logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Water: ಬೆಂಗಳೂರು ಸರ್ಕಾರಿ ಶಾಲೆ, ಸಂಸ್ಥೆಗಳಲ್ಲೂ ಮಳೆ ಕೊಯ್ಲು, ಇಂಗುಗುಂಡಿ; ಜಲಮಂಡಳಿ ಯೋಜನೆ

Bangalore Water: ಬೆಂಗಳೂರು ಸರ್ಕಾರಿ ಶಾಲೆ, ಸಂಸ್ಥೆಗಳಲ್ಲೂ ಮಳೆ ಕೊಯ್ಲು, ಇಂಗುಗುಂಡಿ; ಜಲಮಂಡಳಿ ಯೋಜನೆ

Umesha Bhatta P H HT Kannada

May 15, 2024 02:16 PM IST

google News

ಸರ್ಕಾರಿ ಕಚೇರಿಗಳಲ್ಲಿ ಮಳೆ ಕೊಯ್ಲು ವಿಚಾರದಲ್ಲಿ ಬೆಂಗಳೂರು ಜಲಮಂಡಳಿಯಲ್ಲಿ ಸಭೆ ನಡೆಯಿತು.

  • Rain water ಸರಕಾರಿ ಶಾಲೆ, ಕಾಲೇಜು, ಆಸ್ಪತ್ರೆ, ಕಚೇರಿ, ಖಾಸಗಿ ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ನಿಲ್ದಾಣಗಳಲ್ಲಿ ಮಳೆ ನೀರು ಕೊಯ್ಲು ಮತ್ತು ಇಂಗುಗುಂಡಿಗಳ ಅಳವಡಿಕೆಗೆ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದೆ ಬೆಂಗಳೂರು ಜಲಮಂಡಳಿ.

    (ವರದಿ: ಎಚ್‌.ಮಾರುತಿ. ಬೆಂಗಳೂರು)

ಸರ್ಕಾರಿ ಕಚೇರಿಗಳಲ್ಲಿ ಮಳೆ ಕೊಯ್ಲು ವಿಚಾರದಲ್ಲಿ ಬೆಂಗಳೂರು ಜಲಮಂಡಳಿಯಲ್ಲಿ ಸಭೆ ನಡೆಯಿತು.
ಸರ್ಕಾರಿ ಕಚೇರಿಗಳಲ್ಲಿ ಮಳೆ ಕೊಯ್ಲು ವಿಚಾರದಲ್ಲಿ ಬೆಂಗಳೂರು ಜಲಮಂಡಳಿಯಲ್ಲಿ ಸಭೆ ನಡೆಯಿತು.

ಬೆಂಗಳೂರು: ನೀರಿನ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಸರಕಾರಿ ಮತ್ತು ಬಿಬಿಎಂಪಿ ಶಾಲೆ, ಕಾಲೇಜುಗಳು, ಆಸ್ಪತ್ರೆಗಳು, ಪಾರ್ಕ್‌ಗಳು, ಸರಕಾರಿ ಕಟ್ಟಡಗಳಲ್ಲಿರುವ ಅಂಗನವಾಡಿಗಳು ಸೇರಿದಂತೆ ಎಲ್ಲ ಸರಕಾರಿ ಕಟ್ಟಡಗಳಲ್ಲಿ ಜಲಮಂಡಳಿ ವತಿಯಿಂದಲೇ ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳನ್ನು ಅಳವಡಿಸುವ ಮಹತ್ವದ ನಿರ್ಧಾರವನ್ನು ಬೆಂಗಳೂರು ಜಲಮಂಡಳಿ ಕೈಗೊಂಡಿದೆ. ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅಧ್ಯಕ್ಷ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ಈ ನಿಟ್ಟಿನಲ್ಲಿ ಒಂದು ವಾರದಲ್ಲಿ ಕ್ರಿಯಾಯೋಜನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತನ್ನ ವ್ಯಾಪ್ತಿಯಲ್ಲಿ 1000 ಕ್ಕೂ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ಜಲಮಂಡಳಿ ಸಾರ್ವಜನಿಕರಿಗೆ ಮಾದರಿಯಾಗಿದ್ದು, ಇನ್ನೂ ಹೆಚ್ಚಿನ 1000 ಇಂಗುಗುಂಡಿಗಳನ್ನು ಜಲಮಂಡಳಿ ನಿರ್ಮಿಸಲಿದೆ ಎಂದು ಅವರು ಹೇಳಿದರು.

ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುವ ಪ್ರದೇಶಗಳಾದ ಸರಕಾರಿ ಶಾಲೆ ಕಾಲೇಜು ಮತ್ತು ಕಚೇರಿಗಳಲ್ಲಿ ಮಳೆ ನೀರು ಪದ್ದತಿಯನ್ನು ಅಳವಡಿಸಬೇಕು. ಈ ನೀರನ್ನು ಮರುಬಳಕೆ ಮಾಡುವ ಹಾಗೂ ಹೆಚ್ಚುವರಿ ನೀರನ್ನು ಇಂಗುಗುಂಡಿಗಳ ಮೂಲಕ ಅಂತರ್ಜಲ ಮರುಪೂರಣ ಮಾಡಿಸುವ ವ್ಯವಸ್ಥೆಯನ್ನು ಜಲಮಂಡಳಿಯೇ ಮಾಡಲಿದೆ. ಆ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಇಂಗು ಗುಂಡಿಗಳ ಅಳವಡಿಕೆಯ ಮಾಹಿತಿ, ಅದರಿಂದ ಆಗುವ ಪ್ರಯೋಜನಗಳ ಬಗ್ಗೆಯೂ ಮಾಹಿತಿ ನೀಡಲು ಜಲಮಂಡಳಿ ನಿರ್ಧರಿಸಿದೆ.

ಸರಕಾರಿ ಮತ್ತು ಬಿಬಿಎಂಪಿ ಶಾಲೆ ಹಾಗೂ ಕಾಲೇಜು ಕಟ್ಟಡಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಶಾಲಾ ವಿದ್ಯಾರ್ಥಿಗಳು ಈ ವ್ಯವಸ್ಥೆಯ ಮತ್ತು ಉಪಯೋಗವನ್ನು ಪ್ರಾಯೋಗಿಕವಾಗಿ ವೀಕ್ಷಿಸಬೇಕು ಎನ್ನುವುದು ಮಂಡಳಿಯ ಉದ್ದೇಶವಾಗಿದೆ.

ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲೂ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡುವಂತೆ ಸೂಚನೆ ನೀಡಲಾಗಿದೆ.

ಎಲ್ಲಾ ಧಾರ್ಮಿಕ ಸಂಸ್ಥೆಗಳ ಆವರಣದಲ್ಲೂ ಮಂಡಳಿ ವತಿಯಿಂದ ಮಳೇ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಲಾಗುವುದು. ಈ ಮೂಲಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಹಾಗೂ ನೀರಿನ ಸದ್ಬಳಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಮಂಡಳಿ ನಿರೀಕ್ಷಿಸಿದೆ.

ರಾಜ್ಯ ಸಾರಿಗೆ ಸಂಸ್ಥೆ ಮತ್ತು ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿಯೂ ಆಯಾ ಸಂಸ್ಥೆಗಳ ಸಹಯೋಗದಲ್ಲಿ ಮಳೆ ನೀರು ಕೋಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದಂತಾಗುತ್ತದೆ ಎಂದು ಭಾವಿಸಿದೆ.

ಸಭೆಯಲ್ಲಿ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ, ಮುಖ್ಯ ಎಂಜನಿಯರ್ ಗಳಾದ ಎಲ್. ಕುಮಾರ ನಾಯ್ಕ್‌, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್.ರಾಜೀವ್ ಕೆ.ಎನ್., ಗಂಗಾಧರ್ ಬಿ.ಸಿ.ದೇವರಾಜು, ಎಂ. ಜಯಶಂಕರ್, ಅಪರ ಮುಖ್ಯ ಎಂಜನಿಯರ್ ಮಧುಸೂಧನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

(ವರದಿ: ಎಚ್‌.ಮಾರುತಿ. ಬೆಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ