ಕರ್ನಾಟಕ ಬಜೆಟ್ 2024: ಗ್ಯಾರಂಟಿ ಯೋಜನೆಗಳು, ಬಜೆಟ್ ಜತೆಗೆ ಲೋಕಸಭೆ ಚುನಾವಣೆ ಲೆಕ್ಕಾಚಾರ
Feb 15, 2024 05:12 PM IST
ಕರ್ನಾಟಕ ಬಜೆಟ್ 2024ಗೆ ಅಂತಿಮ ರೂಪ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ
- ದಾಖಲೆ 15ನೇ ಬಜೆಟ್ ಗೆ ಸಿಎಂ ಸಿದ್ದರಾಮಯ್ಯ ತಯಾರಿ ಮುಗಿದಿದೆ. ಮಂಡನೆ ಮಾತ್ರ ಬಾಕಿ. ಗ್ಯಾರಂಟಿಗಳ ಅನುಷ್ಠಾನದಲ್ಲೇ ]ವರ್ಷ ಕಳೆದಿದೆ. ವಿಧಾನಸಭೆ ಚುನಾವಣೆ ಗೆಲುವಿನ ಗುಂಗು ಲೋಕಸಭೆ ಚುನಾವಣೆಗೆ ಇಲ್ಲದೇ ಇದ್ದರೂ ಸವಾಲಂತೂ ಇದ್ದೇ ಇದೆ. ಚುನಾವಣೆಗೆ ಪೂರಕವಾಗಿ ಬಜೆಟ್‌ನಲ್ಲಿ ಏನು ಕಾರ್ಯಕ್ರಮ ಇರಬಹುದು ಎನ್ನುವ ಕುತೂಹಲ ಇದೆ.
- (ವಿಶೇಷ ವರದಿ: ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: 14 ಬಜೆಟ್ ಗಳನ್ನು ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 15ನೇ ಬಜೆಟ್ ನತ್ತ ಎಲ್ಲರ ಕಣ್ಣು ನೆಟ್ಟಿದೆ. ಲೋಕಸಭಾ ಚುನಾವಣೆ ಸನಿಹದಲ್ಲೇ ಇದ್ದು ಸಹಜವಾಗಿಯೇ ಶುಕ್ರವಾರ ಮಂಡಿಸಲಿರುವ ಆಯವ್ಯಯ ತೀವ್ರ ಕುತೂಹಲ ಕೆರಳಿಸಿದೆ.ಅಂದರೆ ಮೊದಲ ವರ್ಷ ಗ್ಯಾರಂಟಿಗಳ ಅನುಷ್ಠಾನದಲ್ಲೇ ಕಳೆದುಹೋಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿಗಳು ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರವಹಿಸಿರುವುದರಲ್ಲಿ ಎರಡು ಮಾತಿಲ್ಲ. ಈ ಗ್ಯಾರಂಟಿಗಳನ್ನು ಸಮರ್ಥವಾಗಿಯೇ ಅನುಷ್ಠಾನ ಮಾಡಿರುವುದರಲ್ಲಿ ಸಂಶಯಗಳಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಫಲ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಸಿಗಬಹುದೇ , ಇದಕ್ಕೆ ಬಜೆಟ್‌ನಲ್ಲಿ ಹೇಗೆ ಬಲ ತುಂಬಬಹುದು ಎನ್ನುವ ಚರ್ಚೆಗಳು ನಡೆದಿವೆ.
ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಡಿಸೆಂಬರ್ ವರೆಗೂ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದರಲ್ಲಿಯೇ ಮಗ್ನರಾಗಿದ್ದರು. ಅವರ ಸಂಪುಟವೂ ಇದೇ ತಯಾರಿಯಲ್ಲಿತ್ತು. ಆದರೆ ಈ ವಿಷಯವೇ ಸರಕಾರಕ್ಕೆ ಆದ್ಯತೆಯಾಗಿ ಪರಿಣಮಿಸಿದ್ದು, ಅಭಿವೃದ್ದಿ ಮುನ್ನೆಲೆಗೆ ಬರಲೇ ಇಲ್ಲ ಎಂದು ಆರ್ಥಿಕ ತಜ್ಞರು, ರಾಜಕೀಯ ಮುತ್ಸದ್ದಿಗಳು ಅಭಿಪ್ರಾಯಪಡುತ್ತಾರೆ. ಸಹಜವಾಗಿಯೇ ಬಿಜೆಪಿ ಮತ್ತು ಜೆಡಿಎಸ್ ಇದೇ ಆಪಾದನೆಗಳನ್ನು ಮಾಡುತ್ತಾ ಬಂದಿದ್ದರೂ ರಾಜಕೀಯ ಪ್ರೇರಿತ ಎಂದು ಸರಕಾರ ತೇಲಿಸಿಬಿಡುತ್ತದೆ. ಆದ್ದರಿಂದ ಇಲ್ಲಿ ಅಭಿವೃದ್ದಿ ತಜ್ಞರ ಅಭಿಪ್ರಾಯ.ಮುಖ್ಯವಾಗುತ್ತದೆ.
ಗ್ಯಾರಂಟಿ ಯೋಜನೆ, ಬರ
2023-24ರಲ್ಲಿ ಗ್ಯಾರಂಟಿಗಳಿಗೆ ಅನುದಾನ ಹೊಂದಿಸುವುದರಲ್ಲಿಯೇ ಸರಕಾರ ಹೆಣಗಾಡಿದೆ. ಅಂದಾಜು ಈ ಎಂಟು ತಿಂಗಳಲ್ಲಿ 25 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಹಾಗಾಗಿ ಇತರೆ ಅಭಿವೃದ್ದಿ ಕಾರ್ಯಗಳನ್ನು ಸರಕಾರ ನಿರ್ಲಕ್ಷ್ಯ ಮಾಡಿದೆ ಎನ್ನುವುದು ಗುರುತರ ಆರೋಪವಾಗಿದೆ. ರಾಜ್ಯದಲ್ಲಿ ತೀವ್ರ ಬರಗಾಲ ಕಾಡುತ್ತಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಳಂಬ ಮಾಡಿದೆ ಎಂದು ರೈತ ಮುಖಂಡರು ಆರೋಪಿಸುತ್ತಾರೆ. ಬರದಿಂದ ನಷ್ಟ ಕಂಡ ರೈತರಿಗೆ 2000 ರೂಪಾಯಿಗಳ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರೂ ಅದು ತುಂಬಾ ಕಡಿಮೆ ಮತ್ತು ತುಂಬಾ ತಡವಾದ ಪರಿಹಾರ ಎಂದು ಟೀಕೆಗಳು ಕೇಳಿ ಬರುತ್ತಿವೆ.
ಮೊದಲ ವರ್ಷದಲ್ಲಿ ನೀರಾವರಿ, ಬೃಹತ್ ಕಾಮಗಾರಿಗಳು, ಬೆಂಗಳೂರು ಅಭಿವೃದ್ದಿ ಮೊದಲಾದ ಆಸ್ತಿ ಉತ್ಪಾದಿಸುವ ಯೋಜನೆಗಳತ್ತ ಸರಕಾರ ಗಮನಹರಿಸಿಲ್ಲ. ಎರಡನೆಯ ವರ್ಷದಲ್ಲಾದರೂ ಈ ವಿಷಯಗಳತ್ತ ಸಿದ್ದರಾಮಯ್ಯ ಗಮನ ಹರಿಸಬಹುದು ಎಂಬ ನಿರೀಕ್ಷೆ ಇದೆ. ಅದೂ ಅಷ್ಟು ಸುಲಭವಲ್ಲ. ಈ ವರ್ಷದಲ್ಲಿ 12 ತಿಂಗಳಿಗೆ ಐದೂ ಗ್ಯಾರಂಟಿಗಳ ಜಾರಿಗೆ ಸರಿ ಸುಮಾರು 50-60,000 ಕೋಟಿ ರೂ.ಗಳ ಅನುದಾನದ ಅವಶ್ಯಕತೆ ಇದೆ.
ತೆರಿಗೆ ಗೊಂದಲದ ನಡುವೆ
ಒಂದು ಕಡೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪಾಲು ಸಲ್ಲುತ್ತಿಲ್ಲ. ಎರಡನೆಯದಾಗಿ ರಾಜ್ಯದ ಆದಾಯ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಅಭಿವೃದ್ದಿಗೆ ಹಣ ಹೊಂದಾಣಿಕೆ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಮೂರನೆಯದಾಗಿ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು, ಸರಕಾರ ಆದಾಯ ಸಂಗ್ರಹಕ್ಕೆ ಯಾವುದೇ ಹೊಸ ಕ್ರಮಗಳನ್ನು ಅನುಸರಿಸಲು ಸಾಧ್ಯವಾಗದು. ಜನರ ಮೇಲೆ ತೆರಿಗೆ ಭಾರ ಹೊರಿಸದ ಹಾಗೆ ಆದಾಯ ಸಂಗ್ರಹ ಮಾಡುವುದು ತಂತಿಯ ಮೇಲೆ ನಡೆದ ಹಾಗೆ ಎನ್ನುವ ಅನುಭವವಾಗುತ್ತಿರಬಹುದು.
ರಾಜ್ಯದ ಬಜೆಟ್ ಗಾತ್ರ 3.80 ಲಕ್ಷ ಕೋಟಿ ರೂ ತಲುಪಲಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 50 ಸಾವಿರ ಕೋಟಿ ರೂ.ಗಳ ಹೆಚ್ಚಳ ಕಾಣಲಿದೆ. ರಾಜ್ಯದ ಸಾಲ 31 ಮಾರ್ಚ್ 2024ಕ್ಕೆ 5.63 ಲಕ್ಷ ಕೋಟಿ ರೂ. ತಲುಪಲಿದೆ. ಮುಖ್ಯಮಂತ್ರಿಗಳು ಹೊಸದಾಗಿ 90 ಸಾವಿರ ಕೋಟಿ ರೂ.ಗಳ ಸಾಲ ಮಾಡುವ ಪ್ರಸ್ತಾಪ ಮಾಡಲಿದ್ದಾರೆ. ಅಲ್ಲಿಗೆ ರಾಜ್ಯದ ಸಾಲ 6.47 ಲಕ್ಷ ಕೋಟಿ ತಲುಪಲಿದೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.
ಅಭಿವೃದ್ದಿಗಾಗಿ ಸಾಲ ಮಾಡುವ ಪರಿಸ್ಥಿತಿಯಲ್ಲೂ ಸರಕಾರ ಇಲ್ಲ. ರಾಜ್ಯದ ಸಾಲದ ಮಿತಿ ದಾಟುತ್ತಾ ಬಂದಿದೆ. ಗರಿಷ್ಠ ಪ್ರಮಾಣದಲ್ಲಿ ಸಾಲಕ್ಕೆ ಅವಕಾಶ ಇಲ್ಲವಾದ್ದರಿಂದ ಈ ವರ್ಷವೂ ಅಭಿವೃದ್ದಿ ಭಾಗ್ಯ ಇಲ್ಲವಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಲೋಕಸಭೆ ಚುನಾವಣೆ
ಇದರ ನಡುವೆ ಲೋಕಸಭೆ ಚುನಾವಣೆಯೂ ಬರುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಈ ರಾಜ್ಯದ ಮೇಲೆ ವರಿಷ್ಠರ ಕಣ್ಣು ಇರುವುದರಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸುವುದು ಅನಿವಾರ್ಯವೂ ಹೌದು. ಜನರ ಮನ ಗೆಲ್ಲಲು ಬಜೆಟ್‌ಗಿಂತ ಮತ್ತೊಂದು ಮಾರ್ಗ ಇಲ್ಲವೇ ಇಲ್ಲ. ಸಿದ್ದರಾಮಯ್ಯ ರಾಜಕೀಯಕ್ಕೆ ಹೊಸಬರೇನೂ ಅಲ್ಲ. ನಾಲ್ಕು ದಶಕ ಸಕ್ರಿಯ ರಾಜಕಾರಣದಲ್ಲೇ ಇರುವ ಸಿದ್ದರಾಮಯ್ಯ ಅವರಿಗೆ ಚುನಾವಣೆ ಗೆದ್ದು ಸೋತ ಅನುಭವವೂ ಇದೆ. ಈ ಕಾರಣದಿಂದಲೂ ಈ ಬಜೆಟ್‌ನಲ್ಲಿ ಲೋಕಸಭೆ ಚುನಾವಣೆಗೆ ಪೂರಕವಾಗಿಯೂ ಗ್ಯಾರಂಟಿಗಳಿಗೆ ಬಲ ಕೊಡುವ ಜತೆಗೆ ಇತರೆ ಯೋಜನೆಯನ್ನೂ ರೂಪಿಸಬಹುದು ಎಂದೇ ಹೇಳಲಾಗುತ್ತಿದೆ.
(ವಿಶೇಷ ವರದಿ: ಎಚ್.ಮಾರುತಿ, ಬೆಂಗಳೂರು)