BBMP Elections: ಬಿಬಿಎಂಪಿಗೆ ನಡೆಯದ ಚುನಾವಣೆ: ಕೇಳೋರು ಯಾರು ಬೆಂಗಳೂರು ಜನತೆ ಬವಣೆ, ವಿಳಂಬಕ್ಕೆ ಕಾರಣ ಹಲವು
Dec 23, 2023 01:16 PM IST
ಬಿಬಿಎಂಪಿ ಚುನಾವಣೆ ನಡೆಸಲು ಬಿಜೆಪಿ ನಂತರ ಕಾಂಗ್ರೆಸ್ ಕೂಡ ಮೀನ ಮೇಷ ಎಣಿಸುತ್ತಿದೆ.
- BBMP Elections Delay ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ( BBMP Elections) ಡಿಸೆಂಬರ್ ಒಳಗೆ ಚುನಾವಣೆ ನಡೆಸುವುದಾಗಿ ಕಾಂಗ್ರೆಸ್ ಸರ್ಕಾರ( Karnataka Congress government) ಹೇಳಿತ್ತು. ಈವರೆಗೂ ಚುನಾವಣೆ ಸೂಚನೆಗಳು ಕಾಣುತ್ತಿಲ್ಲ. ಏನಿರಬಹುದು ಕಾರಣ. ಇಲ್ಲಿದೆ ವರದಿ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( BBMP) ಗೆ ಚುನಾವಣೆ ನಡೆಯದೇ ಮೂರು ವರ್ಷಗಳೇ ಕಳೆದು ಹೋಯಿತು. ಬಿಜೆಪಿ ನಂತರ ಕಾಂಗ್ರೆಸ್ ಕೂಡ ವಿಳಂಬ ನೀತಿ ಅನುಸರಿಸುತ್ತಾ ದಿನ ದೂಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಚುನಾವಣೆ ನಡೆಸಲು ಬೇಕಾದ ವಾರ್ಡ್‌ಗಳ ವಿಂಗಡಣೆ. ಮೀಸಲಾತಿ ಹಂಚಿಕೆಯ ಪ್ರಕ್ರಿಯೆಗಳು ಎರಡೆರಡು ಬಾರಿ ಬದಲಾಗಿವೆ. ಆದರೂ ಅವೆಲ್ಲವೂ ಬರೀ ಕಣ್ಣೊರೆಸುವ ತಂತ್ರಗಳೇ ಎನ್ನುವ ಅನುಮಾನಗಳು ಜನರನ್ನು ಕಾಡತೊಡಗಿವೆ.
ವಿಳಂಬಕ್ಕೆ ಕಾರಣವೇನು
ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತ 2020 ಸೆಪ್ಟಂಬರ್ ಗೆ ಅಂತ್ಯಗೊಂಡಿದ್ದು, ಇದುವರೆಗೂ ಚುನಾವಣೆ ನಡೆದಿಲ್ಲ. ಆರಂಭದಲ್ಲಿ ಕೋವಿಡ್ ನೆಪದಲ್ಲಿ ಚುನಾವಣೆಯನ್ನು ಮುಂದೂಡುತ್ತಾ ಬರಲಾಗಿತ್ತು. ನಂತರ ರಚನೆಯಾದ ಬಿಜೆಪಿ ಸರ್ಕಾರ ಚುನಾವಣೆಯನ್ನು ನಡೆಸಲೇ ಇಲ್ಲ.ಬಿಬಿಎಂಪಿ ವಾರ್ಡ್ ಗಳ ಸಂಖ್ಯೆಯನ್ನು 249ಕ್ಕೆ ಹೆಚ್ಚಿಸಿ ಮತ್ತೆ 225ಕ್ಕೆ ಇಳಿಸಲಾಯಿತು. ಈ ಮಧ್ಯೆ ಎರಡು ಬಾರಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಎರಡು ಬಾರಿ ವಾರ್ಡ್ ಮೀಸಲಾತಿಯನ್ನು ಬದಲಾಯಿಸಲಾಯಿತು. ಆದರೂ ಚುನಾವಣೆ ನಡೆಯಲೇ ಇಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿರಿಯ ಶಾಸಕ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ನಡೆಸುವ ಸಂಬಂಧ ಆಂತರಿಕ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಡಿಸೆಂಬರ್ ಅಂತ್ಯಕ್ಕೆ ಚುನಾವಣೆ ನಡೆಸುವ ಭರವಸೆ ನೀಡಿತ್ತಾದರೂ ಚುನಾವಣೆ ನಡೆಯಲೇ ಇಲ್ಲ. ಇದೀಗ ಮತ್ತೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಲೋಕಸಭಾ ಚುನಾವಣೆಗೂ ಮುನ್ನ ಬಿಬಿಎಂಪಿಗೆ ಚುನಾವಣೆ ನಡೆಸಲು ಒತ್ತಡ ಹೇರುತ್ತಿದ್ದಾರೆ. ಆದರೆ ಸರ್ಕಾರ ಲೋಕಸಭಾ ಚುನಾವಣೆ ನಂತರವಷ್ಟೇ ಚುನಾವಣೆ ನಡೆಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಚುನಾವಣೆ ವಿಷಯ ಪ್ರಸ್ತಾಪ ಆದಾಗಲೆಲ್ಲಾ ಡಿಸೆಂಬರ್‌ನೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಕ್ಕೆ ಬಂದ ದಿನದಿಂದಲೂ ಹೇಳುತ್ತಿದ್ದರು.
2023 ರಲ್ಲಿ ಚುನಾವಣೆ ನಡದೇ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಉಚಿತ ಗ್ಯಾರಂಟಿ ಬೆಂಬಲವಿದ್ದು, ಕಾಂಗ್ರೆಸ್ ಸರ್ಕಾರ ಚುನಾವಣೆ ನಡೆಸಲಿದೆ ಎಂಬ ವಿಶ್ವಾಸವೂ ಇತ್ತು. ಆದರೆ ಹಾಗಾಗಲಿಲ್ಲ.
ಚುನಾವಣೆಗೆ ಬೇಕಾದ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ. ಮೀಸಲಾತಿ ನಿಗದಿಪಡಿಸಲು ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂಬ ಕಾರಣಗಳನ್ನು ಮುಂದೊಡ್ಡಲಾಗುತ್ತಿದೆ.
ಲೋಕಸಭೆ ಚುನಾವಣೆ ರಕ್ಷಣೆ
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಬಿಬಿಎಂಪಿಗೆ ಚುನಾವಣೆ ನಡೆಸುವುದು ಯಾವುದೇ ರಾಜಕೀಯ ಪಕ್ಷಗಳಿಗೆ ಬೇಕಿಲ್ಲ.
ಚುನಾವಣೆಗೆ ಒಂದೂವರೆ ತಿಂಗಳ ಮೊದಲು ಅಧಿಸೂಚನೆ ಪ್ರಕಟವಾಗಬೇಕು. ಅದಕ್ಕಿಂತ ಮೊದಲು ಮತದಾರರ ಪಟ್ಟಿ, ಅಧಿಕಾರಿಗಳ ನೇಮಕ ಸೇರಿದಂತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಒಂದು ತಿಂಗಳು ಬೇಕಿದೆ. ಹೀಗಾಗಿ 2024ರ ಮೇ ತಿಂಗಳಿಗೂ ಮುನ್ನ ಬಿಬಿಎಂಪಿಗೆ ಚುನಾವಣೆ ನಡೆಯುವುದಿಲ್ಲ.
ಲೋಕಸಭೆ ಚುನಾವಣೆ ಫಲಿತಾಂಶವೂ ಬಿಬಿಎಂಪಿ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಫಲಿತಾಂಶ ಪೂರಕವಾಗಿದ್ದರೆ ಆಡಳಿತಾರೂಢ ಕಾಂಗ್ರೆಸ್ ಕೂಡಲೇ ಚುನಾವಣೆಗೆ ಮುಂದಾಗಬಹುದು. ಇಲ್ಲವೇ ಮತ್ತಷ್ಟು ವಿಳಂಬ ಮಾಡಬಹುದು.
ಸಾರ್ವಜನಿಕರಿಗೆ ತೊಂದರೆ
ಕುಡಿಯುವ ನೀರು, ರಸ್ತೆ, ಒಳ ಚರಂಡಿ, ಬೀದಿ ದೀಪ ಮೊದಲಾದ ಮೂಲಭೂತ ಸಮಸ್ಯೆಗಳನ್ನು ಯಾರಲ್ಲಿ ಹೇಳಿಕೊಳ್ಳಲು ಯಾರೂ ಇಲ್ಲ. ಅಧಿಕಾರಿಗಳು ಸ್ಪಂದಿಸುವುದಿಲ್ಲ. ಸ್ಥಳೀಯ ಶಾಸಕರು ಕೈಗೆ ಸಿಗುವುದಿಲ್ಲ. ಸಣ್ಣ ಸಣ್ಣ ಸಮಸ್ಯೆಗಳಿಗೂ ಎಂ ಎಲ್ ಎ ಭೇಟಿ ಮಾಡಲು ಅಸಾಧ್ಯ. ರಾಜಕೀಯ ಪಕ್ಷಗಳ ಹುನ್ನಾರಕ್ಕೆ ಬಲಿಯಾಗುತ್ತಿರುವುದು ಬೆಂಗಳೂರಿನ ನಾಗರೀಕರು ಎಂದು ಸ್ಥಳೀಯರು ಆರೋಪಿಸುತ್ತಾರೆ.
ಯಾವುದೇ ಪಕ್ಷಕ್ಕೂ ಚುನಾವಣೆ ಬೇಕಿರಲಿಲ್ಲ ಎನ್ನುವುದು ಸತ್ಯವಾದರೂ ಸುದೀರ್ಘ ಅವಧಿಗೆ ಸ್ಥಳೀಯ ಸಂಸ್ಥೆಗೆ ಜನಪ್ರತಿನಿಧಿಗಳಿಲ್ಲದಿರುವುದು ಪ್ರಜಾಪ್ರಭುತ್ವದ ಅಣಕ ಮಾಡಿದಂತೆಯೇ ಸರಿ ಎನ್ನುವ ದೂರು ಮಾತ್ರ ಸಾಮಾನ್ಯವಾಗಿದೆ.
ಗೊಂದಲ ಎಲ್ಲಿದೆ?
- ಬಿಬಿಎಂಪಿ ವ್ಯಾಪ್ತಿಯ 225 ವಾರ್ಡ್‌ಗಳ ಮೀಸಲಾತಿಯನ್ನು 10 ವರ್ಗಗಳಿಗೆ ಹಂಚಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶೇ. 24.10 (54–55 ವಾರ್ಡ್), ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ. 34 ರಷ್ಟು ಸ್ಥಾನಗಳನ್ನು ಮೀಸಲಿಡಬೇಕು. ಹಿಂದುಳಿದ ಪ್ರವರ್ಗ– ಎ (ಬಿಸಿಎ)ಗೆ 77 ವಾರ್ಡ್ ಹಾಗೂ 11 ವಾರ್ಡ್‌ಗಳನ್ನು ಹಿಂದುಳಿದ ಪ್ರವರ್ಗ– ಬಿ ಪ್ರವರ್ಗಕ್ಕೆ ಮೀಸಲಿಡಬೇಕಾಗುತ್ತದೆ.\
- ಒಬಿಸಿಗೆ ಆ ಪ್ರಮಾಣದಲ್ಲಿ ವಾರ್ಡ್ ಮೀಸಲು ನೀಡಬೇಕಾದರೆ ಬೆಂಗಳೂರಿನಲ್ಲಿ ಒಬಿಸಿ ಜನಸಂಖ್ಯೆ ಕಡಿಮೆ ಇದೆ. ಹೀಗಾಗಿ, ಮೀಸಲಾತಿ ನಿಗದಿಪಡಿಸುವಲ್ಲಿ ಗೊಂದಲವಾಗುತ್ತಿದೆ.
- ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಾನು ನಡೆಸಿದ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಇನ್ನೂ ನೀಡಿಲ್ಲ. ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ಸಾಧಕ ಬಾಧಕ ಕುರಿತು ಚರ್ಚೆ ನಡೆಯಬೇಕು.
- ನಂತರ ಅದರ ಅನುಸಾರ ಬಿಬಿಎಂಪಿ ವಾರ್ಡ್ ಮೀಸಲಾತಿ ನಿಗದಿಪಡಿಸಬೇಕು. ಕರಡು ಪಟ್ಟಿ, ಅಂತಿಮ ಪಟ್ಟಿ ಅಧಿಸೂಚನೆಗೆ ಸಾಕಷ್ಟು ಸಮಯ ಹಿಡಿಯುತ್ತದೆ.