Bangalore water Crisis: ಬೆಂಗಳೂರು ಕುಡಿವ ನೀರಿಗೆ ಜೊಂಡಿನ ಅಡ್ಡಿ, ರಾತ್ರಿಯಿಡೀ ಕಾರ್ಯಾಚರಣೆ ನಡಸಿದ ಜಲಮಂಡಳಿ
Mar 24, 2024 05:29 PM IST
ಬೆಂಗಳೂರಿಗೆ ನೀರು ಸರಬರಾಜು ಮಾಡುವ ಫೀಡರ್‌ಗಳಲ್ಲಿ ಜೊಂಡು ಬೆಳೆದಿದ್ದು, ಇದನ್ನು ತೆಗೆದು ಹಾಕಲಾಗಿದೆ.
- ಏಕಾಏಕಿ ಬೀಸಿದ ಗಾಳಿಗೆ ಕಾವೇರಿ ಪೈಪ್‌ಲೈನ್ ನಲ್ಲಿ ಜೊಂಡು ಸಿಕ್ಕಿಕೊಂಡ ಜೊಂಡು ಮತ್ತು ಕಳೆ ತುಂಬಿಕೊಂಡಿತ್ತು. ನೀರಿನ ಹರಿವಿನಲ್ಲಿ ತೊಂದರೆ, ರಾತ್ರಿಯಿಡೀ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸರಿಪಡಿಸಿದ ಜಲಮಂಡಳಿ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ ವ್ಯಕ್ತವಾಗಿದೆ.
- ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರು ನೀರು ಸರಬರಾಜಿಗೆ ಅಡ್ಡಿ ಆತಂಕಗಳು ಒಂದೆರಡಲ್ಲ. ಮೊದಲೇ ನೀರಿಲ್ಲ. ಅಂತರ್ಜಲ ಕುಸಿದಿದೆ. ಜಲಾಶಯಗಳಲ್ಲೂ ನೀರಿನ ಮಟ್ಟ ತಗ್ಗಿದೆ. ಹೀಗಿರುವಾಗ ಬೆಂಗಳೂರಿಗೆ ನೀರು ಸರಬರಾಜು ಮಾಡುತ್ತಿದ್ದರೂ ಆತಂಕಗಳು ಎದುರಾಗಿವೆ. ಅದು ಶನಿವಾರ ಆದ ಅಡ್ಡಿಗಳಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯವುಂಟಾಗಿತ್ತು. ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಗೊಂದಲ ಬಗೆಹರಿಸಿದ್ದಾರೆ. ಇದರಿಂದ ಭಾನುವಾರ ಆಗಬಹುದಾಗಿದ್ದ ಹೆಚ್ಚಿನ ಸಮಸ್ಯೆಯನ್ನು ತಡೆದಿದ್ದು, ಮಂಡಳಿಯ ತುರ್ತು ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಜಲಮಂಡಳಿ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ.ಕಾಲುವೆ ಅಥವಾ ನಾಲೆಗಳ ಪಾತ್ರದಲ್ಲಿ ಬೆಳೆದುಕೊಂಡಿರುವ ಜೊಂಡು (ನೀರಿನಲ್ಲಿ ಬೆಳೆಯುವ ಸಸ್ಯಗಳು) ಕಾವೇರಿ ನೀರಿನ ಪೈಪ್‌ಲೈನ್ ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಸರಾಗವಾಗಿ ನೀರಿನ ಹರಿವಿನಲ್ಲಿ ತೊಂದರೆ ಎದುರಾಗಿತ್ತು. ಶನಿವಾರ ರಾತ್ರಿ ಏಕಾಏಕಿ ಬೀಸಿದ ಗಾಳಿಯ ಪರಿಣಾಮ ನೀರಿನಲ್ಲಿ ಬೆಳೆದಿದ್ದ ಕಳೆ ಗಿಡಗಳು ನಾಲೆಯ ಪ್ರವೇಶದ ಹರಿವಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಇದರಿಂದ ಬೆಂಗಳೂರಿಗೆ ನೀರು ಸರಬರಾಜು ಆಗುತ್ತಿದ್ದ ಪ್ರಮುಖ ನಾಲೆಯಲ್ಲಿ ನೀರಿನ ಹರಿವು ಶೇ. 50 ರಷ್ಟು ಕಡಿಮೆಯಾಗಿತ್ತು.
ಇದರ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಅವರು ಈ ಸಮಸ್ಯೆಯನ್ನು ಸರಿಪಡಿಸಲು ವಿಶೇಷ ತಂಡಕ್ಕೆ ಸೂಚಿಸಿದ್ದರು. ಈ ತಂಡದ ಸಿಬ್ಬಂದಿ ಸಮರೋಪಾದಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲೆಯ ಪ್ರವೇಶದಲ್ಲಿ ಮತ್ತು ಪೈಪ್‌ಲೈನ್ ಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಅಪಾರ ಪ್ರಮಾಣದ ಕಳೆ ಗಿಡಗಳನ್ನು ತೆಗೆದು ಹಾಕಿ ಸರಾಗವಾಗಿ ನೀರು ಹರಿಯಲು ಅವಕಾಶ ಕಲ್ಪಿಸಿದ್ದಾರೆ.
ಶನಿವಾರ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯ ವರೆಗೆ ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ಮಾಡಿರುವ ಸಿಬ್ಬಂದಿ ಬೆಂಗಳೂರಿಗೆ ನೀರು ಹರಿಯಲು ಎದುರಾಗಿದ್ದ ಬಹು ದೊಡ್ಡ ಸಮಸ್ಯೆಯನ್ನು ಸರಿಪಡಿಸಿದ್ದಾರೆ.
ಒಂದು ವೇಳೆ ಸರಿಯಾದ ಸಮಯದಲ್ಲಿ ಈ ತೊಂದರೆಯನ್ನು ನಿವಾರಿಸದೇ ಇದ್ದಲ್ಲಿ, ನಗರಕ್ಕೆ ನೀರು ಕೊರತೆ ಉಂಟಾಗುತ್ತಿತ್ತು. ಈಗ ಈ ಸಮಸ್ಯೆ ಕೇವಲ 100 ಎಂಎಲ್‌ಡಿಗೆ ಇಳಿದಂತಾಗಿದೆ. 100 ಎಂಎಲ್‌ಡಿಯಷ್ಟು ನೀರಿನ ಕೊರತೆಯಿಂದ ನಗರದ ಕೆಲವೇ ಭಾಗಗಳಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ. ಆದರೆ, ನಗರದ ಬಹುತೇಕ ಪ್ರದೇಶಗಳಲ್ಲಿ ನೀರಿನ ಸರಬರಾಜು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ವ್ಯತ್ಯಯ ಆಗಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಆಕಸ್ಮಿಕವಾಗಿ ಆಗಿರುವ ತಾಂತ್ರಿಕ ತೊಂದರೆಯಿಂದ ಜನರಿಗೆ ಆಗಿರುವ ಅನಾನುಕೂಲಕ್ಕೆ ಜಲಮಂಡಳಿ ವಿಷಾದ ವ್ಯಕ್ತಪಡಿಸುವುದಾಗಿ ಜಲಮಂಡಳಿ ತಿಳಿಸಿದೆ.
ಕಾವೇರಿ ನದಿಯಿಂದ ನೀರನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಬಳಿ ಇರುವ ತೊರೆ ಕಾಡನಹಳ್ಳಿಯಿಂದ ಮೇಲಕ್ಕೆತ್ತಲಾಗುತದೆ. ಅದನ್ನು ನಾಲೆಗಳು, ಪ್ರತ್ಯೇಕ ಫೀಡರ್ ಮೂಲಕ ತಂದು ಶುದ್ದೀಕರಿಸಿ ಬೆಂಗಳೂರು ನಿವಾಸಿಗಳಿಗೆ ನೀಡಲಾಗುತ್ತದೆ. ಅಲ್ಲಲ್ಲಿ ಜೊಂಡು ಬೆಳೆದುಕೊಂಡಿದ್ದು ಸಮಸ್ಯೆ ದಾರಿ ಮಾಡಿಕೊಟ್ಟಿತ್ತು. ನೀರು ಸರಬರಾಜು ಮಾಡುವ ನಾಲೆಗಳು, ಫೀಡರ್‌ಗಳ ಸುತ್ತಮುತ್ತ ನಿಯಮಿತವಾಗಿ ಜೊಂಡನ್ನು ಸಿಬ್ಬಂದಿ ತೆಗೆದರೂ ಈ ಬಾರಿ ಹಾಗೆಯೆ ಉಳಿದಿತ್ತು.
ರಾತ್ರಿಯಿಡೀ ಕೆಲಸ ಮಾಡಿ ರಾಜ್ಯ ರಾಜಧಾನಿಗೆ ಎದುರಾಗುತ್ತಿದ್ದ ತೊಂದರೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾದ ಜಲಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅಭಿನಂದಿಸಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)
ವಿಭಾಗ