logo
ಕನ್ನಡ ಸುದ್ದಿ  /  ಕರ್ನಾಟಕ  /  Badami Jatra: ಭಕ್ತರ ಇಷ್ಟಾರ್ಥ ಸಿದ್ಧಿಸುವ ಕಿಸಗಾಲು ಗೊಂಬೆ: ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಭರ್ಜರಿ ಮಾರಾಟ

Badami Jatra: ಭಕ್ತರ ಇಷ್ಟಾರ್ಥ ಸಿದ್ಧಿಸುವ ಕಿಸಗಾಲು ಗೊಂಬೆ: ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಭರ್ಜರಿ ಮಾರಾಟ

Umesha Bhatta P H HT Kannada

Jan 27, 2024 07:30 AM IST

google News

ಬಾದಾಮಿ ಜಾತ್ರೆಯಲ್ಲಿ ಕಿಸಗಾಲ ಗೊಂಬೆ ಮಾರಾಟ ಜೋರಾಗಿದೆ.

    • ಉತ್ತರ ಕರ್ನಾಟಕದ ಪ್ರಸಿದ್ದ ಬನಶಂಕರಿ ಜಾತ್ರೆಯಲ್ಲಿ ಕಿಸಗಾಲ ಗೊಂಬೆಗಳ ಮಾರಾಟ ಜೋರಾಗಿದೆ. ಏನಿದರ ವಿಶೇಷ ಇಲ್ಲಿದೆ ವಿವರ.
    • ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ
ಬಾದಾಮಿ ಜಾತ್ರೆಯಲ್ಲಿ ಕಿಸಗಾಲ ಗೊಂಬೆ ಮಾರಾಟ ಜೋರಾಗಿದೆ.
ಬಾದಾಮಿ ಜಾತ್ರೆಯಲ್ಲಿ ಕಿಸಗಾಲ ಗೊಂಬೆ ಮಾರಾಟ ಜೋರಾಗಿದೆ.

ಬಾಗಲಕೋಟೆ; ಬಾದಾಮಿಯ ಬನಶಂಕರಿ ಜಾತ್ರಾ ಮಹೋತ್ಸವದಲ್ಲಿ ಮಹಾರಥೋತ್ಸವದ ನಂತರ ಕಿಸಗಾಲ ಗೊಂಬೆಗಳ ಮಾರಾಟ ಬಹಳ ಜೋರಾಗಿಯೇ ನಡೆದಿದೆ. ಮಾರಾಟ ಆರಂಭವಾದ ಅರ್ಧ ಗಂಟೆಯಲ್ಲಿಯೇ ಎಲ್ಲ ಗೊಂಬೆಗಳು ಮಾರಾಟವಾಗಿವೆ.

ಕಿಸಗಾಲ ಗೊಂಬೆಯನ್ನು ಗೋವಿನ ಸಗಣಿಯಿಂದ ತಯಾರಿಸಿ, ಇದಕ್ಕೆ ಬಣ್ಣವನ್ನು ಹಚ್ಚಲಾಗುತ್ತಿದೆ. ಇದರ ವಿಶೇಷತೆಯೇನೆಂದರೆ ಮಕ್ಕಳ ಆಗದವರಿಗೆ ಸಂತಾನ ಭಾಗ್ಯ, ಮದುವೆ ಆಗದವರಿಗೆ ಕಂಕಣ ಭಾಗ್ಯ, ಆರೋಗ್ಯ ಐಶ್ವರ್ಯ ಭಾಗ್ಯದ ಸಂಕೇತವಾಗಿ ಅಣ್ಣನು ತಂಗಿಗೆ ಈ ಕಿಸಗಾಲ ಗೊಂಬೆಯನ್ನು ಕೊಡುತ್ತಾನೆ. ಪ್ರತಿಯೊಂದು ಕುಟುಂಬದವರು ಈ ಗೊಂಬೆಯನ್ನು ಖರೀದಿಸಿದರೆ ಅದು ನಿಜವಾದ ಜಾತ್ರೆ ಎಂದು ಹಿಂದಿನಿಂದ ನಡೆದುಬಂದ ವಾಡಿಕೆಯಾಗಿದೆ.

ಇನ್ನು ಜಾತ್ರೆಗೆ ಬರುವ ಭಕ್ತಾದಿಗಳು ಮೊದಲು ಈ ಗೊಂಬೆಗಳ ಖರೀದಿಗೆ ಮುಂದಾಗುತ್ತಾರೆ. ಗೊಂಬೆಗಳ ಖರೀದಿ ನಂತರವೇ ಮುಂದಿನ ವಸ್ತುಗಳ ಖರೀದಿಗೆ ಹೋಗುತ್ತಾರೆ. ಇನ್ನು ಈ ಗೊಂಬೆಗಳ ಖರೀದಿಗೆ ಸ್ವಲ್ಪ ತಡವಾದರೂ ಎಷ್ಟೆಏ ಹಣ ನೀಡಿದರು ಗೊಂಬೆಗಳೇ ಸಿಗುವುದಿಲ್ಲ.

ಕಳೆದ 50 ವರ್ಷಗಳಿಂದ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದ ನಿವಾಸಿಯಾಗಿರುವಂತಹ ಶಂಕ್ರಮ್ಮ ಚಿತ್ರಾಗಾರ, ತಾಯವ್ವ ಚಿತ್ರಗಾರ ಕುಟುಂಬದವರು ಈ ಗೊಂಬೆಗಳನ್ನು ಮಾರಾಟ ಮಾಡುತ್ತಾ ಬಂದಿದ್ದಾರೆ. ಮಹಾರಥೋತ್ಸವದ ನಂತರ ಅರ್ಧ ಗಂಟೆಯಲ್ಲಿ ಈ ಎಲ್ಲ ಗೊಂಬೆಗಳು ಖಾಲಿಯಾಗಿವೆ.

ಸಂಭ್ರಮದ ಬನಶಂಕರಿದೇವಿ ಮಹಾ ರಥೋತ್ಸವ

ಉತ್ತರ ಕರ್ನಾಟಕದ ಪ್ರಸಿದ್ಧ ಸುಕ್ಷೇತ್ರ ಬಾದಾಮಿ-ಬನಶಂಕರಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ೫ ಗಂಟೆಗೆ ಮಾಹಾ ರಥೋತ್ಸವವು ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಭಕ್ತಿ ಭಾವಗಳ ಮಧ್ಯೆ ಸಡಗರ, ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಜ.18 ರಿಂದ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲಿದ್ದು ಗುರುವಾರ ಬೆಳಿಗ್ಗೆ ಬನಶಂಕರಿ ದೇವಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕವನ್ನು ಪೂಜಾರ ಕುಟುಂಬದವರು ನೆರವೇರಿಸಿದರು.

ಬನಶಂಕರಿ ಮಾಹಾ ರಥೋತ್ಸವಕ್ಕೆ ಸಾಂಪ್ರಾದಾಯಿಕವಾಗಿ ರಥಾಂಗ ಹೋಮ ಹಾಗೂ ಪೂಜೆ ನೆರೆವೇರಿಸಿದ ನಂತರ ಮಾಡಲಗೇರಿಯಿಂದ ತಂದ ರಥದ ಹಗ್ಗದಿಂದ ರಥವನ್ನು ಎಳೆಯಲಾಯಿತು.

ರಥಕ್ಕೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದ ಭಕ್ತ ಸಮೂಹ ಬನಶಂಕರಿದೇವಿ ನಿನ್ನ ಪಾದಕ ಶಂಭು ಕೋ... ಎಂದು ನಾಮಸ್ಮರಣೆ ಮಾಡಿದರು.

ಹರಿದು ಬಂದ ಭಕ್ತ ಸಾಗರ

ಬಾದಾಮಿ ಶ್ರೀ ಬನಶಂಕರಿದೇವಿ ಮಹಾರಥೋತ್ಸವದ ದಿನ ಗುರುವಾರ ಬೆಳಿಗ್ಗೆಯಿಂದ ಹೊರಜಿಲ್ಲೆಯ ಜಿಲ್ಲೆಯ, ತಾಲೂಕಿನ ಸೇರಿದಂತೆ ರಾಜ್ಯದ ವಿವಿದ ಭಾಗಗಳಿಂದ ಸಹಸ್ರಾರು ಜನ ಭಕ್ತ ಸಮೂಹ ಪಾದಯಾತ್ರೆಯ ಮೂಲಕ ಬನಶಂಕರಿಗೆ ಆಗಮಿಸಿದರು.

(ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ