Karnataka Assembly Election 2023: ಬಜೆಟ್ ಅಧಿವೇಶನದ ಬಳಿಕ ಬಿಜೆಪಿಯಿಂದ ರಾಜ್ಯದಲ್ಲಿ ನಾಲ್ಕು ಕಡೆ ರಥಯಾತ್ರೆ
Jan 17, 2023 09:40 AM IST
ಸಿಎಂ ಬೊಮ್ಮಾಯಿ
- ಬಜೆಟ್ ಅಧಿವೇಶನದ ನಂತರ ರಾಜ್ಯದ ನಾಲ್ಕು ಕಡೆ ರಥಯಾತ್ರೆ ಮಾಡಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿ: ರಾಜ್ಯದಲ್ಲಿ ಚುನಾವಣಾ ಹವಾ ಇನ್ನಷ್ಟು ಮೆರಗು ಪಡೆಯುವ ನಿರೀಕ್ಷೆಯಿದೆ. ಈಗಾಗಲೇ ಕಾಂಗ್ರೆಸ್‌ನ ಜೋಡೊ ಯಾತ್ರೆ, ಜೆಡಿಎಸ್‌ನ ಪಂಚರತ್ನ ರಥಯಾತ್ರೆಗಳು ನಡೆಯುತ್ತಿದ್ದರೆ, ಬಿಜೆಪಿಯೂ ಕೂಡ ರಥಯಾತ್ರೆ ಮೂಲಕ ಜನರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದೆ. " ಬಜೆಟ್ ಅಧಿವೇಶನದ ನಂತರ ರಾಜ್ಯದ ನಾಲ್ಕು ಕಡೆ ರಥಯಾತ್ರೆ ಮಾಡಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕಾರಿಣಿಯಲ್ಲಿ ಹಲವಾರು ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಚುನಾವಣೆ ನಡೆಯುವ ರಾಜ್ಯಗಳ ಬಗ್ಗೆ ವರದಿ ಮಂಡಿಸಲಾಯಿತು. ಬೂತ್ ಮಟ್ಟದ ಕಾರ್ಯಕ್ರಮಗಳಿಂದ ಹಿಡಿದು, ಸಂಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲದೆ ಚುನಾವಣೆ ಎದುರಿಸುತ್ತಿದ್ದೇನೆ. ನಕಾರಾತ್ಮಕ ಪ್ರಚಾರದ ಪ್ರಯತ್ನಗಳು ನಡೆದರು ಅವರು ಪರಿಣಾಮ ಬಿರಿಲ್ಲ. ರಾಜ್ಯದಲ್ಲಿ ಬಿಜೆಪಿ ನಡೆಸಿದ ಜನ ಸಂಕಲ್ಪ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಜೆಟ್ ಅಧಿವೇಶನದ ಬಳಿಕ ನಾಲ್ಕು ಕಡೆಯಿಂದ ರಥಯಾತ್ರೆ ನಡೆಸಲು ನಿರ್ಧಾರ ಮಾಡಲಾಗಿದೆ. ಹೇಗೆ ಮಾಡಬೇಕು ಎಂದು ನಿರ್ಧಾರ ಆಗಿಲ್ಲ. ಆದರೆ ನಾಲ್ಕು ದಿಕ್ಕಿನಿಂದ ರಥಯಾತ್ರೆ ಮಾಡಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ನವರು ಹತಾಶರಾಗಿ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ನಾನು ಮಹಿಳೆಯರಿಗೆ ವಿಶೇಷ ಯೋಜನೆ ಜಾರಿಗೆ ತರುತ್ತೇನೆ ಎಂದು ಘೋಷಣೆ ಮಾಡಿದ್ದೆ, ಅದೇ ರೀತಿ ಅವರು ಹತಾಶ ಭಾವನೆಯಿಂದ ಯೋಜನೆ ಘೋಷಣೆ ಮಾಡಿದ್ದಾರೆ. ರಾಜ್ಯದ ಜನರು ಅದನ್ನು ಒಪ್ಪುವುದಿಲ್ಲ ಎಂದು ಹೇಳಿದರು.
ಇಂದಿನಿಂದ ಪಂಚರತ್ನ ರಥಯಾತ್ರೆ
ಸಂಕ್ರಾಂತಿ ಹಬ್ಬದ ನಿಮಿತ್ತ ಮೂರು ದಿನ ಸ್ಥಗಿತವಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಪಂಚರತ್ನ ರಥಯಾತ್ರೆ ಇಂದಿನಿಂದ ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭೆ ಕ್ಷೇತ್ರದಿಂದ ಪುನಾರಂಭ ಆಗಿದೆ.
ಈ ಹಂತದಲ್ಲಿ ಒಟ್ಟು 18 ದಿನ ಪಂಚರತ್ನ ರಥಯಾತ್ರೆ ನಡೆಯಲಿದೆ. 6 ದಿನಗಳ ಕಾಲ ಪಂಚರತ್ನ ರಥಯಾತ್ರೆ ವಿಜಯಪುರ ಜಿಲ್ಲೆಯಲ್ಲಿ ನಡೆಯಲಿದೆ. ಕ್ರಮವಾಗಿ ಇಂಡಿ, ಸಿಂಧಗಿ, ದೇವರಹಿಪ್ಪರಗಿ, ನಾಗಠಾಣ, ಮುದ್ದೇಬಿಹಾಳ ಹಾಗೂ ಬಸವನ ಬಾಗೇವಾಡಿ - ಬಬಲೇಶ್ವರ (ಈ ಎರಡೂ ಕ್ಷೇತ್ರಗಳಲ್ಲಿ ಒಂದು ದಿನ) ರಥಯಾತ್ರೆ ನಡೆಯಲಿದೆ.
ಜನವರಿ 23ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ, ಜನವರಿ 24ರಿಂದ 29ರವರೆಗೆ ರಾಯಚೂರು ಜಿಲ್ಲೆಯ ಲಿಂಗಸಗೂರು, ದೇವದುರ್ಗ, ರಾಯಚೂರು ಗ್ರಾಮಾಂತರ, ರಾಯಚೂರು, ಮಾನ್ವಿ, ಸಿಂಧನೂರು ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯುತ್ತದೆ.
ಜನವರಿ 30 ರಂದು ಕೊಪ್ಪಳ ಜಿಲ್ಲೆಯ ಕನಕಗಿರಿ, ಕುಷ್ಟಗಿಯಲ್ಲಿ ರಥಯಾತ್ರೆ ನಡೆಯಲಿದೆ. ಜನವರಿ 31ರಂದು ಬಳ್ಳಾರಿ, ವಿಜಯನಗರ ಜಿಲ್ಲೆಗಳ ಸಂಡೂರು, ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ರಥಯಾತ್ರೆ ಸಾಗುತ್ತದೆ. ಫೆಬ್ರವರಿ 1ರಂದು ದಾವಣಗೆರೆ ಕ್ಷೇತ್ರದ ಹರಿಹರ ಕ್ಷೇತ್ರದಲ್ಲಿ ಹಾಗೂ ಫೆಬ್ರವರಿ 2-3ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಿರೇಕೆರೂರು ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯುತ್ತದೆ.