Bangalore Crime News: ನಕಲಿ ದಾಖಲೆ ಸೃಷ್ಟಿಸಿ ಐಷಾರಾಮಿ ಕಾರು ಮಾರಾಟ ಮಾಡುತ್ತಿದ್ದವರ ಬಂಧನ; ಉದ್ಯಮಿ ಮನೆ ದರೋಡೆ ಮಾಡಿದ ಬಿಹಾರದ ಮೂವರ ಸೆರೆ
Jul 17, 2024 12:06 PM IST
ಬೆಂಗಳೂರಿನಲ್ಲಿ ವಶಪಡಿಸಿಕೊಂಡ ಆಭರಣಗಳನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ವೀಕ್ಷಿಸಿದರು.
Bangalore police ಬೆಂಗಳೂರಿನ ಪ್ರಮುಖ ಅಪರಾಧ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಸಾಲವನ್ನು ಮರು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ಕಾರುಗಳನ್ನು ಅಡವಿಟ್ಟುಕೊಂಡು ಈ ಕಾರುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಗೋವಾದ 37 ವರ್ಷದ ಆಸ್ಟಿನ್ ಕಾರಾಡೋಸ್ ಆಲಿಯಾಸ್ ಚಿಂಟು ಮತ್ತು 35 ವರ್ಷದ ರಿಯಾಜ್ ಬಂಧಿತ ಆರೋಪಿಗಳು. ಇವರು ಸುಮಾರು 2.56 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರುಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಂದ ರೇಂಜ್ ರೋವರ್, ಜಾಗ್ವಾರ್ ಸೇರಿದಂತೆ ವಿವಿಧ ಕಂಪನಿಗಳ 17 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರ ವಿರುದ್ಧವೂ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವು ಮಾಡಿದ್ದ ಕಾರುಗಳು, ವಿಮೆ ಪಾವತಿಸದ ಮತ್ತು ಸಾಲವನ್ನು ಮರು ಪಾವತಿಸಲಾಗದ ಕಾರುಗಳನ್ನು ರಿಯಾಜ್ ಕೊಂಡುಕೊಳ್ಳುತ್ತಿದ್ದ ಇಲ್ಲವೇ ಅಡವಿರಿಸಿಕೊಳ್ಳುತ್ತಿದ್ದ. ನಂತರ ಕಾರಿನ ಮೇಲೆ ಯಾವುದೇ ಸಾಲ ಇಲ್ಲದ ಹಾಗೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದ. ಬ್ಯಾಂಕ್ ಮತ್ತು ಹಣಕಾಸು ಕಂಪನಿಗಳಿಂದ ಎನ್ ಒಸಿ ಪಡೆದುಕೊಂಡು ಹೊರ ರಾಜ್ಯಗಳ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಆರೋಪಿ ಆಸ್ಟಿನ್ ಮೈಸೂರಿನ ಉದ್ಯಮಿಯೊಬ್ಬರಿಂದ ರೇಂಜ್ ರೋವರ್ ಕಾರು ಖರೀದಿಸಿದ್ದ. ಈ ಕಾರಿಗೆ ಹರಿಯಾಣ ರಾಜ್ಯದ ನಂಬರ್ ಪ್ಲೇಟ್ ಅಳವಡಿಸಿ ನಕಲಿ ದಾಖಲೆ ಸೃಷ್ಟಿಸಿ ಹಣಕಾಸು ಸಂಸ್ಥೆಗಳಿಂದ ಎನ್ ಒಸಿ ಪಡೆದು ದೆಹಲಿಯ ನಿವಾಸಿಯೊಬ್ಬರಿಗೆ ಮಾರಾಟ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿ ಮನೆ ದರೋಡೆ ಪ್ರಕರಣ; ಬಿಹಾರದ ಮೂವರು ಕಳ್ಳರ ಬಂಧನ
ಬೆಂಗಳೂರಿನ ಸದಾಶಿವನಗರದಲ್ಲಿ ವಾಸವಾಗಿದ್ದ ಟೀ ಎಸ್ಟೇಟ್ ಮಾಲೀಕರೊಬ್ಬರ ಅಪಾರ್ಟ್ ಮೆಂಟ್ ನಲ್ಲಿ ಕಳ್ಳತನ ಮಾಡಿದ್ದ ಬಿಹಾರದ ಮೂವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರದ ಅಜಿತ್ ಮುಖ್ಯ, ಶರವಣ ಮತ್ತು ರಾಜ್ ಬಂಧಿತ ಆರೋಪಿಗಳು. ಇವರೆಲ್ಲರೂ 21-25 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 26 ಕೆಜಿ ಬೆಳ್ಳಿ ಸಾಮಗ್ರಿ, 34 ಗ್ರಾಂ ಚಿನ್ನಾಭರಣ, 5 ರೇಷ್ಮೆ ಸೀರೆಗಳು, 2 ಸ್ಮಾಟ್ ಫೋನ್ ಗಳು ಕ್ಯಾಮೆರಾ ಮತ್ತು ವಿವಿಧ ಕಂಪನಿಗಳ 10 ಕೈ ಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲಿಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಟೀ ಎಸ್ಟೇಟ್ ಮಾಲೀಕ ರಾಜೇಂದ್ರ ಎಂಬುವರು ಸ್ಯಾಂಕಿ ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿದ್ದರು. ಇವರ ಮನೆಯಲ್ಲಿ ರಾಜ್ ಎಂಬಾತ ಅಡುಗೆ ಕೆಲಸಕ್ಕೆ ಮತ್ತು ಅಜಿತ್ ಭದ್ರತಾ ಸಿಬ್ಬಂದಿಯಾಗಿ ಒಂದು ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದರು. ಮನೆ ಮಾಲೀಕರು ಜುಲೈ 7 ರಂದು ಮನೆಯ ಕೀಯನ್ನು ರಾಜ್ ಗೆ ಕೊಟ್ಟು ತಮ್ಮ ಊಟಿಯ ಟೀ ಎಸ್ಟೇಟ್ ಗೆ ಹೋಗಿದ್ದರು.
ಇವರಿಬ್ಬರು, ಮತ್ತಿಬ್ಬರು ಸ್ನೇಹಿತರನ್ನು ಮನೆಗೆ ಕರೆಯಿಸಿಕೊಂಡು ಚಿನ್ನಾಭರಣ, ಬೆಳ್ಳಿ ವಸ್ತುಗಳು, ರೇಷ್ಮೆ ಸೀರೆಗಳು ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡಿ ಬಿಹಾರಕ್ಕೆ ಪರಾರಿಯಾಗಿದ್ದರು.
ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ಆಗ ರಾಜೇಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಗಳು ಬಿಹಾರಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದರು. ಆದರೂ ಅವರನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಂಡಕ್ಕೆ 25 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿಇಬ್ಬರು ವಿದೇಶಿ ಡ್ರಗ್ ಪೆಡ್ಲರ್ ಗಳು ಸೇರಿದಂತೆ ಐವರ ಬಂಧನ
ಬೆಂಗಳೂರಿನ ಕೆಂಗೇರಿ, ವರ್ತೂರು, ಪರಪ್ಪನ ಅಗ್ರಹಾರ ಮತ್ತು ಶೇಷಾದ್ರಿಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿರುವ ಸಿಸಿಬಿ 26 ಲಕ್ಷ ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ, ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ ಗಳು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಪ್ರಜೆ ಕಿಂಗ್ಸ್ ಲೇ ನಾನಾ ಮತ್ತು ಸಂಡೆಕೂಡಿ ಎಂಬುವರನ್ನು ಬಂಧಿಸಿದ್ದಾರೆ. ಇವರಿಂದ 21 ಲಕ್ಷ ರೂ. ಮೌಲ್ಯದ 206 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ ಮೂರು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇವರಿಬ್ಬರೂ ವ್ಯಾಪಾರಿ ವೀಸಾ ಮೇಲೆ 2021ಕ್ಕೆ ಭಾರತಕ್ಕೆ ಆಗಮಿಸಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ಇವರು ಗೋವಾ, ಮುಂಭೈ ಮತ್ತು ದೆಹಲಿಯಿಂದ ಎಂಡಿಎಂಎ ಕ್ರಿಸ್ಟಲ್ ಮತ್ತಿತರ ಡ್ರಗ್ಸ್ ಗಳನ್ನು ತರಿಸಿಕೊಂಡು ಬೆಂಗಳೂರಿನಲ್ಲಿ ಆಯ್ದ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಈ ರೀತಿ ಗಳಿಸುತ್ತಿದ್ದ ಹಣದಲ್ಲಿ ಐಷಾರಾಮಿಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಈತನಿಂದ 3 ಲಕ್ಷ ರೂ. ಮೌಲ್ಯದ 2.75 ಕೆಜಿ ಗಾಂಜಾ ಮತ್ತು ಎರಡು ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ. ಇವರು ಕೇರಳದಿಂದ ನಿಷೇಧಿತ ಮಾದಕ ವಸ್ತುಗಳನ್ನು ತರಿಸಿಕೊಂಡು ವಿದ್ಯಾರ್ಥಿಗಳು ಮತ್ತು ಪರಿಚಯ ಇರುವವರಿಗೆ ಮಾತ್ರ ಮಾರಾಟ ಮಾಡುತ್ತಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
ಶೇಷಾದ್ರಿಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ಒಡಿಶಾ ಮೂಲದ ಇಮಾಮ್ ಶೂ ಎಂಬಾತ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಇವರಿಂದ 1 ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಈ ಒಡಿಶಾ ಮೂಲದ ಆರೋಪಿ ಜೊಮ್ಯಾಟೊ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ. 2023ರಲ್ಲಿಯೂ ಈತ ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನಂತರವೂ ಆತ ಗಾಂಜಾವನ್ನು ಸಂಗ್ರಹಿಸಿ ಇಡುತ್ತಿದ್ದ. ನಂತರ ನಂಬಿಕಸ್ಠ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ವರ್ತೂರು ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ರೂ. 2 ಲಕ್ಷ ಬೆಲೆ ಬಾಳುವ 19 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ: ಎಚ್.ಮಾರುತಿ, ಬೆಂಗಳೂರು)