logo
ಕನ್ನಡ ಸುದ್ದಿ  /  ಕರ್ನಾಟಕ  /  Bandipur Tiger Project At 50: ಹುಲಿ ಸಂರಕ್ಷಿತ ಪ್ರದೇಶವಾಗಿ ಬಂಡೀಪುರಕ್ಕೆ ನ.17ರಂದು 50 ವರ್ಷ

Bandipur Tiger Project at 50: ಹುಲಿ ಸಂರಕ್ಷಿತ ಪ್ರದೇಶವಾಗಿ ಬಂಡೀಪುರಕ್ಕೆ ನ.17ರಂದು 50 ವರ್ಷ

HT Kannada Desk HT Kannada

Nov 09, 2022 12:51 PM IST

google News

ಬಂಡೀಪುರದ ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ಬಂಡೀಪುರ ಟೈಗರ್‌ ಪ್ರಾಜೆಕ್ಟ್‌ ಕುರಿತಾಗಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದರು.

  • Bandipur national park at 50: ಹುಲಿ ಸಂರಕ್ಷಿತ ಪ್ರದೇಶವಾಗಿ ಬಂಡೀಪುರಕ್ಕೆ ಇದೇ ನವೆಂಬರ್‌ 17ರಂದು 49 ವರ್ಷ ಪೂರ್ಣ. ಮತ್ತೆ ಸುವರ್ಣ ಸಂಭ್ರಮ. ಈ ವಿಚಾರವನ್ನು ನೆನಪು ಮಾಡಿಕೊಂಡಿದ್ದಾರೆ ಬಂಡೀಪುರದ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್. 

ಬಂಡೀಪುರದ ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ಬಂಡೀಪುರ ಟೈಗರ್‌ ಪ್ರಾಜೆಕ್ಟ್‌ ಕುರಿತಾಗಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದರು.
ಬಂಡೀಪುರದ ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ಬಂಡೀಪುರ ಟೈಗರ್‌ ಪ್ರಾಜೆಕ್ಟ್‌ ಕುರಿತಾಗಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದರು.

ಮೈಸೂರು: ಬಂಡೀಪುರ ಎಂದ ಕೂಡಲೇ ಹುಲಿ ಸಂರಕ್ಷಿತ ಪ್ರದೇಶದ ಚಿತ್ರ ಮನಸ್ಸಿನಲ್ಲಿ ಮೂಡುವುದು ಸಹಜ. ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿತವಾಗಿ ಬಂಡೀಪುರ ಟೈಗರ್‌ ಪ್ರಾಜೆಕ್ಟ್‌ ಪಡೆದುಕೊಂಡು ಇದೇ ನ.17ಕ್ಕೆ 49 ವರ್ಷ ಪೂರ್ತಿಯಾಗಿ 50ನೇ ವರ್ಷ ಶುರುವಾಗುತ್ತಿದೆ.

ಈ ವಿಚಾರವನ್ನು ಬಂಡೀಪುರದ ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ಮಾಧ್ಯಮ ಪ್ರತಿನಿಧಿಗಳ ಜತೆಗೆ ಹಂಚಿಕೊಂಡಿದ್ದಾರೆ. ಅವರು, 67ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಭಾಗವಾಗಿ ಮಾಧ್ಯಮದವರ ಜತೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಈ ವಿಚಾರ ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಂಡೀಪುರ ರಾಷ್ಟ್ರೀಯ ಉದ್ಯಾನ ಹುಲಿ ಸಂರಕ್ಷಿತ ಪ್ರದೇಶವಾಗಿ ಭಾರತದಲ್ಲೇ ಹೆಸರುವಾಸಿ. ಇದರ ಸರ್ವತೋಮುಖ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ವರ್ಷ ಅರಣ್ಯ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿದೆ. ಆದ್ದರಿಂದ ಅರಣ್ಯದ ಎಲ್ಲ ಕೆರೆಕಟ್ಟೆಗಳು ಹಾಗೂ ಹಳ್ಳಗಳು ತುಂಬಿವೆ. ವನ್ಯ ಪ್ರಾಣಿಗಳಿಗೆ ಮೇವು ಸೇರಿದಂತೆ ನೀರಿನ ಸಮಸ್ಯೆ ಬಗೆಹರಿದಂತಾಗಿದೆ.

ಬಂಡೀಪುರ ಅರಣ್ಯ ಒಟ್ಟು 1300 ಹೆಕ್ಟೇರ್ ಪ್ರದೇಶ ವ್ಯಾಪ್ತಿ ಹೊಂದಿದ್ದು, ಆನೆ, ಹುಲಿ, ಚಿರತೆ, ಚಿಂಕೆ, ಕಡವೆ ಸೇರಿದಂತೆ ನೂರಾರು ವನ್ಯ ಪ್ರಾಣಿಗಳು ಹಾಗೂ ಪಕ್ಷಿ ಸಂಕುಲಗಳಿವೆ. ಅರಣ್ಯ ಮತ್ತು ವನ್ಯಜೀವಿ ದೇಶದ ಸಂಪತ್ತು. ಇವುಗಳನ್ನು ರಕ್ಷಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ರಮೇಶ್‌ ಕುಮಾರ್‌ ಹೇಳಿದರು. ಈ ಸಂದರ್ಭದಲ್ಲಿ ಆರ್‌ಎಫ್‌ಒ ನವೀನ್ ಕುಮಾರ್, ಪರಮೇಶ್ ಇದ್ದರು.

49 ವರ್ಷಗಳ ಹಿಂದೆ ಬಂಡೀಪುರ ಟೈಗರ್‌ ಪ್ರಾಜೆಕ್ಟ್‌ ಉದ್ಘಾಟನೆ ಹೀಗಿತ್ತು..

ಅಂದಿನ ಮುಖ್ಯಮಂತ್ರಿ ಡಿ. ದೇವರಾಜ್‌ ಅರಸ್‌ ಅವರು 1973ರ ನವೆಂಬರ್‌ 17ರಂದು ಟೈಗರ್‌ ಪ್ರಾಜೆಕ್ಟ್‌ ಅನ್ನು ಘೋಷಿಸಿದ ಸಂದರ್ಭ, ಐಎಎಸ್‌ ಅಧಿಕಾರಿ ಎಸ್‌.ಜಿ. ನೇಗಿನಹಾಳ್‌ ಜತೆಗಿದ್ದರು.

ಬಂಡೀಪುರ ಟೈಗರ್‌ ಪ್ರಾಜೆಕ್ಟ್‌ ಅಥವಾ ಬಂಡೀಪುರ ಹುಲಿ ಯೋಜನೆಗೆ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ್‌ ಅರಸ್‌ ಅವರು 1973ರ ನವೆಂಬರ್‌ 17ರಂದು ಚಾಲನೆ ನೀಡಿದ್ದರು. ಅವನತಿಯಂಚಿಗೆ ತಲುಪಿದ ಹುಲಿಗಳ ಸಂರಕ್ಷಣೆ ಈ ಯೋಜನೆಯ ಉದ್ದೇಶ.

ಇದಕ್ಕೂ ಮುನ್ನ 1941ರ ಫೆಬ್ರವರಿ 19ರಂದು ವೇಣುಗೋಪಾಲಸ್ವಾಮಿ ವನ್ಯಜೀವಿ ಉದ್ಯಾನ ಮತ್ತು ಸುತ್ತಮುತ್ತಲಿನ ಕಾಡು ಪ್ರದೇಶವನ್ನು ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿತ್ತು. 1973ರಲ್ಲಿ ಹುಲಿ ಯೋಜನೆ ಘೋಷಿಸಿದಾಗ ಈ ಪ್ರದೇಶದಲ್ಲಿ 13 ಹುಲಿಗಳಷ್ಟೇ ಇದ್ದವು. ಸದ್ಯ ಇಲ್ಲಿ 231 ಹುಲಿಗಳಿವೆ.

ಬಂಡೀಪುರ ರಾಷ್ಟ್ರೀಯ ಉದ್ಯಾನ ಎಂದು 1985ರಲ್ಲಿ ಮರುನಾಮಕರಣ ಮಾಡಿದಾಗ, ಅದರ ವ್ಯಾಪ್ತಿಯನ್ನು 874.20 ಚದರ ಕಿ.ಮೀ.ಗೆ ವಿಸ್ತರಿಸಲಾಗಿತ್ತು. ಈಗ ಹುಲಿ ಮೀಸಲು ಅರಣ್ಯ 912.04 ಚದರ ಕಿ.ಮೀ. ಇದೆ.

ಅಂದಿನ ಕೇಂದ್ರ ಸರ್ಕಾರ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ಹುಲಿಗಳ ರಕ್ಷಣೆಗೆ ಎಂದು ಕೈಗೆತ್ತಿಕೊಂಡ ಹುಲಿ ಯೋಜನೆ ಬಹಳಷ್ಟು ಫಲ ಕೊಟ್ಟಿದೆ. ಹುಲಿಗಳನ್ನು ಉಳಿಸುವ ನಿರ್ಧಾರದ ಕಾರಣ ಅರಣ್ಯ ವ್ಯಾಪ್ತಿಯೂ ಹೆಚ್ಚಾಗುತ್ತಿದೆ ಎಂಬುದು ಸಮೀಪದ ಪರಿಸರ ಮತ್ತು ವನ್ಯಜೀವಿ ಪ್ರೇಮಿಗಳ ಅಭಿಪ್ರಾಯ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇಲ್ಲಿ ಹುಲಿಗಳಷ್ಟೇ ಅಲ್ಲ, ಇತರೆ ಪ್ರಾಣಿ ಮತ್ತು ಪಕ್ಷಿ ಸಂಕುಲಗಳೂ ಇವೆ. ವಿಶೇಷವಾಗಿ 1,500ಕ್ಕೂ ಹೆಚ್ಚು ಆನೆಗಳು ಇಲ್ಲಿವೆ. ವರ್ಷದಿಂದ ವರ್ಷಕ್ಕೆ ಇಲ್ಲಿ ವನ್ಯಜೀವಿ ಸಂಪತ್ತು ವೃದ್ಧಿ ಆಗುತ್ತಿರುವುದು ಕಂಡುಬಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ