Bangalore PG Murder: ಬೆಂಗಳೂರು ಪಿಜಿಯಲ್ಲಿ ಯುವತಿ ಕೊಲೆ, ಭೋಪಾಲ್ ನಲ್ಲಿ ಆರೋಪಿ ಬಂಧನ; ಪ್ರಿಯತಮೆ ಸ್ನೇಹಿತೆ ಹತ್ಯೆ ಮಾಡಲು ಕಾರಣವಿದು
Jul 28, 2024 09:41 AM IST
ಬೆಂಗಳೂರಿನ ಪಿಜಿಯಲ್ಲಿ ನಡೆದ ಯುವತಿ ಕೊಲೆ ಪ್ರಕರಣದ ಆರೋಪಿ ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಪಿಜಿಯಲ್ಲಿ ನಡೆದಿದ್ದ ಭೀಕರ ಕೊಲೆಯನ್ನು ಪೊಲೀಸರು ಬೇಧಿಸಿದ್ದು, ಕೊಲೆಯಾದ ಯುವತಿ ಪ್ರಿಯಕರನ್ನು ಪೊಲೀಸರು ಬಂಧಿಸಿದ್ದಾರೆ.
(ವರದಿ: ಎಚ್.ಮಾರುತಿ. ಬೆಂಗಳೂರು)
ಬೆಂಗಳೂರು: ಕೋರಮಂಗಲದ ವೆಂಕಟರೆಡ್ಡಿ ಲೇ ಔಟ್ ನ ಭಾರ್ಗವಿ ಸ್ಟೇಯಿಂಗ್ ಹೋಮ್ಸ್ ನಲ್ಲಿ ವಾಸವಾಗಿದ್ದ ಕೃತಿ ಕುಮಾರಿ ಅವರನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಅಭಿಷೇಕ್ ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕೃತಿ ಬಿಹಾರ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬೆಂಗಳೂರಿಗೆ ಕರೆ ತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಿರುದ್ಯೋಗಿಯಾಗಿದ್ದ ಅಭಿಷೇಕ್ ನನ್ನು ಪ್ರೀತಿಸದಂತೆ ಕೃತಿ ತನ್ನ ಆಂಧ್ರಪ್ರದೇಶ ಮೂಲದ ಸ್ನೇಹಿತೆಗೆ ಬುದ್ಧಿ ಹೇಳಿದ್ದರು. ಜೊತೆಗೆ ಆಕೆಯನ್ನೂ ಕರೆದುಕೊಂಡು ಹೊಸ ಪಿಜಿಗೆ ವಸತಿಯನ್ನು ಬದಲಾಯಿಸಿದ್ದರು. ಇದು ಅಭಿಷೇಕ್ ಗೆ ನುಂಗಲಾರದ ತುತ್ತಾಗಿತ್ತು.
ಆರೋಪಿಯು ಮಹಿಳಾ ಪಿಜಿಯನ್ನು ಹೇಗೂ ಒಳಗೆ ಪ್ರವೇಶಿಸಿದ್ದಾನೆ. ಅಲ್ಲಿ 3 ನೇ ಮಹಡಿಯಲ್ಲಿದ್ದ ಕೃತಿ ಅವರ ಕೊಠಡಿಯ ಬಾಗಿಲು ತಟ್ಟಿದ್ದಾನೆ. 24 ವರ್ಷದ ಕೃತಿ ಹೊರ ಬರುತ್ತಿದ್ದಂತೆ ಗಂಟಲನ್ನು ಸೀಳಿದ್ದಾನೆ. ಕೃತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಇಂಚಿಂಚೂ ಸೆರೆಯಾಗಿದೆ. ಆರಂಭದಲ್ಲಿ ಕೃತಿ ಈತನಿಂದ ಬಿಡಿಸಿ ಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಈತ ಪರಾರಿಯಾದ ನಂತರವಷ್ಟೇ ಅಕ್ಕಪಕ್ಕದ ಕೊಠಡಿಗಳಲ್ಲಿದ್ದ ಇತರರು ನೆರವಿಗೆ ಕೂಗಿಕೊಂಡಿದ್ದಾರೆ.
ಈ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯ ಗುರುತು ಪತ್ತೆ ಹಚ್ಚಿದ್ದರು. ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಕೃತಿ ಕುಮಾರಿ ತನ್ನ ಸ್ನೇಹಿತೆಯೊಂದಿಗೆ ಭಾರ್ಗವಿ ಪಿಜಿಗೆ ವಸತಿಯನ್ನು ಬದಲಾಯಿಸಿದ್ದರು. ಕೃತಿಯ ಸ್ನೇಹಿತೆಯನ್ನು ಅಭಿಷೇಕ್ ಪ್ರೀತಿಸುತ್ತಿದ್ದ. ಆದರೆ ಕೆಲಸಕ್ಕೇ ಹೋಗುತ್ತಿರಲಿಲ್ಲ. ಕೆಲಸ ಮಾಡುವಂತೆ ಅಭಿಷೇಕ್‌ಗೆ ಬುದ್ಧಿ ಹೇಳಿದ್ದರೂ ಕೇಳಿರಲಿಲ್ಲ. ಕೆಲಸಕ್ಕೆ ಹೋಗುವುದಾಗಿ ಸುಳ್ಳು ಹೇಳಿ ಸುತ್ತಾಡುತ್ತಿದ್ದ. ಇದನ್ನು ಕೃತಿ ಪತ್ತೆ ಹಚ್ಚಿ ಸ್ನೇಹಿತೆಗೆ ಹೇಳಿದ್ದರು.
ತಾನು ಪ್ರೀತಿಸುತ್ತಿದ್ದ ಯುವತಿ ನನ್ನಿಂದ ದೂರ ಆಗಲು ಕೃತಿ ಅವರೇ ಕಾರಣವೆಂದು ಕೋಪಗೊಂಡಿದ್ದ ಅಭಿಷೇಕ್ ಮಂಗಳವಾರ ರಾತ್ರಿ 11.15 ಗಂಟೆಯ ಸುಮಾರಿಗೆ ಪಿ.ಜಿಗೆ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಕೊಲೆ ಮಾಡಿದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮಧ್ಯಪ್ರದೇಶಕ್ಕೆ ತೆರಳಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯರ ಪಿಜಿಯನ್ನು ಈತ ಹೇಗೆ ಪ್ರವೇಶಿಸಿದ ಎನ್ನುವುದು ತಿಳಿದು ಬಂದಿಲ್ಲ. ಪಿಜಿ ಮಾಲೀಕನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣ ನಡೆಯುವುದಕ್ಕೂ ಮೂರು ದಿನ ಮೊದಲು ಮಾನ್ಯತಾ ಟೆಕ್ ಪಾರ್ಕ್ ಬಳಿ ಮಹಿಳಾ ಪಿಜಿ ಯೊಂದಕ್ಕೆ ನುಗ್ಗಿದ ಮುಸುಕುಧಾರಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಚಿನ್ನದ ಆಭರಣ ಮತ್ತು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಕೊಲೆ ನಡೆಸಿದ್ದರಿಂದ ಏನು ಕಾರಣ ಇರಬಹುದು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಅಲ್ಲದೇ ಎಲ್ಲಿ ತಲೆ ಮರೆಸಿಕೊಂಡಿರಬಹುದು ಎಂದೂ ವಿವರಗಳನ್ನು ಸಂಗ್ರಹಿಸಿದ್ದರು. ಕೊನೆಗೆ ಪೊಲೀಸರ ತಂಡ ಆತನ ಮೊಬೈಲ್ ನೆಟ್‌ವರ್ಕ್ ಮಾಹಿತಿ ಆಧರಿಸಿ ಮಧ್ಯಪ್ರದೇಶದಲ್ಲಿ ಸೆರೆ ಹಿಡಿದಿದ್ದು, ವಿಚಾರಣೆ ನಡೆಸುತ್ತಿದೆ.
(ವರದಿ: ಎಚ್. ಮಾರುತಿ, ಬೆಂಗಳೂರು)