logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Politics: ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕ ಆಯ್ಕೆಗೆ ಇಂದು ಸಭೆ: ಈ ಮೂವರಲ್ಲಿ ವರಿಷ್ಠರಿಗೆ ಯಾರು ಹಿತವರು

Karnataka Politics: ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕ ಆಯ್ಕೆಗೆ ಇಂದು ಸಭೆ: ಈ ಮೂವರಲ್ಲಿ ವರಿಷ್ಠರಿಗೆ ಯಾರು ಹಿತವರು

HT Kannada Desk HT Kannada

Nov 17, 2023 08:36 AM IST

google News

ಬೆಂಗಳೂರಿನಲ್ಲಿ ವಿಧಾನಸಭೆ ಪ್ರತಿ ಪಕ್ಷನ ಆಯ್ಕೆಗೆ ಬಿಜೆಪಿ ಶಾಸಕಾಂಗ ಸಭೆ ಶುಕ್ರವಾರ ನಡೆಯಲಿದೆ.

    • BJP Karnataka CLP leader ಕರ್ನಾಟಕದ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಶಾಸಕಾಂಗ ಸಭೆಯನ್ನು ಶುಕ್ರವಾರ ಕರೆಯಲಾಗಿದ್ದು, ಬಹುತೇಕ ಆಯ್ಕೆ ಅಂತಿಮಗೊಳ್ಳಲಿದೆ. 
ಬೆಂಗಳೂರಿನಲ್ಲಿ ವಿಧಾನಸಭೆ ಪ್ರತಿ ಪಕ್ಷನ ಆಯ್ಕೆಗೆ ಬಿಜೆಪಿ ಶಾಸಕಾಂಗ ಸಭೆ ಶುಕ್ರವಾರ ನಡೆಯಲಿದೆ.
ಬೆಂಗಳೂರಿನಲ್ಲಿ ವಿಧಾನಸಭೆ ಪ್ರತಿ ಪಕ್ಷನ ಆಯ್ಕೆಗೆ ಬಿಜೆಪಿ ಶಾಸಕಾಂಗ ಸಭೆ ಶುಕ್ರವಾರ ನಡೆಯಲಿದೆ.

ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದು ಆರು ತಿಂಗಳ ಬಳಿಕ ಕೊನೆಗೂ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕನ ಆಯ್ಕೆಗೆ ಮುಹೂರ್ತ ಕೂಡಿ ಬಂದಿದೆ.

ವಿಧಾನಸಭೆಗೆ ಚುನಾವಣೆ ನಡೆದು, ನೂತನ ಕಾಂಗ್ರೆಸ್ ಸರಕಾರ ರಚನೆಯಾಗಿ 6 ತಿಂಗಳು ಕಳೆದ ನಂತರ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕರು ಹಾಗೂ ಸಚೇತಕರನ್ನು ನೇಮಕ ಮಾಡಲಾಗುತ್ತಿದೆ. ಇದಕ್ಕಾಗಿ ನವೆಂಬರ್‌ 17ರ ಶುಕ್ರವಾರ ಶಾಸಕಾಂಗ ಪಕ್ಷದ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದೆ.

ಯಾರ ಹೆಸರು ಪ್ರಮುಖ

ವಿರೋಧಪಕ್ಷದ ನಾಯಕ ಸ್ಥಾನದ ಆಯ್ಕೆಗೆ ಪ್ರಮುಖವಾಗಿ ಮೂವರ ಹೆಸರು ಮುನ್ನೆಲೆಗೆ ಬಂದಿದೆ. ಶಾಸಕರಾದ ಆರ್‌.ಅಶೋಕ, ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ವಿ.ಸುನೀಲ್‌ಕುಮಾರ್‌ ಅವರ ಹೆಸರುಗಳು ಚಾಲ್ತಿಯಲ್ಲಿವೆ.

ಪಕ್ಷದ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಲಾಗಿದ್ದು, ವಿಜಯೇಂದ್ರ ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಹಾಗಾಗಿ ವಿಪಕ್ಷ ನಾಯಕ ಸ್ಥಾನವನ್ನು ಒಕ್ಕಲಿಗ ಅಥವಾ ಹಿಂದುಳಿದ ವರ್ಗಕ್ಕೆ ನೀಡುವ ಲೆಕ್ಕಾಚಾರವನ್ನು ಬಿಜೆಪಿ ಹೊಂದಿದೆ.

ಒಕ್ಕಲಿಗ ಸಮುದಾಯದಿಂದ ಆರ್‌.ಅಶೋಕ ಮತ್ತು ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಹಿಂದುಳಿದ ಸಮುದಾಯದ ವಿ.ಸುನಿಲ್‌ಕುಮಾರ್ ಅವರ ಆಯ್ಕೆ ಕುರಿತು ಲೆಕ್ಕಾಚಾರ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಸ್ಥಾನಕ್ಕೂ ಮಾಜಿ ಸಚಿವ ಕೋಟಾ ಶ್ರೀನಿವಾಸಪೂಜಾರಿ, ಎನ್‌.ರವಿಕುಮಾರ್‌ ಅವರ ಹೆಸರಿದ್ದು, ಒಬ್ಬರಿಗೆ ಅವಕಾಶ ಸಿಗಬಹುದು.

ಒಮ್ಮತದ ಆಯ್ಕೆ ನಿರೀಕ್ಷೆ

ಶುಕ್ರವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಪಕ್ಷದ ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಇದು ಮೊದಲ ಸಭೆಯೂ ಹೌದು. ವಿರೋಧಪಕ್ಷದ ನಾಯಕ ಸ್ಥಾನದ ಆಯ್ಕೆ ಪ್ರಕ್ರಿಯೆಗಾಗಿ ಕೇಂದ್ರದಿಂದ ಇಬ್ಬರು ವೀಕ್ಷಕರು ಆಗಮಿಸಲಿದ್ದಾರೆ. ಬಹುತೇಕ ಒಮ್ಮತ ಮೂಲಕ ಆಯ್ಕೆ ನಡೆಯಲಿದೆ ಎಂದು ಪಕ್ಷದ ಶಾಸಕರೊಬ್ಬರು ಹೇಳುತ್ತಾರೆ.

ವಿಪಕ್ಷ ನಾಯಕನಾಗಲು ಮೂವರೂ ಉತ್ಸುಕರಾಗಿದ್ದಾರೆ. ಇವರೆಲ್ಲರೂ ಪಕ್ಷದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಸೆಳೆಯಲು ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಲಾಗಿದೆ. ಈಗ ಹಿಂದುಳಿದ ಇಲ್ಲವೇ ಒಕ್ಕಲಿಗ ಸಮುದಾಯವನ್ನು ಓಲೈಸಲು ಯಾರಿಗೆ ಅಧಿಕಾರ ಎನ್ನುವ ಗುಟ್ಟು ರಟ್ಟಾಗಲು ಶುಕ್ರವಾರ ಸಂಜೆಯವರೆಗೆ ಕಾಯಲೇಬೇಕಿದೆ ಎನ್ನುವುದು ಬಿಜೆಪಿ ಮುಖಂಡರೊಬ್ಬರ ವಿವರಣೆ.

ಮೂವರ ಆಯ್ಕೆಗೆ ಮಾನದಂಡ ಏನು?

ಆರ್‌. ಅಶೋಕ ಅವರು ಹಿರಿಯ ಶಾಸಕರಲ್ಲಿ ಒಬ್ಬರು. ಕ್ಷೇತ್ರ ಪುನರ್ ವಿಂಗಡನೆಗೂ ಮುನ್ನ ಉತ್ತರಹಳ್ಳಿ ನಂತರ ಪದ್ಮನಾಭನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ದ ಬಲವಂತದ ಸ್ಪರ್ಧೆ ಮಾಡಿ ಠೇವಣಿ ಕಳೆದುಕೊಂಡಿದ್ದರು. ಜೊತೆಗೆ ಮೂರು ವರ್ಷಗಳಿಂದ ಅವರಿಗೆ ಹಿಂಬಡ್ತಿ ನೀಡುತ್ತಾ ಬರಲಾಗಿದೆ. ಅಶೋಕ್ ಒಂದು ಕಾಲದಲ್ಲಿ ಬೆಂಗಳೂರಿನ ಮೇಲೆ ಪ್ರಬಲ ಹಿಡಿತ ಹೊಂದಿದ್ದರು. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವಧಿಯಲ್ಲಿ ಇವರ ಹಿಡಿತ ಸಡಿಲಗೊಂಡಿದೆ.

ಸರ್ಕಾರವನ್ನು ಎದುರಿಸುವ ವಾಕ್ಚಾತುರ್ಯದಲ್ಲಿ ಕಟ್ಟಿ ಹಾಕುವ ಸಾಮರ್ಥ್ಯ ಇಲ್ಲ ಎನ್ನುವುದು ಕೊರತೆಯಾಗಿದೆ. ಹಿರಿತನವೇ ಮುಖ್ಯವಾದಲ್ಲಿ ಇವರ ಆಯ್ಕೆ ಸುಗಮ.

ಇನ್ನು ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಲ್ಲೇಶ್ವರಂ ಕ್ಷೇತ್ರದ ಪ್ರತಿನಿಧಿ. ಒಂದು ಬಾರಿಗೆ ಮಾತ್ರ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಕೆಲಸ ಮಾಡಿದ್ದಕ್ಕಿಂತ ಸದ್ದು ಮಾಡಿದ್ದೇ ಹೆಚ್ಚು. ಆದರೂ ತಿರುಗೇಟು ನೀಡುವ ಸಾಮರ್ಥ್ಯ ಇದೆ.

ಸುನಿಲ್‌ಕುಮಾರ್ ಕಾರ್ಕಳ ಕ್ಷೇತ್ರದ ಶಾಸಕ. ಒಂದು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಕ್ಷೇತ್ರ ಹೊರತುಪಡಿಸಿ ರಾಜ್ಯದಲ್ಲಿ ಅಪರಿಚಿತ ಹೆಸರು. ವಯಸ್ಸಿನಲ್ಲಿ ಕಿರಿಯ.

ಸಿದ್ದು ಎದುರಿಸುವ ಛಾತಿ

ಯಾರೇ ವಿಪಕ್ಷ ನಾಯಕರಾದರೂ ಸಿದ್ದರಾಮಯ್ಯ ಮತ್ತು ಅವರ ಘಟಾನುಘಟಿ ತಂಡವನ್ನು ಎದುರಿಸುವುದು ಸುಲಭ ಅಲ್ಲ.

ಈ ಹಿಂದೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಯಡಿಯೂರಪ್ಪ ಸೋತಿದ್ದ ಕಾರಣಕ್ಕೆ ಜಗದೀಶ ಶೆಟ್ಟರ್ ಪ್ರತಿಪಕ್ಷದ ನಾಯಕರಾಗಿದ್ದರು. ಅನುಭವದ ಕೊರತೆ ಇದ್ದ ಕಾರಣಕ್ಕೆ ಶೆಟ್ಟರ್ ಪೇಲವ ಅನ್ನಿಸಿದ್ದರು. ಈಗಲೂ ಅದೇ ಪರಿಸ್ಥಿತಿ ಮುಂದುವರಿಯಬಹುದು ಎಂದು ಊಹಿಸಬಹುದಾಗಿದೆ.

65 ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಯಡಿಯೂರಪ್ಪ ಅವರಿಗೆ ಅಂತಹ ಛಾತಿ ಇತ್ತು. ಪಾದರಸದಂತೆ ಕೆಲಸ ಮಾಡುವ ಮತ್ತು ತಕ್ಷಣವೇ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿತ್ತು. ಯಾರೇ ಪ್ರತಿಪಕ್ಷ ನಾಯಕನಾದರೂ ಕಾಂಗ್ರೆಸ್ ಗೆ ಅಂತಹ ಕಷ್ಟವಾಗುವ ಪರಿಸ್ಥಿತಿ ಎದುರಾಗಲಿಕ್ಕಿಲ್ಲ ಎನ್ನುವುದು ಬಿಜೆಪಿ ಒಳಗಿನ ಅಭಿಪ್ರಾಯ.

(ವಿಶೇಷ ವರದಿ: ಎಚ್. ಮಾರುತಿ. ಬೆಂಗಳೂರು)

ಇದನ್ನೂ ಓದಿರಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ