logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿನಲ್ಲಿ ರೈಸ್‌ ಪುಲ್ಲಿಂಗ್‌ ದಂಧೆ; ಮೂರು ರಾಜ್ಯಗಳ ಮೂವರ ಬಂಧನ, 70 ಲಕ್ಷ ರೂ. ವಶ

Bangalore News: ಬೆಂಗಳೂರಿನಲ್ಲಿ ರೈಸ್‌ ಪುಲ್ಲಿಂಗ್‌ ದಂಧೆ; ಮೂರು ರಾಜ್ಯಗಳ ಮೂವರ ಬಂಧನ, 70 ಲಕ್ಷ ರೂ. ವಶ

Umesha Bhatta P H HT Kannada

Apr 20, 2024 12:21 PM IST

google News

ಬೆಂಗಳೂರಿನಲ್ಲಿ ರೈಸ್‌ ಪುಲ್ಲಿಂಗ್‌ ನಡೆಸಲು ಹೋಗಿ ಮೂವರು ಸಿಕ್ಕಿಬಿದ್ದಿದ್ದಾರೆ.

    • ರೈಸ್‌ಪುಲ್ಲಿಂಗ್‌ ದಂಧೆಯಲ್ಲಿ ನಿರತರಾಗಿದ್ದ ಕರ್ನಾಟಕದ ಒಬ್ಬಾತ ಸೇರಿ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
    • ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರಿನಲ್ಲಿ ರೈಸ್‌ ಪುಲ್ಲಿಂಗ್‌ ನಡೆಸಲು ಹೋಗಿ ಮೂವರು ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನಲ್ಲಿ ರೈಸ್‌ ಪುಲ್ಲಿಂಗ್‌ ನಡೆಸಲು ಹೋಗಿ ಮೂವರು ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ನಕಲಿ ತಾಮ್ರದ ಪಾತ್ರೆ ತೋರಿಸಿ ಜನರಿಗೆ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಜಯನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಶಿವಶಂಕರ್, ತಮಿಳುನಾಡಿನ ಅಬ್ದುಲ್‌ ಮತ್ತು ಪಂಜಾಬ್‌ನ ಸನ್ನಿಗಿಲ್ ಆವರನ್ನು ಸೆರೆಹಿಡಿಯಲಾಗಿದೆ. ಈ ಮೂವರಿಂದ ರೂ. 69.79 ಲಕ್ಷ ನಗದು ಹಣವನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಜಯನಗರದ 6ನೇ ಬ್ಲಾಕ್ ಯಡಿಯೂರು ಕೆರೆ ಹತ್ತಿರ ರೈಸ್ ಪುಲ್ಲಿಂಗ್ ಪಾತ್ರೆಯನ್ನು ಮಾರಾಟದ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭಿಸಿತ್ತು. ಈ ಖಚಿತ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಜಯನಗರ ಪೊಲೀಸರು ತಿಳಿಸಿದ್ದಾರೆ.

ಮೂವರು ಆರೋಪಿಗಳು ರೈಸ್‌ ಪುಲ್ಲಿಂಗ್‌ ಅನ್ನು ದಂಧೆಯಾಗಿ ಮಾಡಿಕೊಂಡಿದ್ದರು. ತಾಮ್ರದ ಪಾತ್ರೆಗೆ ಅಪಾರ ಬೆಲೆಯಿದ್ದು, ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಬರಲಿದೆ. ಹಣದ ಹೊಳೆ ಹರಿಯಲಿದೆ ಎಂದೂ ಗ್ರಾಹಕರನ್ನು ನಂಬಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇವರು ಎಲ್ಲೆಲ್ಲಿ ತಾಮ್ರದ ಪಾತ್ರೆ ಮಾರಾಟ ಮಾಡಿದ್ದಾರೆ ಮತ್ತು ವಂಚನೆ ಎಸಗಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ 6 ಮಂದಿ ಆಫ್ರಿಕಾ ಪ್ರಜೆಗಳು

ಡ್ರಗ್‌ ಪೆಡ್ಲರ್ ವೊಬ್ಬನನ್ನು ಬಂಧಿಸಲು ತೆರಳಿದ್ದ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರ ಮೇಲೆ ಆರು ಮಂದಿ ಆಫ್ರಿಕಾ ಪ್ರಜೆಗಳು ಹಲ್ಲೆ ನಡೆಸಿ ಪರಾರಿಯಾಗಿರುವ ಪ್ರಕರಣ ಬೆಂಗಳೂರಿನ ಹೊರವಲಯದ ರಾಜನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾವಳ್ಳಿಪುರದಲ್ಲಿ ನಡೆದಿದೆ. ಒಟ್ಟು ನಾಲ್ವರು ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ಮಾಡಿ ಆಫ್ರಿಕಾ ಪ್ರಜೆಗಳು ಪರಾರಿಯಾಗಿದ್ದಾರೆ. ರಾಜನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಶೋಧ ನಡೆಸಿದ್ದಾರೆ.

ಏಪ್ರಿಲ್ 6 ರಂದು, ಸಿಸಿಬಿ ಯ ಮಾದಕದ್ರವ್ಯ ನಿಗ್ರಹ ವಿಭಾಗದ ಅಧಿಕಾರಿಗಳು ಹೆಸರಘಟ್ಟ ರಸ್ತೆಯ ಬಾಗಲಕುಂಟೆ ಯಲ್ಲಿ ಆಫ್ರಿಕಾದ ಪ್ರಜೆಯೊಬ್ಬನನ್ನು ಬಂಧಿಸಿ ಆತನಿಂದ ಎಂ ಡಿ ಎಂ ಎ ವಶಪಡಿಸಿಕೊಂಡಿದ್ದರು. ಆತ ತನ್ನ ದೇಶದಿಂದ ಕೊರಿಯರ್ ಮೂಲಕ ತರಿಸಿಕೊಂಡು ಪ್ರತಿ ಗ್ರಾಂ ಗೆ 8000-10,000 ರೂಪಾಯಿಗೆ ಮಾರಾಟ ಮಾಡುತ್ತಿದ್ದ. ಈತನ ಸಹಚರರನ್ನು ಬಂಧಿಸಲು ಸಿಸಿಬಿ ಅಧಿಕಾರಿ ಸುಬ್ರಹ್ಮಣ್ಯ ಸ್ವಾಮಿ ಮತ್ತಿತರ ಅಧಿಕಾರಿಗಳು ಮಾವಳ್ಳಿಪುರಕ್ಕೆ ತೆರಳಿದ್ದರು. ಆರೋಪಿಯು ಸಿಂಗನಾಯಕನ ಹಳ್ಳಿಯ ಹೋಟೆಲ್ ಒಂದರಲ್ಲಿ ಊಟಕ್ಕೆ ತೆರಳಿರುವ ಮಾಹಿತಿ ಲಭಿಸಿತ್ತು.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿತ್ತು. ಆರೋಪಿಯು ಊಟ ಮಾಡಿದ ನಂತರ ಪೊಲೀಸರು ಈತನನ್ನು ಹಿಂಬಾಲಿಸಿಕೊಂಡು ಹೊರಟರು. ಈತ ಮಾವಳ್ಳಿಪುರದ ಮನೆಯೊಂದಕ್ಕೆ ಹೋಗುತ್ತಾನೆ. ಅಲ್ಲಿ ಒಟ್ಟು ಮೂವರು ಆಫ್ರಿಕಾದ ಪ್ರಜೆಗಳು ಇರುತ್ತಾರೆ. ಪೊಲೀಸರು ಮನೆಯೊಳಗೆ ನುಗ್ಗಿ ಶೋಧ ಆರಂಭಿಸುತ್ತಾರೆ. ನಮ್ಮ ಗುರುತಿನ ಚೀಟಿ ತೋರಿಸಿದ ನಂತರವೂ ಆರೋಪಿಗಳು ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದರು. ಒಬ್ಬ ಆರೋಪಿ ತನ್ನ ಸಹಚರರನ್ನು ಕರೆಯುತ್ತಾನೆ. ಆಗ ನಾಲ್ವರು ಆಗಮಿಸಿ ಎಲ್ಲರೂ ನಮ್ಮ ಮೇಲೆ ಆಕ್ರಮಣ ಮಾಡುತ್ತಾರೆ. ಇವರು ಕಲ್ಲು, ದೊಣ್ಣೆ ಮತ್ತು ಚಾಕುವಿನಿಂದ ಹಲ್ಲೆಗೆ ಮುಂದಾಗಿ ಕೊಲೆ ಮಾಡುವ ಬೆದರಿಕೆ ಒಡ್ಡಿದರು ಎಂದು ಸುಬ್ರಹ್ಮಣ್ಯ ಸ್ವಾಮಿ ತಿಳಿಸಿದ್ದಾರೆ.

ಪೊಲೀಸರು ಮನೆಯಿಂದ ಹೊರಬಂದು ಸ್ಥಳೀಯ ಹೊಯ್ಸಳ ವಾಹನವನ್ನು ಕರೆಸುತ್ತಾರೆ. ಆದರೂ ಆಫ್ರಿಕಾದ ಪ್ರಜೆಗಳು ಹೊಯ್ಸಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆನಂತರ ಆರೋಪಿಗಳು ಮಾವಳ್ಳಿಪುರವನ್ನು ಬಿಟ್ಟು ಪರಾರಿಯಾಗಿದ್ದಾರೆ.

ಈ ಮನೆ ಬಿಹಾರದ ಮಾಲೀಕರೊಬ್ಬರಿಗೆ ಸೇರಿದ್ದು ಮೂರು ತಿಂಗಳ ಹಿಂದೆ ಆರೋಪಿಗಳ ಪೂರ್ವಾಪರ ವಿಚಾರಿಸದೆ ಬಾಡಿಗೆಗೆ ಕೊಟ್ಟಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ