logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ಬಸ್, ಭಾರಿ ವಾಹನ ಸವಾರರಿಗೆ ಶುಭ ಸುದ್ದಿ, 3 ವರ್ಷ ನಂತರ ಪೀಣ್ಯ ಮೇಲ್ಸೇತುವೆ ಸಂಚಾರಕ್ಕೆ ಜುಲೈ ಅಂತ್ಯ ಮುಕ್ತ

Bangalore News: ಬೆಂಗಳೂರು ಬಸ್, ಭಾರಿ ವಾಹನ ಸವಾರರಿಗೆ ಶುಭ ಸುದ್ದಿ, 3 ವರ್ಷ ನಂತರ ಪೀಣ್ಯ ಮೇಲ್ಸೇತುವೆ ಸಂಚಾರಕ್ಕೆ ಜುಲೈ ಅಂತ್ಯ ಮುಕ್ತ

Umesha Bhatta P H HT Kannada

Jul 21, 2024 12:56 PM IST

google News

ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ಕೆಲಸ ಮುಗಿದಿದ್ದು, ಮಾಸಾಂತ್ಯಕ್ಕೆ ಆರಂಭವಾಗಬಹುದು.

    • Peenya Flyover ಬೆಂಗಳೂರು ತುಮಕೂರು ನಡುವಿನ ಪೀಣ್ಯ ಮೇಲ್ಸೇತುವೆ( Peenya Flyover)  ಆರು ವರ್ಷದ ಬಳಿಕ ಸೇವೆಗೆ ಅಣಿಯಾಗುತ್ತಿದೆ.
    • ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರಿನ  ಪೀಣ್ಯ ಮೇಲ್ಸೇತುವೆ ಕೆಲಸ ಮುಗಿದಿದ್ದು, ಮಾಸಾಂತ್ಯಕ್ಕೆ ಆರಂಭವಾಗಬಹುದು.
ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ಕೆಲಸ ಮುಗಿದಿದ್ದು, ಮಾಸಾಂತ್ಯಕ್ಕೆ ಆರಂಭವಾಗಬಹುದು.

ಬೆಂಗಳೂರು: ಮೂರು ವರ್ಷಗಳಿಂದ ಬಂದ್‌ ಆಗಿದ್ದ ತುಮಕೂರು ರಸ್ತೆಯ ಪೀಣ್ಯ ಮೇಲ್ಶೇತುವೆ ಈ ಮಾಸಾಂತ್ಯಕ್ಕೆ ಭಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಆದರೆ ಈ ಮೇಲ್ಸೇತುವೆ ಮೇಲೆ ಶುಕ್ರವಾರ ಮುಂಜಾನೆ 6 ಗಂಟೆಯಿಂದ ಶನಿವಾರ ಮುಂಜಾನೆ 6 ಗಂಟೆಯವರೆಗೆ ಒಂದು ದಿನ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ಉತ್ತರ ಭಾಗದ, ತುಮಕೂರು ರಸ್ತೆಯಲ್ಲಿರುವ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಈ ಮೇಲ್ಸೇತುವೆ 15 ಮೀಟರ್ ಅಗಲ 4.2 ಕಿಮೀ ಉದ್ದವಿದೆ. 2021ರ ಡಿಸೆಂಬರ್‌ ನಿಂದ ಈ ಮೇಲ್ಸೇತುವೆ ಮೇಲೆ ಬಸ್‌ ಹಾಗೂ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಪ್ರಿ ಸ್ಟ್ರೆಸ್ಡ್‌ ಕೇಬಲ್‌ ಗಳು ತುಕ್ಕು ಹಿಡಿದಿದ್ದು, ದುರ್ಬಲಗೊಂಡಿದ್ದವು. ಜತೆಗೆ ತೇವಾಂಶ ಮತ್ತು ಸೂರ್ಯನ ಬೆಳಕಿನಿಂದಲೂ ಹಾನಿಗೊಳಗಾಗಿದ್ದರಿಂದ ಮೇಲ್ಸೇತುವೆ ದುರ್ಬಲವಾಗಿತ್ತು.

ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದರಿಂದ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ವಿಪರೀತವಾಗಿತ್ತು. ವಾಹನಗಳು ಆಮೆ ವೇಗದಲ್ಲಿ ಚಲಿಸುತ್ತಿದ್ದವು. ಅದರಲ್ಲೂ ಕಚೇರಿ ತಲುಪುವ ಸಮಯದಲ್ಲಿ ವಾಹನಗಳ ಸಂಚಾರವನ್ನು ಇಯಂತ್ರಿಸಲು ಸಂಚಾರಿ ಪೊಲೀಸರು ಹೆಣಗಾಡಬೇಕಿತ್ತು. ಈ ರಸ್ತೆ ಉತ್ತರ ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮೇಲ್ಸೇತುವೆಗೆ ಹೆಚ್ಚಿ ಬಲ ತಂಡುಕೊಡುವ ದೃಷ್ಟಿಯಿಂದ 2023ರಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 38.5 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕೇಬಲ್‌ ಗಳನ್ನು ಅಳವಡಿಸಲು ನಿರ್ಧರಿಸಿತ್ತು. ಇದಕ್ಕಾಗಿ 240 ಪ್ರಿ ಸ್ಟ್ರೆಸ್ಡ್‌

ಕೇಬಲ್‌ ಗಳನ್ನು ಅಳವಡಿಸಿತ್ತು. ಮತ್ತಷ್ಟು ತುಕ್ಕು ಹಿಡಿಯುವುದನ್ನು ತಪ್ಪಿಸಲು ಹೊಸ ಕೇಬಲ್‌ ಗಳನ್ನು ಅಳವಡಿಸುವಂತೆ ನಾಲ್ವರು ತಜ್ಞರ ಸಮಿತಿ ವರಿಯನ್ನು ನೀಡಿತ್ತು. ಆದ್ದರಿಂದ ಈಗಾಗಲೇ ಅಳವಡಿಸಲಾಗಿದ್ದ 1,243 ಪ್ರಿ ಸ್ಟ್ರೆಸ್ಡ್‌ ಕೇಬಲ್‌ ಗಳನ್ನೂ ಬದಲಾಯಿಸಲಾಗಿದೆ. ಇಂಜಿನಿಯರಿಂಗ್‌ ನಲ್ಲಿ ಸ್ಟ್ರೆಸ್ಡ್‌ ಎಂದರೆ ಹೊರಗಿನ ಭಾರ ಬೀಳುವುದು ಎಂದು ಅರ್ಥ ಮಾಡಿಕೊಳ್ಳಬೇಕು.

ಜುಲೈ ಮಾಸಾಂತ್ಯದಲ್ಲಿ ಭಾರಿ ವಾಹನಗಳಿಗೆ ಈ ಮೇಲ್ಸೇತುವೆಯನ್ನು ಮುಕ್ತಗೊಳಿಸಲಾಗುವುದು. ಮೇಲ್ಸೇತುವೆಯ ಪ್ರಸ್ತುತ ಸಾಮರ್ಥ್ಯ ಮತ್ತು ಸಂಚಾರಿ ವ್ಯವಸ್ಥೆಯ ಪರಿಸ್ಥಿತಿ ಕುರಿತ ವರದಿಯನ್ನು ಪ್ರಾಧಿಕಾರದ ಕೇಂದ್ರ ಕಚೇರಿಗೆ ಈಗಾಗಲೇ ಸಲ್ಲಿಸಲಾಗಿದೆ. ಮುಂದಿನ ವಾರ ಅನುಮತಿ ಸಿಗುವ ಸಾಧ್ಯತೆಗಳಿವೆ ಎಂದುಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಬಿ. ಜಯಕುಮಾರ್‌ ತಿಳಿಸಿದ್ದಾರೆ.

ತಜ್ಞರ ಸಮಿತಿಯ ಮುಖ್ಯಸ್ಥ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ. ಚಂದ್ರ ಕಿಶನ್‌ ಅವರು ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ಎಂದು ತಿಳಿಸಿದ್ದೇವೆ. ಈಗ ಮೇಲ್ಸೇತುವೆ ಸಂಪೂರ್ಣವಾಗಿ ಸುಭದ್ರವಾಗಿದೆ ಮತ್ತು ಸಾಮರ್ಥ್ಯ ಹೊಂದಿದೆ ಎಂದೂ ತಿಳಿಸಿದ್ದೇವೆ. ಈಗ ಅಳವಡಿಸಿರುವ 1,243 ಕೇಬಲ್‌ ಗಳಿಂದ ಯಾವುದೇ ಕಂಪನ ಉಂಟಾಗಬಾರದು ಎಂದು ತಿಳಿಸಿದ್ದೇವೆ ಎಂದೂ ಹೇಳಿದ್ದಾರೆ. ಇದೇ ಕಾರಣಕ್ಕೆ ಈ ಕೇಬಲ್‌ ಗಳಿಗೆ ಗ್ರೌಟಿಂಗ್‌ ಮಾಡಲು ವಾರದಲ್ಲಿ ಒಂದು ದಿನ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲು ಸಲಹೆಗಳು ಕೇಳಿ ಬಂದಿವೆ. ಕಂಪನ ಉಂಟಾಗದಿರಲು 14-15 ಗಂಟೆ ಅಥವಾ ಅದಕ್ಕಿಂತಲೂಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ ಎಂದು ಜಯಕುಮಾರ್‌ ತಿಳಿಸಿದ್ದಾರೆ.

ಆದ್ದರಿಂದ ವಾರದಲ್ಲಿ ಒಂದು ದಿನ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲು ಉದ್ದೇಶಿಸಲಾಗಿದೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹೊರ ಹೋಗುವ ವಾಹನಗಳ ಸಂಖ್ಯೆ ಹೆಚ್ಚಾಗುವುದರಿಂದ ಮೇಲ್ಸೇತುವೆ ಮೇಲೆ ಶುಕ್ರವಾರಗಳಂದು ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಬಹುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಮೇಲ್ಸೇತುವೆಗೆ ಬಣ್ಣ ಬಳಿಯುವ ನಾಮ ಫಲಕಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ಮೇಲ್ಸೇತುವೆ ಮೇಲೆ ವಾಹನಗಳ ಗರಿಷ್ಠ ಮಿತಿಯನ್ನು 40 ಕಿಮೀಗೆ ನಿಗದಿಪಡಿಸಲಾಗಿದೆ. ಸಂಚಾರಿ ಪೊಲೀಸರು ಲೇ ಬೈ ನಲ್ಲಿ ನಿಂತುಕೊಂಡು ರೆಡಾರ್‌ ಗನ್‌ ಗಳ ಸಹಾಯದದಿಂದ ವೇಗಮಿತಿಯನ್ನು ನಿಯಂತ್ರಿಸಲಿದ್ದಾರೆ. ಈ ವರ್ಷದ ಜನವರಿಯಲ್ಲಿ ಭಾರಿ ವಾಹನಗಳ ಸಂಚಾರ ಕುರಿತು ಪರೀಕ್ಷೆ ನಡೆದಿತ್ತು. ಆಗಲೂ ಮೇಲ್ಸೇತುವೆ ಪರೀಕ್ಷೆಯಲ್ಲಿ ಪಾಸಾಗಿತ್ತು.

ವರದಿ: ಎಚ್.ಮಾರುತಿ, ಬೆಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ