Breaking News: ಬೆಂಗಳೂರು ರಾಮೇಶ್ವರಂ ಕೆಫೆ ಸ್ಪೋಟ, ಎನ್‌ಐಎ ತನಿಖೆ
Mar 04, 2024 11:49 AM IST
ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ಎನ್‌ಐಎ ಮಾಡಲಿದೆ.
- Bangalore Blast ಬೆಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ಎನ್‌ಐಒ ನಡೆಸಲಿದೆ.
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟ ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ( NIA) ಪ್ರಕರಣ ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಪೋಟ ಪ್ರಕರಣದ ತನಿಖೆಯನ್ನು ಎನ್‌ಐಇಯೇ ನಡೆಸುವ ಸಾಧ್ಯತೆಯಿದೆ. ಈಗಾಗಲೇ ಬೆಂಗಳೂರಿನ ಎಚ್‌ಎಎಲ್ ಠಾಣೆಯಲ್ಲಿ ಸ್ಪೋಟ ಕುರಿತು ಪ್ರಕರಣ ದಾಖಲಾಗಿ ಸಿಸಿಬಿಗೆ ವಹಿಸಲಾಗಿತ್ತು. ಸಿಸಿಬಿ ಅಧಿಕಾರಿ ನವೀನ್ ಕುಲಕರ್ಣಿ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಈ ನಡುವೆ ಬಾಂಬ್ ಸ್ಪೋಟ ಪ್ರಕರಣದ ತೀವ್ರತೆ ಹಿನ್ನೆಲೆಯಲ್ಲಿ ಎನ್‌ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರಿನ ಸ್ಪೋಟ ಪ್ರಕರಣವು ದೇಶದಲ್ಲಿ ನಡೆದಿರುವ ಹಲವು ಪ್ರಕರಣಗಳಿಗೆ ತಾಳೆಯಾಗುತ್ತಿವೆ. ಸ್ಪೋಟದ ಶೈಲಿ, ಅದಕ್ಕೆ ಬಳಸಿರುವ ವಸ್ತುಗಳು, ಯೋಜನೆಯನ್ನು ಗಮನಿಸಿದರೆ ಇದರ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇರುವ ಶಂಕೆಯಿದೆ. ಈ ಕಾರಣದಿಂದ ಭದ್ರತಾ ದೃಷ್ಟಿಯಿಂದ ಎನ್‌ಐಎ ಈ ಪ್ರಕರಣದ ತನಿಖೆ ನಡೆಸಲಿದೆ ಎನ್ನಲಾಗುತ್ತಿದೆ.
ದೇಶದಲ್ಲಿ ಎಲ್ಲಿಯೇ ಬಾಂಬ್ ಸ್ಪೋಟದಂತಹ ಪ್ರಕರಣ ನಡೆದಾಗ, ಅದು ಭಯೋತ್ಪಾದಕ ಚಟುವಟಿಕೆಗಳ ಹಿನ್ನೆಲೆ ಇದ್ದರೆ ರಾಷ್ಟ್ರೀಯ ತನಿಖಾ ಸಂಸ್ಥೆಗಳೇ ತನಿಖೆಗೆ ಮುಂದಾಗುತ್ತವೆ. ಈಗಾಗಲೇ ಹಲವಾರು ತನಿಖೆಗಳನ್ನು ಕೈಗೊಂಡಿರುವ ಜತೆಗೆ ಅನುಭವ ಇರುವ ಅಧಿಕಾರಿಗಳ ಕಾರಣದಿಂದಲೂ ತನಿಖೆಯನ್ನು ಕೇಂದ್ರ ಸಂಸ್ಥೆಗಳಿಗೆ ನೀಡಲಾಗುತ್ತದೆ. ಆಯಾ ರಾಜ್ಯಗಳ ಪೊಲೀಸ್ ಇಲಾಖೆ ತಂಡಗಳು ಇದಕ್ಕೆ ಸಹಕರಿಸಲಿವೆ. ಎನ್‌ಐಎ ಪ್ರವೇಶದಿಂದ ಇಡೀ ಪ್ರಕರಣ ತನಿಖೆಗೆ ಇನ್ನಷ್ಟು ವೇಗ ಬರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಈ ನಡುವೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಬೆಂಗಳೂರು ಸ್ಪೋಟ ಪ್ರಕರಣದ ತನಿಖೆಯನ್ನು ಅಗತ್ಯಬಿದ್ದರೆ ಎನ್‌ಐಎ ವಹಿಸಲಾಗುವುದು. ಈ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದು ಹೇಳಿದ್ದರು.
ಇದಲ್ಲದೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಭಾನುವಾರ ಬೆಂಗಳೂರಿನ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಈಗಾಗಲೇ ಸ್ಪೋಟ ಪ್ರಕರಣದ ಆರೋಪಿ ಕುರುಹು ಪತ್ತೆಯಾಗಿದೆ. ಆತನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದರು.
ಬಾಂಬ್ ಸ್ಫೋಟದಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಒಬ್ಬರ ದೃಷ್ಟಿಗೂ ತೊಂದರೆಯಾಗಿದೆ. ಮೂವರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು. ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಭಾಗ