Bangalore Karaga 2024: ಶತಮಾನದ ಹಿನ್ನೆಲೆಯ ಬೆಂಗಳೂರು ಕರಗ, 9 ದಿನದ ಸಡಗಕ್ಕೆ ಜನಪದ ಮೆರಗು
Feb 24, 2024 08:00 AM IST
ಬೆಂಗಳೂರು ಕರಗದ ಸಂಭ್ರಮದ ಕ್ಷಣ.
- ಕರಗ 9 ದಿನಗಳ ಹಬ್ಬ. ಯುಗಾದಿ ನಂತರ ಕರಗದ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದ್ವಾದಶಿಯಂದು ಆರತಿ ಸೇವೆ ಮತ್ತು ದೀಪೋತ್ಸವ ನಡೆದರೆ ತ್ರಯೋದಶಿಯಂದು ಹಸಿಕರಗ ನಡೆಯುತ್ತದೆ. ಪೂರ್ಣಿಮೆಯಂದು ಕರಗದ ಉತ್ಸವ ನಡೆಯುತ್ತದೆ. ರಗ ವಹ್ನಿಕುಲ ಸಮುದಾಯದ ಜಾನಪದ ಹಬ್ಬದ ಆಚರಣೆಯ ವಿವರ ಇಲ್ಲಿದೆ.
- (ವಿಶೇಷ ವರದಿ: ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಕರಗ ಪ್ರತಿ ವರ್ಷ ಆಚರಿಸುವ ಜಾನಪದ ಹಬ್ಬ. ಬೆಂಗಳೂರಿನ ತಿಗಳರಪೇಟೆಯಲ್ಲಿ ವಹ್ನಿಕುಲ ಅಥವಾ ತಿಗಳ ಸಮುದಾಯ ಆಚರಿಸಿಕೊಂಡು ಬರುತ್ತಿದೆ. ಆ ಸಮುದಾಯದ ಐತಿಹ್ಯಗಳ ಪ್ರಕಾರ ದ್ರೌಪದಿ ಮತ್ತು ಪಾಂಡವರಲ್ಲಿ ಹಿರಿಯನಾದ ಧರ್ಮರಾಯನಿಗೆ ದೇವಾಲಯಗಳನ್ನು ನಿರ್ಮಿಸಿಪೂಜಿಸಿಕೊಂಡು ಬರುತ್ತಿದ್ದಾರೆ. ಈ ಸಮುದಾಯ ದ್ರೂಪದಿಯನ್ನು ತಮ್ಮ ಕುಲ ದೇವತೆ ಎಂದು ಭಾವಿಸಿದ್ದಾರೆ.
ಬೆಂಗಳೂರಿನ ಹಳೆಯ ಸಮುದಾಯಗಳಲ್ಲಿ ಒಂದಾದ ತಿಗಳರು ಧರ್ಮರಾಯ ಸ್ವಾಮಿ ದೇವಸ್ಥಾನವನ್ನು ಸುಮಾರು 800 ವರ್ಷಗಳ ಹಿಂದೆ ನಿರ್ಮಿಸಿದ್ದಾರೆ. ಕರಗ ಹಬ್ಬವನ್ನು ತಿಗಳ ಸಮುದಾಯ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದೆ.
ಸುಧೀರ್ಘ ಇತಿಹಾಸ
ಆದಿಶಕ್ತಿ ದ್ರೌಪದಿಯನ್ನು ಆರಾಧಿಸುವ ಹಬ್ಬವೇ ಕರಗ. ಶತಶತಮಾನಗಳಿಂದ ಕರಗವನ್ನು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆಚರಿಸಕೊಂಡು ಬರಲಾಗುತ್ತಿದೆ. ಈ ಆಚರಣೆಯ ಗುಟ್ಟುಗಳು ಅರ್ಚಕರನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿದಿರುವುದಿಲ್ಲ. ಪೂಜಾ ವಿಧಾನಗಳನ್ನು ಬಹಿರಂಗಪಡಿಸಿದರೆ ತಿಳಿದವರಿಗೆ ಮತ್ತು ತಿಗಳ ಸಮುದಾಯಕ್ಕೆ ಶ್ರೇಯಸ್ಸು ಅಲ್ಲ ಎಂಬ ಪ್ರತೀತಿ ಇದೆ. ಈ ಸಂಪ್ರದಾಯ ಮತ್ತು ಪೂಜೆಯನ್ನು ಬೆಂಗಳೂರು ಮೂಲದ ತಿಗಳರೇ ನಡೆಸುವುದು ವಾಡಿಕೆ. ಇವರ ಮೂಲಪುರುಷ ರಾಜ ವೀರವಹ್ನಿ ಬೆಂಕಿಯಿಂದ ಜನಿಸಿದ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಗ್ನಿಯ ಅಧಿದೇವತೆಯಾದ ದೌಪದಿಯ ಹೆಸರಿನಲ್ಲಿ ಕರಗವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನ ಕರಗದ ಕೇಂದ್ರಬಿಂದು. ವಿಶಾಲವಾದ ಮಂಟಪದೊಂದಿಗೆ ಈ ದೇವಸ್ಥಾನ ಆಕರ್ಷಕವಾಗಿದೆ. ಅಶ್ವತ್ಥಕಟ್ಟೆ ಮಂಟಪ, ಎರಡು
ಉದ್ದನೆಯ ಕಂಬಗಳನ್ನು ಕಾಣಬಹುದು. ದ್ರಾವಿಡ ಶೈಲಿಯ ಮೂರು ಗೋಪುರಗಳಿವೆ. ಮಹಾದ್ವಾರದ ಮೂಲಕ ಪ್ರವೇಶ ಮಾಡಿದರೆ ಸುಂದರವಾದ ಆನೆಗಳ ಕೆತ್ತನೆಗಳನ್ನು ಕಾಣಬಹುದಾಗಿದೆ.
ಗರ್ಭಗುಡಿಯಲ್ಲಿ ಧರ್ಮರಾಯಸ್ವಾಮಿ ಮತ್ತು ಶ್ರೀಕೃಷ್ಣನ ವಿಗ್ರಹಗಳನ್ನು ಕಾಣಬಹುದು. ಈ ಎರಡೂ ವಿಗ್ರಹಗಳ ಎದುರು ಪೀಠವಿದ್ದು, ಈ ಪೀಠದ ಮೇಲೆಯೇ ಹಸಿಕರಗವನ್ನು ಅಲಂಕರಿಸಿಪೂಜಿಸಲಾಗುತ್ತದೆ.
ಹಿನ್ನೆಲೆ ಏನು?
ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಚೆ ಹೋಗುತ್ತಾಳೆ. ಇದು ತಿಳಿಯದೆ ಪಾಂಡವರು ಮುಂದೆ ಸಾಗುತ್ತಾರೆ. ಆಕೆ ಎಚ್ಚರಗೊಂಡಾಗ ತಿಮಿರಾಸುರ ಎಂಬ ರಾಕ್ಷಸ ಎದುರಿಗೆ ನಿಂತಿರುತ್ತಾನೆ. ಆಗ ದ್ರೌಪದಿ ತಿಮಿರಾಸುರನ ವಿರುದ್ದ ಹೊರಾಡಲು ವೀರಕುಮಾರರ ಪಡೆಯನ್ನು ಸೃಷ್ಟಿಸುತ್ತಾಳೆ. ಯುದ್ಧದಲ್ಲಿ ತಿಮಿರಾಸುರ ಅಸುನೀಗುತ್ತಾನೆ. ವೀರಕುಮಾರರು ದ್ರೌಪದಿಯನ್ನು ಸ್ವರ್ಗಕ್ಕೆ ಹೋಗದಂತೆ ತಡೆಯುತ್ತಾರೆ. ಆಗ ದ್ರೌಪದಿ ಪ್ರತಿ ವರ್ಷ ಭೂಲೋಕಕ್ಕೆ ಆಗಮಿಸುವುದಾಗಿ ಭರವಸೆ ನೀಡುತ್ತಾಳೆ. ಹೀಗೆ ದ್ರೌಪದಿ ಪ್ರತಿ ವರ್ಷ ಭೂಲೋಕಕ್ಕೆ ಆಗಮಿಸುವುದನ್ನು ಆಚರಿಸುವ ಹಬ್ಬವೇ ಕರಗ ಎಂಬ ಐತಿಹ್ಯವಿದೆ.
ಹಸಿ ಕರಗ
ಚೈತ್ರಶುದ್ಧ ತ್ರಯೋದಶಿಯಂದು ಕರಗ ಹೊರುವ ಪೂಜರಿ, ಅರ್ಚಕರ ವಂಶಶ್ಥರು ಮತ್ತು ವೀರಕುಮಾರರು ಸಂಪಂಗಿ ಕೆರೆಯ ಬಳಿ ಮಧ್ಯರಾತ್ರಿ ಸೇರುತ್ತಾರೆ. ಈ ಕೆರೆಯು ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿದೆ. ಈ ಸ್ಥಳವನ್ನು ಸ್ವಚ್ಚಗೊಳಿಸಿ ಕೆಂಪು ಕೊಡೆಯನ್ನು ನೆಡಲಾಗುತ್ತದೆ. ಈ ದಿನದ ಹಿಂದಿನ 7 ದಿನಗಳಿಂದ ಉಪವಾಸವಿದ್ದ ವೀರಕುಮಾರರು
ತಮ್ಮ ಚೂಪಾದ ಕತ್ತಿಗಳನ್ನು ಸಿದ್ದಪಡಿಸಿ ಇಟ್ಟುಕೊಂಡಿರುತ್ತಾರೆ. ಕರಗ ದೇವತೆಯ ಹೆಸರಿನಲ್ಲಿ ವೀರಕುಮಾರರು ದೀಕ್ಷೆ ಪಡೆದುಕೊಂಡಿರುತ್ತಾರೆ. ಈ ವೀರಕುಮಾರರೇ ಕರಗದ ಅಂಗರಕ್ಷರು. ಇವರು ತಮ್ಮ ಕತ್ತಿಗಳಿಂದ ಎದೆಯನ್ನು ಗೀಚಿಕೊಳ್ಳುತ್ತಾರೆ. ಇವರು ಔಷಧಿಗೆ ಬದಲಾಗಿ ದೇವತೆಯ ಭಂಡಾರವನ್ನು ರಕ್ತ ಬಂದ ಸ್ಥಳಕ್ಕೆ ಹಚ್ಚುತ್ತಾರೆ. ನೂರಾರು ವೀರಕುಮಾರರು ಸೊಂಟದ ಸುತ್ತ ಕೆಂಪು ಪಟ್ಟಿಯನ್ನು ಕಟ್ಟಿಕೊಂಡು ಎದೆಯ ಸುತ್ತ ಬಿಳಿ ವಸ್ತ್ರ ಮತ್ತು ತಲೆಗೆ ಪೇಟವನ್ನು ಸುತ್ತಿಕೊಂಡಿರುತ್ತಾರೆ.
ಇವರುಕೈನಲ್ಲಿ ಕತ್ತಿ ಹಿಡಿದಿದ್ದರೂ ಇವರು ಶಾಂತಿದೂತರು. ನಡುರಾತ್ರಿಯ ನಂತರ ಹಸಿಕರಗವನ್ನು ಸಿದ್ದಪಡಿಸಲಾಗುತ್ತದೆ. ಗೋಪುರದ ಆಕಾರದಲ್ಲಿ ಕರಗವನ್ನು ಕೆಂಪು ವಸ್ತ್ರದಿಂದ ಅಲಂಕರಿಸಿ ಸೇವಂತಿಗೆ ಹೂಗಳಿಂದ ಸಿಂಗರಿಸಿ ಹರಿಸಿನ ಕುಂಕುಮವನ್ನು ಹಚ್ಚಲಾಗುತ್ತದೆ. ಇದೇ ಸಮಯಕ್ಕೆ ಕರಗದ ಪೂಜಾರಿಯನ್ನು ಸೇವಂತಿಗೆ ಹೂಗಳಿಂದ ಸಿಂಗರಿಸಲಾಗುತ್ತದೆ. ನಂತರ ಮಹಾಮಂಗಳಾರತಿ ನೆರವೇರುತ್ತದೆ.
ವೀರಕುಮಾರರು ಗೋವಿಂದಾ ಗೋವಿಂಆದಾ ಎಂದು ಭಜಿಸುತ್ತಿರುತಾರೆ. ಇದನ್ನು ಅಲಗು ಸೇವೆ ಎಂದು ಕರೆಯಲಾಗುತ್ತದೆ. ರಾತ್ರಿಯಿಡೀ ಮೆರವಣಿಗೆ ನಡೆದು ಸೂರ್ಯಾಸ್ತವಾದ ನಂತರ ದೇವಸ್ಥಾನ ತಲುಪುತ್ತದೆ.
ಹೂವಿನ ಕರಗ
ಹುಣ್ಣಿಮೆಯಂದು ಸಂಜೆ ಪೂಜಾರಿ ಹೆಣ್ಣಿನ ವೇಷ ಧರಿಸಿ ಸೀರೆಯುಟ್ಟು, ಕೈಗಳಿಗೆ ಬಳೆ ತೊಟ್ಟುಕೊಳ್ಳುತ್ತಾರೆ. ಮತ್ತೆ ರಾತ್ರಿ ಸಂಪಗೆ ಕೆರೆಯ ಬಳಿ ಎಲ್ಲರೂ ಸೇರುತ್ತಾರೆ. ಪೂಜಾರಿಯು ಅಚ್ಚಮಲ್ಲಿಗೆ, ಜಡೆಕುಚ್ಚು, ಹೂವಿನ ಹಾರ ಹರಿಶಿನ ಬಣ್ಣದ ಸೀರೆಯುಟ್ಟು ಒಡವೆಗಳನ್ನು ಧರಿಸಿ ಮಧುಮಗಳಂತೆ ಸಿದ್ದವಾಗುತ್ತಾರೆ. ವೀರಕುಮಾರರಿಂದ ಪೂಜೆಯಾದ ನಂತರ
ಕರಗ ಹೊರುವ ಪೂಜಾರಿಯ ಮುಖದಲ್ಲಿ ಆದಿಶಕ್ತಿ ಅವಾಹನೆಗೊಳ್ಳುತ್ತಾಳೆ. ಗಂಟೆಯ ಸದ್ದಿನೊಂದಿಗೆ ಇವರು ಗರ್ಭಗುಡಿ ಪ್ರವೇಶಿಸುತ್ತಾರೆ. ಈ ವೇಳೆಗೆ ದೇವಾಲಯದ ಬಳಿ
ಸಾವಿರರಾರು ಭಕ್ತರು ನೆರೆದಿರುತ್ತಾರೆ. ಕರಗವನ್ನು ಮಲ್ಲಿಗೆ ಹೂಗಳಿಂದ ಅಲಂಕರಿಸಲಾಗಿರುತ್ತದೆ. ಮಹಾಮಂಗಳಾರತಿ ನಂತರ ಮೆರವಣಿಗೆ ಆರಂಭವಾಗುತ್ತದೆ. ಮೆರವಣಿಗೆ ಸಾಗುವ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು ಸೇರಿರುತ್ತಾರೆ. ಅರಳೆಪೇಟೆಯ ಮಸ್ತಾನ್ ಸಾಹೇಬ ದರ್ಗಾದಲ್ಲಿಯೂ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಾರೆ ಕರಗವು ಸೂರ್ಯೋದಯಕ್ಕೂ ಮುನ್ನ ದೇವಸ್ಥಾನವನ್ನು ಸೇರಬೇಕಾಗುತ್ತದೆ. ಅದರಂತೆ 6 ಗಂಟೆಗೂ ಮುನ್ನ ದೇವಾಲಯ ತಲುಪುತ್ತದೆ. ನಂತರ ಜಾತಿ ಮತಧರ್ಮಗಳ ಭೇದವಿಲ್ಲದೆ ಪೂಜೆ ನಡೆಯುತ್ತದೆ.
(ವಿಶೇಷ ವರದಿ: ಎಚ್.ಮಾರುತಿ. ಬೆಂಗಳೂರು)