logo
ಕನ್ನಡ ಸುದ್ದಿ  /  ಕರ್ನಾಟಕ  /  ದಾಖಲೆ ನಿರ್ಮಾಣ ನೆಪದಲ್ಲಿ ತುಮಕೂರು ಎಂಜಿ ಸ್ಟೇಡಿಯಂಗೆ ಆಪತ್ತು; ಕ್ರೀಡಾಂಗಣ ಉಳಿವಿಗೆ ಕ್ರೀಡಾಪಟುಗಳ ಒತ್ತಾಯ

ದಾಖಲೆ ನಿರ್ಮಾಣ ನೆಪದಲ್ಲಿ ತುಮಕೂರು ಎಂಜಿ ಸ್ಟೇಡಿಯಂಗೆ ಆಪತ್ತು; ಕ್ರೀಡಾಂಗಣ ಉಳಿವಿಗೆ ಕ್ರೀಡಾಪಟುಗಳ ಒತ್ತಾಯ

Jayaraj HT Kannada

Feb 07, 2024 05:13 PM IST

google News

ದಾಖಲೆ ನಿರ್ಮಾಣ ನೆಪದಲ್ಲಿ ತುಮಕೂರು ಎಂಜಿ ಸ್ಟೇಡಿಯಂಗೆ ಆಪತ್ತು

    • Tumkur Mg Stadium: ತುಮಕೂರು ಎಂಜಿ ಸ್ಟೇಡಿಯಂನಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲ್ ಬಳಸಿ ತುಮಕೂರು ಎಂಬ ಪದದ ಕಲಾಕೃತಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆಯುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಅರಿವು ಮೂಡಿಸಿತ್ತು. ಅದಾದ ಬೆನ್ನಲ್ಲೇ ನಮ್ಮ ಸಂವಿಧಾನ ಎಂಬ ಕಲಾಕೃತಿ ನಿರ್ಮಿಸಿ ಮತ್ತೊಂದು ದಾಖಲೆ ನಿರ್ಮಾಣವಾಯ್ತು. ಇದು ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.
ದಾಖಲೆ ನಿರ್ಮಾಣ ನೆಪದಲ್ಲಿ ತುಮಕೂರು ಎಂಜಿ ಸ್ಟೇಡಿಯಂಗೆ ಆಪತ್ತು
ದಾಖಲೆ ನಿರ್ಮಾಣ ನೆಪದಲ್ಲಿ ತುಮಕೂರು ಎಂಜಿ ಸ್ಟೇಡಿಯಂಗೆ ಆಪತ್ತು

ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ತುಮಕೂರು ನಗರದಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯ ನಡೆದಿವೆವೆ. ಸುಮಾರು 70 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದಲ್ಲಿ ಮಹಾತ್ಮ ಗಾಂಧಿ ಸ್ಟೇಡಿಯಂ ನಿರ್ಮಾಣ ಮಾಡಲಾಗಿದೆ. ಇಂಥ ಸ್ಟೇಡಿಯಂ ಈಗ ಗಿನ್ನಿಸ್ ದಾಖಲೆ ಕಾರ್ಯಕ್ರಮಗಳಿಂದ ಹಾಳಾಗುತ್ತಿದೆ ಎಂದು ಕ್ರೀಡಾಪಟುಗಳು ಅಸಮಾಧಾನ ಹೊರ ಹಾಕಿದ್ದಾರೆ.

ಈ ಹಿಂದೆ ಇದ್ದ ಕ್ರೀಡಾಂಗಣ ಕೆಡವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣ ಮಾಡಲಾಯಿತು. ಇದರಿಂದ ಕ್ರೀಡಾಪಟುಗಳು ಖುಷಿ ಪಟ್ಟರು. ಆದರೆ ಕಳೆದ ಹದಿನೈದು ದಿನದಿಂದ ಈ ಕ್ರೀಡಾಂಗಣದಲ್ಲಿ ಗಿನ್ನಿಸ್ ದಾಖಲೆ ನಿರ್ಮಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕ್ರೀಡಾಪಟುಗಳ ಅಭ್ಯಾಸಕ್ಕೆ ಬಾರಿ ಸಮಸ್ಯೆ ಎದುರಾಗಿದೆ.

ತುಮಕೂರು ಮಹಾನಗರ ಪಾಲಿಕೆ ಒಂದುವರೆ ಲಕ್ಷ ಖಾಲಿ ಪ್ಲಾಸ್ಟಿಕ್ ಬಾಟಲ್ ಬಳಸಿ ತುಮಕೂರು ಎಂಬ ಪದದ ಕಲಾಕೃತಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆಯುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಅರಿವು ಮೂಡಿಸಿತ್ತು. ಇದಾಗಿ ವಾರ ಕಳೆಯುವಷ್ಟರಲ್ಲಿ ಸಮಾಜ ಕಲ್ಯಾಣ ಇಲಾಖೆ ಖಾಲಿ ಪ್ಲಾಸ್ಟಿಕ್ ಬಾಟಲ್ ಬಳಸಿ ನಮ್ಮ ಸಂವಿಧಾನ ಎಂಬ ಕಲಾಕೃತಿ ನಿರ್ಮಿಸಿ ಮತ್ತೊಂದು ದಾಖಲೆ ನಿರ್ಮಾಣಕ್ಕೆ ಮುಂದಾಯ್ತು. ಇದು ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ | ಅಪರಾಧ ಸುದ್ದಿಗಳು: ಶೀಲ ಶಂಕಿಸಿ ತಾಯಿಯ ಹತ್ಯೆ ಮಾಡಿದ ಅಪ್ರಾಪ್ತ ಪುತ್ರ ಅರೆಸ್ಟ್‌; ನಿವೇಶನ ಮಾಸಾಶನ ಉದ್ಯೋಗ ಹೆಸರಲ್ಲಿ ಬೃಹತ್‌ ವಂಚನೆ

ಕ್ರೀಡೆ ಉದ್ದೇಶಕ್ಕೆ ನಿರ್ಮಾಣವಾಗಿರುವ ಸ್ಟೇಡಿಯಂನಲ್ಲಿ ದಾಖಲೆ ನಿರ್ಮಾಣ ನೆಪದಲ್ಲಿ ಕ್ರೀಡಾ ಚಟುವಟಿಕೆಗೆ ಕಡಿವಾಣ ಹಾಕಿರುವುದು ಸರಿಯಲ್ಲ. ಅಲ್ಲದೆ ಕ್ರೀಡಾಂಗಣದಲ್ಲಿನ ಹುಲ್ಲು ಜನರ ಓಡಾಟದಿಂದ ಮತ್ತು ನೀರಿಲ್ಲದೆ ಒಣಗುತ್ತಿದೆ. ಜೊತೆಗೆ ಸಿಂಥೆಟಿಕ್ ಟ್ರಾಕ್ ಕೂಡ ಹಾಳಾಗುತ್ತಿದೆ. ಪ್ಲಾಸ್ಟಿಕ್ ಬಾಟಲ್ ತುಂಬಿದ ಚೀಲಗಳನ್ನು ಈ ಟ್ರ್ಯಾಕ್ ಮೇಲೆ ಎಳೆದಾಡಲಾಗಿದೆ. ಈ ಟ್ರ್ಯಾಕ್‌ನಲ್ಲಿ ಶೂ ಹಾಕಿಕೊಂಡು ಮಾತ್ರ ಅಭ್ಯಾಸ ಮಾಡಬೇಕು. ಆದರೆ ಇಲ್ಲಿ ಸಾವಿರಾರು ಜನ ಬೇಕಾಬಿಟ್ಟಿಯಾಗಿ ಓಡಾಡಿರುವುದರಿಂದ ಟ್ರ್ಯಾಕ್ ಹಾಳಾಗಿದೆ. ಈ ಕೂಡಲೇ ಸಂಬಧಿಸಿದವರು ಸ್ಟೇಡಿಯಂ ಉಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.

ಸ್ಟೇಡಿಯಂ ನಿರ್ವಹಣೆಯೇ ದೊಡ್ಡ ಸವಾಲು

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸುಂದರವಾಗಿ ಕ್ರೀಡಾಂಗಣ ನಿರ್ಮಾಣ ಆಗಿದೆ. ಆದರೆ ಯುವ ಸಬಲೀಕರಣ ಇಲಾಖೆ ಮಾತ್ರ ಕ್ರೀಡಾಂಗಣವನ್ನು ತನ್ನ ಸುಪರ್ದಿಗೆ ಪಡೆಯಲು ಮೀನಮೇಷ ಎಣಿಸುತ್ತಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಕ್ರೀಡಾಂಗಣ ನಿರ್ವಹಣೆ ಮಾಡುವುದು ಕಷ್ಟವಾಗಲಿದೆ. ಅಲ್ಲದೆ ಕ್ರೀಡಾಪಟುಗಳಿಗೆ ತರಬೇತಿ ನೀಡಲು ತರಬೇತುದಾರರ ಕೊರತೆ ಇದೆ. ಕ್ರೀಡಾಪಟುಗಳು ಸ್ಟೇಡಿಯಂಗೆ ಬಂದು ತಮಗೆ ತೋಚಿದಂತೆ ಅಭ್ಯಾಸ ಮಾಡಿ ಹೋಗುವಂತಾಗಿದೆ.

ಇದನ್ನೂ ಓದಿ | ಮತ್ತೊಂದು ದಾಖಲೆಗೆ ತುಮಕೂರು ಎಂಜಿ ಸ್ಟೇಡಿಯಂ ಸಜ್ಜು; 1.35 ಲಕ್ಷ ಖಾಲಿ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಅರಳಿದ ನಮ್ಮ ಸಂವಿಧಾನ

ಕರೆಂಟ್ ಬಿಲ್ ಕೂಡ ಬಾಕಿ ಇತ್ತು

ಸ್ಟೇಡಿಯಂ ನಿರ್ಮಾಣವಾದ ಆರಂಭದಲ್ಲಿ ಕ್ರೀಡಾಂಗದಲ್ಲಿ ರಾತ್ರಿ ಕತ್ತಲು ಕವಿಯುತ್ತಿತ್ತು. ಕಾರಣ ಇಲಾಖೆ ಸುಮಾರು ಐದು ಲಕ್ಷದಷ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿತ್ತು. ಬೆಸ್ಕಾಂ ವಿದ್ಯುತ್ ಕಡಿತಗೊಳಿಸಿದ್ದರಿಂದ ಹಲವು ತಿಂಗಳು ಸ್ಟೇಡಿಯಂನಲ್ಲಿ ಕತ್ತಲು ಕವಿಯುವಂತಾಗಿತ್ತು.

ಸ್ಟೇಡಿಯಂ ಉಳಸಿ

ಕೋಟಿ ಕೋಟಿ ಹಣ ಖರ್ಚು ಮಾಡಿ ಕಟ್ಟಿರುವ ಕ್ರೀಡಾಂಗಣಕ್ಕೆ ಬೇಕಾಗಿರುವ ಸೌಲಭ್ಯ ಕಲ್ಪಿಸಬೇಕು. ದಾಖಲೆ ಮಾಡುವ ಬರದಲ್ಲಿ ಸ್ಟೇಡಿಯಂ ಹಾಳಾಗಬಾರದು. ದೇಶಕ್ಕೆ ಉತ್ತಮ ಕ್ರೀಡಾಪಟುಗಳನ್ನು ನೀಡುವ ನಿಟ್ಟಿನಲ್ಲಿ ಎಂಜಿ ಸ್ಟೇಡಿಯಂ ಬಳಕೆಯಾಗಬೇಕು ಎಂಬುದು ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.

ವರದಿ: ಈಶ್ವರ್‌, ತುಮಕೂರು

ಇದನ್ನೂ ಓದಿ | ಕರ್ನಾಟಕದ ಬರಕ್ಕೆ ಸ್ಪಂದಿಸದೇ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ಸಿದ್ದರಾಮಯ್ಯ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ