logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಬಾಲೆಗೆ ಸಿಕ್ಕಿತು ಪ್ರತಿಷ್ಠಿತ ಬ್ರೇಕ್‌ಥ್ರೂ ಅಂತರಾಷ್ಟ್ರೀಯ ಪ್ರಶಸ್ತಿ, ಯಾರು ವಿದ್ಯಾರ್ಥಿನಿ, ಎಷ್ಟು ಮೊತ್ತ; ಇಲ್ಲಿದೆ ವಿವರ

ಬೆಂಗಳೂರಿನ ಬಾಲೆಗೆ ಸಿಕ್ಕಿತು ಪ್ರತಿಷ್ಠಿತ ಬ್ರೇಕ್‌ಥ್ರೂ ಅಂತರಾಷ್ಟ್ರೀಯ ಪ್ರಶಸ್ತಿ, ಯಾರು ವಿದ್ಯಾರ್ಥಿನಿ, ಎಷ್ಟು ಮೊತ್ತ; ಇಲ್ಲಿದೆ ವಿವರ

Umesha Bhatta P H HT Kannada

Feb 07, 2024 06:18 PM IST

google News

ಅಂತರಾಷ್ಟ್ರೀಯ ವಿಜ್ಞಾನ ವಿಡಿಯೋ ಸ್ಪರ್ಧೆಯಲ್ಲಿ ಗೆದ್ದ ಬೆಂಗಳೂರಿನ ಸಿಯಾ ಗೋಡಿಕಾ

    • ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್ 2023 ಅಂತರರಾಷ್ಟ್ರೀಯ ವಿಜ್ಞಾನ-ವಿಡಿಯೋ ಸ್ಪರ್ಧೆಯಲ್ಲಿ(Breakthrough Junior Challenge 2023) ಬರೋಬ್ಬರಿ 3.32 ಕೋಟಿ ರೂ.ಗಳನ್ನು( 400,000 ಡಾಲರ್‌) ಬೆಂಗಳೂರಿನ ವಿದ್ಯಾರ್ಥಿನಿ ಸಿಯಾ ಗೋಡಿಕಾ ತನ್ನದಾಗಿಸಿಕೊಂಡಿದ್ದಾರೆ.
ಅಂತರಾಷ್ಟ್ರೀಯ ವಿಜ್ಞಾನ ವಿಡಿಯೋ ಸ್ಪರ್ಧೆಯಲ್ಲಿ ಗೆದ್ದ ಬೆಂಗಳೂರಿನ ಸಿಯಾ ಗೋಡಿಕಾ
ಅಂತರಾಷ್ಟ್ರೀಯ ವಿಜ್ಞಾನ ವಿಡಿಯೋ ಸ್ಪರ್ಧೆಯಲ್ಲಿ ಗೆದ್ದ ಬೆಂಗಳೂರಿನ ಸಿಯಾ ಗೋಡಿಕಾ

ಬೆಂಗಳೂರು: ವಿಜ್ಞಾನ ಸಂಶೋಧನೆಯಲ್ಲಿ ಆಸ್ಕರ್‌ ಪ್ರಶಸ್ತಿ ಎಂದೇ ಕರೆಯಲಾಗುವ ಬ್ರೇಕ್‌ ಥ್ರೂ ಸೊಸೈಟಿಯ ಪ್ರತಿಷ್ಠಿತ ವಿಜ್ಞಾನ ಜೂನಿಯರ್‌ ಪ್ರಶಸ್ತಿಯನ್ನು ಬೆಂಗಳೂರಿನ 17 ವರ್ಷದ ಬಾಲೆ ಸಿಯಾ ಗೋಡಿಕಾ(Siya Godika) ಪಡೆದುಕೊಂಡಿದ್ದಾರೆ. ಗೂಗಲ್(Google) ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್, ಫೇಸ್‌ಬುಕ್(FaceBook) ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್, ರಷ್ಯಾದ ಯೂರಿ ಮಿಲ್ನರ್ ಅವರ ಪತ್ನಿ ಜೂಲಿಯಾ ಮತ್ತು ಅಮೆರಿಕಾದ ವಾಣಿಜ್ಯೋದ್ಯಮಿ ಅನ್ನಿ ವೊಜ್ಸಿಕಿ ಸ್ಥಾಪಿಸಿರುವ ಬ್ರೇಕ್‌ಥ್ರೂ ಜೂನಿಯರ್ ಚಾಲೆಂಜ್ 2023 ಅಂತರರಾಷ್ಟ್ರೀಯ ವಿಜ್ಞಾನ-ವಿಡಿಯೋ ಸ್ಪರ್ಧೆಯಲ್ಲಿ(Breakthrough Junior Challenge 2023) ಬರೋಬ್ಬರಿ 3.32 ಕೋಟಿ ರೂ.ಗಳನ್ನು( 400,000 ಡಾಲರ್‌) ಸಿಯಾ ಗೋಡಿಕಾ ತನ್ನದಾಗಿಸಿಕೊಂಡಿರುವುದು ವಿಶೇಷ. ಆರು ವರ್ಷದ ಹಿಂದೆ ಆಕೆಯ ಸಹೋದರ ಸಮಯ ಗೋಡಿಕಾ ಇದೇ ಪ್ರಶಸ್ತಿ ಪಡೆದಿದ್ದರು.

ಏನಿದು ಪ್ರಶಸ್ತಿ

ಜೀವ ವಿಜ್ಞಾನ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ಮೂಲಭೂತ ಪರಿಕಲ್ಪನೆಗಳ ಸುತ್ತ ಸೃಜನಶೀಲ ಚಿಂತನೆ ಮತ್ತು ಸಂವಹನ ಕೌಶಲ್ಯಗಳನ್ನು ಪ್ರೇರೇಪಿಸಲೆಂದೇ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯು ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲಿದೆ. ಪ್ರತಿ ವರ್ಷವು ವಿಜ್ಞಾನದ ಒಂದು ವಿಷಯದಲ್ಲಿ ಸ್ಪರ್ಧೆ ಆಯೋಜಿಸಿ ವಿದ್ಯಾರ್ಥಿಗಳು, ಅವರಿಗೆ ಪ್ರೇರಣೆ ನೀಡುವ ಅಧ್ಯಾಪಕರು, ಸಂಸ್ಥೆಗೆ ನಗದು ರೂಪದಲ್ಲಿ ಬಹುಮಾನ ನೀಡಲಾಗುತ್ತದೆ. ಭಾರೀ ಪ್ರಮಾಣದ ಮೊತ್ತದ ಜತೆಗೆ ಪ್ರಶಸ್ತಿಗೂ ಸಾಕಷ್ಟು ಗೌರವವೂ ಇದೆ.

ಸಿಯಾ ವಿಷಯವೇನು?

12ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಿಯಾ, "ಯಮನಕಾ ಫ್ಯಾಕ್ಟರ್ಸ್" ಎಂಬ ಶೀರ್ಷಿಕೆಯ ವೀಡಿಯೊದೊಂದಿಗೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಅದರಲ್ಲೂ ವಯಸ್ಸಾದವರು ಮತ್ತೆ ಯುವತಿಯಾಗಬಲ್ಲ ಜೈವಿಕ ತಂತ್ರಜ್ಞಾನದ ಸ್ಟೆಮ್‌ ಸೆಲ್‌ ಆಧರಿತ ಸಂಶೋಧನೆಯನ್ನು ಸಿಯಾ ಅವರು ಬಳಸಿಕೊಂಡಿದ್ದರು. ಅದರಲ್ಲಿ ಯುವಕರಿಂದ ವಯಸ್ಸಾಗುವುದು ಹಾಗೂ ಆನಂತರ ವಯಸ್ಸಾದವರು ಯುವಕರಾಗಬಲ್ಲ ಸ್ಟೆಮ್‌ ತಂತ್ರಜ್ಞಾನದ ಹಲವಾರು ಅಂಶಗಳನ್ನು ಒಳಗೊಂಡಿತ್ತು. ಆ ವಿಡಿಯೋದಲ್ಲಿ ಖುದ್ದು ಯುವತಿಯಾಗಿ ಆನಂತರ ವಯಸ್ಕರಾಗಿ ಸಿಯಾ ಅವರೇ ಕಾಣಿಸಿಕೊಂಡಿರುವುದು ಗಮನಾರ್ಹ.ನೊಬೆಲ್ ವಿಜೇತ ಶಿನ್ಯಾ ಯಮನಕಾ ಅವರ ಪ್ರೇರಿತ ಪ್ಲುರಿಪೋಟೆಂಟ್ ಸ್ಟೆಮ್ ಸೆಲ್ ತಂತ್ರಜ್ಞಾನವನ್ನು ತಮ್ಮ ಈ ವಿಡಿಯೋಗೆ ಅವರು ಬಳಸಿಕೊಂಡು ತಮ್ಮದೇ ವ್ಯಾಖ್ಯಾನ ಹಾಗೂ ಜೀವ ವಿಜ್ಞಾನದ ಸಾಧ್ಯಾಸಾಧ್ಯತೆಗಳು, ಅವಕಾಶಗಳನ್ನು ಉಲ್ಲೇಖಿಸಿದ್ದರು. ವೀಡಿಯೊದಲ್ಲಿ ಕೇಂದ್ರೀಕರಿಸಲಾಗಿರುವ ಮಾಡಲಾದ ತಂತ್ರಜ್ಞಾನ ವಯಸ್ಸಿಗೆ ಸಂಬಂಧಿಸಿದ ಮತ್ತು ಕ್ಷೀಣಗೊಳ್ಳುವ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ದಾರಿಗಳನ್ನು ತೋರಿಸಿಕೊಟ್ಟಿದೆ ಎನ್ನುವ ಅಭಿಪ್ರಾಯವೂ ಸಿಯಾ ವಿಡಿಯೋಕ್ಕೆ ವ್ಯಕ್ತವಾಗಿದೆ.

ಕುಟುಂಬದ ಅನುಭವಕ್ಕೆ ತಂತ್ರಜ್ಞಾನ ರೂಪ

ಸಿಯಾಗೆ ಸ್ಪೂರ್ತಿಯಾಗಿದ್ದ ತಮ್ಮದೇ ಮನೆಯ ಅನುಭವ. ಅದೂ ತಮ್ಮ ಅಜ್ಜಿ ಕ್ಯಾನ್ಸರ್‌ನಿಂದ ಬಳಲಿದ್ದು, ಅದಕ್ಕಾಗಿ ಪಡೆದ ಚಿಕಿತ್ಸೆ ಎಲ್ಲವೂ ಕಣ್ಣ ಮುಂದೆ ಇತ್ತು. ಇದನ್ನು ತಡೆಯುವುದು ಹೇಗೆ ಎನ್ನುವುದು ಸಿಯಾಳನ್ನು ಕಾಡುತ್ತಲೇ ಇತ್ತು. ಇದಕ್ಕಾಗಿ ಶಿನ್ಯಾ ಯಮನಕಾ ಅವರು ರೂಪಿಸಿದ ಪ್ಲುರಿಪೋಟೆಂಟ್ ಸ್ಟೆಮ್ ಸೆಲ್ ತಂತ್ರಜ್ಞಾನವನ್ನು ಸಿಯಾ ಗಮನಿಸಿ ಅದನ್ನೇ ಆಧರಿಸಿ ವಿಡಿಯೋ ರೂಪಿಸಿದ್ದು.

ಇದು ನನ್ನದೇ ಕುಟುಂಬದ ಅನುಭವ ಹಾಗೂ ಈಗ ಜೀವ ವಿಜ್ಞಾನದಲ್ಲಿ ಆಗಿರುವ ನೊಬೆಲ್ ಪ್ರಶಸ್ತ ಪುರಸ್ಕೃತ ಶಿನ್ಯಾ ಯಮನಕಾ ಅವರ ತಂತ್ರಜ್ಞಾನದ ಮಿಳಿತ. ನಿಜಕ್ಕೂ ಈ ತಂತ್ರಜ್ಞಾನದ ಮೇಲೆ ಇನ್ನಷ್ಟು ಕೆಲಸ ಮಾಡಿದರೆ ಮನುಷ್ಯನ ಆಯಸ್ಸು ವೃದ್ದಿಸಬಹುದು. ಈ ಸಂಶೋಧನೆಗೆ ನನ್ನ ಇನ್ನಷ್ಟು ಕೊಡುಗೆ ಮುಂದಿನ ದಿನಗಳಲ್ಲಿ ಇರಲಿದೆ ಎನ್ನುವುದು ಸಿಯಾ ನುಡಿ.

ಬಹುಮಾನ ಹಂಚಿಕೆ

ಬ್ರೇಕ್‌ಥ್ರೂ ಪ್ರೈಜ್ ಫೌಂಡೇಶನ್‌ನ 3 ಮಿಲಿಯನ್ ಡಾಲರ್‌ ನೀಡಿದರೆ ಉಳಿದ ಮೊತ್ತವನ್ನು ಗೂಗಲ್‌, ಫೇಸ್‌ಬುಕ್‌ ಸಂಸ್ಥಾಪಕರು ನೀಡುವರು.

ಸೆಲ್ಯುಲಾರ್ ರಿಪ್ರೊಗ್ರಾಮಿಂಗ್‌ನಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಶಿನ್ಯಾ ಯಮನಕಾ ಅವರ ಆವಿಷ್ಕಾರಗಳನ್ನು ವಿವರಿಸುವ ವಿಜೇತ ವೀಡಿಯೊಗಾಗಿ ಸಿಯಾ 250,000 ಡಾಲರ್‌ ಕಾಲೇಜು ವಿದ್ಯಾರ್ಥಿವೇತನವನ್ನು ಸ್ವೀಕರಿಸುತ್ತಾರೆ ಎಂದು ಬ್ರೇಕ್‌ಥ್ರೂ ಪ್ರೈಜ್ ಫೌಂಡೇಶನ್ ಟೈಮ್ಸ್‌ ಆಫ್‌ ಇಂಡಿಯಾಕ್ಕೆ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದೆ. ಇದಲ್ಲದೇ ಸಿಯಾ ಅವರ ವಿಜ್ಞಾನ ಶಿಕ್ಷಕರಾದ ಅರ್ಕಾ ಮೌಲಿಕ್ ಅವರು ಪ್ರಶಸ್ತಿಯ 50,000 ಡಾಲರ್‌ ಪಾಲನ್ನು ಪಡೆಯುತ್ತಾರೆ. ಸಿಯಾ ಅವರ ಶಾಲೆ ನೀವ್ ಅಕಾಡೆಮಿ, ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿಯಿಂದ ವಿನ್ಯಾಸಗೊಳಿಸಿದ 100,000 ಡಾಲರ್‌ ಮೌಲ್ಯದ ಪ್ರಯೋಗಾಲಯವನ್ನು ಪಡೆಯಲಿದೆ.

2,400 ಅರ್ಜಿ ಸ್ವೀಕಾರ

ಈಗಾಗಲೇ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಗಮನ ಸೆಳದಿರುವ ಸಿಯಾಗೆ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ 2024 ರ ಬ್ರೇಕ್‌ಥ್ರೂ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ವಿಶ್ವಾದ್ಯಂತ ಈ ಪ್ರಶಸ್ತಿಗೆ 100 ದೇಶಗಳಿಂದ 2,400 ಯುವಕ ಯುವತಿಯರು ಅರ್ಜಿ ಸಲ್ಲಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ