Bagalkot News: ಬನಹಟ್ಟಿ ಸಮೀಪದ ಕೃಷ್ಣಾ ನದಿಯ ಒಡಲಿನಲ್ಲಿ ಮುಳುಗಿದ್ದ ಈಶ್ವರ ದೇವಾಲಯ ದರ್ಶನ; ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಭಕ್ತರು
Jun 21, 2023 03:36 PM IST
ನೀರಿನಲ್ಲಿ ಮುಳುಗಿದ್ದ ದೇವಾಲಯ
1971 ರಲ್ಲಿ ವಿರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿದ್ದಾಗ ಆಗಿದ್ದಾಗ ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ್ ನಿರ್ಮಿಸಲು ಆದೇಶಿಸಿದ್ದರು. 1973 ರಲ್ಲಿ ಮೊದಲ ಬಾರಿಗೆ ನೀರನ್ನು ತಡೆ ಹಿಡಿದ ಕಾರಣ ದೇವಾಲಯ ನೀರಿನಲ್ಲಿ ಮುಳುಗಿತು.
ಬಾಗಲಕೋಟೆ: ಸಾಮಾನ್ಯವಾಗಿ ಕೆಲವೊಂದು ನದಿಗಳಲ್ಲಿ ನೀರಿನ ಮಟ್ಟ ಕಡಿಮೆ ಆದಾಗ ನೀರಿನಲ್ಲಿ ಮುಳುಗಿದ್ದ ದೇವಾಲಯಗಳ ದರ್ಶನವಾಗುತ್ತದೆ. ಇತ್ತೀಚೆಗೆ ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಡೆ ಆಗಿದ್ದ ದೇವಾಲಯ ಕೂಡಾ ಕಂಡಿತ್ತು. ಇದೀಗ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಸಮೀಪದ ಕೃಷ್ಣಾ ನದಿಯ ಒಡಲಿನಲ್ಲಿ ಹುದುಗಿ ಹೋಗಿದ್ದ ಪುರಾತನ ದೇವಸ್ಥಾನವೊಂದು ದರ್ಶನವಾಗಿದೆ.
ಕೃಷ್ಣೆಯ ಒಡಲಲ್ಲಿ ನೀರು ಕಡಿಮೆಯಾದಾಗ ಮಾತ್ರ ಈ ದೇವಾಲಯ ಗೋಚರವಾಗುತ್ತದೆ. ಸುಂದರವಾದ ಈಶ್ವರ ದೇವಾಲಯದ ಇತಿಹಾಸದ ಬಗ್ಗೆ ಹೆಚ್ಚಿನ ಸಂಗತಿ ತಿಳಿಯದಿದ್ದರೂ ಬಾಳಪ್ಪ ಎಂಬ ಅಜ್ಜ ಈ ದೇವಾಲಯ ನಿರ್ಮಿಸಿದರು ಎಂಬ ಕಾರಣಕ್ಕೆ ಬಾಳಪ್ಪಜ್ಜನ ಗುಡಿ ಎಂದೇ ಪ್ರಸಿದ್ಧಿಯಾಗಿದೆ. ಈ ದೇವಾಲಯ ಯಾರು ಕಟ್ಟಿಸಿದರು? ಯಾವಾಗ ಕಟ್ಟಿಸಿದರು? ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರ ಇಲ್ಲ. ಇಷ್ಟಾದರೂ ಇದರ ಗೋಜಿಗೆ ಹೋಗದ ಭಕ್ತರು ಪ್ರತಿ ಬಾರಿ ನೀರು ಕಡಿಮೆ ಆಗಿ ದೇವಾಲಯ ದರ್ಶನ ಆದಾಗ ಈ ದೇವಾಲಯಕ್ಕೆ ಭಕ್ತಿಯಿಂದ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ.
ಮಹಿಷವಾಡಗಿ ಬ್ಯಾರೇಜನ ಹಿಂಭಾಗದಲ್ಲಿ ಕಟ್ಟಿರುವ ಈ ದೇವಸ್ಥಾನ ಈಗ ಸಂಪೂರ್ಣವಾಗಿ ಕಾಣತೊಡದೆ. ಪೂರ್ವಕ್ಕೆ ಮುಖ ಮಾಡಿ ಕಟ್ಟಲಾಗಿದೆ, ದೇವಾಲಯದಲ್ಲಿ ಗರ್ಭ ಗುಡಿ ಹಾಗೂ ಪವಿತ್ರ ಲಿಂಗವಿದೆ. ವಿಶಾಲವಾದ ಪಡಸಾಲೆ ಇದೆ. ಮೂರು ಕಮಾನುಗಳ ಪ್ರವೇಶ ದ್ವಾರವಿದ್ದು, ನದಿಯ ಕಡೆ ಒಂದು ಬಾಗಿಲು, ಅದಕ್ಕೆ ಎದುರಾಗಿ ಮತ್ತೊಂದು ಬಾಗಿಲು ಇದೆ. ಬೃಹತ್ ಆಕಾರದ ಕಪ್ಪುಕಲ್ಲಿನಿಂದ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಯಾವುದೇ ವಾಸ್ತು ಶಿಲ್ಪವಾಗಲಿ ಕೆತ್ತನೆಯಾಗಲೀ ಇಲ್ಲ. ಅದರೂ ನೋಡುಗರನ್ನು ಸೆಳೆಯುತ್ತಿದೆ. ಶತಮಾನಗಳು ಕಳೆದರೂ ನೀರಿನಲ್ಲಿ ಮುಳುಗಿದರೂ ಗರ್ಭಗುಡಿಯಲ್ಲಿರುವ ಮೂರ್ತಿಗಳು ಜಗ್ಗದೇ ಆಲುಗಾಡದೇ ಹಾಗೇ ನಿಂತಿರುವುದು ವಿಶೇಷವಾಗಿದೆ.
ದೇವಾಲಯ ನಿರ್ಮಾಣದ ಇತಿಹಾಸ
ಈ ದೇವಾಲಯಕ್ಕೆ ತನ್ನದೇ ಇತಿಹಾಸವಿದೆ. ರಬಕವಿಯ ಮರೆಗುದ್ದಿ ಮನೆತನದ ಹಿರಿಯ ಅಜ್ಜ ಬಾಳಪ್ಪ ಮರೆಗುದ್ದಿ ಕಟ್ಟಿಸಿದ್ದು ಎಂದು ತಿಳಿದು ಬಂದಿದ್ದು, ಈಗಲೂ ಆ ದೇವಸ್ಥಾನ ಬಾಳಪ್ಪನ ಗುಡಿ ಎಂದೇ ಪ್ರಸಿದ್ಧಿಯಾಗಿದೆ. ''ನಮ್ಮ ಮುತ್ಯಾಗ ಗಂಡು ಸಂತಾನ ಇರಲಿಲ್ಲ. ಇಬ್ಬರು ಹೆಣ್ಣು ಮಕ್ಕಳು ಇದ್ದರು, ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾ ಚಿಲ್ಲರೆ ನಾಣ್ಯಗಳಿಂದ ಸಾಕಷ್ಟು ಹಣ ಕೂಡಿಸಿದ್ದರು, ಆ ಹಣ ಏನು ಮಾಡುವುದು ಎಂಬ ವಿಚಾರ ಹಿರಿಯರನ್ನು ಕೇಳಿದಾಗ ಅವರು ಕೃಷ್ಣಾ ನದಿಯ ದಡದಲ್ಲಿ ಒಂದು ಗುಡಿ ಇಲ್ಲ. ಅಲ್ಲಿ ಗುಡಿ ಕಟ್ಟಿಸಿದರೆ ಹೋಗಿ ಬರುವ ಜನಕ್ಕೆ ಪೂಜೆ ಮಾಡಲು ಒಂದು ಧಾರ್ಮಿಕ ಸ್ಥಳವಾಗುತ್ತದೆ ಎಂದು ಸಲಹೆ ನೀಡಿದರು. ಆಗ ಬನಹಟ್ಟಿ ಜಮಖಂಡಿ ಸಂಸ್ಥಾನಕ್ಕೆ ಸೇರಿದ್ದರೆ ರಬಕವಿ ಸಾಂಗ್ಲಿ ಸಂಸ್ಥಾನಕ್ಕೆ ಸೇರಿತ್ತು.''
''ಆಗಿನ ಸಾಂಗ್ಲಿ ಸಂಸ್ಥಾನದಿಂದ ದೇವಾಲಯ ಕಟ್ಟಲು ಪರವಾನಿಗೆ ಪಡೆದು 1912 ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂಬ ಇತಿಹಾಸವಿದೆ. ಈ ದೇವಾಲಯ ಕಟ್ಟಿಸಿದರ ಬಗ್ಗೆ ಸಾಂಗ್ಲಿಯಲ್ಲಿ ದಾಖಲೆಗಳು ಮೋಡಿ ಭಾಷೆಯೊಳಗೆ ನೋಡಲು ಸಿಗುತ್ತವೆ ಎನ್ನುತ್ತಾರೆ ಮರೆಗುದ್ದಿ ಮನೆತನದವರು. ಮೊದಲು ನದಿಯ ವ್ಯಾಪ್ತಿ ಬಹಳ ಕಡಿಮೆ ಇದ್ದ ಕಾರಣ ದೇವಾಲಯ ನದಿಯ ದಡದಲ್ಲಿ ಇತ್ತು. ಆದರೆ 1971 ರಲ್ಲಿ ವಿರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿದ್ದಾಗ ಆಗಿದ್ದಾಗ ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ್ ನಿರ್ಮಿಸಲು ಆದೇಶಿಸಿದ್ದರು. 1973 ರಲ್ಲಿ ಮೊದಲ ಬಾರಿಗೆ ನೀರನ್ನು ತಡೆ ಹಿಡಿದ ಕಾರಣ ದೇವಾಲಯ ನೀರಿನಲ್ಲಿ ಮುಳುಗಿತು'' ಎಂದು ಮರೆಗುದ್ದಿ ಮನೆತನದವರು ಮಾಹಿತಿ ನೀಡಿದ್ದಾರೆ.
ವರದಿ: ಸಮಿ ಉಸ್ತಾದ್, ಬಾಗಲಕೋಟೆ
ವಿಭಾಗ