Bangalore News: ಬೆಂಗಳೂರಲ್ಲಿ ಬೀದಿ ನಾಯಿಗಳ ಹಾವಳಿಗೆ ನಿವೃತ್ತ ಶಿಕ್ಷಕಿ ಬಲಿ; ಬಿಬಿಎಂಪಿ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ
Aug 29, 2024 07:28 AM IST
ಬೆಂಗಳೂರಿನಲ್ಲಿ ಬೀದಿ ನಾಯಿ ದಾಳಿಗೆ ಬಲಿಯಾದ ನಿವೃತ್ತ ಶಿಕ್ಷಕಿ
- ಬೆಂಗಳೂರಿನಲ್ಲಿ ಬೀದಿ ನಾಯಿ ದಾಳಿಗೆ ವಾಯು ವಿಹಾರ ಹೊರಟಿದ್ದ ನಿವೃತ್ತ ಶಿಕ್ಷಕಿ ಒಬ್ಬರು ಬಲಿಯಾಗಿದ್ದಾರೆ.
- ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತ ಆಗಿರುವುದು ಮತ್ತೊಮ್ಮೆ ದೃಢಪಟ್ಟಿದೆ. ನಾಯಿಗಳ ದಾಳಿಗೆ ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಾಯುಸೇನೆ ನೆಲೆಯ ಏಳನೇ ವಸತಿಗೃಹಗಳ ಕ್ಯಾಂಪ್‌ನಲ್ಲಿ ಬೆಳಿಗ್ಗೆ 6.30ರ ವೇಳೆಗೆ 76 ವರ್ಷದ ನಿವೃತ್ತ ಶಿಕ್ಷಕಿ ರಾಜ್ ದುಲಾರಿ ಸಿನ್ಹಾ ವಾಯುವಿಹಾರ ನಡೆಸುತ್ತಿದ್ದರು. ಆಗ ಅವರ ಮೇಲೆ ಒಂದಲ್ಲ, ಎರಡಲ್ಲ ಬರೋಬ್ಬರಿ 12 ಬೀದಿನಾಯಿಗಳು ದಾಳಿ ನಡೆಸಿವೆ. ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಇವರು ವಾಯುಸೇನೆ ಯೋಧರರೊಬ್ಬರ ಅತ್ತೆ ಎಂದು ತಿಳಿದು ಬಂದಿದೆ.
ಈ ಪ್ರಕರಣದ ನಂತರ ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ರಮ ಕೈಗೊಳ್ಳುತ್ತಿಲ್ಲ. ಈ ಭಾಗದಲ್ಲಿ ಬೀದಿ ನಾಯಿ ಹೆಚ್ಚಾಗಿವೆ. ಪಾಲಿಕೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಕೇವಲ ಈ ಭಾಗದಲ್ಲಿ ಮಾತ್ರವಲ್ಲ, ನಮ್ಮ ಭಾಗದಲ್ಲೂ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ ಎಂದು ನಗರದ ಬಹುತೇಕ ಭಾಗಗಳ ನಿವಾಸಿಗಳು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಪತ್ನಿಯನ್ನು ಕೊಂದ ಭದ್ರಾವತಿ ವ್ಯಕ್ತಿ ಬಂಧನ
ಹಲವು ವರ್ಷ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಲೆ ಮಾಡಿದ ಆರೋಪದಡಿಯಲ್ಲಿ ಪತಿಯನ್ನು ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ 28 ವರ್ಷದ ನವ್ಯಶ್ರೀ ಕೊಲೆಯಾದ ದುರ್ದೈವಿ. ಇವರು ಮೂಲತಃ ನೃತ್ಯ ತರಬೇತಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಪೊಲೀಸರು ಕೊಲೆ ಆರೋಪದ ಅಡಿಯಲ್ಲಿ ಪತಿ ಕಿರಣ್ ನನ್ನು ಬಂಧಿಸಿದ್ದಾರೆ.ಕೌಟುಂಬಿಕ ಕಲಹ ಮತ್ತು ಪತ್ನಿಯ ಮೇಲೆ ಅನುಮಾನಗೊಂಡು ಕಿರಣ್ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ನವ್ಯಶ್ರೀ ಅವರ ಸ್ನೇಹಿತೆ ಐಶ್ವರ್ಯಾ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ನವ್ಯಶ್ರೀ ಹಾಗೂ ಕಿರಣ್ ಇಬ್ಬರೂ ಪ್ರೀತಿಸಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಕಿರಣ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಿರಣ್ ನವ್ಯಶ್ರೀ ದಂಪತಿ ಎಸ್ಎಂವಿ ಲೇಔಟ್‌ನ ಒಂದನೇ ಬ್ಲಾಕ್‌ನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ದಂಪತಿ ಮಧ್ಯೆ ಕೌಟುಂಬಿಕ ಕಾರಣಗಳಿಗೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪ್ರತಿ ದಿನ ಮದ್ಯ ಸೇವಿಸಿ ಮನೆಗೆ ಆಗಮಿಸುತ್ತಿದ್ದ. ಇದರಿಂದ ನಿತ್ಯ ಕಲಹ ನಡೆಯುತ್ತಿತ್ತು.
ಮಂಗಳವಾರ ಬೆಳಿಗ್ಗೆ ಐಶ್ವರ್ಯಾಗೆ ಕರೆ ಮಾಡಿದ್ದ ನವ್ಯಶ್ರೀ, ಮನೆ ಹಾಗೂ ಹೊರಗೆ ನೆಮ್ಮದಿ ಇಲ್ಲ. ಜೀವನ ಬೇಸರವಾಗಿದೆ ಎಂದು ಹೇಳಿಕೊಂಡಿದ್ದರು.ಇದರಿಂದ ಗಾಬರಿಗೊಂಡ ಐಶ್ವರ್ಯಾ ಅವರು ನವ್ಯಶ್ರೀ ಅವರ ಮನೆಗೆ ಬಂದಿದ್ದರು. ಇಬ್ಬರೂ ರಾಜರಾಜೇಶ್ವರಿ ನಗರಕ್ಕೆ ತೆರಳಿದ್ದರು. ಅಲ್ಲಿಗೆ ಇವರ ಸ್ನೇಹಿತ ಅನಿಲ್ ಬಂದಿದ್ದರು. ಮೂವರೂ ಜತೆಯಲ್ಲಿ ಚಹಾ ಸೇವಿಸಿದ್ದರು.
ಮನೆಯಲ್ಲಿ ನಿತ್ಯ ನಡೆಯುತ್ತಿದ್ದ ಗಲಾಟೆ ವಿಚಾರವನ್ನು ನವ್ಯಶ್ರೀ ಇಬ್ಬರ ಬಳಿ ಹೇಳಿಕೊಂಡಿದ್ದರು. ಇವರು ಪೊಲೀಸ್ ಠಾಣೆಗೆ ದೂರು ನೀಡುವಂತೆ ನವ್ಯಶ್ರಿಗೆ ಸಲಹೆ ನೀಡಿದ್ದರು. ನಂತರ ನವ್ಯಶ್ರೀ ಅವರ ಮನೆಗೆ ಐಶ್ವರ್ಯಾ ಆಗಮಿಸಿ ಅಲ್ಲೇ ಉಳಿದು ಕೊಂಡಿದ್ದರು. ಆದರೆ ಇವರು ಬರುವುದಕ್ಕೂ ಮೊದಲೇ ಮದ್ಯ ಸೇವಿಸಿ ಮನೆಗೆ ಬಂದಿದ್ದ ಆರೋಪಿ ಕಿರಣ್ ಗಾಢ ನಿದ್ರೆಗೆ ಜಾರಿದ್ದ. ನವ್ಯಶ್ರೀ ಅವರ ಮತ್ತು ಐಶ್ವರ್ಯಾ ಇಬ್ಬರೂ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಮಧ್ಯರಾತ್ರಿಯಲ್ಲಿ ಎದ್ದ ಕಿರಣ್ ಪತ್ನಿ ನವ್ಯಶ್ರೀ ಅವರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)