Bangalore Water Crisis: ನೀರಿನ ಸಮಸ್ಯೆಯಿಂದ ಬೆಂಗಳೂರಿನಲ್ಲಿ ರೋಗ ಹರಡುವ ಸಾಧ್ಯತೆ, ತಜ್ಞರ ಎಚ್ಚರಿಕೆ
Mar 22, 2024 04:33 PM IST
ಬೆಂಗಳೂರು ನೀರಿನ ಸಮಸ್ಯೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನೂ ತಂದೊಡ್ಡುವ ಆತಂಕ ಎದುರಾಗಿದೆ.
ಬೆಂಗಳೂರು ನೀರಿನ ಸಮಸ್ಯೆ ನಿಧಾನವಾಗಿ ಇತರೆ ಸಮಸ್ಯೆಗಳನ್ನೂ ತಂದೊಡ್ಡುತ್ತಿದೆ. ಇದರಲ್ಲಿ ಆರೋಗ್ಯ ಸಂಬಂಧಿಸಿದ ತೊಂದರೆಗಳೂ ಎದುರಾಗಬಹುದು ಎನ್ನುವ ಎಚ್ಚರಿಕೆ ನೀಡಲಾಗಿದೆ
ವರದಿ: ಪ್ರಿಯಾಂಕ ಗೌಡ, ಬೆಂಗಳೂರು
ಬೆಂಗಳೂರು: ಮಹಾನಗರ ಬೆಂಗಳೂರಿನಲ್ಲಿ ನೀರಿನ ತೀವ್ರ ಅಭಾವ ಎದುರಾಗಿದೆ. ನವೀಕೃತ ಸೌಕರ್ಯಗಳಿರುವ ಬಹುಮಹಡಿ ಅಪಾರ್ಟ್‌ಮೆಂಟ್‌ಗಳು, ಸ್ವತಂತ್ರ ಕಟ್ಟಡಗಳು, ಕೊಳೆಗೇರಿಗಳಲ್ಲಿನ ಗುಡಿಸಲುಗಳು, ಸೇರಿದಂತೆ ನಗರದಲ್ಲಿ ತೀವ್ರ ನೀರಿನ ಬಿಕ್ಕಟ್ಟು ಉಂಟಾಗಿದೆ. ಹಲವು ಮನೆಗಳಿಗೆ ನೀರು ಪೂರೈಸುವ ಬೋರ್‌ವೆಲ್‌ಗಳು ಬತ್ತಿ ಹೋಗಿದೆ. ಐಟಿ ಸಿಟಿ ಎಂದೇ ಹೆಸರು ಪಡೆದಿರುವ ಬೆಂಗಳೂರಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಟೆಕ್ಕಿಗಳು ಜೀವನ ಕಂಡುಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ವೇತನ ಪಡೆಯುವ ಉದ್ಯೋಗದಲ್ಲಿದ್ದಾರೆ. ಇದೀಗ ಬೆಂಗಳೂರಿನ ಜನರು ನೀರಿಗಾಗಿ ಹೋರಾಡುವಂತಾಗಿದೆ. ಟ್ಯಾಂಕರ್ ಗೆ ಭಾರಿ ಮೊತ್ತ ಪಾವತಿಸಿ ನೀರು ಪಡೆಯುವಂತಾಗಿದೆ. ಆದರೆ ಶುದ್ದನೀರು ಸಿಗುತ್ತಿದೆಯೇ ಎನ್ನುವ ಪ್ರಶ್ನೆಗಳು ಇರುವಾಗ ನೀರಿನ ಸಮಸ್ಯೆ ರೋಗ ಹರಡುವ ಸಾಧ್ಯತೆಗಳನ್ನೂ ಹುಟ್ಟುಹಾಕಿದೆ.
ರೋಗ ಹರಡಲು ಕಾರಣವಾಗಬಹುದು
ಸಾಮಾಜಿಕ ಕಾರ್ಯಕರ್ತೆ ಗೀತಾ ಮೆನನ್ ಅವರ ವರದಿ ಪ್ರಕಾರ, ನಗರದಲ್ಲಿ ನೀರಿನ ಬಿಕ್ಕಟ್ಟು ಉಂಟಾಗಿರುವುದರಿಂದ ನೈರ್ಮಲ್ಯದ ಮಟ್ಟವು ಕಡಿಮೆಯಾಗುತ್ತದೆ. ಇದರಿಂದ ರೋಗಗಳು ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು. ಇದು ಕೇವಲ ಅಲ್ಪಾವಧಿಯ ಸಮಸ್ಯೆಯಲ್ಲ. ಇದು ಮತ್ತಷ್ಟು ಮುಂದುವರಿದರೆ ದೀರ್ಘಾವಧಿಯ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಮೆನನ್ ಕಳವಳ ವ್ಯಕ್ತಪಡಿಸಿದ್ದಾರೆ.
ನೀರು ಶುದ್ದವಾಗಿದೆಯೋ ಇಲ್ಲವೋ ಎನ್ನುವುದನ್ನು ನೋಡಿಕೊಳ್ಳಬೇಕು. ಬಳಕೆಗೂ ಮುಂಚೆ ಗಮನಿಸುವುದು ಒಳ್ಳೆಯದು. ಇಲ್ಲದೇ ಇದ್ದರೆ ವಾಂತಿ ಬೇಧಿಯಂತಹ ಸಮಸ್ಯೆ ಸೃಷ್ಟಿಯಾಗಿ ಬಿಸಿಲಿನ ಝಳ ನಿರ್ಜಲೀಕರಣಕ್ಕೂ ದಾರಿ ಮಾಡಿಕೊಟ್ಟು ಕಾಯಿಲೆಗಳನ್ನು ತರಬಹುದು ಎನ್ನುವುದು ತಜ್ಞರ ಸಲಹೆ.
ಕಳೆದ ಒಂದು ದಶಕದಿಂದ ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇನೆ. ಇದು ಯೋಜಿತವಲ್ಲದ ನಗರ ಬೆಳವಣಿಗೆ, ಕ್ಷಿಪ್ರ ಅರಣ್ಯನಾಶ ಮತ್ತು ನಡೆಯುತ್ತಿರುವ ಹವಾಮಾನ ಬಿಕ್ಕಟ್ಟಿನ ಪರಾಕಾಷ್ಠೆಯಾಗಿದೆ. ಹೀಗಾಗಿ ಎಲ್ಲರೂ ಬೆಲೆ ತೆರುತ್ತಿದ್ದಾರೆ ಎಂದು ಐಐಎಸ್‌ಸಿಯ ಪರಿಸರ ವಿಜ್ಞಾನ ಕೇಂದ್ರದ ಪ್ರೊ.ಟಿ.ವಿ.ರಾಮಚಂದ್ರ ಅವರು ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
ಕ್ಷಿಪ್ರ ನಗರೀಕರಣ ಮತ್ತು ಜಲಮೂಲಗಳ ಕುಸಿತವು ಹವಾಮಾನ ಬಿಕ್ಕಟ್ಟಿನ ಪರಿಣಾಮವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಬೆಂಗಳೂರಿನ ತಾಪಮಾನ ಏರಿಕೆಗೂ ನಾಂದಿಯಾಗುತ್ತದೆ ಎಂದು ತಜ್ಞ ಪ್ರೊ.ಟಿ.ವಿ.ರಾಮಚಂದ್ರ ಹೇಳುತ್ತಾರೆ.
ಬೆಂಗಳೂರಿನಲ್ಲಿ ನೀರಿನ ಅಭಾವಕ್ಕೆ ಕಾರಣವೇನು?
ಸಿಲಿಕಾನ್ ಸಿಟಿ ಬೆಂಗಳೂರಿಗೆ ಒಮ್ಮೆಲೇ ಈ ರೀತಿ ನೀರಿನ ಅಭಾವ ಎದುರಾಗಲು ಕಾರಣವೇನು ಅನ್ನೋದನ್ನು ನೋಡೋದಾದ್ರೆ, ಪ್ರಾಥಮಿಕವಾಗಿ ಬೆಂಗಳೂರು ನಗರ ಎರಡು ಮೂಲಗಳಿಂದ ತನ್ನ ನೀರನ್ನು ಪಡೆಯುತ್ತದೆ. ಕಾವೇರಿ ನದಿ ನೀರು ಮತ್ತು ಅಂತರ್ಜಲ ನೀರನ್ನೇ ಇದು ಅವಲಂಬಿಸಿದೆ. ಕುಡಿಯದ ಉದ್ದೇಶಗಳಿಗಾಗಿ, ಜನರು ಒಳಚರಂಡಿ ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ಮರುಬಳಕೆಯ ನೀರನ್ನು ಬಳಸುತ್ತಾರೆ. ಈ ಬಗ್ಗೆ ಫಸ್ಟ್ ಪೋಸ್ಟ್ ವರದಿ ತಿಳಿಸಿದೆ.
ಪ್ರತಿನಿತ್ಯ ಬೆಂಗಳೂರಿಗೆ ಕನಿಷ್ಠ 2,600 ರಿಂದ 2,800 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ. ಪ್ರಸ್ತುತ ಬೇಡಿಕೆಯ ಅರ್ಧದಷ್ಟು ಮಾತ್ರ ಪೂರೈಕೆಯಾಗುತ್ತಿರುವುದೇ ನೀರಿನ ಅಭಾವಕ್ಕೆ ಕಾರಣವಾಗಿದೆ. ಬೇಸಿಗೆಗೆ ಮುನ್ನವೇ ಈ ಪರಿಸ್ಥಿತಿ ಇದ್ದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ದಿನನಿತ್ಯ ನೀರಿಗಾಗಿ ಹೋರಾಟ
ಬೆಂಗಳೂರಿನಲ್ಲಿ ನೀರನ್ನು ವಿವೇಚನಾಯುಕ್ತವಾಗಿ ಬಳಸುವಂತೆ ಜನರಿಗೆ ಸಲಹೆ ನೀಡಲಾಗುತ್ತಿದೆ. ಪರ್ಯಾಯ ದಿನಗಳಲ್ಲಿ ಸ್ನಾನ ಮಾಡಲು, ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಯುವುದನ್ನು ಮಿತಿಗೊಳಿಸುವಂತೆ ಕೇಳಿಕೊಳ್ಳಲಾಗುತ್ತಿದೆ. ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡಿ ತಿನ್ನಲು, ಬಿಸಾಡಬಹುದಾದ ಕಟ್ಲರಿಗಳನ್ನು ಬಳಸಲು ಮತ್ತು ಮಾಲ್‌ಗಳಲ್ಲಿ ಶೌಚಾಲಯಗಳನ್ನು ಬಳಸುವಂತೆ ಒತ್ತಾಯಿಸಲಾಗುತ್ತಿದೆ.
ನೀರಿನ ಟ್ಯಾಂಕರ್ ಗಳು ಬಂದಾಗ ಸಾಕಷ್ಟು ಜಗಳಗಳು ನಡೆಯುತ್ತವೆ. ಆದರೆ ನಾವು ಏನು ಮಾಡುವುದು? ನಮಗೆ ನೀರು ಬೇಕು. ನೀರಿಲ್ಲದೆ ನಾವು ಹತಾಶರಾಗಿದ್ದೇವೆ ಎಂದು ಬಂಡೆಪಾಳ್ಯದ ಉಪನಗರ ನಿವಾಸಿ ಸುಶೀಲ ಅವರು ತಿಳಿಸಿದ್ದಾಗಿ ಸಿಎನ್‌ಎನ್ ವರದಿ ಉಲ್ಲೇಖಿಸಿದೆ.
ಸುಶೀಲ ಅವರಂತೆಯೇ ಬಂಡೆಪಾಳ್ಯದ ಬಹುತೇಕ ನಿವಾಸಿಗಳು ಬೆಳಗ್ಗೆ 9 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಟ್ಯಾಂಕರ್ ನೀರು ಬಂದರೆ ಮೊದಲು ಬಕೆಟ್ ತುಂಬಿಸಿಕೊಳ್ಳುತ್ತಾರೆ.
ನಾವು 15 ದಿನಕ್ಕೊಮ್ಮೆ ನೀರು ಪಡೆಯುತ್ತೇವೆ. ಪ್ರತಿನಿತ್ಯ ನೀರನ್ನು ಖರೀದಿಸಬೇಕಾಗಿದೆ ಎಂದು ಬಂಡೆಪಾಳ್ಯದ ಮತ್ತೊಬ್ಬ ನಿವಾಸಿ ಕುಂಕುಮ್ ತಮ್ಮ ಪರಿಸ್ಥಿತಿ ವಿವರಿಸಿದ್ರು. ಬೆಳಗ್ಗೆ ಮಕ್ಕಳ ಮುಖ ತೊಳೆಯಲು ಬಾಟಲಿ ನೀರು ಬಳಸುತ್ತಿರುವುದಾಗಿ ಅವರು ಹೇಳಿದರು.
ದುಡಿದ ಹಣ ನೀರಿಗೆ!
ಬಂಡೆಪಾಳ್ಯದ ಬಹುತೇಕ ಎಲ್ಲಾ ನಿವಾಸಿಗಳು ತಿಂಗಳಿಗೆ 6,000 ರಿಂದ 8,000 ರೂಪಾಯಿಗಳವರೆಗೆ ಗಳಿಸುತ್ತಾರೆ. ಈಗ ನೀರಿನ ಬಿಕ್ಕಟ್ಟು ಉಂಟಾಗಿರುವುದರಿಂದ ತಮ್ಮ ಆದಾಯದ ಅರ್ಧದಷ್ಟು ಹಣವನ್ನು ಟ್ಯಾಂಕರ್ ನೀರಿಗೆ ಹಾಕಬೇಕಾದ ಪರಿಸ್ಥಿತಿ ಬಂದೊದಗಿದೆ.
ಒಂದೆಡೆ, ಎಟಿಎಂಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿದೆ. ನೀರಿನ ಟ್ಯಾಂಕರ್ ಗಳಿಗೆ ಹಣ ಪಾವತಿಸಲು ಎಟಿಎಂಗಳಿಂದ ಜನ ದುಡ್ಡು ತರುತ್ತಿದ್ದಾರೆ.
ಇನ್ನೊಂದೆಡೆ, ನೀರಿನ ಎಟಿಎಂಗಳು ಅಥವಾ ನೀರು ಡಿಸ್ಪೆನ್ಸರ್‌ಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಇವು ಸಣ್ಣ ಶುದ್ಧೀಕರಣ ಅಥವಾ ಆರ್‌ಒ (ರಿವರ್ಸ್ ಆಸ್ಮೋಸಿಸ್) ಪ್ಲಾಂಟ್‌ಗಳಾಗಿದ್ದು, ವಾರ್ಡ್‌ಗಳಾದ್ಯಂತ ಇವೆ. ಇವು ಮುಂಜಾನೆಯಿಂದ ತಡ ಸಂಜೆಯವರೆಗೆ ಕಾರ್ಯನಿರ್ವಹಿಸುತ್ತವೆ. ಇಲ್ಲಿ 20 ಲೀಟರ್ ನೀರನ್ನು 5 ರೂಪಾಯಿಗೆ ಪಡೆಯಬಹುದು. ಮೊದಲೆಲ್ಲಾ ಖಾಲಿ ಖಾಲಿ ಇರುತ್ತಿದ್ದ ಈ ಸ್ಥಳಗಳಲ್ಲಿ ಇದೀಗ ಜನರ ಸಾಲು ದೊಡ್ಡದಾಗುತ್ತಿದೆ.
̲̲̲̲̲̲̲̲̲̲(ವರದಿ: ಪ್ರಿಯಾಂಕ ಗೌಡ, ಬೆಂಗಳೂರು)
ವಿಭಾಗ