Bangalore News: ಐಟಿ, ಬಿಟಿ ಕಂಪನಿಗಳಿಗೂ ಅಗತ್ಯ ನೀರು ಪೂರೈಕೆ; ಕಾವೇರಿ 5 ನೇ ಹಂತದಿಂದ ಪ್ರತಿದಿನ 775 ಎಂ ಎಲ್ ಡಿ ನೀರು ಲಭ್ಯ
Mar 29, 2024 03:43 PM IST
ಐಟಿ, ಬಿಟಿ ಕಂಪೆನಿ ಪ್ರಮುಖರೊಂದಿಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ನೀರಿನ ವಿಚಾರದಲ್ಲಿ ಚರ್ಚಿಸಿದರು.
- ಬೆಂಗಳೂರಿನಲ್ಲಿ ಬೇಸಿಗೆ ಮುಗಿಯುವವರೆಗೂ ಜಲಮಂಡಳಿಯು ನೀರಿನ ನಿರ್ವಹಣಗೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಐಟಿ, ಬಿಟಿ ವಲಯದವರೊಂದಿಗೂ ಚರ್ಚಸಿದೆ.
- ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರು ನಗರದ ಹೃದಯ ಭಾಗದಲ್ಲಿ ನೀರು ಸರಬರಾಜು ಮಾಡುವ ರೀತಿಯಲ್ಲೇ ಹೊರವಲಯದಲ್ಲಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಗಳಿಗೂ ನೀರು ಪೂರೈಕೆ ಮಾಡಲಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಜಲ ಮಂಡಳಿ ಭರವಸೆ ನೀಡಿದೆ. ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದೂ ತಿಳಿಸಿದೆ.
ಔಟರ್ ರಿಂಗ್ ರೋಡ್ ಕಂಪನೀಸ್ ಅಸೊಸಿಯೇಶನ್ (ಆರ್ಕಾ) ಪದಾಧಿಕಾರಿಗಳೊಂದಿಗೆ ವೆಬಿನಾರ್ ಮೂಲಕ ಜಲ ಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಸಭೆ ನಡೆಸಿದರು.
ಬೆಂಗಳೂರು ನಗರದಲ್ಲಿ ನೀರಿನ ಕೊರತೆಯನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಇದೇ ರೀತಿ ಐಟಿ, ಬಿಟಿ ಕಂಪನಿಗಳಿಗೂ ಸಮರ್ಪಕವಾಗಿ ನೀರು ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾವೇರಿ 5 ನೇ ಹಂತ ಪೂರ್ಣಗೊಂಡರೆ ನಗರಕ್ಕೆ ಪ್ರತಿದಿನ ಹೆಚ್ಚುವರಿ 775 ಎಂ ಎಲ್ ಡಿ ನೀರು ಲಭ್ಯವಾಗಲಿದೆ. ಇದರಿಂದ ನೀರಿನ ಅಭಾವ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.
ಮಳೆ ಕೊರತೆ ಮತ್ತು ಅಂತರ್ಜಲ ಕುಸಿತದಿಂದ ಈ ವರ್ಷ ಕುಡಿಯುವ ನೀರಿನಲ್ಲಿ ಕೊರತೆಯಾಗಿದೆ. ಆದ್ದರಿಂದ ನೀರನ್ನು ಎಚ್ಚರಿಕೆಯಿಂದ ಬಳಸಬೇಕಿದೆ. ಅನಾವಶ್ಯಕವಾಗಿ ನೀರನ್ನು ವ್ಯರ್ಥ ಮಾಡುವವರಿಗೆ ದಂಡ ವಿಧಿಸುವ ಮೂಲಕ ಸಾರ್ವಜನಿಕರಿಗೆ ನೀರಿನ ಮೌಲ್ಯ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಬೇಸಿಗೆ ಕಾಲದಲ್ಲ ಮಾತ್ರವಲ್ಲದೇ ಮುಂದೆಯೂ ಮಿತವಾಗಿ ನೀರನ್ನು ಬಳಸುವಂತೆ ಕಂಪನಿಯ ನೌಕರರಲ್ಲಿ ಜಾಗೃತಿ ಮೂಡಿಸಬೇಕು. ಇದರಿಂದ ಮಾತ್ರ ನಾವು ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ನೀರು ಉಳಿಸುವುದು ಬರೀ ಮಂಡಳಿ ಜವಾಬ್ದಾರಿ ಅಲ್ಲವೇ ಅಲ್ಲ. ಬೆಂಗಳೂರಿನ ಪ್ರತಿಯೊಬ್ಬ ನಾಗರೀಕರು ಈ ನಿಟ್ಟಿನಲ್ಲಿ ಮಂಡಳಿಗೆ ಸಹಕಾರ ನೀಡಬೇಕು ಎಂದು ಅಧ್ಯಕ್ಷರು ಕಿವಿ ಮಾತು ಹೇಳಿದರು.
ನೀರಿನ ಸದ್ಬಳಕೆ ಹಾಗೂ ಸೂಕ್ತ ಬಳಕೆಗಾಗಿ ಜಲಮಂಡಳಿ ಮೂರು ಸೂತ್ರಗಳನ್ನು ರೂಪಿಸಿ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ನೀರು ಸಂರಕ್ಷಣೆ, ಸಂಸ್ಕರಿಸಿದ ನೀರು ಬಳಕೆ, ಮಳೆ ನೀರು ಸಂರಕ್ಷಣೆ ಮತ್ತು ಮರು ಪೂರಣದ ಬಗ್ಗೆ ಜಾಗೃತಿ ಮೂಡಿಸಿ ಎಂದು ಅವರು ಐಟಿ ಕಂಪನಿಗಳಿಗೆ ಕರೆ ನೀಡಿದರು.
ಕಾವೇರಿ ಅಥವಾ ಬೋರ್ ವೆಲ್ ನೀರನ್ನು ಕುಡಿಯಲು ಮಾತ್ರ ಬಳಸಬೇಕು. ಅನ್ಯ ಉದ್ದೇಶಗಳಿಗೆ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ. ಇದಕ್ಕಾಗಿ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಯೋಜನೆ ಸಿದ್ದಪಡಿಸಲಾಗಿದೆ. ಈ ಕುರಿತಂತೆ ಸಂಸ್ಕರಿಸಿದ ನೀರನ್ನು ಬಳಸಲು ಉದ್ದೇಶವಿರುವವರು ಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಜಲ ಮಂಡಳಿ ಅಧ್ಯಕ್ಷರು ತಿಳಿಸಿದರು.
ಅಪಾರ್ಟ್‌ಮೆಂಟ್, ವಾಣಿಜ್ಯ ಕಟ್ಟಡ, ಕೈಗಾರಿಕಾ ಪ್ರದೇಶ, ರೆಸ್ಟೋರೆಂಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯಲು ಏರಿಯೇಟರ್ ಹಾಗೂ ಫ್ಲೋ ಕಂಟ್ರೋಲರ್ ಅಳವಡಿಸಿಕೊಳ್ಳಲು ಕ್ರಮ ವಹಿಸಲಾಗಿದೆ. ಈಗಾಗಲೇ ಇದಕ್ಕೆ ಡೆಡ್‌ಲೈನ್ ಕೂಡ ವಿಧಿಸಲಾಗಿದೆ. ನಿಗದಿಪಡಿಸಿದ ವಲಯದವರು ಏರೇಟರ್ ಅನ್ನು ಬಳಕೆ ಮಾಡಿಕೊಳ್ಳಬೇಕು. ಇದಲ್ಲದೇ ಎಲ್ಲಾ ಐಟಿ ಕಂಪನಿಗಳೂ ಏರಿಯೇಟರ್ ಅಳವಡಿಸಿಕೊಳ್ಳಬೇಕು ಎಂದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಜಲ ಮಂಡಳಿ ಸಿದ್ಧಗೊಳಿಸಿರುವ ಪಂಚ ಸೂತ್ರ ಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಗ್ರೀನ್ ಸ್ಟಾರ್ ಸವಾಲು ಸ್ವೀಕರಿಸಲು ಮುಂದಾಗಬೇಕು ಎಂದು ಐಟಿ ಕಂಪನಿಗಳಿಗೆ ತಿಳಿಸಲಾಗಿದೆ ಎನ್ನುವುದು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಅವರ ವಿವರಣೆ.
( ವರದಿ: ಎಚ್. ಮಾರುತಿ, ಬೆಂಗಳೂರು)
ವಿಭಾಗ