logo
ಕನ್ನಡ ಸುದ್ದಿ  /  ಕರ್ನಾಟಕ  /  Republic Day: ನಾವು ಮಾತುಗಾರರಲ್ಲ, ಕೆಲಸಗಾರರು; ಎದುರಾಳಿಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರ

Republic day: ನಾವು ಮಾತುಗಾರರಲ್ಲ, ಕೆಲಸಗಾರರು; ಎದುರಾಳಿಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರ

Umesha Bhatta P H HT Kannada

Jan 26, 2024 01:43 PM IST

google News

ಬೆಂಗಳೂರಿನ ಮಾಣಿಕ್‌ ಷಾ ಮೈದಾನದಲ್ಲಿ ನಡೆದ ಗಣರಾಜ್ಸೋತ್ಸವದಲ್ಲಿ ಸಿಎ ಸಿದ್ದರಾಮಯ್ಯ ಪಾಲ್ಗೊಂಡರು.

    • ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರ ಸಾಧನೆಗಳ ಮೂಲಕವೇ ಎದುರಾಳಿಗಳಿಗೆ ಉತ್ತರ ನೀಡಿದರು.
ಬೆಂಗಳೂರಿನ ಮಾಣಿಕ್‌ ಷಾ ಮೈದಾನದಲ್ಲಿ ನಡೆದ ಗಣರಾಜ್ಸೋತ್ಸವದಲ್ಲಿ ಸಿಎ ಸಿದ್ದರಾಮಯ್ಯ ಪಾಲ್ಗೊಂಡರು.
ಬೆಂಗಳೂರಿನ ಮಾಣಿಕ್‌ ಷಾ ಮೈದಾನದಲ್ಲಿ ನಡೆದ ಗಣರಾಜ್ಸೋತ್ಸವದಲ್ಲಿ ಸಿಎ ಸಿದ್ದರಾಮಯ್ಯ ಪಾಲ್ಗೊಂಡರು.

ಬೆಂಗಳೂರು: ನಾವು ಬರೀ ಮಾತುಗಾರರು ಅಲ್ಲ. ಕೆಲಸ ಮಾಡಿ ತೋರಿಸುವವರು. ಚುನಾವಣೆ ಮುನ್ನ ನೀಡಿದ ಭರವಸೆಯಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಜನರ ಹಿತಕ್ಕಾಗಿ ನಮ್ಮ ಕೆಲಸ. ಕೋಮು ಸಾಮರಸ್ಯವನ್ನು ಕಾಪಾಡುವುದು ನಮ್ಮ ಬಲವಾದ ನಂಬಿಕೆ. ಅದನ್ನು ಎಂತಹ ಕಷ್ಟ ಬಂದರೂ ಮಾಡುತ್ತೇವೆ. ಜನ ವಿಶ್ವಾಸವನ್ನು ಕಳೆದುಕೊಳ್ಳದೇ ನಮ್ಮ ಜತೆಗೆ ಇರಬೇಕಷ್ಟೇ. ಇದು ಸಿಎಂ ಸಿದ್ದರಾಮಯ್ಯ ಅವರ ನುಡಿ. ಬೆಂಗಳೂರಿನ ಮಾಣಿಕ್‌ ಷಾ ಮೈದಾನದಲ್ಲಿ ಆಯೋಜಿಸಲಾಗಿದ್‌ ಗಣರಾಜ್ಯೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ ಅವರು ತಮ್ಮ ಸರ್ಕಾರದ ನಿಲುವು, ಸಾಧನೆಗಳನ್ನು ವಿವರಿಸಿದರು.

ವಚನ ಭಂಗಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿಲ್ಲ ಎಂದು ನಾನು ಬಲವಾಗಿ ನಂಬಿದವನು. ಇದು ನಮ್ಮ ಪಕ್ಷದ ಬದ್ಧತೆ ಕೂಡಾ ಆಗಿದೆ. ಭರವಸೆಗಳನ್ನು ನೀಡಿ ಚುನಾವಣೆಯಲ್ಲಿ ಗೆದ್ದು ಬಂದಿರುವ ನಮಗೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ. ಇದನ್ನು ನಾವು ಮರೆತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳ ಭರವಸೆಯ ಈಡೇರಿಕೆಗೆ ಮೊದಲ ಸಚಿವ ಸಂಪುಟದಲ್ಲಿಯೇ ತಾತ್ವಿಕ ಅಂಗಿಕಾರ ಪಡೆದು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೆವು. ಇದರ ಫಲವಾಗಿ ಐದು ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿವೆ ಎನ್ನುವುದನ್ನು ನಿಮ್ಮ ಮುಂದೆ ಹೇಳಲು ಹೆಮ್ಮೆ ಪಡುತ್ತೇನೆ. ದೇಶದ ಯಾವುದೇ ರಾಜ್ಯ ಸರ್ಕಾರ ಕೂಡಾ ಇಂತಹದ್ದೊಂದ ಸಾಧನೆ ಮಾಡಿಲ್ಲ ಎನ್ನುವುದನ್ನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ. ಇದು ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ಕೊಟ್ಟಿರುವ ಶಕ್ತಿ ಎನ್ನುವುದನ್ನು ನಾವು ಮರೆತಿಲ್ಲ ಎಂದರು ಸಿದ್ದರಾಮಯ್ಯ.

ಗ್ಯಾರಂಟಿಯಿಂದ ಲಾಭ

ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ನಮ್ಮ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಗ್ಯ,ಋಣಮುಕ್ತಭಾಗ್ಯ, ವಿದ್ಯಾಸಿರಿ, ಆರೋಗ್ಯಭಾಗ್ಯ, ಜಲಭಾಗ್ಯ ಕಾರ್ಯಕ್ರಮಗಳು ಕೂಡಾ ಯಶಸ್ವಿಯಾಗಿ ಜಾರಿಯಲ್ಲಿದೆ. ಇವೆಲ್ಲ ಯೋಜನೆಗಳು ದುಡಿಯುವ ಕೈಗಳನ್ನು ಇನ್ನಷ್ಟು ಬಲಪಡಿಸಿ ಅವುಗಳು ರಾಜ್ಯದ ಅಭಿವೃದ್ಧಿಗೆ ಬಳಕೆಯಾಗುವಂತೆ ಮಾಡುವ ಕಾರ್ಯಕ್ರಮಗಳು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 1.2 ಕೋಟಿ ಕುಟುಂಬಗಳಿಗೆ ವಾರ್ಷಿಕ 50 ರಿಂದ 60 ಸಾವಿರ ರೂ.ಗಳ ಆರ್ಥಿಕ ಸಹಾಯ ದೊರೆಯುತ್ತಿದೆ. ಅಧಿಕಾರಕ್ಕೆ ಬಂದ ಕೂಡಲೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಮಾಡಲು ಅನುವು ಮಾಡಿಕೊಟ್ಟ ಶಕ್ತಿ ಯೋಜನೆ ಅಭೂತಪೂರ್ವ ಜನಮನ್ನಣೆಗೆ ಪಾತ್ರವಾಗಿದೆ. 138 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಪ್ರಯಾಣಿಸಿದ್ದಾರೆ. 1.18 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2,000 ರೂ.ಗಳ ನೆರವು ನೀಡಲಾಗುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ 1.51 ಕೋಟಿ ಜನರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಹೇಳಿದರು.

ದಿಟ್ಟತನದ ಉತ್ತರ ನೀಡಿ

ಯುವನಿಧಿ ಯೋಜನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸುಮಾರು ಒಂದು ಲಕ್ಷ ಯುವಕ ಯುವತಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ನಿರುದ್ಯೋಗ ಭತ್ಯೆಯನ್ನು ಪಡೆಯುವ ಅಭ್ಯರ್ಥಿಗಳು ಅನೇಕ ಸ್ಪರ್ಧಾತ್ಮಕ ಪರೀಕ್ಷಾ ಶುಲ್ಕವನ್ನು ಭರಿಸಲು, ಉತ್ತಮ ಪುಸ್ತಕಗಳನ್ನು ಖರೀದಿಸಿ ಅಧ್ಯಯನ ಮಾಡಲು, ಉದ್ಯೋಗ ಸಂದರ್ಶನಕ್ಕೆ ತೆರಳುವ ವೆಚ್ಚಕ್ಕೆ, ಉದ್ಯಮಶೀಲತೆ ತರಬೇತಿ ಪಡೆಯುವ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳಲು ಬಳಸಲೆಂದೇ ಈ ಯೋಜನೆ ಜಾರಿಯಾಗಿದೆ. ಯುವನಿಧಿಯ ಫಲಾನುಭವಿ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಅವರಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸಲು ಸಹ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧಿಗಳಿಂದ ವ್ಯಕ್ತವಾದ ಟೀಕೆ-ಟಿಪ್ಪಣಿ, ಅನುಮಾನ-ಆತಂಕಗಳನ್ನು ನಾವು ಗಮನಿಸಿದ್ದೇವೆ. ನಮ್ಮ ಸರ್ಕಾರ ದಿವಾಳಿಯಾಗಲಿದೆ ಎಂಬ ಅಪಪ್ರಚಾರವನ್ನು ಮಾಡಿದ್ದಾರೆ. ಇಂತಹವರೆಲ್ಲರಿಗೂ ನಮ್ಮ ಯೋಜನೆಗಳ ಫಲಾನುಭವಿಗಳೇ ದಿಟ್ಟತನದಿಂದ ಉತ್ತರ ನೀಡಬೇಕೆಂದು ಎಂದು ಕೋರಿದರು.

ಹಲವಾರು ಸುಧಾರಣಾ ಕ್ರಮ

ಸರ್ಕಾರ ಜನರ ಮನೆಬಾಗಿಲಿಗೆ ತಲುಪಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಮೂಲೆಮೂಲೆಗಳಿಂದ ಸಮಸ್ಯೆಗಳನ್ನು ಹೊತ್ತು ತಂದುದನ್ನು ಗಮನಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಹೂಡಿಕೆದಾರ ಸ್ನೇಹಿ ನೀತಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ. ಈ ಬಾರಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ಬಯೋಟೆಕ್ ನೀತಿ ಹಾಗೂ ಎವಿಜಿಸಿ ಪಾಲಿಸಿಯನ್ನು ಬಿಡುಗಡೆ ಮಾಡಲಾಗಿದೆ. ದಾವೋಸ್ ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಲು ಎನ್ಟಿಟಿ ಡೇಟಾ, ಆ್ಯಬ್ ಸಮೂಹ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳು ಉತ್ಸುಕತೆ ತೋರಿದೆ. ಇದರಿಂದ ರಾಜ್ಯದ ಆರ್ಥಿಕತೆಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ ಎನ್ನುವುದು ಸಿಎಂ ಸಿದ್ದರಾಮಯ್ಯ ಅವರ ಅಭಯ.

ರೈತಪರ ಯೋಜನೆ

ರಾಜ್ಯ ಸರ್ಕಾರವೇ ಬರದಿಂದ ಬಾಧಿತರಾದವರಿಗೆ ಬೆಳೆ ಪರಿಹಾರವಾಗಿ 2000 ರೂ.ಗಳ ವರೆಗಿನ ತಾತ್ಕಾಲಿಕ ಪರಿಹಾರದ ಘೋಷಣೆಯನ್ನು ಮಾಡಿದ್ದು, ಈವರೆಗೆ 550 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ವಾರದೊಳಗೆ ಮೊದಲ ಕಂತಿನ ಪರಿಹಾರ ರೈತರಿಗೆ ತಲುಪಿಸಲಾಗುವ ವ್ಯವಸ್ಥೆಯಾಗುತ್ತಿದೆ. ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಅಸಲು ಪಾವತಿಸಿದಲ್ಲಿ ಬಡ್ಡಿ ಮನ್ನಾ ಮಾಡಲು ನಮ್ಮ ಸರ್ಕಾರ ಆದೇಶ ಹೊರಡಿಸಿದೆ. ಕೊಬ್ಬರಿ ಬೆಲೆ ಕುಸಿತಗೊಂಡು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 1500 ರೂಗಳ ನೆರವನ್ನು ರಾಜ್ಯ ಸರ್ಕಾರವೆ ನೀಡುತ್ತಿದೆ.ನೆಟೆ ರೋಗದಿಂದ ಬಾಧಿತರಾದ ತೊಗರಿ ಬೆಳೆಗಾರರಿಗೆ 223 ಕೋಟಿ ರೂ ಪರಿಹಾರ ನೀಡಿದ್ದೇವೆ. ಬಿತ್ತನೆ ವೈಫಲ್ಯ, ಮಧ್ಯಂತರ ಬೆಳೆ ಪರಿಹಾರ ವಿಮೆ ಮತ್ತು ಸ್ಥಳ ನಿರ್ಧಿಷ್ಠ ವಿಕೋಪಗಳಿಗೆ ಪರಿಹಾರವಾಗಿ 8.10 ಲಕ್ಷ ರೈತರಿಗೆ 591 ಕೋಟಿ ರೂಪಾಯಿಗಳನ್ನು ನೀಡಿದ್ದೇವೆ. ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಮರುಜಾರಿ ಮಾಡಲಾಗಿದೆ ಎಂದು ವಿವರಿಸಿದರು.

ಪ್ರಜಾಪ್ರಭುತ್ವ ರಕ್ಷಿಸಿ

ನಮ್ಮ ಸರ್ಕಾರ ಕೋಮುವಾದಿ ಶಕ್ತಿಗಳ ಹುಟ್ಟಡಗಿಸಲು ಸರ್ವ ಸನ್ನದ್ಧವಾಗಿದೆ. ಸಮಾಜವನ್ನು ಧರ್ಮಗಳ ಆಧಾರದಲ್ಲಿ ವಿಭಜಿಸುವ ಹುನ್ನಾರಕ್ಕೆ ಜನತೆ ಬಲಿಯಾಗಬಾರದು. ಚುನಾಯಿತ ಸರ್ಕಾರ ಇಲ್ಲವೇ ಜನಪ್ರತಿನಿಧಿಗಳು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಜಾತಿ-ಧರ್ಮಗಳಂತಹ ಭಾವನಾತ್ಮಕ ವಿಷಯಗಳನ್ನು ದುರ್ಬಳಕೆ ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ದವಾದುದು ಮತ್ತು ಸಂವಿಧಾನಕ್ಕೆ ಬಗೆವ ದ್ರೋಹವಾಗಿದೆ ಎಂದು ತಿಳಿಸಿದರು.

39 ಸಹೃದಯಿ ಕನ್ನಡಿಗರು ಇಂತಹ ಹುನ್ನಾರಗಳಿಗೆ ಬಲಿಯಾಗದೆ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ತೊಡಗಿರುವ ನಮ್ಮ ಸರ್ಕಾರದ ಜೊತೆ ದೃಡಚಿತ್ತದಿಂದ ನಿಲ್ಲಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ, ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಎಂಬ ತತ್ವವನ್ನು ಮರೆಯದಿರೋಣ. ಈ ಮೂಲಕ ಭಾರತದ ಗಣರಾಜ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿಸೋಣ ಎಂದು ಮನವಿ ಮಾಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ