logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಕುಡುಕ ಮಗನನ್ನು ಕೊಂದು ಆತ್ಮಹತ್ಯೆಯಂತೆ ಬಿಂಬಿಸಿದ್ದ ತಂದೆಯ ಬಂಧನ

Bangalore crime: ಕುಡುಕ ಮಗನನ್ನು ಕೊಂದು ಆತ್ಮಹತ್ಯೆಯಂತೆ ಬಿಂಬಿಸಿದ್ದ ತಂದೆಯ ಬಂಧನ

Umesha Bhatta P H HT Kannada

Mar 11, 2024 12:51 PM IST

google News

ಮಗನನ್ನೇ ಕೊಂದ್ದಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ

    • ಮಗ ಸರಿಯಾಗಿ ಕಾಲೇಜಿಗೆ ಹೋಗುವುದಿಲ್ಲ. ಕುಡಿದು ಬರುತ್ತಾನೆ ಎಂದು ರೊಚ್ಚಿಗೆದ್ದು ಮಗನನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆಯಂತೆ ಬಿಂಬಿಸಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
    • ವರದಿ: ಎಚ್.‌ಮಾರುತಿ, ಬೆಂಗಳೂರು
ಮಗನನ್ನೇ ಕೊಂದ್ದಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ
ಮಗನನ್ನೇ ಕೊಂದ್ದಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು: ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಥೆ ಕಟ್ಟಿದ್ದ ತಂದೆಯನ್ನು ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 6ರಂದು ಕಾಲೇಜು ವಿದ್ಯಾರ್ಥಿ 21 ವರ್ಷದ ಯೋಗೇಶ್‌ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಆತನ ತಂದೆ ಪ್ರಕಾಶ್‌ ತಮ್ಮ ಮಗ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದರು. ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.ಯೋಗೇಶ್‌ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಕೊಲೆ ಮಾಡಿದ್ದ ಆರೋಪದಡಿಯಲ್ಲಿ ತಂದೆ ಪ್ರಕಾಶ್‌ ಅವರನ್ನು ಬಂಧಿಸಿದ್ದಾರೆ.

ಬಸವೇಶ್ವರನಗರದ ನಿವಾಸಿ ಯೋಗೇಶ್, ನಗರದ ಕಾಲೇಜೊಂದರಲ್ಲಿ ಬಿಬಿಎ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ.

ಆರೋಪಿ ಪ್ರಕಾಶ್, ಪಾನಿಪುರಿ ವ್ಯಾಪಾರ ಮಾಡುತ್ತಿದ್ದರು. ಪತ್ನಿ ಹಾಗೂ ಒಬ್ಬನೇ ಮಗ ಯೋಗೇಶ್ ಜೊತೆ ವಾಸವಾಗಿದ್ದರು. ಯೋಗೇಶ್ ಕೆಲವು ದಿನಗಳಿಂದ ಮದ್ಯ ಕುಡಿಯುವುದನ್ನು ಕಲಿತಿದ್ದ. ಮದ್ಯ ಕುಡಿಯದಂತೆ ಪ್ರಕಾಶ್ ಮಗನಿಗೆ ಬುದ್ದಿವಾದ ಹೇಳಿದ್ದರು. ಆದರೂ ಯೋಗೇಶ್ ಕುಡಿತವನ್ನು ಬಿಟ್ಟಿರಲಿಲ್ಲ.

ಮಾರ್ಚ್ 5ರಂದು ಮನೆಯಿಂದ ಹೊರಗೆ ಹೋಗಿದ್ದ ಯೋಗೇಶ್, ರಾತ್ರಿ ವಾಪಸ್ ಬಂದಿರಲಿಲ್ಲ. ಮರುದಿನ ಮಾರ್ಚ್ 6ರಂದು ಬೆಳಿಗ್ಗೆ ಮನೆಗೆ ಬಂದು ಪರೀಕ್ಷೆ ಇದ್ದಿದ್ದರಿಂದ ಕಾಲೇಜಿಗೆ ಹೋಗಲು ಸಜ್ಜಾಗಿದ್ದ. ಆದರೆ, ಮನೆಯಲ್ಲಿ ಪರೀಕ್ಷೆ ಪ್ರವೇಶ ಪತ್ರ ಸಿಕ್ಕಿರಲಿಲ್ಲ. ಅದಕ್ಕಾಗಿ ಹುಡುಕಾಟ ನಡೆಸಿದ್ದ.

ರಾತ್ರಿಯೆಲ್ಲಾ ಮದ್ಯ ಕುಡಿದು ಎಲ್ಲಿಯೋ ಮಲಗಿ, ಈಗ ಮನೆಗೆ ಬಂದಿದ್ದಿಯಾ ಎಂದು ಅಪ್ಪ ಪ್ರಕಾಶ್ ಜೋರಾಗಿಯೇ ಪ್ರಶ್ನಿಸಿದ್ದರು. ನಂತರ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕೋಪಗೊಂಡ ತಂದೆ, ಯೋಗೇಶ್‌ ಕುತ್ತಿಗೆಗೆ ವೇಲ್‌ನಿಂದ ಬಿಗಿದಿದ್ದರು. ಬಳಿಕ, ಯೋಗೇಶ್‌ ಸ್ಥಳದಲ್ಲೇ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದ. ನಂತರ ತಂದೆಯೇ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ಯೋಗೇಶ್ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಮಗನ ಸಾವಿನ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದ ತಂದೆ, ನನ್ನ ಮಗ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದರು. ಅದೇ ದೂರಿನಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದರು.

ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಇದು ಆತ್ಮಹತ್ಯೆಯಲ್ಲ, ಕೊಲೆ ಎನ್ನುವುದು ಗೊತ್ತಾಗಿತ್ತು. ಸ್ಥಳೀಯರೂ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ನಂತರ ಪೊಲೀಸರು ತಂದೆ ಪ್ರಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮಗನನ್ನು ಕೊಂದ ತಪ್ಪನ್ನು ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಡಿಟರ್ಜೆಂಟ್ ಪೌಡರ್ ಮಾರಾಟ

ನಕಲಿ ಡಿಟರ್ಜೆಂಟ್ ಪೌಡರ್ ತಯಾರಿಸಿ ಪ್ರತಿಷ್ಠಿತ ಕಂಪನಿಗಳ ಪಾಕೆಟ್ ಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದ ಮಳಿಗೆಯೊಂದರ ಮೇಲೆ ಬೆಂಗಳೂರಿನ ಮಲ್ಲೇಶ್ವರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಅವರು ಮಳಿಗೆಯ ಮಾಲೀಕ ಅರ್ಜುನ್ ಜೈನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಲ್ಲೇಶ್ವರ ಹಾಗೂ ಸುತ್ತಮುತ್ತ ಪ್ರದೇಶಗಳ ಅಂಗಡಿಗಳಲ್ಲಿ ನಕಲಿ ಡಿಟರ್ಜೆಂಟ್ ಪೌಡರ್ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಪತ್ತೆ ಹಚ್ಚಿದ್ದ ಕಂಪನಿಯ ಪ್ರತಿನಿಧಿಯೊಬ್ಬರು ದೂರು ನೀಡಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ನಕಲಿ ಡಿಟರ್ಜೆಂಟ್ ತಯಾರಿಕೆ ಮಳಿಗೆ ಮೇಲೆ ಇತ್ತೀಚೆಗೆ ದಾಳಿ ಮಾಡಿದ್ದರು.

ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಡಿಟರ್ಜೆಂಟ್ ವಸ್ತುಗಳು, ವಿವಿಧ ಕಂಪನಿಯ ಪೊಟ್ಟಣಗಳು ಹಾಗೂ ಪೌಡರ್ ಮಿಶ್ರಣ ಯಂತ್ರವನ್ನು ಜಪ್ತಿ ಮಾಡಲಾಗಿದೆ. ಆರೋಪಿ ಅರ್ಜುನ್ ಹಲವು ತಿಂಗಳಿನಿಂದ ನಕಲಿ ಡಿಟರ್ಜೆಂಟ್ ಮಾರುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಧಿಕೃತ ಬ್ಯಾನರ್ ಅಳವಡಿಕೆಗೆ ದಂಡ

ಬೆಂಗಳೂರಿನ ಸ್ಯಾಂಕಿ ರಸ್ತೆಯ, ರೇನ್ ಟ್ರಿ ಬೊಲೆವಾರ್ಡ್ ಕಟ್ಟಡ ಹತ್ತಿರ ಬ್ಯಾನರ್ ಅಳವಡಿಸಿದ್ದ ಕಾಂಗ್ರೆಸ್‌ ಮುಖಂಡ ರಾಜೀವ್ ಗೌಡ ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂ. 50 ಸಾವಿರ ದಂಡ ವಿಧಿಸಿದೆ.

ಎ.ಬಿ.ಡಿ. ಗ್ರೂಪ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಇವರು, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರ ಸಚಿವರಾದ ಕೆ.ಎಚ್. ಮುನಿಯಪ್ಪ ಅವರಿಗೆ ಜನ್ಮದಿನದ ಶುಭಾಶಯದ ಬ್ಯಾನರ್‌ ಅನ್ನು ಅನಧಿಕೃತವಾಗಿ ಅಳವಡಿಸಿದ್ದರು.ಈ ಬ್ಯಾನರ್‌ ಅಳವಡಿಕೆಗೆ ಪಾಲಿಕೆಯಿಂದ ಅನುಮತಿ ಪಡೆದಿರಲಿಲ್ಲ. ಆದ್ದರಿಂದ, ರಾಜೀವ್‌ ಗೌಡ ಅವರಿಗೆ ರೂಪಾಯಿ 50 ಸಾವಿರ ದಂಡ ವಿಧಿಸಿ, ಪಾಲಿಕೆ ಮುಖ್ಯ ಆಯುಕ್ತರ ಖಾತೆಗೆ ಹಣ ಪಾವತಿಸುವಂತೆ ವಸಂತನಗರದ ಸಹಾಯಕ ಕಂದಾಯ ಅಧಿಕಾರಿ ಪತ್ರದ ಮೂಲಕ ಸೂಚಿಸಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

(ವರದಿ: ಎಚ್. ಮಾರುತಿ,ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ