Bangalore Kannada Boards: ಬೆಂಗಳೂರಲ್ಲಿ ಕನ್ನಡ ನಾಮಫಲಕ ಕಡ್ಡಾಯ, ಫೆಬ್ರವರಿ ಗಡುವು ನೀಡಿದ ಬಿಬಿಎಂಪಿ: ಏನಿದು ಹೊಸ ಸೂಚನೆ
Dec 25, 2023 06:40 PM IST
ಬೆಂಗಳೂರಿನ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಫಲಕ ಅಳವಡಿಸು ಮನವಿಯನ್ನು ಬಿಬಿಎಂಪಿಗೆ ನೀಡಲಾಗಿದೆ.
- Kannada Boards ಬೆಂಗಳೂರಿನ( Bangalore) ವಾಣಿಜ್ಯ ಮಳಿಗೆಗಳಲ್ಲಿ ಅಳವಡಿಸಿರುವ ಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಸುವುದಕ್ಕೆ ಫೆಬ್ರವರಿಯ ಗಡುವು ನೀಡಲಾಗಿದೆ.
ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸಬೇಕು ಎನ್ನುವುದು ಹೊಸ ಕಾನೂನು ಅಲ್ಲ. ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸುವುದನ್ನು ಕಡ್ಡಾಯಗೊಳಿಸಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) 2017, 2018 ಮತ್ತು 2019ರಲ್ಲಿಆದೇಶ ಹೊರಡಿಸಿದೆಯಾದರೂ ಆದೇಶ ಕಡತದಿಂದ ಆಚೆಗೆ ಬಂದಿಲ್ಲ.
ಇದೀಗ ಕನ್ನಡವನ್ನು ಅನುಷ್ಠಾನಗೊಳಿಸಲು ಫೆಬ್ರುವರಿ 28ರವರೆಗೆ ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಕನ್ನಡ ನಾಮಫಲಕ ಹಾಕದೇ ಇರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಆದೇಶ ಹಾಗೂ ಪಾಲಿಕೆ ಸುತ್ತೋಲೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಆಯುಕ್ತರು ಸೂಚಿಸಿದ್ದೇನು
ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಜತೆ ಸಭೆ ನಡೆಸಿದ ನಂತರ ಅವರು ಪಾಲಿಕೆ ವ್ಯಾಪ್ತಿಯ ಅಂಗಡಿ, ಹೋಟೆಲ್, ಮಾಲ್ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ಸಂಬಂಧ ಎಲ್ಲಾ ವಲಯ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದಿದ್ದಾರೆ.
ನಗರದಲ್ಲಿ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳು 1,400 ಕಿ.ಮೀ ನಷ್ಟಿದ್ದು, ಈ ರಸ್ತೆಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸಮೀಕ್ಷೆ ನಡೆಸಲಾಗುತ್ತದೆ. ನಂತರ ಕನ್ನಡ ಬಳಸದ ಮಳಿಗೆಗಳಿಗೆ ನೋಟೀಸ್ ನೀಡಲಾಗುವುದು. ಫೆಬ್ರುವರಿ 28ರವರೆಗೆ ಸಮಯಾವಕಾಶ ನೀಡಲಾಗುವುದು. ನಂತರವೂ ಕನ್ನಡ ಬಳಸದಿದ್ದರೆ ಕ್ರಮ ಕೈಗೊಳ್ಳಬೇಕು. ಇದರ ಅನುಷ್ಠಾನದ ಬಗ್ಗೆ ಆಯಾ ವಲಯ ಆಯುಕ್ತರು ಅನುಪಾಲನೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.
ನಾಮಫಲಕಗಳಲ್ಲಿ ಕನ್ನಡ ಬಳಸದ ಅಂಗಡಿಗಳನ್ನು ಕಾನೂನಿನ ಪ್ರಕಾರ ಅಮಾನತಿನಲ್ಲಿಟ್ಟು, ಪರವಾನಗಿ ರದ್ದುಗೊಳಿಸಲಾಗುವುದು. ಈ ಬಗ್ಗೆ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಯ ಮೇಲೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಗೌಡ ಮನವಿ ಮಾಡಿದ್ದಾರೆ.
ಕಡ್ಡಾಯ ಹೊಸದೇನೂ ಅಲ್ಲ
ಬಿಬಿಎಂಪಿಯಿಂದ ಅನುಮತಿ ಪಡೆದ ಎಲ್ಲ ಅಂಗಡಿ, ಮುಂಗಟ್ಟುಗಳು, ಹೋಟೆಲ್‌ಗಳು, ಮಾಲ್‌ಗಳು, ಕಂಪನಿಗಳು, ವಾಣಿಜ್ಯ ಸಂಸ್ಥೆಗಳು ಸಾರ್ವತ್ರಿಕವಾಗಿ ಪ್ರದರ್ಶಿಸುವ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವುದು ಮತ್ತು ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ 2017, 2018 ಮತ್ತು 2019ರಲ್ಲಿಆದೇಶ ಹೊರಡಿಸಿತ್ತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು 2017ರ ಜುಲೈ ನಲ್ಲಿ ಬಿಬಿಎಂಪಿಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕನ್ನಡದಲ್ಲಿ ನಾಮಫಲಕ ಹಾಕದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪಾಲಿಕೆ ವಿರುದ್ಧ ಶಿಸ್ತು ಕ್ರಮಕ್ಕೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ನಂತರ ಬಿಬಿಎಂಪಿ, ನಗರದ ಎಲ್ಲ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳ ನಾಮಫಲಕವನ್ನು ಕನ್ನಡದಲ್ಲಿ ಬರೆಸಲು ಮಾಲೀಕರಿಗೆ ತಾಕೀತು ಮಾಡಿತ್ತು. ಆದರೆ ಈ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ಬರಲಿಲ್ಲ.
40 ಸಾವಿರ ಆಂಗ್ಲ ಫಲಕ
ಬೆಂಗಳೂರಿನಲ್ಲಿ 50 ಸಾವಿರಕ್ಕೂ ಅಧಿಕ ಉದ್ದಿಮೆಗಳಿಗೆ ಬಿಬಿಎಂಪಿ ಪರವಾನಗಿ ನೀಡಿದೆ. ಇದರಲ್ಲಿ ಸುಮಾರು 8-10 ಸಾವಿರ ಉದ್ದಿಮೆಗಳಷ್ಟೇ ಕನ್ನಡ ಬಳಸುತ್ತಿವೆ. ಉಳಿದ 40 ಸಾವಿರ ಉದ್ದಿಮೆಗಳು ನಿಯಮಾನುಸಾರ ನಾಮಫಲಕಗಳಲ್ಲಿ ಕನ್ನಡ ಬಳಸುತ್ತಿಲ್ಲ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರೆ ಕನ್ನಡ ಅವಗಣನೆಗೆ ಪಾತ್ರವಾಗಿರುವುದು ಎದ್ದು ಕಾಣುತ್ತದೆ. ಇಂಗ್ಲೀಷ್ ಬರಹಗಳಿರುವ ನಾಮಫಲಕಗಳೇ ರಾರಾಜಿಸುತ್ತಿವೆ.
ಆಗೊಮ್ಮೆ ಈಗೊಮ್ಮೆ ಕನ್ನಡ ಸಂಘಟನೆಗಳು ಗುಟುರು ಹಾಕಿದಾಗ ಸರ್ಕಾರ ಎಚ್ಚರಿಕೆ ನೀಡಿ ಮರೆತು ಬಿಡುತ್ತದೆ.
ಹೈಕೋರ್ಟ್ ಸೂಚನೆ
ನಾಮಫಲಕದಲ್ಲಿ ಶೇ.60ರಷ್ಟು ಜಾಗವನ್ನು ಕನ್ನಡಕ್ಕೆ ಮೀಸಲಿಡಬೇಕೆಂದು 2017ರಲ್ಲೇ ಬಿಬಿಎಂಪಿ ಸುತ್ತೋಲೆ ಹೊರಡಿಸಿತ್ತು. ಆದರೆ, ಈ ಸುತ್ತೋಲೆಯನ್ನು ಕೆಲವು ಅಂಗಡಿ ಮಾಲೀಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ನಂತರ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಗಳ ಬೈಲಾ-2018ರಲ್ಲಿ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ನಿಯಮವನ್ನು ಬಿಬಿಎಂಪಿ ಸೇರ್ಪಡೆ ಮಾಡಿದೆ.
ಪ್ರಥಮ ಆದ್ಯತೆಯಲ್ಲಿ ದಪ್ಪ ಅಕ್ಷರಗಳಲ್ಲಿ ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕು. ಉಳಿದ ಶೇ.40ರಷ್ಟು ಜಾಗದಲ್ಲಿ ಇತರೆ ಭಾಷೆಯಲ್ಲಿ ತಮ್ಮ ನಾಮಫಲಕ ಪ್ರದರ್ಶಿಸಿಕೊಳ್ಳಬಹುದು. ಆದರೆ, ಎಲ್ಲ ಭಾಷೆಗಳಿಗಿಂತ ಕನ್ನಡದಲ್ಲಿ ದೊಡ್ಡ ಅಕ್ಷರಗಳಲ್ಲಿ ನಾಮಫಲಕ ಇರುವಂತೆ ನೋಡಿಕೊಳ್ಳಬೇಕು. ಕನ್ನಡ ನಾಮಫಲಕವಿಲ್ಲದಿದ್ದರೆ ಮಳಿಗೆಗಳಿಗೆ ಉದ್ದಿಮೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಬೈಲಾದಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ. ಈ ಕಾನೂನಿನಿಂದಲೂ ಕನ್ನಡ ಕಡ್ಡಾಯ ಸಾಧ್ಯವಾಗಿಲ್ಲ. 2024 ರಲ್ಲಿಯಾದರೂ ಕನ್ನಡಿಗ, ಕನ್ನಡ ಹೋರಾಟಗಾರರ ಕನಸು ಈಡೇರುವುದೇ ಎನ್ನುವ ಪ್ರಶ್ನೆ ಈಗ ಎದುರಾಗಿದೆ.
( ವರದಿ: ಎಚ್ ಮಾರುತಿ, ಬೆಂಗಳೂರು)
ವಿಭಾಗ