logo
ಕನ್ನಡ ಸುದ್ದಿ  /  ಕರ್ನಾಟಕ  /  Caste Census: ಜಾತಿ ಗಣತಿ ಜಾರಿಗೆ ಕಾಂಗ್ರೆಸ್‌ ಬದ್ದ: ಕನಕಜಯಂತಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟೋಕ್ತಿ

Caste census: ಜಾತಿ ಗಣತಿ ಜಾರಿಗೆ ಕಾಂಗ್ರೆಸ್‌ ಬದ್ದ: ಕನಕಜಯಂತಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟೋಕ್ತಿ

HT Kannada Desk HT Kannada

Dec 01, 2023 08:11 AM IST

google News

ಬೆಂಗಳೂರಿನಲ್ಲಿ ಕನಯಕ ಜಯಂತಿಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

    • Kanaka Jayanti ಜಾತಿ ಗಣತಿ (Caste Census) ವಿಚಾರವನ್ನು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನಡೆದ ಕನಕ ಜಯಂತಿಯನ್ನು ಪ್ರಸ್ತಾಪಿಸಿದರು.
ಬೆಂಗಳೂರಿನಲ್ಲಿ ಕನಯಕ ಜಯಂತಿಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.
ಬೆಂಗಳೂರಿನಲ್ಲಿ ಕನಯಕ ಜಯಂತಿಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಬೆಂಗಳೂರು: ಜಾತಿ ಗಣತಿಗೆ ಕಾಂಗ್ರೆಸ್ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಜಾರಿ ಮಾಡಲು ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕನಕದಾಸ ಜಯಂತಿಯನ್ನು ಉದ್ಘಾಟಿಸಿ ಸಮಾಜ ಸೇವಕ ದಿವಂಗತ ಲಿಂಗಪ್ಪ ಅವರಿಗೆ ಮರಣೋತ್ತರ ಕನಕಶ್ರೀ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದರು.

ಜಾತಿ ಗಣತಿ ಆರಂಭಿಸಿದ್ದೇ ನಾನು. ಪ್ರತಿಯೊಂದು ಜಾತಿ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ತಿಳಿಯುವುದಕ್ಕೆ ಮತ್ತು ಸಂವಿಧಾನದ ಆಶಯಗಳನ್ನು ಕಾರ್ಯಕ್ರಮಗಳ ಮೂಲಕ ಎಲ್ಲಾ ಸಮುದಾಯಗಳಿಗೂ ತಲುಪಿಸುವುದಕ್ಕಾಗಿ ನಾನೇ ಜಾತಿಗಣತಿ ಆರಂಭಿಸಿದೆ . ಸಾಮಾಜಿಕ ಸುಧಾರಣೆ ವಿಚಾರದಲ್ಲಿ ಡಾ.ಅಂಬೇಡ್ಕರ್ ಅವರು ಹೇಳಿದ್ದ ಎಚ್ಚರಿಕೆ ಮಾತುಗಳನ್ನು ಮರೆಯಬಾರದು. ಎಂದು ವಿವರಿಸಿದರು.

ಕನಕದಾಸರನ್ನು ಶೂದ್ರ ಜಾತಿಯವ ಎನ್ನುವ ಕಾರಣಕ್ಕೆ ಕೃಷ್ಣನ ದರ್ಶನಕ್ಕೆ ಬಿಡಲಿಲ್ಲ. ಕುವೆಂಪು ಅವರು ಹೇಳಿದಂತೆ ನಾವೆಲ್ಲಾ ವಿಶ್ವ ಮಾನವರಾಗಲು ಸಾಧ್ಯವಾಗದಿದ್ದರೂ ವಿಶ್ವ ಮಾನವರಾಗುವ ಮಾರ್ಗದಲ್ಲಿ ಸಾಗಬೇಕು. ಆ ಮೂಲಕ ನಾವೆಲ್ಲಾ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕನಕದಾಸರ 500 ನೇ ಜಯಂತಿಯನ್ನು ಮಾಡಿದ್ದು ನಾನೇ. ಅಲ್ಲಿಯವರೆಗೂ 400 ನೇ ಜಯಂತಿಯನ್ನು ಯಾರೂ ಆಚರಿಸಿರಲಿಲ್ಲ. ಕನಕದಾಸರ ಕುರಿತ ಸಾಹಿತ್ಯ ಕೃಷಿ ಮಾಡದಿದ್ದರೂ ಕನಕದಾಸರ ತತ್ವಾದರ್ಶಗಳನ್ನು ಪಾಲಿಸುತ್ತಾ, ಜನ ಸೇವಕರಾಗಿದ್ದ ಲಿಂಗಪ್ಪ ಅವರನ್ನು ಕನಕಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಅತ್ಯಂತ ಸೂಕ್ತ ಎಂದು ಮೆಚ್ಚುಗೆ ಸೂಚಿಸಿ ಲಿಂಗಪ್ಪ ಅವರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದರು.

ವಿಶ್ವ ಮಾನವರಾಗಿ ಸಾಯಿರಿ

ನಾನು ಕುರುಬನಾಗಿ ಜನಿಸಿದ್ದೇನೆ. ನೀವುಗಳೂ ಕುರುಬ ಸಮುದಾಯದಲ್ಲಿ ಜನಿಸಿರಬಹುದು. ಹಾಗಂದ ಮಾತ್ರಕ್ಕೆ ಕುರುಬರಾಗೇ ಸಾಯಬೇಕಾ? ಅಪ್ಪಟ ಮನುಷ್ಯರಾಗಿ ಸಾಯಬೇಕು ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.,

ಕನಕದಾಸರು ಆಕಸ್ಮಿಕವಾಗಿ ಕುರುಬರಾಗಿ ಹುಟ್ಟಿದ ವಿಶ್ವಶ್ರೇಷ್ಠ ಮಾನವೀಯ ಚೈತನ್ಯರಾಗಿದ್ದರು. ದಾಸಪಂಥಕ್ಕೆ ಪ್ರವೇಶಿಸುವ ಮೊದಲು ಕನಕರು ಪಾಳೇಗಾರರಾಗಿದ್ದರು. ಆದಿಕೇಶವನ ಭಕ್ತರಾಗಿ ದಾಸರಾಗಿ, ದಾಸಶ್ರೇಷ್ಠರೂ ಆದರು. ಆದರೆ ಕನಕದಾಸರ ಕೀರ್ತನೆಗಳಲ್ಲಿ ಅತ್ಯುನ್ನತ ಮಾನವೀಯ ಮೌಲ್ಯಗಳಿವೆ ಎಂದು ವಿವರಿಸಿದರು.

ಜಾತಿ ಮೆಚ್ಚಿಸಲು ಜಯಂತಿ ಅಲ್ಲ

ಸುಖಾ ಸುಮ್ಮನೆ ಎಲ್ಲರಿಗೂ ಚಪ್ಪಾಳೆ ತಟ್ಟಬೇಡಿ. ನಿಮ್ಮಲ್ಲೊಂದು ತತ್ವ ಇರಲಿ. ಮೂರು ವರ್ಷಗಳಿಂದ ಕನಕಶ್ರೀ ಪ್ರಶಸ್ತಿಯನ್ನೇ ಕೊಟ್ಟಿಲ್ಲ. ಆದರೂ ಅವರಿಗೂ ಚಪ್ಪಾಳೆ ತಟ್ಟೋದು, ಇಲ್ಲಿ ಬಂದು ನನಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ನಿಮಗೆ ಸ್ಪಷ್ಟತೆ ಇರಲಿ. ಕನಕದಾಸರು ಒಂದು ಜಾತಿಗೆ ಸೇರಿದವರಲ್ಲ. ಕುರುಬ ಜಾತಿಯವರನ್ನು ಮೆಚ್ಚಿಸಲು ಕನಕ ಜಯಂತಿ ಮಾಡುತ್ತಿಲ್ಲ. ಕನಕದಾಸರು ವಿಶ್ವ ಮಾನವರಾಗಿದ್ದರು. ಅವರ ತತ್ವಾದರ್ಶಗಳನ್ನು ಪಾಲಿಸಿ ವಿಶ್ವ ಮಾನವರಾಗೋಣ ಎಂದು ಆಶಿಸಿದರು.

ತಿಂಥಣಿಯ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಮಾಜಿ ಸಚಿವ ಎಚ್. ಎಂ. ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ