logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಬಿಎಂಟಿಸಿ, ಮೆಟ್ರೋ​ ಇದ್ದರೂ ವಾಹನಗಳ ನೋಂದಣಿ ಹೆಚ್ಚಳ; 23 ಲಕ್ಷದ ದಾಟಿದ ಕಾರುಗಳ ಸಂಖ್ಯೆ

ಬೆಂಗಳೂರಿನಲ್ಲಿ ಬಿಎಂಟಿಸಿ, ಮೆಟ್ರೋ​ ಇದ್ದರೂ ವಾಹನಗಳ ನೋಂದಣಿ ಹೆಚ್ಚಳ; 23 ಲಕ್ಷದ ದಾಟಿದ ಕಾರುಗಳ ಸಂಖ್ಯೆ

Prasanna Kumar P N HT Kannada

Feb 18, 2024 09:30 AM IST

google News

ವಾಹನಗಳ ನೋಂದಣಿ ಹೆಚ್ಚಳ

    • Vehicle Registrations in Bengaluru : ಜನವರಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ವಾಹನಗಳ ನೋಂದಣಿಯಾಗಿದ್ದು ಬೆಂಗಳೂರಿನಲ್ಲಿ 16 ಸಾವಿರ ಕಾರು ಮತ್ತು 60 ಸಾವಿರ ದ್ವಿಚಕ್ರ ವಾಹನಗಳ ಸಂಖ್ಯೆ ರಿಜಿಸ್ಟರ್ ಆಗಿದೆ. ಆದರೆ ರಸ್ತೆಗಳ ಗತಿ ಹೇಗಿದೆ? ಈ ಕುರಿತ ಮಾಹಿತಿ ಇಲ್ಲಿದೆ. (ವರದಿ- ಎಚ್. ಮಾರುತಿ)
ವಾಹನಗಳ ನೋಂದಣಿ ಹೆಚ್ಚಳ
ವಾಹನಗಳ ನೋಂದಣಿ ಹೆಚ್ಚಳ

ಬೆಂಗಳೂರು: ಬಿಎಂಟಿಸಿ, ಮೆಟ್ರೋ ಇದ್ದರೂ ಈ ವರ್ಷದ ಜನವರಿಯಲ್ಲಿ ನಗರದಲ್ಲಿ ದಾಖಲೆಯ ಪ್ರಮಾಣದ ವಾಹನಗಳ ಸಂಖ್ಯೆ ನೋಂದಣಿಯಾಗಿವೆ. ಸಾರಿಗೆ ಇಲಾಖೆಯ ಮಾಹಿತಿಗಳ ಪ್ರಕಾರ ಜನವರಿಯಲ್ಲಿ 15,774 ವಾಹನಗಳು ಮಾರಾಟವಾಗಿವೆ, ಇಲ್ಲವೆ ನೋಂದಣಿಯಾಗಿವೆ. ಈ ಮೂಲಕ ರಾಜ್ಯ ರಾಜಧಾನಿಯಲ್ಲಿ ಖಾಸಗಿ ಕಾರುಗಳ ಸಂಖ್ಯೆ 23,67 ಲಕ್ಷದ ಗಡಿ ದಾಟಿದೆ. ಬೆಂಗಳೂರಿನ ರಸ್ತೆಗಳ ಮೇಲೆ ಸಂಚರಿಸುವ ವಾಹನಗಳ ಪೈಕಿ ಶೇ. 22ರಷ್ಟು ಕಾರುಗಳ ಓಡಾಟವನ್ನು ಕಾಣಬಹುದು.

2023-24ರ ಆರ್ಥಿಕ ವರ್ಷದ ಏಪ್ರಿಲ್ 1 ರಿಂದ 2024ರ ಜನವರಿ ಅಂತ್ಯದವರೆಗೆ 1.3 ಲಕ್ಷದಷ್ಟು ಕಾರುಗಳು ಬೆಂಗಳೂರಿನ ವಾಹನಗಳ ಸಂಖ್ಯೆ ಮಿತಿ ಮೀರಲು ಕಾರಣವಾಗಿವೆ. ಬೆಂಗಳೂರಿನಲ್ಲಿ ಕೇವಲ ಕಾರುಗಳು ಮಾತ್ರ ಹೆಚ್ಚಳವಾಗಿಲ್ಲ. ಈ ವರ್ಷದ ಜನವರಿಯೊಂದರಲ್ಲೇ 59,500 ದ್ವಿಚಕ್ರ ವಾಹನಗಳ ನೋಂದಣಿಯಾಗಿವೆ. ಈ ಮೂಲಕ ಕಾರು ಮತ್ತು ದ್ವಿಚಕ್ರ ವಾಹನಗಳು ಸೇರಿ ಉದ್ಯಾನ ನಗರಿಯಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ಸಂಖ್ಯೆ 1 ಕೋಟಿ ದಾಟಿದ್ದು, ಶೇ.88 ರಷ್ಟಿವೆ. ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ದುರ್ಬಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಕಾರಣ ಎಂದು ವಾಹನ ತಜ್ಞರು ದೂರುತ್ತಾರೆ.

ರೈಲು ಅಭಿವೃದ್ಧಿ ಏಕಿಲ್ಲ?

ರಸ್ತೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೋಲಿಸಿದರೆ ಸಮೂಹ ರೈಲು ಸಾರಿಗೆ ಮೂಲಭೂತ ಸೌಕರ್ಯ ಆಮೆ ವೇಗದಲ್ಲಿ ತೆವಳುತ್ತಿದೆ. ಸರ್ಕಾರವೂ ರಸ್ತೆಗಳ ಅಭಿವೃದ್ಧಿಗೆ ತೋರುತ್ತಿರುವ ಆಸಕ್ತಿಯನ್ನು ರೈಲು ಮಾರ್ಗ ವಿಸ್ತರಣೆಗೆ ಅದೇಕೆ ಆಸಕ್ತಿ ತೋರಿಸುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಬೆಂಗಳೂರು, ರಾಜ್ಯ ಅಥವಾ ಇಡೀ ದೇಶದಲ್ಲಿ ರೈಲ್ವೇ ಅಭಿವೃದ್ದಿ ಕಾಮಗಾರಿ ಗಡುವು ತಪ್ಪಿಸಿಕೊಂಡಷ್ಟು ಬೇರೆ ಯಾವುದೇ ಯೋಜನೆ ತಪ್ಪಿಸಿಕೊಂಡಿಲ್ಲ.

ಬೆಂಗಳೂರು ಉಪನಗರ ರೈಲು ಯೋಜನೆಗೆ ತೋರಿರುವ ನಿರ್ಲಕ್ಷ್ಯ ಅವಲೋಕಿಸಿದರೆ ರಾಜಕಾರಣಿಗಳ ಮೇಲೆ ಕೋಪ ಬಾರದೆ ಇರದು. ಮನಸ್ಸು ಮತ್ತು ಇಚ್ಛಾಶಕ್ತಿ ಇದ್ದರೆ ಈ ವೇಳೆಗೆ ಉಪನಗರ ರೈಲು ಯೋಜನೆ ಮುಗಿದು ಬೆಂಗಳೂರಿನ ಮೇಲೆ ಒತ್ತಡ ಕಡಿಮೆಯಾಗಬೇಕಿತ್ತು. ಜೊತೆಗೆ ಸಾರ್ವಜನಿಕ ಸಾರಿಗೆ ಸೇವೆಯೂ ಪ್ರಯಾಣಿಕರ ನಿರೀಕ್ಷಿತ ಮಟ್ಟದಲ್ಲಿಲ್ಲ. ಈ ಎಲ್ಲ ಕಾರಣಗಳು ಖಾಸಗಿ ವಾಹನಗಳ ಹೆಚ್ಚಳಕ್ಕೆ ಕಾರಣವಾಗಿವೆ.

ವಾಹನಗಳು ಹೊರಸೂಸುವ ಗಾಳಿಯಿಂದ ಉಂಟಾಗುವ ವಾಯುಮಾಲಿನ್ಯ, ನಡೆದಾಡುವವರಿಗೆ ಪೂರಕವಾಗಿಲ್ಲದ ಪಾದಚಾರಿ ರಸ್ತೆಗಳು ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

ಇ- ವಾಹನ ಪರ್ಯಾಯವೇ?

ಒಂದು ಸಮಾಧಾನಕರ ಸಂಗತಿ ಎಂದರೆ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇ ವಾಹನಗಳ ಬ್ಯಾಟರಿ ಗುಣಮಟ್ಟ ಸುಧಾರಿಸಿದರೆ ಖರೀದಿ ಮತ್ತು ಮಾರಾಟದಲ್ಲಿ ನೀತಿ ನಿಯಮಗಳು ಗ್ರಾಹಕ ಸ್ನೇಹಿಯಾದರೆ ರಸ್ತೆಗಳಲ್ಲಿ ಇ - ವಾಹನಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತದೆ. ಇ-ವಾಹನಗಳ ಗ್ರಾಹಕರಿಗೆ ನೇರ ಸಬ್ಸಿಡಿ ನೀಡಬೇಕು.

ಇಂಧನ ಆಧಾರಿತ ವಾಹನಗಳಿಗಿಂತ ಎಲೆಕ್ಟ್ರಿಕ್

ವಾಹನಗಳ ಬೆಲೆ ತುಸು ಹೆಚ್ಚು. ಈ ಬೆಲೆಯನ್ನು ಇಳಿಸಬೇಕು. ನೋಂದಣಿ ಶುಲ್ಕ ಕಡಿಮೆ ಮಾಡುವುದು, ರಸ್ತೆ ತೆರಿಗೆ ಅಥವಾ ಜಿಎಸ್​ಟಿ ಕಡಿಮೆ ಮಾಡುವ ಮೂಲಕ ಪ್ರೋತ್ಸಾಹ ಮತ್ತು ಉತ್ತೇಜನ ನೀಡಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ