Bangalore News: ಬೆಂಗಳೂರಿನ ನಿಖರ ಹವಾಮಾನ ಮಾಹಿತಿಗೆ ನಂದಿ ಬೆಟ್ಟದಲ್ಲಿ ಬರಲಿದೆ ಸಿ-ಬ್ಯಾಂಡ್ ಡಾಪ್ಲರ್ ರೇಡಾರ್ ಕೇಂದ್ರ,
Jul 24, 2024 07:01 PM IST
ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಅತ್ಯಾಧುನಿಕ ಹವಾಮಾನ ಮಾಹಿತಿ ಕೇಂದ್ರ.
- ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಹವಾಮಾನ ನಿಖರತೆ ತಿಳಿಯಲು ಸಿ ಬ್ಯಾಂಡ್ ಡಾಪ್ಲರ್ ರೇಡಾರ್ ಕೇಂದ್ರ( Doppler radar Center) ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ( Shobha Karandlaje) ಅವರು ಇದಕ್ಕೆ ಶ್ರಮ ಹಾಕಿದ್ದಾರೆ.
ವರದಿ: ಎಚ್. ಮಾರುತಿ, ಬೆಂಗಳೂರು
- ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ಹವಾಮಾನ ನಿಖರತೆ ತಿಳಿಯಲು ಸಿ ಬ್ಯಾಂಡ್ ಡಾಪ್ಲರ್ ರೇಡಾರ್ ಕೇಂದ್ರ( Doppler radar Center) ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ( Shobha Karandlaje) ಅವರು ಇದಕ್ಕೆ ಶ್ರಮ ಹಾಕಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಯಾವಾಗ ಮಳೆಯಾಗಲಿದೆ, ಎಷ್ಟು ಮಳೆ ಬೀಳಬಹುದು, ಗಾಳಿಯ ತೀವ್ರತೆ ಎಷ್ಟಿರಲಿದೆ. ಚಳಿಯ ಪ್ರಮಾಣ ಯಾವ ಹಂತದಲ್ಲಿರಬಹುದು. ಬಿಸಿಲಿನಿಂದ ನೀವು ತಪ್ಪಿಸಿಕೊಳ್ಳಲು ಏನು ಮಾಡಬೇಕು. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಕೊಡುವವರು ಹವಾಮಾನ ಇಲಾಖೆಯವರು. ಈಗಾಗಲೇ ತಂತ್ರಜ್ಞಾನ ಬಳಸಿ ನಿಖರ ಹವಾಮಾನದ ಮಾಹಿತಿ ನೀಡಿ ಅನಾಹುತ ತಪ್ಪಿಸುವ ಜನರನ್ನು ಎಚ್ಚರಿಸುವ ಕೆಲಸ ಆಗುತ್ತಿದೆ. ಇಂತಹದೇ ತಂತ್ರಜ್ಞಾನ ಆಧರಿತ ಸೇವೆಯು ಬೆಂಗಳೂರು ಮಹಾನಗರಕ್ಕೂ ಸಿಗಲಿದೆ.ಬೆಂಗಳೂರಿನಲ್ಲಿ ಸಿ-ಬ್ಯಾಂಡ್ ಡಾಪ್ಲರ್ ಹವಾಮಾನ ರೇಡಾರ್ ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದ ಹವಾಮಾನ ಬದಲಾವಣೆಯನ್ನು ನಿಖರವಾಗಿ ಊಹಿಸಬಹುದಾಗಿದ್ದು, ರೈತರಿಗೆ ಹೆಚ್ಚಿನ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಡಾಪ್ಲರ್ ಸ್ಥಾಪನೆಗೆ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ, ಕಾರ್ಮಿಕ ಮತ್ತು ಉದ್ಯೋಗ ರಾಜ್ಯಸಚಿವೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರಕ್ಕೆ ಜೂನ್ 26ರಂದು ಮನವಿ ಮಾಡಿಕೊಂಡಿದ್ದರು.
ಇವರ ಮನವಿಗೆ ಸ್ಪಂದಿಸಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಈ ವರ್ಷವೇ ಸ್ಥಾಪನೆ ಮಾಡುವುದಾಗಿ ಎಕ್ಸ್ ನಲ್ಲಿ ಭರವಸೆ ನೀಡಿದ್ದಾರೆ.
ಡಾಪ್ಲರ್ ಸ್ಥಾಪನೆಯಾದ ಕೇಂದ್ರದಿಂದ 250 ಕಿಮೀ ವ್ಯಾಪ್ತಿಯಲ್ಲಿ ಮುಂಚಿತವಾಗಿಯೇ ಹವಾಮಾನ ಬದಲಾವಣೆಯನ್ನು ಊಹಿಸಬಹುದಾಗಿದೆ.
ಸಿ-ಬ್ಯಾಂಡ್ ಡಾಪ್ಲರ್ ಹವಾಮಾನ ರೇಡಾರ್ ನಿಂದ ನೈಸರ್ಗಿಕ ಪ್ರಕೃತಿ ವಿಕೋಪ ಉಂಟಾದಾಗ ಮೂಲಭೂತ ಸೌಕರ್ಯಗಳನ್ನು ರಕ್ಷಿಸುವುದರ ಜೊತೆಗೆ ಮುಂದಿನ ಹವಾಮಾನ ವೈಪರೀತ್ಯ ಏರುಪೇರು ಕುರಿತು ಮಾಹಿತಿ ನೀಡುತ್ತದೆ. ಮೋಡಗಳ ಚಾಲನೆ, ಮಳೆ, ದಿಕ್ಕು, ಗುಡುಗು ಸಿಡಿಲು ಮತ್ತು ಗಾಳಿಯ ವೇಗ ಕುರಿತು ಮುನ್ಸೂಚನೆ ಲಭ್ಯವಾಗುತ್ತದೆ.
ಈಗಾಗಲೇ ರೇಡಾರ್ ಸ್ಥಾಪನೆಗೆ ಸ್ಥಳವನ್ನು ಗುರುತಿಸಲಾಗಿದ್ದು, ಈ ಭೂಮಿಯನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ ಎಂದೂ ಸಿಂಗ್ ತಿಳಿಸಿದ್ದಾರೆ.
ಹವಾಮಾನ ಇಲಾಖೆ ಮೂಲಗಳ ಪ್ರಕಾರ ಬೆಂಗಳೂರಿನಿಂದ 62 ಕಿಮೀ ದೂರದಲ್ಲಿರುವ ನಂದಿ ಬೆಟ್ಟದ ಮೇಲೆ ಸಿ-ಬ್ಯಾಂಡ್ ಡಾಪ್ಲರ್ ರೇಡಾರ್ ಸ್ಥಾಪನೆ ಆಗಲಿದೆ. ಅಂದುಕೊಂಡಂತೆ ನಡೆದರೆ ನಂದಿ ಬೆಟ್ಟದ ಮೇಲಿನ ಮಣ್ಣಿನ ಪರೀಕ್ಷೆ ನಡೆದು ಎರಡು ತಿಂಗಳಲ್ಲಿ ರೇಡಾರ್ ಸ್ಥಾಪನೆ ಕಾರ್ಯ ಆರಂಭವಾಗಲಿದೆ.
ಹತ್ತು ದಿನಗಳ ಹಿಂದೆ ಹವಾಮಾನ ಇಲಾಖೆ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನಂದಿ ಬೆಟ್ಟಕ್ಕೇ ಭೇಟಿ ನೀಡಿ ನಾಲ್ಕು ಸ್ಥಳಗಳನ್ನು ಗುರುತಿಸಿದ್ದಾರೆ. ನಾಲ್ಕೂ ಜಾಗಗಳಿಂದ ಮಣ್ಣನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ರೇಡಾರ್ ಗಳನ್ನು ಈಶಾನ್ಯ ರಾಜ್ಯಗಳಲ್ಲಿ ಸ್ಥಾಪಿಸಲಾಗಿದೆ.
ಈ ರೇಡಾರ್ ಸ್ಥಾಪನೆಯಾದ 40 ಕಿಮೀ ವ್ಯಾಪ್ತಿಯಲ್ಲಿ ಇದಕ್ಕಿಂತಲೂ ಹೆಚ್ಚಿನ ಎತ್ತರದಲ್ಲಿ ಯಾವುದೇ ರಚನೆ ಅಥವಾ ನಿರ್ಮಾಣ ಮಾಡುವಂತಿಲ್ಲ. ನಂದಿ ಬೆಟ್ಟದ ಮಣ್ಣು ಪೂರಕವಾಗಿಲ್ಲದೆ ಹೋದರೆ ಯಲಹಂಕದ ವಾಯುಪಡೆ ಕೇಂದ್ರದಲ್ಲಿ ಸ್ಥಳ ಗುರುತಿಸಲಾಗಿದ್ದು, ವಾಯುಪಡೆ ಭೂಮಿ ನೀಡಲು ಒಪ್ಪಿಕೊಂಡಿದೆ.
ರೇಡಾರ್ ಗೆ ಗೋಪುರ ನಿರ್ಮಿಸಬೇಕಾಗುತ್ತದೆ. ರೇಡಾರ್ ತೂಕ 6.5 ಟನ್ ತೂಕವಿದ್ದು ಗೋಪುರದ ಎತ್ತರ 25 ಮೀಟರ್ ಉದ್ದವಿರುತ್ತದೆ. ರೇಡಾರ್ ಸ್ಥಾಪನೆಗೆ 20×20 ಮೀಟರ್ ಭೂಮಿ ಅವಶ್ಯಕತೆ ಇರುತ್ತದೆ.
ನಂದಿ ಬೆಟ್ಟದ ಮೇಲೆ ರೇಡಾರ್ ಸ್ಥಾಪನೆ ಮಾಡಬೇಕು ಎಂದಿರುವ ಸ್ಥಳ ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ಕೋಟೆ, ದ್ವಾರ, ದೇವಾಲಯ ಮತ್ತು ಗೋಡೆಗಳಿವೆ. ಈ ದೇವಾಲಯ ಪಾಳೇಗಾರರಿಂದ 11 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಚೋಳ ಮತ್ತು ವಿಜಯನಗರದ ಅರಸರು ಮತ್ತು ಟಿಪ್ಪು ಸುಲ್ತಾನ್ ಪೋಷಿಸುತ್ತಾ ಬಂದಿದ್ದರು.
ಈ ಸ್ಥಳಗಳ ಜೊತೆಗೆ ಕೃಷಿ ವಿಶ್ವ ವಿದ್ಯಾಲಯ ಮತ್ತು ಹೆಸರಘಟ್ಟದದಲ್ಲೂ ಜಾಗ ಗುರುತಿಸಲಾಗಿತ್ತು. ಅಂತಿಮವಾಗಿ ನಂದಿ ಬೆಟ್ಟ ಸೂಕ್ತ ಎಂದು ಆಯ್ಕೆ ಮಾಡಿ ಕೊಳ್ಳಲಾಗಿದೆ.
(ವರದಿ: ಎಚ್. ಮಾರುತಿ, ಬೆಂಗಳೂರು)