Bangalore News: ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿ ಸಮಯ್ವಯದೊಂದಿಗೆ ಕೆಲಸ ಮಾಡಲು ಕಟ್ಟುನಿಟ್ಟಿನ ಸೂಚನೆ
May 23, 2024 06:40 AM IST
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
- ಬೆಂಗಳೂರಿನ ಹಲವಾರು ಯೋಜನೆಗಳು. ಸಮಸ್ಯೆಗಳು, ಮಳೆಗಾಲದ ತೊಂದರೆಗಳಿಗೆ ಪರಿಹಾರ ನೀಡಲು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದಾರೆ.
ಬೆಂಗಳೂರು: ಮಳೆಗಾಲ ಆರಂಭವಾಗುವುದರಿಂದ ಬೆಂಗಳೂರು ನಗರದ ಜನತೆಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಬಿಬಿಎಂಪಿ. ಬಿಡಿಎ, ಬೆಸ್ಕಾಂ, ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಹಾಗೂ ಎಂಜಿನಿಯರ್ಗಳು ಸಮನ್ವಯದಿಂದ ಕೆಲಸ ಮಾಡಬೇಕು. ವಿಳಂಬವಾಗಿರುವ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು, ಹೂಳೆತ್ತಬೇಕು, ಒಣಗಿರುವ ಕೊಂಬೆಗಳನ್ನು ಕತ್ತರಿಸಲು ಸೂಚನೆ ನೀಡಲಾಗಿದೆ. ಪಾದಚಾರಿ ಮಾರ್ಗಗಳನ್ನು ಸರಿಪಡಿಸಬೇಕು. ರಾಜಕಾಲುವೆಗೆ ಕಸ ಹಾಕುವುದನ್ನು ತಡೆಗಟ್ಟಲು ಸೂಚನೆ ನೀಡಲಾಗಿದೆ. ಮುಂಗಾರು ಪ್ರಾರಂಭವಾಗುವ ಮುಂಚಿತವಾಗಿ ರಾಜಕಾಲುವೆಗಳ ಹೂಳು ತೆಗೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ರಾಜಕಾಲುವೆ ತೆರವು
ಬುಧವಾರ ನಾಲ್ಕು ಗಂಟೆಗೂ ಹೆಚ್ಚು ಬೆಂಗಳೂರು ಪ್ರದಕ್ಷಿಣೆ ಹಾಕಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ,ಗಾಳಿ ಆಂಜನೇಯ ದೇವಾಲಯದ ಬಳಿ ಮಳೆ ಜಾಸ್ತಿಯಾದಾಗ ನೀರು ಹರಿಯಲು ಎತ್ತರ ಸಾಲಲ್ಲ, ಹೂಳು ತುಂಬಿತ್ತು. ಪರ್ಯಾಯವಾಗಿ ಇನ್ನೊಂದು ಮೋರಿ ನಿರ್ಮಿಸಲು. ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ 860 ಕಿಮೀ ರಾಜಕಾಲುವೆ ಇದೆ. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 491 ಕಿಮೀ ರಾಜಕಾಲುವೆಯನ್ನು ತೆರವು ಮಾಡಲಾಗಿತ್ತು. ಹಿಂದಿನ ಸರ್ಕಾರ ಜನವರಿ 2023 ರಲ್ಲಿ 193 ಕಿಮೀ ತೆರವು ಮಾಡಲು ಕ್ರಮ ತೆಗೆದುಕೊಂಡರು. ಮೊದಲೇ ಈ ಕೆಲಸ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. 1800 ಕೋಟಿ ರೋ. ಇದಕ್ಕೆ ವೆಚ್ಚವಾಗುತ್ತಿದೆ. 174 ಕಿಮೀ ಉಳಿದಿದೆ. ವಿಶ್ವ ಬ್ಯಾಂಕ್ ಸುಮಾರು 2000 ಕೋಟಿ ರೂಪಾಯಿ ನೀಡಲಿದೆ. 12 ಪ್ರಕರಣ ಸಿವಿಲ್ ನ್ಯಾಯಾಲಯದಲ್ಲಿವೆ. ವಕೀಲರು ಇದಕ್ಕೆ ಹಾಜರಾಗುತ್ತಿದ್ದು, ಅಗತ್ಯ ಬಿದ್ದರೆ ವಿಶೇಷ ವಕೀಲರನ್ನು ನೇಮಿಸಿ ಪ್ರಕರಣ ಇತ್ಯರ್ಥ ಗೊಳಿಸಲಾಗುವುದು ಎಂದು ವಿವರಿಸಿದರು.
ರಾಜಕಾಲುವೆ ತೆರವು ರಾಜಕಾಲುವೆ ಒತ್ತುವರಿಯಾಗಿದ್ದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವು ಗೊಳಿಸಲು ಸೂಚಿಸಲಾಗಿದೆ. ಬೆಂಗಳೂರಿನಲ್ಲಿ 400 ಕೆರೆಗಳಿದ್ದವು. ಅನೇಕ ಕೆರೆಗಳು ಹೂಳಿನಿಂದ ತುಂಬಿದೆ ಹಾಗೂ ಒತ್ತುವರಿಯಾಗಿವೆ. ಒತ್ತುವರಿ ತೆರವು ಮಾಡಿ ನೀರು ಹರಿಯಲು ಕಾಲುವೆ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಗುಂಡಿ ಮುಚ್ಚಲು ಸೂಚನೆ
ಬೆಂಗಳೂರು ನಗರದಲ್ಲಿ ವಾರ್ಡ್ ರಸ್ತೆಗಳಲ್ಲಿ 5500 ಗುಂಡಿಗಳು ಬಿದ್ದಿದ್ದು, ಒಂದು ತಿಂಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಹಾಗೂ ಗುಂಡಿಗಳನ್ನು ನಿರ್ವಹಿಸಲು ಒಂದು ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಸೂಚನೆ ಮಾಡಬೇಕು. ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ 557 ಗುಂಡಿಗಳಿವೆ. ಈ ತಿಂಗಳಲ್ಲಿ ಭರ್ತಿ ಮಾಡಬೇಕು ಎಂದು ಸೂಚಿಸಲಾಗಿದೆ. ಸಿಲ್ಕ್ ಬೋರ್ಡ್ ಬಳಿ ಮೆಟ್ರೋ ನಿರ್ಮಿಸಿರುವ ರಸ್ತೆಯನ್ನು ಅಗಲೀಕರಿಸಲು ಸೂಚನೆ ನೀಡಲಾಗಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಡಿವಾಳ ಕೆರೆಯ ಬಳಿ ಇನ್ನೊಂದು ಚರಂಡಿ ನಿರ್ಮಿಸಲು ಸೂಚಿಸಲಾಗಿದೆ ಎಂದರು.
ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ರಾಮಲಿಂಗಾರೆಡ್ಡಿ ಬಿಡಿಎ ಅಧ್ಯಕ್ಷರು, ಆಯುಕ್ತರು ಸೇರಿ ಅಧಿಕಾರಿಗಳ ತಂಡದ ಜೊತೆ ಅನೇಕ ಪ್ರದೇಶಗಳಿಗೆ ಭೇಟಿ ನೀಡಿದೆವು. ಜೂನ್ ತಿಂಗಳಿನಿಂದ ಮುಂಗಾರು ಪ್ರಾರಂಭವಾಗಲಿದೆ. ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿ ಪ್ರವಾಹ ಉಂಟಾಗಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಸಿಟಿ ರೌಂಡ್ಸ್ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಬಿಬಿಎಂಪಿ ಚುನಾವಣೆ ಬಗ್ಗೆ ಲೋಕಸಭೆ ಫಲಿತಾಂಶದ ನಂತರ ಚಿಂತಿಸಲಾಗುವುದು ಎಂದು ತಿಳಿಸಿದರು.
ಮಳೆಗಾಲಕ್ಕೆ ಸನ್ನದ್ದರಾಗಿ
ಜೂನ್ ಗೆ ಮುಂಚೆಯೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮುಂಗಾರು ಮಳೆಗೂ ಮುನ್ನ ಪ್ರವಾಹ ಉಂಟಾಗಬಾರದೆಂದು ಚುನಾವಣಾ ಆಯೋಗದಿಂದ ಅನುಮತಿ ಪಡೆದು 7-8 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮಳೆಗಾಲ ನಿರ್ವಹಣೆಗೆ ಎಲ್ಲಾ ರೀತಿಯಲ್ಲಿಯೂ ಸಜ್ಜಾಗಬೇಕು ಎಂದು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಮಳೆ ಬಂದಾಗ ನೀರು ನುಗ್ಗಿದರೆ ಇಂಜಿನಿಯರ್ ಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಸೂಚಿಸಲಾಗಿದೆ. ಈಜಿಪುರದಲ್ಲಿ ಬಿಬಿಎಂಪಿ ವತಿಯಿಂದ ಮೇಲ್ಸೇತುವೆ ನಿರ್ಮಾಣ ನೆನೆಗುದಿಗೆ ಬಿದ್ದಿದ್ದು, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ. ಇವರ ಗುತ್ತಿಗೆ ರದ್ದು ಮಾಡಿ ಹೊಸಬರಿಗೆ ಕೊಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೂ ಯಲಹಂಕಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ 20 ಮನೆಗಳಿಗೆ ನೀರು ನುಗ್ಗಿದೆ ಎಂದು ವರದಿಯಾಗಿತ್ತು. ಯಲಹಂಕ ಕೆರೆಗೆ ನೀರು ಹೋಗುವಂತೆ ಮಾಡಲು ಅನುವು ಮಾಡಿಕೊಡಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು
ಅಶೋಕ್ ಗೆ ತಿರುಗೇಟು
ಸಿಎಂ , ಡಿಸಿಎಂ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ ಎಂದು ಬಿಜೆಪಿಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಆರ್. ಅಶೋಕ್ ಕೇವಲ ಸುಳ್ಳು ಹೇಳುತ್ತಾರೆ ನಮ್ಮ ರಾಜಕೀಯ ಜೀವನದಲ್ಲಿ ಫೋನ್ ಟ್ಯಾಪಿಂಗ್ ಮಾಡಿಲ್ಲ, ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದರು. ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಮರೆಮಾಚಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)