುಂಬದಲ್ಲಿ ಎಷ್ಟು ಮಂದಿ ಇದ್ದಾರೆ ಎನ್ನುವುದರ ಆಧಾರದ ಮೇಲೆ ಅಕ್ಕಿ ವೆಚ್ಚವು ವರ್ಗಾವಣೆ ಆಗಲಿದೆ. ಅದರಂತೆ ಇಬ್ಬರಿಗೆ 340 ರೂ, ಮೂವರಿಗೆ 510 ರೂ, ನಾಲ್ವರಿಗೆ 680 ರೂ, ಮತ್ತು ಐವರಿಗೆ 850 ರೂಪಾಯಿಯನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಲಿದೆ.

ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡ ಬಿಜೆಪಿ

ಅಕ್ಕಿ ನೀಡಲಾಗದಿದ್ದರೆ ಕ್ಯಾಷ್ ರೂಪದಲ್ಲಿ ಹಣ ನೀಡಿ ಎಂದು ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿತ್ತು. ಈ ಸಂಬಂಧ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಅನೇಕ ಮುಖಂಡರು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದರು. ಈಗ ಅವರು ಬಿಟ್ಟ ಬಾಣ ಅವರಿಗೇ ಮುಳುವಾಗಿದೆ. ಖಾತೆಗೆ ಹಣ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಯಾವೊಬ್ಬ ಪಡಿತರ ಚೀಟಿದಾರನೂ ವಿರೋಧಿಸಲಾರ. ಹಾಗಾಗಿ ಬಿಜೆಪಿ ಇಕ್ಕಳದಲ್ಲಿ ಸಿಲುಕಿದ ಹಾಗಾಗಿದೆ. ನಗದು ರೂಪವನ್ನು ವಿರೋಧಿಸಲು ಹೊರಟರೆ ಅವರನ್ನು ಸಾರ್ವಜನಿಕರು ಬೆಂಬಲಿಸಲಾರರು. ಮೇಲಾಗಿ ಉತ್ತರ ಕರ್ನಾಟಕದಲ್ಲಿ ಪಡಿತರ ಚೀಟಿದಾರರು ನಮಗೆ ಅಕ್ಕಿ ಬೇಡ, ಅದರ ಹಣವನ್ನು ನೀಡಿ ಎಂದು ಅಲ್ಲಲ್ಲಿ ಬೇಡಿಕೆ ಇರಿಸುತ್ತಿದ್ದ ವರದಿಗಳು ಪ್ರಸಾರವಾಗುತ್ತಲೇ ಇದ್ದವು. ಈ ನಿರ್ಧಾರವು ಅವರಿಗೂ ಸಂತೋಷ ತಂದಿರುವುದರಲ್ಲಿ ಆಶ್ಚರ್ಯವಿಲ್ಲ.

ಒಂದು ವೇಳೆ ಕೇಂದ್ರ ಸರ್ಕಾರವು ಅಕ್ಕಿ ನೀಡಿದ್ದರೆ ನಂತರವೂ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಲವು ಮಾರ್ಗಗಳಿದ್ದವು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡಬಾರದೆಂದೇ ನಿಯಮಗಳನ್ನು ಕೇಂದ್ರ ಸರ್ಕಾರವು ಬದಲಾಯಿಸಿದೆ ಎಂದು ಹಲವರು ಮಾತನಾಡುತ್ತಿದ್ದಾರೆ. ಅಕ್ಕಿ ನೀಡುವುದು ರಾಜ್ಯ ಸರ್ಕಾರದ ಜವಾಬ್ಧಾರಿ ಎಂದು ಬಿಜೆಪಿ ಮುಖಂಡರು ವಾದ ಮಂಡಿಸುತ್ತಿದ್ದಾರೆಯೇ ಹೊರತು ಕೇಂದ್ರ ಸರ್ಕಾರವು ಅಕ್ಕಿ ನೀಡಿದರೆ ಆಗುವ ಅನಾಹುತಗಳೇನು ಎಂದು ವಿವರಣೆ ನೀಡುತ್ತಿಲ್ಲ. ಒಂದು ವೇಳೆ ಸಬೂಬುಗಳನ್ನು ನೀಡಿದರೂ ಬಿಪಿಎಲ್ ಚೀಟಿ ಹೊಂದಿರುವ 4 ಕೋಟಿ ಜನರು ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಅವರಿಗೆ ಅಕ್ಕಿ ಮುಖ್ಯವಾಗುತ್ತದೆಯೇ ಹೊರತು ಅರ್ಥಶಾಸ್ತ್ರ ಅಲ್ಲ.

ಈಗಂತೂ ಬಿಜೆಪಿ ಮುಖಂಡರದ್ದು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಸ್ಥಿತಿ ಆಗಿದೆ. ಶಕ್ತಿ ಯೋಜನೆಯಲ್ಲೂ ಸರಕಾರವನ್ನು ನಿಶ್ಯಕ್ತಗೊಳಿಸಲು ಸಾಧ್ಯವಾಗುವುದಿಲ್ಲ. ಅನ್ನಭಾಗ್ಯದಲ್ಲೂ ಅಸಾಧ್ಯವಾದ ಮಾತು. ಇನ್ನು ಉಳಿದ ಗ್ಯಾರಂಟಿಗಳನ್ನು ಸರಕಾರ ಯಾವುದೋ ಒಂದು ರೂಪದಲ್ಲಿ ಜಾರಿಗೊಳಿಸಲಿದೆ. ಇದರಿಂದ ಎಲ್ಲರಿಗೂ ಅಲ್ಲದಿದ್ದರೂ ಗರಿಷ್ಠ ಪ್ರಮಾಣದ ಜನರಿಗೆ ಅನುಕೂಲ ಆಗುವುದು ನಿಶ್ಚಿತ. ಕಾಂಗ್ರೆಸ್ ಸರ್ಕಾರದಿಂದ ಕೆಲವರಿಗಾದರೂ ಪ್ರಯೋಜನವಾಗುತ್ತಿದೆ. ನಿಮ್ಮ ಸರ್ಕಾರದಿಂದ ಏನು ಲಾಭ ಆಗುತ್ತಿತ್ತು ಎಂದು ಕೇಳಿದರೆ ಬಿಜೆಪಿ ಮುಖಂಡರ ಬಳಿ ಉತ್ತರ ಇರುವುದಿಲ್ಲ. ಮತ್ತೊಮ್ಮೆ ಅರ್ಥಶಾಸ್ತ್ರ ಪಾಠ ಹೇಳಿದರೆ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಶ್ರೀಸಾಮಾನ್ಯ ಇರುವುದಿಲ್ಲ.

ಬರಹ: ಎಚ್.ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ