Namma Metro: ಬೆಂಗಳೂರು ಮೆಟ್ರೋ ಹಳಿಗೆ ಹಾರಿ ಉದ್ಯಮಿ ಆತ್ಮಹತ್ಯೆ, 7 ತಿಂಗಳ ಅಂತರದಲ್ಲಿ 8ನೇ ಪ್ರಕರಣ; ಸುರಕ್ಷತಾ ಕ್ರಮಕ್ಕೆ ಸಲಹೆ
Aug 04, 2024 06:34 AM IST
ಬೆಂಗಳೂರು ನಮ್ಮ ಮೆಟ್ರೋ ಮಾರ್ಗದಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ನಡೆದಿದೆ.
- Bangalore News ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಉದ್ಯಮಿಯೊಬ್ಬರು ರೈಲು ಸಂಚರಿಸುವಾಗಲೇ ಹಾರಿ ಮೃತಪಟ್ಟಿರುವ ಘಟನೆ ನಡೆದಿದೆ.
- ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮತ್ತೊಂದು ಪ್ರಕರಣ ನಡೆದಿದೆ. ಏಳು ತಿಂಗಳ ಅಂತರದಲ್ಲಿ ಎಂಟನೇ ಇಂತಹ ಪ್ರಕರಣ ವರದಿಯಾಗಿದೆ. ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ 57 ವರ್ಷದ ಉದ್ಯಮಿಯೊಬ್ಬರು ಮೆಟ್ರೋ ರೈಲು ಬರುವ ಸಮಯಕ್ಕೆ ಸರಿಯಾಗಿ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಶನಿವಾರ ಸಂಜೆ 5.45 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ ಸಮಯದಲ್ಲಿ ಮೆಟ್ರೋ ನಿಲ್ದಾಣ ಕಡೆ ಬರುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬರು ಏಕಾಏಕಿ ಹಳಿಗೆ ಹಾರಿದರು. ಡಿಕ್ಕಿ ಹೊಡೆದ ರಭಸಕ್ಕೆ ಅಲ್ಲಿಯೇ ಮೃತಪಟ್ಟರು. ಅಲ್ಲಿದ್ದವರು ಅವರನ್ನು ಹಿಡಿದುಕೊಳ್ಳಲು ಆಗದಷ್ಟು ಕೆಲವೇ ಕ್ಷಣದಲ್ಲಿ ದುರಂತ ನಡೆದು ಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಮೃತರನ್ನು ಕುಮಾರಸ್ವಾಮಿ ಲೇಔಟ್ ನಿವಾಸಿ ನವೀನ್ ಕುಮಾರ್ ಅರೋರಾ ಎಂದು ಗುರುತಿಸಲಾಗಿದೆ. ಪತ್ನಿ ಹಾಗೂ ಮಕ್ಕಳಿದ್ದಾರೆ. ಉತ್ತರ ಭಾರತದವರಾದ ನವೀನ್ ಕುಮಾರ್ ಕೆಲ ವರ್ಷದಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಉದ್ಯಮದಲ್ಲಿ ಆದ ನಷ್ಟದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಕುರಿತು ಕುಟುಂಬದವರು ಹಾಗೂ ಪರಿಚಯಸ್ಥರ ಹೇಳಿಕೆ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅವಘಡದ ನಂತರ ಪ್ರಯಾಣಿಕರು ಕೆಲ ಕಾಲ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಲಚೇನಹಳ್ಳಿ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ಕಡೆಗೆ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಎರಡು ಗಂಟೆ ನಂತರ ಸಂಚಾರ ಸರಿಯಾಯಿತು. ಆದರೆ ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದು ಮೆಟ್ರೋ ಸಂಸ್ಥೆ ತಿಳಿಸಿದೆ.
ಈ ಎಂಟು ತಿಂಗಳಲ್ಲಿ ಮೆಟ್ರೋ ಹಳಿಗೆ ಹಾರಿದ ಘಟನೆ ಐದನೇ ಇದಾಗಿದೆ. ಮಾರ್ಚ್ ತಿಂಗಳಲ್ಲಿ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ನಡೆದಿತ್ತು. ಜನವರಿಯಲ್ಲಿ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಕೇರಳ ಮೂಲದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದನಾದರೂ ಬದುಕುಳಿದಿದ್ದ. ಇಂದಿರಾನಗರ ನಿಲ್ದಾಣದದಲ್ಲಿ ಮಹಿಳೆಯೊಬ್ಬರು ಹಳಿಯ ಬಳಿ ಬಿದ್ದಿದ್ದ ಮೊಬೈಲ್ ಎತ್ತಿಕೊಳ್ಳಲು ಹಳಿಗೆ ಹಾರಿದ್ದರು. ಜೂನ್ ತಿಂಗಳಲ್ಲಿ ಹೊಸಹಳ್ಳಿ ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ್ದನಾದರೂ ಸಾಧ್ಯವಾಗಿರಲಿಲ್ಲ.
ಮೊನ್ನೆಯಷ್ಟೇ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಣದಲ್ಲಿ ನಾಲ್ಕು ವರ್ಷದ ಮಗುವೊಂದು ಪೋಷಕರೊಂದಿಗೆ ಆಟವಾಡುತ್ತಾ ಆಯತಪ್ಪಿ ಹಳಿಗೆ ಬಿದ್ದಿದ್ದು ಬಿಎಂಆರ್ ಸಿಎಲ್ ಸಿಬ್ಬಂದಿ ರಕ್ಷಿಸಿದ್ದರು.
ಮೆಟ್ರೋ ನಿಲ್ದಾಣಗಳು ಆತ್ಮಹತ್ಯೆ ಅಥವಾ ಅನಾಹುತದ ತಾಣಗಳಾಗುತ್ತಿವೆಯೇ ಎಂಬ ಶಂಕೆ ಪ್ರಯಾಣಿಕರನ್ನು ಕಾಡತೊಡಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಅಲ್ಲಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿ ಇದ್ದರೂ ಸುರಕ್ಷತೆಗೆ ಇನ್ನಷ್ಟು ಒತ್ತು ಬೇಕಾಗಿದೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾದರೂ ಇನ್ನು ಮುಂದೆ ಪ್ರತಿಯೊಂದು ನಿಲ್ದಾಣದಲ್ಲೂ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಾರ್ವಜನಿಕರು ಆಗ್ರಹಪಡಿಸಿದ್ದಾರೆ.
(ವರದಿ: ಎಚ್.ಮಾರುತಿ, ಬೆಂಗಳೂರು)
(ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.)