logo
ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah Case: ಕಿಕ್‌ ಬ್ಯಾಕ್‌ ಪ್ರಕರಣ ಕೈ ಬಿಡಲು ನ್ಯಾಯಾಲಯ ನಿರಾಕರಣೆ; ಸಿದ್ದರಾಮಯ್ಯಗೆ ಸಂಕಷ್ಟ, ತನಿಖೆಗೆ ಆದೇಶ

Siddaramaiah Case: ಕಿಕ್‌ ಬ್ಯಾಕ್‌ ಪ್ರಕರಣ ಕೈ ಬಿಡಲು ನ್ಯಾಯಾಲಯ ನಿರಾಕರಣೆ; ಸಿದ್ದರಾಮಯ್ಯಗೆ ಸಂಕಷ್ಟ, ತನಿಖೆಗೆ ಆದೇಶ

Umesha Bhatta P H HT Kannada

Feb 22, 2024 11:09 PM IST

google News

ಸಿಎಂ ಸಿದ್ದರಾಮಯ್ಯ ವಿರುದ್ದದ ಪ್ರಕರಣ ಕೈಬಿಡಲು ನ್ಯಾಯಾಲಯ ನಿರಾಕರಿಸಿದೆ.

    • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂಬತ್ತು ವರ್ಷದ ಹಿಂದೆ ಕಿಕ್‌ಬ್ಯಾಕ್‌ ಪಡೆದಿದ್ದರು ಎನ್ನುವ ಪ್ರಕರಣವನ್ನು ಕೈಬಿಡಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದ್ದು, ಮರು ತನಿಖೆಗೆ ಆದೇಶಿಸಿದೆ.
ಸಿಎಂ ಸಿದ್ದರಾಮಯ್ಯ ವಿರುದ್ದದ ಪ್ರಕರಣ ಕೈಬಿಡಲು ನ್ಯಾಯಾಲಯ ನಿರಾಕರಿಸಿದೆ.
ಸಿಎಂ ಸಿದ್ದರಾಮಯ್ಯ ವಿರುದ್ದದ ಪ್ರಕರಣ ಕೈಬಿಡಲು ನ್ಯಾಯಾಲಯ ನಿರಾಕರಿಸಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಯಮಿಯೊಬ್ಬರಿಂದ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎನ್ನುವ ದೂರಿನ ಪ್ರಕರಣದ ವಿಚಾರಣೆ ನಡೆಸಲು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಆದೇಶ ನೀಡಿದೆ. ಲೋಕಾಯುಕ್ತದಲ್ಲಿ ದಾಖಲಾಗಿದ್ದ ಅರ್ಜಿ ವಜಾ ಮಾಡಬೇಕು ಎಂಬ ಸಿಎಂ ಸಿದ್ದರಾಮಯ್ಯ ಅವರ ಪರ ವಕೀಲರ ಬೇಡಿಕೆಯನ್ನು ತಿರಸ್ಕರಿಸಿದೆ. ಈಗಾಗಲೇ ಈ ಪ್ರಕರಣದಲ್ಲಿ ಹುರುಳಿಲ್ಲ ಎಂದು ಲೋಕಾಯುಕ್ತವೇ ಪ್ರಕರಣವನ್ನು ವಿಲೇವಾರಿ ಮಾಡಿದೆ. ನ್ಯಾಯಾಲಯದಲ್ಲಿರುವ ಪ್ರಕರಣ ವಿಲೇ ಮಾಡಬೇಕು ಎನ್ನುವ ಬೇಡಿಕೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮನ್ನಣೆ ನೀಡಿಲ್ಲ. ಇದರಿಂದ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಉದ್ಯಮಿ ಎಲ್‌.ವಿವೇಕಾನಂದ ಎಂಬುವವರಿಂದ ಸಿದ್ದರಾಮಯ್ಯ ಅವರು 2015ರಲ್ಲಿ 1.30 ಕೋಟಿ ರೂ. ಪಡೆದುಕೊಂಡಿದ್ದರು. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಅವರು ವಿವೇಕಾನಂದ ಅವರನ್ನು ಬೆಂಗಳೂರು ಟರ್ಫ್‌ ಕ್ಲಬ್‌ನ ಸ್ಟಿವರ್ಡ್‌ ಅನ್ನಾಗಿ ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲು ಸಹಕರಿಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಬಿಜೆಪಿ ಮುಖಂಡ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎನ್‌.ಆರ್.ರಮೇಶ್‌ ಅವರು ಈ ಕುರಿತು ದಾಖಲೆ ಬಿಡುಗಡೆ ಮಾಡಿ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ ಸಾಲದ ರೂಪದಲ್ಲಿ 1.30 ಕೋಟಿ ರೂ. ಪಡೆದಿದ್ದು, ಅದು ಚೆಕ್‌ನ ರೂಪದಲ್ಲಿದೆ. ಇದನ್ನು ಮೈಸೂರಿನಲ್ಲಿ ಸೈಟ್‌ ಖರೀದಿಸಲು ಬಳಸಿಕೊಂಡಿದ್ದೇನೆ. ಅದನ್ನು ಬಿಟ್ಟು ಕಿಕ್‌ ಬ್ಯಾಕ್‌ ಪಡೆದಿದ್ದೇನೆ ಎನ್ನುವುದಲ್ಲಿ ಹುರುಳಿಲ್ಲ ಎಂದು ಹೇಳಿದ್ದರು.

ಈ ಕುರಿತು ಎನ್‌.ಆರ್‌.ರಮೇಶ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮೊಕದ್ದಮೆ ದಾಖಲಿಸಿಕೊಂಡಿದ್ದ ಲೋಕಾಯುಕ್ತ ತನಿಖೆ ನಡೆಸಿತ್ತು, ಈ ಪ್ರಕರಣದಲ್ಲಿ ಆರೋಪಗಳಿಗೆ ಪೂರಕ ದಾಖಲೆಗಳಿಲ್ಲ ಎಂದು ಪ್ರಕರಣ ವಜಾಗೊಳಿಸಲಾಗಿತ್ತು.

ಇದನ್ನು ಪ್ರಶ್ನಿಸಿ ರಮೇಶ್‌ ಅವರು ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಸಿದ್ದರಾಮಯ್ಯ ಅವರ ವಿರುದ್ದದ ಆರೋಪಗಳು, ಲೋಕಾಯುಕ್ತಕ್ಕೆ ನೀಡಿದ್ದ ದೂರು ಸೇರಿದಂತೆ ಎಲ್ಲಾ ಮಾಹಿತಿಗಳನ್ನು ನ್ಯಾಯಾಲಯಕ್ಕೆ 2022 ರಲ್ಲಿ ಸಲ್ಲಿಸಿದ್ದರು. ನ್ಯಾಯಾಲಯವೂ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಇಡೀ ಪ್ರಕರಣದಲ್ಲಿ ಸಾಕ್ಷಿಗಳಿಲ್ಲದ್ದರಿಂದಲೇ ಲೋಕಾಯುಕ್ತ ಪ್ರಕರಣ ಅಂತಿಮಗೊಳಿಸಿದೆ. ನ್ಯಾಯಾಲಯವೂ ಪ್ರಕರಣದ ವಿಚಾರಣೆ ಕೈ ಬಿಡಬೇಕು ಎಂದು ಕೋರಿದ್ದರು.

ಆದರೆ ನ್ಯಾಯಾಲಯವು ಸಿದ್ದರಾಮಯ್ಯ ಅವರ ವಿರುದ್ದದ ಪ್ರಕರಣದ ವಿಚಾರಣೆ ರದ್ದು ಮಾಡುವುದನ್ನು ತಿರಸ್ಕರಿಸಿದ್ದೂ ಅಲ್ಲದೇ ಈ ಪ್ರಕರಣದ ತನಿಖೆ ನಡೆಸಿ ಆರು ತಿಂಗಳ ಒಳಗೆ ವರದಿ ನೀಡಬೇಕು. ಲೋಕಾಯುಕ್ತ ಪೊಲೀಸರು ಪ್ರಕರಣದಲ್ಲಿ ದಾಖಲಿಸಲಾದ ಹೇಳಿಕೆಗಳನ್ನು ಮರುಪರಿಶೀಲಿಸಬೇಕು ಎಂದು ಸೂಚನೆ ನೀಡಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ