Bangalore Belagavi Train:ಬೆಂಗಳೂರು- ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವೇಗ ಹೆಚ್ಚಳ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸಂಚಾಯ ಸಮಯ
Jan 06, 2024 07:00 AM IST
ಬೆಂಗಳೂರು ಬೆಳಗಾವಿ ನಡುವಿನ ಸೂಪರ್ ಫಾಸ್ಟ್ ರೈಲಿನ ವೇಗ ಹೆಚ್ಚಳ ಹಾಗೂ ಸಂಚಾರ ಸಮಯದಲ್ಲಿ ಬದಲಾವಣೆ ಆಗಲಿದೆ.
- Bangalore Belagavi super fast train ಬೆಂಗಳೂರಿನಿಂದ ಬೆಳಗಾವಿ ತಲುಪಲಿರುವ ಸೂಪರ್ ಫಾಸ್ಟ್ ರೈಲಿನ ವೇಗದ ಮಿತಿಯನ್ನು ಹೆಚ್ಚಿಸಲಾಗುತ್ತಿದ್ದು, ಇದರಿಂದ ಬೇಗನೇ ಬೆಳಗಾವಿ ತಲುಪಲು ಸಹಕಾರಿಯಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಬೆಂಗಳೂರು: ಬೆಂಗಳೂರಿನಿಂದ ಬೆಳಗಾವಿಗೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ(ಗಾಡಿ ಸಂಖ್ಯೆ 20653) ಪ್ರಯಾಣ ಮಾಡುವವರಿಗೆ ಇದು ಸಂತಸದ ಸುದ್ದಿ. ಏಕೆಂದರೆ ಬೆಂಗಳೂರು- ಬೆಳಗಾವಿ ಸೂಪರ್‌ಫಾಸ್ಟ್ ರೈಲಿನ ವೇಗ ಇನ್ನಷ್ಟು ಹೆಚ್ಚಲಿದೆ. ಇದರಿಂದ ಬೆಳಗಾವಿಗೆ ಬೇಗನೇ ತಲುಪುವ ಮೂಲಕ ಪ್ರಯಾಣಿಕರು ಹೆಚ್ಚು ಕಾಲ ರೈಲಿನಲ್ಲಿಯೇ ಇರುವುದು ತಪ್ಪಲಿದೆ. ಸಮಯವೂ ಉಳಿತಾಯವಾಗಲಿದೆ. ಬೆಂಗಳೂರಿನಿಂದ ಹೊರಡುವವರು ಹುಬ್ಬಳ್ಳಿ, ಧಾರವಾಡಕ್ಕೂ 50 ನಿಮಿಷ ಬೇಗ ತಲುಪಬಹುದು. ಈ ಹೊಸ ಪ್ರಯಾಣ 2024ರ ಮಾರ್ಚ್ 21ರಿಂದ ಆರಂಭವಾಗಲಿದೆ. ಇದನ್ನು ನೈರುತ್ಯ ರೈಲ್ವೆ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು- ಬೆಳಗಾವಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಈ ರೈಲು ಬೆಳಗಾವಿಯನ್ನು ಬೆಳಿಗ್ಗೆ 07:35ಕ್ಕೆ ತಲುಪುತ್ತಿತ್ತು. ಹೊಸ ಸಮಯದ ಪ್ರಕಾರ ಬೆಳಿಗ್ಗೆ 06:45ಕ್ಕೆ ತಲುಪಲಿದೆ. ಹುಬ್ಬಳ್ಳಿಯನ್ನು ಬೆಳಗ್ಗೆ 04:30ಕ್ಕೆ ತಲುಪುತ್ತಿತ್ತು. ಬದಲಾವಣೆ ಸಮಯದಂತೆ ಬೆಳಿಗ್ಗೆ3:45ಕ್ಕೆ ತಲುಪಲಿದೆ. ಅದೇ ರೀತಿ ಧಾರವಾಡವನ್ನು ಬೆಳಿಗ್ಗೆ 04:50ಕ್ಕೆ ತಲುಪುತ್ತಿತ್ತು. ಹೊಸ ಸಮಯದಂತೆ ಇನ್ನು ಮುಂದೆ ಬೆಳಗ್ಗೆ 04:07ಕ್ಕೆ ಧಾರವಾಡ ತಲುಪಲಿದೆ.
ಇದರಲ್ಲಿ ಸಂಚಾರದ ಸಮಯದಲ್ಲೂ ಬದಲಾವಣೆಯೂ ಆಗಲಿದೆ. ಬೆಂಗಳೂರಿನಿಂದ ಬೆಳಗಾವಿ ನಡುವಿನ ದೂರದ ಲೆಕ್ಕ 610 ಕಿ.ಮಿ. ಈ ಅವಧಿಯನ್ನು ತಲುಪಲು ಇದೇ ರೈಲು ಈಗ 10 ಗಂಟೆ 35 ನಿಮಿಷ ತೆಗೆದುಕೊಳ್ಳುತ್ತಿದೆ. ಈಗಿರುವ ಸಮಯದ ಹೊಂದಾಣಿಕೆ ಹಾಗೂ ವೇಗದ ಮಿತಿಯೂ ಇದಕ್ಕೆ ಕಾರಣ. ಹೊಸದಾಗಿ ಸಮಯ ಬದಲಾವಣೆ ಹಾಗೂ ವೇಗ ಹೆಚ್ಚಳದಿಂದ ಇದು 9 ಗಂಟೆ 45ಕ್ಕೆ ಕಡಿತಗೊಳ್ಳಲಿದೆ. ಬೆಳಿಗ್ಗೆ ಬೇಗನೇ ಬೆಳಗಾವಿಗೆ ತಲುಪುವವರಿಗೆ ಕಚೇರಿಗೆ ತೆರಳಲು ಇಲ್ಲವೇ ಅಕ್ಕಪಕ್ಕದ ಊರಿನವರೂ ಬೇಗನೇ ಊರು ತಲುಪಲು ಸಹಕಾರಿಯಾಗಲಿದೆ.
ಬೆಂಗಳೂರು- ಬೆಳಗಾವಿ ನಡುವೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ
ಹೊಸ ವೇಳಾ ಪಟ್ಟಿ ಹೀಗಿರಲಿದೆ
- ಬೆಂಗಳೂರಿಂದ ರಾತ್ರಿ 09ಕ್ಕೆ ರೈಲು ಹೊರಡಲಿದೆ
- ಯಶವಂತಪುರಕ್ಕೆ ರಾತ್ರಿ 09:12ಕ್ಕೆ ಆಗಮನ
- ತುಮಕೂರಿಗೆ ರಾತ್ರಿ 9:53ಕ್ಕೆ ಆಗಮನ
- ಅರಸಿಕೆರೆಗೆ ರಾತ್ರಿ 11:10ಕ್ಕೆ ಆಗಮನ
- ದಾವಣಗೆರೆ ರಾತ್ರಿ 01:10ಕ್ಕೆ ಆಗಮನ
- ಹುಬ್ಬಳ್ಳಿಗೆ ಬೆಳಗಿನ ಜಾವ 3:45ಕ್ಕೆ ಆಗಮನ
- ಧಾರವಾಡಕ್ಕೆ ಬೆಳಗಿನ ಜಾವ 04:07ಕ್ಕೆ ಆಗಮನ
- ಬೆಳಗಾವಿಗೆ ಬೆಳಗ್ಗೆ 06:45ಕ್ಕೆ ಆಗಮನ