logo
ಕನ್ನಡ ಸುದ್ದಿ  /  ಕರ್ನಾಟಕ  /  Success Story: ಕೂಲಿ ಕಾರ್ಮಿಕರ ಮಗಳು ಈಗ ಸಿವಿಲ್‌ ನ್ಯಾಯಾಧೀಶೆ, ಶ್ರಮ, ಛಲದಿಂದ್ದ ಗೆದ್ದ ಹಳ್ಳಿ ಹುಡುಗಿ

Success story: ಕೂಲಿ ಕಾರ್ಮಿಕರ ಮಗಳು ಈಗ ಸಿವಿಲ್‌ ನ್ಯಾಯಾಧೀಶೆ, ಶ್ರಮ, ಛಲದಿಂದ್ದ ಗೆದ್ದ ಹಳ್ಳಿ ಹುಡುಗಿ

Umesha Bhatta P H HT Kannada

Feb 27, 2024 03:40 PM IST

google News

ಅಪ್ಪ ಅಮ್ಮನೊಂದಿಗೆ ಭಾಗ್ಯಶ್ರೀ

    • Bagalkot News ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕು ಗಂಗೂರು ಗ್ರಾಮದ ಯುವತಿ ಭಾಗ್ಯಶ್ರೀ ಸತತ ಪರಿಶ್ರಮದಿಂದ ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ಧಾರೆ. 
ಅಪ್ಪ ಅಮ್ಮನೊಂದಿಗೆ ಭಾಗ್ಯಶ್ರೀ
ಅಪ್ಪ ಅಮ್ಮನೊಂದಿಗೆ ಭಾಗ್ಯಶ್ರೀ

ಬಾಗಲಕೋಟೆ: ಆಕೆ ಅಪ್ಪಟ ಗ್ರಾಮೀಣ ಪ್ರತಿಭೆ. ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದವರು. ಮನೆಯಲ್ಲಿ ಅಪ್ಪ ಅಮ್ಮ ಇಬ್ಬರು ಕೂಲಿಕಾರರು. ಅಂದು ದುಡಿದರೆ ಮಾತ್ರ ಪಗಾರ.ಇಲ್ಲದೇ ಇದ್ದರೇ ಇರುವುದರಲ್ಲೇ ನೀಗಿಸಿಕೊಂಡು ಹೋಗಬೇಕು. ಅದು ಉತ್ತರ ಕರ್ನಾಟಕದ ಬರದ ಸನ್ನಿವೇಶ ಬೇರೆ. ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಓದಬೇಕು, ಸಾಧಿಸಬೇಕು ಎಂಬ ಛಲ ಹಾಗೂ ಅದಕ್ಕೆ ತಕ್ಕ ಪರಿಶ್ರಮವಿದ್ದರೆ ಗೆಲುವು ಸಾಧ್ಯ ಎನ್ನುವುದಕ್ಕೆ ಸಾಧನೆಯ ಉದಾಹರಣೆಯಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಗಂಗೂರ ಗ್ರಾಮದ ಯುವತಿ ಭಾಗ್ಯಶ್ರೀ ಮಾದರ ಸಾಧಿಸಿ ತೋರಿಸಿದ ಯುವತಿ. ನಿರಂತರ ಪ್ರಯತ್ನದಿಂದಾಗಿ ಈಗ ಸಿವಿಲ್‌ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿದ್ದಾರೆ. ಶಾಲೆಯ ಮೆಟ್ಟಿಲನ್ನೇ ಹತ್ತದ ತಂದೆ ತಾಯಿಯ ಕಠಿಣ ಪರಿಶ್ರಮ, ಅವಿರತ ಬೆಂಬಲಕ್ಕೆ ಸಾಧಿಸಿ ತೋರಿಸಿರುವ ಭಾಗ್ಯಶ್ರೀ ಮಾದರಿಯೂ ಆಗಿದೆ.

ಅನಕ್ಷರಸ್ಥ ಪೋಷಕರು

ದುರಗಪ್ಪ ಮಾದರ ಹಾಗೂ ತಾಯಿ ಯಮನವ್ವ ಮಾದರ ಇಬ್ಬರೂ ಅನಕ್ಷರಸ್ಥರೇ. ಏಳು ಮಕ್ಕಳ ತುಂಬು ಕುಟುಂಬ. ಕೂಲಿ ಕೆಲಸ ಮಾಡುತ್ತಲೇ ಮಕ್ಕಳನ್ನು ಶಾಲೆಗೆ ಕಳುಹಿಸಿದರು. ಐದನೇ ಮಗಳು ಭಾಗ್ಯಶ್ರೀಗೆ ಏನಾದರೂ ಸಾಧಿಸಬೇಕಂದ ಹಠ ಸಣ್ಣ ವಯಸ್ಸಿನಿಂದಲೂ ಇತ್ತು. ಪೋಷಕರಿಬ್ಬರೂ ಪಡುತ್ತಿರುವ ಕಷ್ಟ, ಇಷ್ಟಿದ್ದರೂ ನಮ್ಮನ್ನು ಓದಿಸಬೇಕೆಂಬ ಹಂಬಲ ಭಾಗ್ಯಲಕ್ಷ್ಮಿ ಅವರಲ್ಲಿ ಸಾಧನೆಯ ಮಾಡಬೇಕೆಂಬ ಉತ್ಕಟ ಹಂಬಲವನ್ನು ತುಂಬಿತ್ತು.

ಭಾಗ್ಯಶ್ರೀ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಗಂಗೂರಿನ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಣ ಸಮೀಪದ ಚಿತ್ತರಗಿಯ ಸರಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನುಅಮೀನಗಡದ ಸಂಗಮೇಶ್ವರ ಕಾಲೇಜ್‌ನಲ್ಲಿ ಪೂರೈಸಿದ್ದಾರೆ.

ಪಶುವೈದ್ಯಾಧಿಕಾರಿ ಬಿಟ್ಟು ನ್ಯಾಯಾಧೀಶೆ

ತಾನು ಪಶುವೈದ್ಯಾಧಿಕಾರಿಯಾಗಬೇಕು. ರೈತರಿಗೆ ನೆರವಾಗಬೇಕು ಎಂಬುದು ಭಾಗ್ಯಶ್ರೀ ಬಯಕೆಯಾಗಿತ್ತು. ಆದರೆ ಮಗಳು ಕಾನೂನು ಪದವಿ ಪಡೆದು ನ್ಯಾಯಾಧೀಶೆಯಾಗಬೇಕು ಎನ್ನುವುದು ತಂದೆಯ ಆಸೆ. ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಬಂದಿದ್ದ ನ್ಯಾಯಾಧೀಶರೊಬ್ಬರನ್ನು ನೋಡಿ ಅವರಂತೆ ತಾನೂ ಆಗಬೇಕು ಎನ್ನುವುದನ್ನು ಮನಸಿನಲ್ಲಿಯೇ ಇಟ್ಟುಕೊಂಡಿದ್ದರು ಭಾಗ್ಯಶ್ರೀ. ಅಪ್ಪನ ಆಸೆಯಂತೆಯೇ ಆಗಲಿ ಎಂದು ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್.ಸಿ. ನಂದಿಕೋಲುಮಠ ಕಾನೂನು ಕಾಲೇಜಿನಲ್ಲಿ ಐದು ವರ್ಷದ ಎಲ್‌ಎಲ್‌ಬಿಗೆ ಭಾಗ್ಯಶ್ರೀ ಸೇರಿಕೊಂಡರು. ಐದು ವರ್ಷ ಸತತ ಓದು, ಕಾನೂನಿನ ಅರಿವು, ಕಾಯ್ದೆ ಕಟ್ಟಳೆಗಳ ಕುರಿತಾದ ತಿಳುವಳಿಕೆ, ಪ್ರಮುಖ ಪ್ರಕರಣಗಳ ಒಳನೋಟ.. ಹೀಗೆ ಎಲ್ಲಾ ಆಯಾಮದಲ್ಲೂ ಭಾಗ್ಯಶ್ರೀ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ಹೋದರು. 2018 ರಲ್ಲಿ ಪದವಿ ಮುಗಿಯುತ್ತಲೇ ಸನ್ನದು ಕೂಡ ಪಡೆದುಕೊಂಡರು. ವಕೀಲೀ ವೃತ್ತಿಯನ್ನು ಹುನಗುಂದ ನ್ಯಾಯಾಲದಲ್ಲಿ ಆರಂಭಿಸಿದರು. ಬಡವರು, ಕಾನೂನು ಜ್ಞಾನ ಇಲ್ಲದವರು ನ್ಯಾಯಾಲಯಕ್ಕೆ ಬರುತ್ತಿದ್ದರು. ಅಂತಹವರಿಗೆ ನೆರವಾಗುತ್ತಲೇ ಭಾಗ್ಯಶ್ರೀ ನ್ಯಾಯಾಧೀಶೆ ಆಗುವ ಮಹದಾಸೆಯನ್ನು ಬಿಟ್ಟಿರಲಿಲ್ಲ.

ಹೈಕೋರ್ಟ್‌ ಸೇವೆ

2021 ರಿಂದ 22ರವರೆಗೆ ಬೆಂಗಳೂರಿನ ಹೈಕೋರ್ಟ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಲಾ ಕ್ಲರ್ಕ್ ಕಂ ರೀಸರ್ಚ್ ಅಸಿಸ್ಟಂಟ್ ಹುದ್ದೆ ನಿರ್ವಹಿಸಿದರು. ನ್ಯಾಯಾಧೀಶ ಹುದ್ದೆ ಆಯ್ಕೆಗಾಗಿ ಕೆಲಸದೊಂದಿಗೆ ಓದು ಅಸಾಧ್ಯ ಎನಿಸಿದಾಗ ಹುದ್ದೆ ತೊರೆದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮುಂದುವರೆಸಿದರು.

2021 ಹಾಗೂ2022 ರಲ್ಲಿ ನಡೆದ ನ್ಯಾಯಾಧೀಶ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ಉತ್ತೀರ್ಣರಾದರೂ ಮೌಖಿಕ ಸಂದರ್ಶನದಲ್ಲಿ ಸ್ಪಲ್ಪದರಲ್ಲೇ ಅವಕಾಶ ಕಳೆದುಕೊಂಡಿದರು. ಹಾಗೆಂದು ಪ್ರಯತ್ನ ಬಿಡಲಿಲ್ಲ. ನಾನೆಲ್ಲಿ ಎಡವುತ್ತಿದ್ದೇನೆ. ಗುರಿ ತಲುಪಲು ತಯಾರಿ ಹೇಗಿರಬೇಕು ಎಂದು ಅದಕ್ಕೆ ಸಿದ್ದತೆ ಮಾಡಿಕೊಂಡು ಮೂರನೇ ಬಾರಿಗೆ ಯಶಸ್ವಿಯಾಗಿಯೇ ಬಿಟ್ಟರು. ಕೆಲ ದಿನಗಳ ಹಿಂದೆಯಷ್ಟೇ ಪ್ರಕಟಿಸಿದ 2023 ನೇ ಸಾಲಿನ ಸಿವಿಲ್‌ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದುದನ್ನು ಕಂಡು ಖುಷಿಗೊಂಡರು ಭಾಗ್ಯಶ್ರೀ.

ಸತತ ಪ್ರಯತ್ನದ ಫಲ

ಕಾನೂನು ವಿಷಯದಲ್ಲಿ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದೆ. ಆನಂತರ ವಕೀಲಳಾಗಿದ್ದ ಅನುಭವವೂ ಉಪಯೋಗಕಕ್ಕೆ ಬಂದಿತು. ಓದುವುದನ್ನು ನಿಲ್ಲಿಸಬಾರದು. ದಿನಕ್ಕೆ ಇಂತಿಷ್ಟು ಅವಧಿ ಎಂದು ಮೀಸಲಿಟ್ಟುಕೊಂಡು ಓದಲೇಬೇಕು. ಅದು ನಮಗೆ ಎಂದಿಗಾದರೂ ಸಹಾಯಕ್ಕೆ ಬರುತ್ತದೆ. ಇದರಿಂದ ನ್ಯಾಯಾಧೀಶರ ಹುದ್ದೆಯಲ್ಲಿ ಉತ್ತೀರ್ಣಳಾಗಲು ಸಹಕಾರಿಯಾಯಿತು.

ತಂದೆ, ತಾಯಿ ಹಾಗೂ ಸಹೋದರಿಯರ ಬೆಂಬಲದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಕಾನೂನು ಪದವಿ ಪಡೆಯಲು ಎಲ್ಲರೂ ಹುರುಪು ತುಂಬಿದರು. ಅದಕ್ಕೆ ತಕ್ಕಂತೆ ಓದು ಮುಂದುವರೆಸಿದೆ. ಇದೀಗ ನ್ಯಾಯಾಧೀಶ ಹುದ್ದೆಗೆ ಆಯ್ಕೆ ಆಗಿದ್ದು ಸಂತಸ ತಂದಿದೆ ಎಂದರು ಭಾಗ್ಯಶ್ರೀ.

ತಂದೆಗೂ ಸಂತಸ

ನಾನು ಕೂಲಿ ಮಾಡಿದರೂ ಚಿಂತೆಯಿಲ್ಲ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಹಠ ತೊಟ್ಟಿದ್ದೆ. ಅವರ ಶಿಕ್ಷಣಕ್ಕೆ ಬೆಂಗಾವಲಾಗಿ ನಿಂತಿದ್ದು ಮಕ್ಕಳ ಪ್ರಯತ್ನಕ್ಕೆಫಲ ದೊರೆತಿದೆ. ನಾನೂ ಓದದೇ ಇದ್ದರೂ ಮಕ್ಕಳಾದರೂ ಸಾಧನೆ ಮಾಡುತ್ತೀದ್ದೀರಾಲ್ಲ. ಇದಕ್ಕಿಂತ ಇನ್ನೇನು ಬೇಕು ಎನ್ನುವುದು ತಂದೆ ದುರಗಪ್ಪ ಮಾದರ ಅಭಿಮಾನದ ನುಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ