Bangalore Mysore Highway Toll: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ಜಾರಿ; ಇಂತಹ ಟೋಲ್ ಸಂಗ್ರಹದ ಲಾಭ ಏನು
Jul 25, 2024 11:39 PM IST
ಬೆಂಗಳೂರು ಮೈಸೂರು ಹೆದ್ದಾರಿ ಟೋಲ್ ಸಂಗ್ರಹ ಇನ್ನು ಸೆಟಲೈಟ್ ಆಧರಿತವಾಗಿ ಇರಲಿದೆ.
- Highway Toll ಬೆಂಗಳೂರು ಹಾಗೂ ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇ ಟೋ ಸಂಗ್ರಹ ಇನ್ನು ಮುಂದೆ ಸೆಟಲೈಟ್ ಆಧರಿತವಾಗಿ ಇರಲಿದೆ.
- ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಟೋಲ್ ಪ್ಲಾಜಾಗಳಿಗೆ ಬದಲಾಗಿ ಪ್ರಾಯೋಗಿಕವಾಗಿ ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಈ ಹೆದ್ದಾರಿಯಲ್ಲಿ ಗ್ಲೋಬಲ್ ನೇವಿಗೇಷನ್ ಸೆಟಲೈಟ್ ಸಿಸ್ಟಂ (ಜಿ ಎನ್ ಎನ್ ಎಸ್) ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇಟಿಸಿ) ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆತಿಳಿಸಿದ್ದಾರೆ.ಉಪಗ್ರಹ ಆಧಾರಿತ ವ್ಯವಸ್ಥೆಯ ದಕ್ಷತೆಯನ್ನು ತಿಳಿದುಕೊಳ್ಳಲು ಪ್ರಾಯೋಗಿಕವಾಗಿ ಈ ಹೆದ್ದಾರಿಯಲ್ಲಿ ಜಾರಿಗೊಳಿಸಲಾಗಿದೆ. ತೃಪ್ತಿಕರ ಎಂದು ಕಂಡು ಬಂದರೆ ದೇಶಾದ್ಯಂತ ಸಂಪೂರ್ಣವಾಗಿ ಉಪಗ್ರಹ ಆಧಾರಿತ ವ್ಯವಸ್ಥ ಜಾರಿಗೆ ಬರಲಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯ ಜತೆಗೆ ಹರಿಯಾಣದ ಪಾಣಿಪತ್- ಹಿಸಾರ್ ರಾಷ್ಟ್ರೀಯ ಹೆದ್ದಾರಿ 709 ರಲ್ಲಿಯೂ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಇಡೀ ದೇಶದಲ್ಲಿ ಜಿ ಎನ್ ಎಸ್ ಎಸ್ ವ್ಯವಸ್ಥೆಗೆ ಈ ಎರಡು ಹೆದ್ದಾರಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನೇ ಬಳಸಿಕೊಡು ಜಿಎನ್ ಎಸ್ ಎಸ್ -ಇಟಿಸಿ ವ್ಯವಸ್ಥೆ ಜಾರಿಗೆ ಬರಲಿದೆ. ಸ್ವಲ್ಪ ದಿನಗಳ ಕಾಲ ಈ ವ್ಯವಸ್ಥೆ ಜಾರಿಯಲ್ಲಿರಲಿದ್ದು ನಂತರ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವರ್ಷ ಮಾರ್ಚ್ 12 ರಂದು ಬೆಂಗಳೂರು- ಮೈಸೂರು ಹೆದ್ದಾರಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ಬೆಂಗಳೂರಿನಿಂದ ಮೈಸೂರಿಗೆ 119 ಕಿಮೀ ದೂರವಿದ್ದು, ಈ ಹೆದ್ದಾರಿಯಲ್ಲಿ 6-10 ಲೈನ್ ಮಾರ್ಗವಿದೆ. ಈ ಹಿಂದೆ ಒಂದು ನಗರದಿಂದ ಮತ್ತೊಂದು ನಗರ ತಲುಪಲು 3 ಗಂಟೆ ಬೇಕಾಗುತ್ತಿತ್ತು. ಈಗ 75 ನಿಮಿಷಗಳಲ್ಲಿ ತಲುಪಬಹುದಾಗಿದೆ. ಈ ಹೆದ್ದಾರಿಗೆ ಸರ್ಕಾರ 8,480 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. 2019ರ ಮೇ ತಿಂಗಳಲ್ಲಿ ಕಾಮಗಾರಿ ಆರಂಭವಾಗಿತ್ತು.ಈ ಹೆದ್ದಾರಿಯಲ್ಲಿ 19 ಉದ್ದನೆಯ ಸೇತುವೆಗಳು, 44 ಸಣ್ಣ ಸೇತುವೆಗಳು, ನಾಲ್ಕು ರೈಲ್ವೆ ಮೇಲ್ಸೇತುವೆಗಳು ಮತ್ತು 50 ಅಂಡ್ ಪಾಸ್ ಗಳಿವೆ.
ಉಪಗ್ರಹ ಧಾರಿತ ಟೋಲ್ ವ್ಯವಸ್ಥೆಯ ಪ್ರಯೋಜನಗಳು
ಈ ವ್ಯವಸ್ಥೆಯಲ್ಲಿ ಚಾಲಕರು ತಾವು ಎಷ್ಟು ದೂರ ಕ್ರಮಿಸಬೇಕೋ ಅಷ್ಟು ದೂರಕ್ಕೆ ಮಾತ್ರ ಶುಲ್ಕ ಪಾವತಿ ಮಾಡಲಿದ್ದಾರೆ. ವಾಹನಗಳ ಕ್ರಮಿಸಿದ ದೂರವನ್ನು ನಿಖರವಾಗಿ ಪತ್ತೆ ಹಚ್ಚಲು ಉಪಗ್ರಹಗಳ ನೆರವನ್ನು ಪಡೆಯಲಾಗುತ್ತದೆ. ಫಾಸ್ಟ್ ಟ್ಯಾಗ್ ವ್ಯವಸ್ಥೆಯಲ್ಲಿ ಎಷ್ಟೇ ಕಡಿಮೆ ದೂರ ಕ್ರಮಿಸಿದರೂ ಪೂರ್ಣ ಮಾರ್ಗಕ್ಕೆ ಟೋಲ್ ಪಾವತಿ ಮಾಡಬೇಕಿತ್ತು.
ಇದರಿಂದ ವಾಹನ ಚಾಲಕರಿಗೆ ನಷ್ಟ ಉಂಟಾಗುತ್ತಿತ್ತು. ಈಗ ಆ ಪ್ರಮೇಯವೇ ಇರುವದಿಲ್ಲ. ಅಲ್ಲದೆ ಯಾವುದೇ ವಾಹನ ಟೋಲ್ ಪ್ಲಾಜಾಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಸಮಯವನ್ನು ವ್ಯರ್ಥ ಮಾಡಿಕೊಳ್ಳುವ ಸಂಭವ ಉದ್ಭವಿಸುವುದಿಲ್ಲ. ಸರ್ಕಾರಕ್ಕೂ ನಿಖರ ಆದಾಯ ಲಭಿಸಲಿದೆ.
ಹೆದ್ದಾರಿ ಕಾಮಗಾರಿಗಳ ವಿಳಂಬಕ್ಕೆ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಲಭ್ಯವಾಗುವುದು ವಿಳಂಬವಾಗುತ್ತಿದೆ. ಅತಿಕ್ರಮಣ ತೆರವು ಪ್ರಮುಖ ಕಾರಣವಾಗಿದೆ. ಗುತ್ತಿಗೆದಾರರು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆ, ಪ್ರವಾಹ ಮತ್ತು ಭೂ ಕುಸಿದಂತಹ ಪ್ರಕೃತಿ ವಿಕೋಪಗಳಿಂದಲೂ ವಿಳಂಬವಾಗುತ್ತಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
2014ರಿಂದ ಇದುವರೆಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಯೋಜನೆಗಳನ್ನು ಪೂರ್ಣಗೊಳಿಸಲು 3.77 ಲಕ್ಷ ಕೋಟಿ ರೂ.ಗಳ ಸಾಲ ಪಡೆದಿದೆ ಎಂದೂ ಮಾಹಿತಿ ನೀಡಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)
ವಿಭಾಗ