Bangalore Central Result: ಬೆಂಗಳೂರು ಕೇಂದ್ರಲ್ಲಿ ಬಿಜೆಪಿಯ ಪಿಸಿ ಮೋಹನ್ 4ನೇ ಬಾರಿ ಜಯಭೇರಿ; ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್‌ಗೆ ಸೋಲು
Jun 09, 2024 05:46 PM IST
ಬೆಂಗಳೂರು ಕೇಂದ್ರಲ್ಲಿ ಬಿಜೆಪಿಯ ಪಿಸಿ ಮೋಹನ್ 4ನೇ ಬಾರಿ ಜಯಭೇರಿ; ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್‌ಗೆ ಸೋಲು
- ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಕಾಂಗ್ರೆಸ್‌ಗೆ ಪ್ರತಿಷ್ಠೆ ಎನಿಸಿದ್ದ ಬೆಂಗಳೂರು ಕೇಂದ್ರ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ಅವರನ್ನು 32,707 ಮತಗಳ ಅಂತರದಿಂದ ಸೋಲಿಸಿದ್ದಾರೆ. Bengaluru Central Lok Sabha Elections Result.
ಬೆಂಗಳೂರು: ರಾಜಧಾನಿ ಬೆಂಗಳೂರು ವ್ಯಾಪ್ತಿಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ (BJP) ಜಯಭೇರಿ ಬಾರಿಸಿದೆ. ಅದರಲ್ಲೂ ಕಾಂಗ್ರೆಸ್‌ಗೆ (Congress) ಭಾರಿ ನಿರೀಕ್ಷೆ ಹುಟ್ಟಿಸಿದ್ದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ (Bangalore Central Lok Sabha Election Result 2024) ನಿರಾಸೆಯಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ (BJP Candidate PC Mohan) ಅವರು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ (Congress Candidate Mansoor Ali Khan) ಅವರನ್ನು 32,707 ಮತಗಳ ಅಂತರದಿಂದ ಸೋಲಿಸಿ 4ನೇ ಬಾರಿಗೆ ಜಯ ಸಾಧಿಸಿದ್ದಾರೆ. ಪಿಸಿ ಮೋಹನ್ 6,58,915 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ 6,26,208 ಮತಗಳನ್ನು ಗಳಿಸಿದ್ದಾರೆ. ಫಲಿತಾಂಶದ ಬಗ್ಗೆ ಮಾತನಾಡಿದ ಪಿಸಿ ಮೋಹನ್, ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಹೇಳಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೊಸ ಮುಖವಾಗಿರುವ ಕೇಂದ್ರ ಮಾಜಿ ಸಚಿವ, ಎಐಸಿಸಿ ಕಾರ್ಯದರ್ಶಿ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕೆ ಇಳಿಸಿತ್ತು. ಆದರೆ ಮತದಾರರು ಮನ್ಸೂರ್ ಅವರನ್ನು ಬೆಂಬಲಿಸಿಲ್ಲ ಅನ್ನೋದು ಈ ಫಲಿತಾಂಶದಿಂದ ಗೊತ್ತಾಗಿದೆ.
ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಬರಲಿರುವ ಕಾರಣ ಆಡಳಿತಾರೂಢ ಕಾಂಗ್ರೆಸ್‌ಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ತುಂಬಾ ಮುಖ್ಯವಾಗಿತ್ತು. ಪಂಚ ಗ್ಯಾರಂಟಿಗಳ ಪರಿಣಾಮದಿಂದ ಇಲ್ಲಿ ತಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗಿತ್ತು. ಬೆಂಗಳೂರು ಕೇಂದ್ರ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇದರಲ್ಲಿ ನಾಲ್ವರು ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಸರ್ವನಗರ, ಸಿವಿ ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿ ನಗರ, ರಾಜಾಜಿನಗರ, ಚಾಮರಾಜಪೇಟೆ, ಮಹದೇವಪುರ (ಎಸ್‌ಸಿ), ವಿಧಾನಸಭಾ ಕ್ಷೇತ್ರಗಳಿವೆ.
2008ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ 2009ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಪಿಸಿ ಮೋಹನ್ ಅವರು ಕಾಂಗ್ರೆಸ್‌ನ ಹೆಚ್‌ಟಿ ಸಾಂಗ್ಲಿಯಾನ ಅವರ ವಿರುದ್ಧ 35 ಸಾವಿರ ಮತಗಳ ಅಂತರದಿಂದ ಗೆಲುವು ಪಡೆದಿದ್ದರು. 2014 ಮತ್ತು 2019ರ ಎರಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ವಿರುದ್ದ ಗೆಲುವು ಸಾಧಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ 70,968 ಮತಗಳ ಅಂತರದಿಂದ ರಿಜ್ವಾನ್ ಅರ್ಷದ್ ಅವರನ್ನು ಪಿಸಿ ಮೋಹನ್ ಮಣಿಸಿದ್ದರು. ಹಿಂದಿನ ಎರಡೂ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆ ಸಖತ್ ವರ್ಕೌಟ್ ಆಗಿತ್ತು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ತಮಿಳು ಭಾಷಿಕರು, ಮುಸ್ಲಿಮರು, ದಲಿತರು ಹಾಗೂ ಕ್ರೈಸ್ತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ 6,00,000, ಕ್ರೈಸ್ತರು 2,00,000, ಎಸ್‌ಸಿ 4,00,000 ಹಾಗೂ ಇತರೆ 6,00,000 ಮತದಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಇಲ್ಲಿ ಒಟ್ಟು 23,98,910 ಮತದಾರರು ಇದ್ದಾರೆ. 12,36,897 ಪುರುಷರು ಹಾಗೂ 11,61,548 ಮಹಿಳಾ ಮತದಾರರು, 456 ತೃತೀಯಲಿಂಗಿ ಮತದಾರರು ಇದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)