Bangalore Real Estate: ಆಸ್ತಿ ಖರೀದಿಗೆ ಅನಿವಾಸಿ ಭಾರತೀಯರಿಗೂ ಬೆಂಗಳೂರೇ ಅಚ್ಚುಮೆಚ್ಚು; ಬಂಡವಾಳ ರಿಟರ್ನ್ಸ್ ಸುಲಭ ಎನ್ನುತ್ತವೆ ಸಮೀಕ್ಷೆ
Jul 17, 2024 09:07 AM IST
ಬೆಂಗಳೂರು ಆಸ್ತಿ ಖರೀದಿ, ಹೂಡಿಕೆಗೆ ಉತ್ತಮ ನಗರವಾಗಿ ರೂಪುಗೊಂಡಿದೆ ಎನ್ನುತ್ತವೆ ಸಮೀಕ್ಷೆಗಳು.
- Bangalore News ಬೆಂಗಳೂರು ನಗರ ಹಲವು ಉಪಮೇಯಗಳಿಂದ ಗುರುತಿಸಿಕೊಂಡಿದೆ. ಆಸ್ತಿ ಖರೀದಿಗೂ ಬೆಸ್ಟ್ ನಗರ ಎನ್ನುತ್ತಿವೆ ಸಮೀಕ್ಷೆಗಳು.
- ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರಿನ ಮೇಲೆ ಭಾರತೀಯರಿಗೆ ಮಾತ್ರ ಮೋಹವಿಲ್ಲ, ಅನಿವಾಸಿ ಭಾರತೀಯರಿಗೂ ಬೆಂಗಳೂರು ಅಚ್ಚುಮೆಚ್ಚು. ದೇಶದ ಯಾವುದೇ ರಾಜ್ಯದ ಪ್ರಜೆಯಾಗಿದ್ದರೂ ಐಟಿ ರಾಜಧಾನಿಯಲ್ಲಿ ಆಸ್ತಿಯೊಂದು ಇರಬೇಕು ಎಂದು ಬಯಸುವ ಅನಿವಾಸಿ ಭಾರತೀಯೇ ಹೆಚ್ಚು. ಅಷ್ಟರ ಮಟ್ಟಿಗೆ ಬೆಂಗಳೂರು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ.ಬೆಂಗಳೂರಿನಲ್ಲಿ ಆಸ್ತಿ ಖರೀದಿಸುವ ಅನಿವಾಸಿ ಭಾರತೀಯರಲ್ಲಿ (ಎನ್ ಆರ್ ಐ) ಶೇ.60ರಷ್ಟು ಮಂದಿ ಹೂಡಿಕೆ ಉದ್ಧೇಶಕ್ಕಾಗಿ ಬಂಡವಾಳ ಹೂಡಿದರೆ ಶೇ.40ರಷ್ಟು ಮಂದಿ ಸ್ವಂತ ಬಳಕೆಗೆ ಹೂಡಿಕೆ ಮಾಡುತ್ತಾರೆ. ಅದರಲ್ಲೂ ಹೆಚ್ಚಿನ ಬಾಡಿಗೆ ತರುವ ಐಟಿ ಹಬ್ ಗಳ ಸಮೀಪದಲ್ಲೇ ಆಸ್ತಿ ಖರೀದಿಸಲು ಬಯಸುತ್ತಾರೆ.
ದೇಶದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಎನ್ ಆರ ಐಗಳಿಗೂ ಆಸಕ್ತಿ ಇರುವುದನ್ನು ಇದು ತೋರಿಸುತ್ತದೆ. ಅದರಲ್ಲೂ ವಾಸದ ಮನೆಗಳನ್ನು ಖರೀದಿ ಮಾಡುವವರ ಮೊದಲ ಆಯ್ಕೆ ಬೆಂಗಳೂರು. ಉದ್ಯಾನ ನಗರಿಯ ತಂಪಾದ ವಾತಾವರಣ, ಕಾಸ್ಮೋಪಾಲಿಟಿನ್ ಸಂಸ್ಕೃತಿ ಮತ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಆಸ್ತಿ ಬೆಲೆ ಬೆಂಗಳೂರಿನಲ್ಲಿ ಆಸ್ತಿ ಖರೀದಿಸಲು ಪ್ರಮುಖ ಕಾರಣಗಳಾಗಿವೆ.
ಕುಷ್ಮ್ ಮತ್ತು ವೇಕ್ ಫೀಲ್ಡ್ ಮತ್ತು ಪ್ರಾಪ್ ಟೆಕ್ ಯೂನಿಕಾರ್ನ್ ನೋ ಬ್ರೋಕರ್ ಸಮೀಕ್ಷೆಯ ಪ್ರಕಾರ ಶೇ.65-70ರಷ್ಟು ಎನ್ ಆರ್ ಐ ಗಳು ಹೂಡಿಕೆ ಉದ್ಧೇಶದಿಂದ ಮತ್ತು ಶೇ.35-40 ರಷ್ಟು ಎನ್ ಆರ್ ಐ ಗಳು ಸ್ವಂತ ಬಳಕೆಗೆ ಬೆಂಗಳೂರಿನಲ್ಲಿ ಆಸಿ ಖರೀದಿ ಮಾಡುತ್ತಾರೆ ಎಂದು ತಿಳಿಸಿವೆ.
ಎನ್ ಆರ್ ಐಗಳು ವಾಸಕ್ಕೆ ಯೋಗ್ಯವಾದ ಯಾವುದೇ ರೀತಿಯ ಸ್ವತಂತ್ರ ಮನೆ, ವಿಲ್ಲಾ, ಅಪಾರ್ಟ್ ಮೆಂಟ್ ಖರೀದಿಗೆ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ಕ್ವೇರ್ ಯಾರ್ಡ್ಸ್ .ಕಾಮ್ ಮುಖ್ಯಸ್ಥರೊಬ್ಬರು ಹೇಳುತ್ತಾರೆ.
ಹಾಗಾದರೆ ಯಾವ ರಿಯಲ್ ಎಸ್ಟೇಟ್ ಕಂಪನಿಯ ಆಸ್ತಿ ಖರೀದಿಗೆ ಎನ್ ಆರ್ ಐ ಗಳು ಬಯಸುತ್ತಾರೆ ಎಂಬ ಪ್ರಶ್ನೆಗೂ ಸಮೀಕ್ಷೆಗಳಿಂದ ಉತ್ತರ ದೊರಕಿದೆ. ಕಾನ್ ಕರ್ಡ್ ,ಬ್ರಿಗೇಡ್ ಕಂಪನಿಗಳ ಆಸ್ತಿ ಖರೀದಿಗೆ ಅಮೆರಿಕಾ, ಅರೇಬಿಯಾ ಮತ್ತು ಸಿಂಗಾಪುರ ದೇಶಗಳ ಎನ್ ಆರ್ ಐ ಗಳು ಬಯಸುತ್ತಾರೆ.
ಬ್ರಿಗೇಡ್ ಗ್ರೂಪ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಶೇ.10ರಷ್ಟು ಆಸ್ತಿಗಳನ್ನು ಎನ್ ಆರ್ ಗಳು ಖರೀದಿಸುತ್ತಾರೆ ಎನ್ನುತ್ತಾರೆ. ರಿಯಲ್ ಎಸ್ಟೇಟ್‌ಕಂಪನಿಗಳು ಎನ್ ಆರ್ ಐ ಗಳನ್ನು ಉದ್ದೇಶದಲ್ಲಿಟ್ಟುಕೊಂಡೇ ವಿದೇಶಗಳಲ್ಲಿ ಪ್ರಚಾರ ಮಾಡುತ್ತವೆ.
ಬಹುತೇಕ ಎನ್ ಆರ್ ಐಗಳು ಬಾಡಿಗೆ ಬರುತ್ತದೆ ಎಂಬ ಕಾರಣಕ್ಕೆ ಐಟಿ ಕಂಪನಿಗಳು ನೆಲೆಯೂರಿರುವ ಹತ್ತಿರ ಆಸ್ತಿ ಖರೀದಿಗೆ ಬಯಸುತ್ತಾರೆ. ವೈಟ್ ಫೀಲ್ಡ್, ಸರ್ಜಾಪುರಥಣಿಸಂದ್ರ ಮತ್ತು ಕನಕಪುರ ರಸ್ತೆಯಲ್ಲಿ ಆಸ್ತಿ ಖರೀದಿಗೆ ಬೇಡಿಕೆ ಹೆಚ್ಚಿದೆ. ಈ ಪ್ರದೇಶಗಳಲ್ಲಿ ಪ್ರತಿ ಚ.ಅಡಿಗೆ 12-15,000 ರೂವರೆಗೆ ಬೆಲೆ ಇದೆ. ಹೆಬ್ಬಾಳ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿ ರಸ್ತೆಯಲ್ಲೂ ಬೇಡಿಕೆ ಹೆಚ್ಚಾಗಿದೆ.
ಎಲ್ಲ ಎನ್ ಆರ್ ಐಗಳೂ ಐಷಾರಾಮಿ ಆಸ್ತಿಗಳನ್ನೇ ಖರೀದಿ ಮಾಡುತ್ತಾರೆ ಎಂಬ ಭಾವನೆ ನಿಜ ಅಲ್ಲ. ಬಹುತೇಕ ಅಂದರೆ ಶೇ.69ರಷ್ಟು ಎನ್ ಆರ್ ಐಗಳು ಮಧ್ಯಮ ವರ್ಗದ ಆಸ್ತಿಗಳನ್ನು ಖರೀದಿ ಮಾಡಲು ಬಯಸುತ್ತಾರೆ. ಅಂದರೆ 1 ಕೋಟಿ ರೂ. ಆಸ್ತಿಯಿಂದ 2 ಕೋಟಿ ರೂ.ವರೆಗಿನ ಆಸ್ತಿ ಖರೀದಿಗೆ ಒಲವು ತೋರಿಸುತ್ತಾರೆ. ವಿದೇಶಗಳಲ್ಲಿ ಕೆಲಸ ಮಾಡುವ ಇವರು ವಿಶೇಷವಾಗಿ 2 ಅಥವಾ 3 ಬಿಎಚ್ ಕೆ ಮನೆಗಳನ್ನು ಕೊಳ್ಳಲು ಬಯಸುತ್ತಾರೆ. ಬಂಡವಾಳ ಹೂಡಿಕೆಗೆ ಇದು ಸುಲಭ ಮತ್ತು ಬಾಡಿಗೆಯೂ ಲಭ್ಯ ಎನ್ನುವುದು ಇವರ ಭಾವನೆಯಾಗಿದೆ. ಆದರೆ ಬೆಂಗಳೂರಿನ ಮೂಲಭೂತ ಸೌಕರ್ಯಗಳ ಕೊರತೆ ಮತು ಟ್ರಾಫಿಕ್ ಸಮಸ್ಯೆ ಒಮೊಮ್ಮೆ ಇವರನ್ನು ಯೋಚಿಸುವಂತೆ ಮಾಡುತ್ತವೆ.
ಉತ್ತರ ಭಾರತದಲ್ಲೂ ಬೇಡಿಕೆ ಕುಸಿದಿಲ್ಲ. ಎನ್ ಆರ್ ಐ ಗಳು ಗುರ್ ಗಾಂವ್ ನಲ್ಲಿ ಡಿಎಲ್ ಎಫ್ ರಿಯಲ್ ಎಸ್ಟೇಟ್ ಸಂಸ್ಥೆಯ ಶೇ.14ರಷ್ಟು ಅಂದರೆ ಸುಮಾರು 2000 ಕೋಟಿ ರೂ.ಗಳಷ್ಟು ವ್ಯವಹಾರ ನಡೆದಿದೆ ಎಂದು ತಿಳಿದು ಬಂದಿದೆ. ಅಮೆರಿಕಾ, ಇಂಗ್ಲೆಂಡ್ ಮತ್ತು ಸಿಂಗಾಪುರದ ಎನ್ ಆರ್ ಐಗಳು ಬಂಡವಾಳ ಹೂಡಿಕೆ ಮಾಡಿದ್ದಾರೆ. ನಾರ್ತ್, ಸೌತ್, ಈಸ್ಟ್ ಮತ್ತು ವೆಸ್ಟ್ ಯಾವುದೇ ಆದರೂ ಎನ್ ಆರ್ ಐಗಳಿಗೆ ಬೆಂಗಳೂರೇ ಬೆಸ್ಟ್.
(ವರದಿ: ಎಚ್.ಮಾರುತಿ, ಬೆಂಗಳೂರು )