Bangalore News?:ಆಸ್ತಿ ತೆರಿಗೆ ಸಂಗ್ರಹ; ಗುರಿ ತಲುಪದ ಬಿಬಿಎಂಪಿ; ತಲುಪಬೇಕಿದ್ದ ಗುರಿ ಏನು? ಸಂಗ್ರಹವಾಗಿದ್ದು ಎಷ್ಟು?
May 21, 2024 01:17 PM IST
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರಿಗೆ ಸಂಗ್ರಹ ಮಾಡಿದ್ದೆಷ್ಟು
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ( BBMP) ತೆರಿಗೆ ಸಂಗ್ರಹದಲ್ಲಿ ( Tax collection) ಸಾಕಷ್ಟು ಪ್ರಯತ್ನ ನಡೆಸಿಯೂ ಗುರಿ ತಲುಪಲು ಆಗಿಲ್ಲ.
- ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಪ್ರಸಕ್ತ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ( BBMP) ಆಸ್ತಿ ತೆರಿಗೆ ಸಂಗ್ರಹ ನಿರೀಕ್ಷಿತ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. 2023-24 ಸಾಲಿನಲ್ಲಿ 4,601 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದ ಬಿಬಿಎಂಪಿ ಇದುವರೆಗೂ ಕೇವಲ 3900 ಕೋಟಿ ರೂ. ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ಮೇ 18 ರವರೆಗೆ 700.71 ಕೋಟಿ ರೂ ಗಳಷ್ಟು ಬಾಕಿ ಉಳಿದುಕೊಂಡಿದೆ. ಬಿಬಿಎಂಪಿಯ ಎಂಟೂ ವಲಯಗಳಿಂದ 3.63 ಲಕ್ಷ ಆಸ್ತಿಗಳ ತೆರಿಗೆ ಸಂಗ್ರಹವಾಗಬೇಕಿದೆ. ಬಿಬಿಎಂಪಿ ರಿಯಾಯಿತಿ ಸೇರಿದಂತೆ ಹಲವಾರು ಘೋಷಣೆ ಮಾಡಿದೆ. ಅಲ್ಲದೇ ಸಿಬ್ಬಂದಿ ಮೂಲಕವೂ ವಸೂಲಿಗೆ ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಆದರೂ ಫಲಿತಾಂಶ ಮಾತ್ರ ನಿರೀಕ್ಷೆಯಷ್ಟು ತಲುಪಿಲ್ಲ. ಇನ್ನೂ ಶೇ. 20ರಷ್ಟು ಕೊರತೆ ಇರುವುದು ಕಂಡು ಬರುತ್ತಿದೆ.
ಯಾವ ವಲಯದಲ್ಲಿ ಎಷ್ಟು?
ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹ ಬಾಕಿ ಉಳಿದುಕೊಂಡಿದೆ. ಈ ವಲಯದಲ್ಲಿ 76,132 ಆಸ್ತಿಗಳಿಂದ 174.88 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಬೇಕಿದೆ.
ಪಾಲಿಕೆಯ ಪಶ್ಚಿಮ ವಲಯದಲ್ಲಿ 35,084 ಆಸ್ತಿ ಗಳಿಂದ 103.26 ಕೋಟಿ ರೂ ಸಂಗ್ರಹವಾಗಬೇಕಿದೆ. ಇದೇ ವಲಯದ ಇತ್ತೀಚೆಗಷ್ಟೇ ಮುಚ್ಚಲಾಗಿದ್ದ ಮಂತ್ರಿ ಮಾಲ್ 2019 ರಿಂದ 41 ಕೋಟಿ ರೂ.ಗಳಷ್ಟು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಮೇ 10 ರಂದು ಒಂದು ವಾರದ ಮಟ್ಟಿಗೆ ಮಾಲ್ ಮುಚ್ಚಲಾಗಿತ್ತು. ನಂತರ ಮಾಲ್ ನ್ಯಾಯಾಲಯದ ಮೊರೆ ಹೋಗಿ ಬಾಗಿಲು ತೆರೆಯಲು ಅನುಮತಿ ಪಡೆದುಕೊಂಡಿತ್ತು. ಜುಲೈ 31 ರೊಳಗೆ 20 ಕೋಟಿ ರೂ. ಪಾವತಿಸುವುದಾಗಿ ಮಾಲ್ ಮಾಲೀಕರು ಪಾಲಿಕೆಗೆ ಮುಚ್ಚಳಿಕೆ ಬರೆದುಕೊಟ್ಟಿದೆ.
ದಕ್ಷಿಣ ವಲಯದ 35,742 ಆಸ್ತಿಗಳಿಂದ 108.28 ಕೋಟಿ ರೂ. ತೆರಿಗೆ ಸಂಗ್ರವಾಗಬೇಕಿದೆ.
ಬೊಮ್ಮನಹಳ್ಳಿ ವಲಯದ 57.043, ಆಸ್ತಿಗಳಿಂದ 24.02 ತೆರಿಗೆ ಸಂಗ್ರಹವಾಗಬೇಕಿದೆ. ದಾಸರಹಳ್ಳಿ ವಲಯದ 17,223 ಆಸ್ತಿಗಳಿಂದ ರೂ.98.04 ಕೋಟಿ ಸಂಗ್ರಹವಾಗಬೇಕಿದೆ. ಪೂರ್ವ ವಲಯದ 49,385 ಆಸ್ತಿಗಳಿಂದ 54.03 ಕೋಟಿ ರೂ ರಾಜರಾಜೇಶ್ವರಿ ವಲಯದ 55,073 ಆಸ್ತಿಗಳಿಂದ 53.71 ಕೋಟಿ ರೂ. ಯಲಹಂಕ ವಲಯದ 38,188 ಆಸ್ತಿಗಳಿಂದ 53.71 ಕೋಟಿ ರೂ. ಸಂಗ್ರಹವಾಗಬೇಕಿದೆ.
ಇದನ್ನೂ ಓದಿರಿ: BMTC News: Bangalore News: ಬೆಂಗಳೂರು ಕೆಂಪೇಗೌಡ ವಿಮಾನನಿಲ್ದಾಣದಲ್ಲಿ 7 ನಿಮಿಷ ನಂತರ ವಾಹನ ನಿಂತರೆ ಬೀಳಲಿದೆ ಭಾರೀ ಶುಲ್ಕ
ಕಟ್ಟಬೇಕಾದ ತೆರಿಗೆಗಿಂತಲೂ ಕಡಿಮೆ ಆಸ್ತಿ ತೆರಿಗೆ ಪಾವತಿಸಿರುವ 16,657 ಆಸ್ತಿಗಳನ್ನು ಬಿಬಿಎಂಪಿ ಗುರುತಿಸಿದೆ. ಇದರಿಂದಲೂ ಪಾಲಿಕೆಗೆ 231.77 ಕೋಟಿ ರೂ ಸಂದಾಯವಾಗಬೇಕಿದೆ. ಪಾಲಿಕೆ ಪ್ರತಿದಿನವೂ ಸಾರ್ವಜನಿಕರನ್ನು ಎಚ್ಚರಿಸುತ್ತಲೇ ಇದೆ. ಆದರೂ ಗುರಿಯನ್ನು ತಲುಪಲಾಗಿಲ್ಲ. ಇನ್ನು ಮುಂದೆ ಕಾನೂನು ಪ್ರಕಾರವೇ ಆಸ್ತಿ ತೆರಿಗೆ ಸಂಗ್ರಹಕ್ಕೆ ಮುಂದಾಗುವುದಾಗಿ ಬಿಬಿಎಂಪಿ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ತಿಳಿಸಿದ್ದಾರೆ.
ಡಿಕೆಶಿ ಸೂಚನೆ ಪರಿಣಾಮ
ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಬಿಎಂಪಿ ಮೇ1 ರಿಂದ ಜುಲೈ 31 ರವರೆಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5 ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿತ್ತು.
2023-24 ನೇ ಸಾಲಿನ 4,601 ಕೋಟಿ ರೂ.ಗಳ ಗುರಿಯನ್ನು ತಲುಪಲು ಸಾಧ್ಯವಾಗುವುದೇ ಎಂಬ ಅನುಮಾನ ಮೂಡಿದೆ. ಈ ಹಿಂದೆ ಬೆಂಗಳೂರು ಉಸ್ತುವಾರಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಲವು ಸುತ್ತಿನ ಸಭೆಗಳನ್ನು ನಡೆಸಿ ನಿರೀಕ್ಷಿತ ಸಂಗ್ರಹ ಮಾಡಲೇಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಷರತ್ತು ವಿಧಿಸಿದ್ದರು. 2024-25ನೇ ಸಾಲಿಗೆ 6000 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸಲು ಪಾಲಿಕೆ ಗುರಿ ಹಾಕಿಕೊಂಡಿದೆ.
ಹಿಂದಿನ ವರ್ಷಗಳಲ್ಲೂ ಬಾಕಿ
ಈ ಹಿಂದಿನ ಆಸ್ತಿ ತೆರಿಗೆ ಸಂಗ್ರಹದ ಗುರಿ ಮತ್ತು ಸಂಗ್ರಹವಾದ ತೆರಿಗೆ ಎಷ್ಟು ಎನ್ನುವ ಮಾಹಿತಿಯನ್ನೂ ಬಿಬಿಎಂಪಿ ನೀಡಿದೆ. 2022-23ರಲ್ಲಿ 4,189 ಕೋಟಿ ರೂ. ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದು, 3,332 ಕೋಟಿ ರೂ. ಮಾತ್ರ ಸಂಗ್ರಹವಾಗಿತ್ತು. 2021-22ರಲ್ಲಿ 4000 ಕೋಟಿ ರೂ ಗುರಿ ತಲುಪಬೇಕಿದ್ದು, ಕೇವಲ 3,086 ಕೋಟಿ ರೂ ಮಾತ್ರ ಸಂಗ್ರಹವಾಗಿತ್ತು. 2020-21ರಲ್ಲಿ 3,500 ಕೋಟಿ ರೂ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಗೆ 2,860 ಕೋಟಿ ರೂ ಸಂಗ್ರಹವಾಗಿತ್ತು. 2019-20 ರಲ್ಲಿ 3,500 ಕೋಟಿ ರೂ ಸಂಗ್ರಹವಾಗಬೇಕಿದ್ದು, 2,659 ಸಂಗ್ರಹವಾಗಿತ್ತು. 2018-19ರಲ್ಲಿ 3,100 ಕೋಟಿ ಸಂಗ್ರಹದ ಗುರಿ ತಲುಪಬೇಕಿದ್ದು, 2,529 ಕೋಟಿ ರೂ. ಮಾತ್ರ ಸಂಗ್ರಹಿಸಲು ಪಾಲಿಕೆಗೆ ಸಾಧ್ಯವಾಗಿತ್ತು.
(ವರದಿ: ಎಚ್. ಮಾರುತಿ, ಬೆಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)