IPS officer controversy: ಪ್ರಕರಣಗಳ ವಿಚಾರಣೆ ನಡುವೆ ರಾಷ್ಟ್ರಪತಿ ಪದಕಕ್ಕೆ ಎಡಿಜಿಪಿ ಅಲೋಕ್ ಹೆಸರು ರವಾನೆ
Dec 12, 2023 01:15 PM IST
ವಿವಾದದ ನಡುವೆಯೂ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್‌ಕುಮಾರ್ ಅವರ ಹೆಸರು ರಾಷ್ಟ್ರಪತಿ ಪದಕಕ್ಕೆ ಶಿಫಾರಸ್ಸಾಗಿದೆ.
- Alok Kumar controversy ಕರ್ನಾಟಕದ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್( Alok kumar) ವಿರುದ್ದ ಕೆಲ ಪ್ರಕರಣದ ವಿಚಾರಣೆ ಬಾಕಿ ಇದ್ದರೂ ರಾಷ್ಟ್ರಪತಿ ಪದಕಕ್ಕೆ( President Medal) ಅವರ ಹೆಸರು ಶಿಫಾರಸ್ಸು ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು: ಹಲವಾರು ವಿವಾದಕ್ಕೆ ಗುರಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ಹೆಸರನ್ನು 2024ರ ರಾಷ್ಟ್ರಪತಿ ಪದಕ್ಕೆ ಶಿಫಾರಸ್ಸು ಮಾಡಿರುವುದು ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದಿಂದ 2024ರ ಗಣರಾಜ್ಯೋತ್ಸವ ದಿನದಂದು ಪ್ರದಾನ ಮಾಡಲಾಗುವ ರಾಷ್ಟ್ರಪತಿ ಪದಕ ಪಡೆಯಲು ಎಡಿಜಿಪಿ ಅಲೋಕ್ ಕುಮಾರ್ ಅವರ ಹೆಸರನ್ನು ಕರ್ನಾಟಕ ಸರ್ಕಾರದ ಗೃಹ ಇಲಾಖೆ ಶಿಫಾರಸ್ಸು ಮಾಡಿದೆ. ಅವರ ವಿರುದ್ದ ಕೆಲವು ಪ್ರಕರಣಗಳ ವಿಚಾರಣೆ ಬಾಕಿ ಇರುವಾಗಲೇ ರಾಷ್ಟ್ರಪತಿ ಪದಕಕ್ಕೆ ಅಲೋಕ್ ಕುಮಾರ್ ಹೆಸರು ಶಿಫಾರಸ್ಸು ಮಾಡಿರುವುದು ವಿವಾದ ಹುಟ್ಟು ಹಾಕಿದೆ.
ಈಗಾಗಲೇ ಕರ್ನಾಟಕದ ಹಿರಿಯ ಅಧಿಕಾರಿಗಳಾದ ಡಾ.ಕೆ.ರಾಮಚಂದ್ರರಾವ್, ಪಿ.ಹರಿಶೇಖರನ್, ಸೌಮೆಂದು ಮುಖರ್ಜಿ ಸಹಿತ 32 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರನ್ನು ಕರ್ನಾಟಕ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅವರಿಗೆ ರವಾನಿಸಿದ್ದಾರೆ. ಜನವರಿ ತಿಂಗಳಲ್ಲಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಹಿಂದಿನ ಸಾಲಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪ್ರತಿ ವರ್ಷ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ಸೇವಾ ಪದಕ ಪ್ರದಾನ ಮಾಡುವ ವಾಡಿಕೆ ಹಲವು ವರ್ಷಗಳಿಂದ ಇದೆ.
ಆದರೆ ಈ ಬಾರಿಯ ಪಟ್ಟಿಯಲ್ಲಿ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರ ಹೆಸರೂ ಇದೆ. ಅವರ ವಿರುದ್ದ ಹಲವು ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇದೆ. ವಿಶೇಷವಾಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ, ಐಪಿಎಸ್ ಅಧಿಕಾರಿ ಫೋನ್ ಕದ್ದಾಲಿಕೆ. ಪ್ರಕರಣವೊಂದರಲ್ಲಿ ಒಂದು ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಪ್ರಕರಣಗಳ ವಿಚಾರಣೆ ಇನ್ನೂ ಮುಗಿದಿಲ್ಲ. ಇದರ ನಡುವೆ ಈಗ ಈ ವಿವಾದ ಮುನ್ನಲೆಗೆ ಬಂದಿದೆ.
ಅಲೋಕ್ ಕುಮಾರ್ ವಿರುದ್ದ ಇರುವ ಪ್ರಮುಖ ಪ್ರಕರಣಗಳು
̧1.2015 ರ ಮೇ 30ರಂದು ಬೆಂಗಳೂರಿನ ವೈಯಾಲಿ ಕಾವಲ್ ಠಾಣೆ ವ್ಯಾಪ್ತಿಯಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಪ್ರಕರಣ ದಾಖಲಾಗಿತ್ತು. ಈ ವೇಳೆ ಬೆಂಗಳೂರು ನಗರ ಜಂಟಿ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರು ಪ್ರಕರಣದ ಇತ್ಯರ್ಥಕ್ಕೆ ಒಂದು ಕೋಟಿ ರೂ. ಬೇಡಿಕೆ ಇಟ್ಟಿರುವ ದೂರು ದಾಖಲಾಗಿತ್ತು. ಈ ಕುರಿತು ಮಲ್ಲಿಕಾರ್ಜುನ್ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಆನಂತರ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಅನ್ನು ಹಾಕಿದ್ದರು.
2. 2019ರಲ್ಲಿ ಬೆಂಗಳೂರು ನಗರದಲ್ಲಿ ಮಹಿಳೆಯೊಬ್ಬರು ಸ್ವಯಂ ಸೇವಾ ಸಂಘಟನೆಯೊಂದರ ವಿರುದ್ದ ದೂರು ನೀಡಲು ಹೋದರೂ ಪೊಲೀಸರು ದಾಖಲಿಸಿಕೊಂಡಿರಲಿಲ್ಲ. ಆಗ ಬೆಂಗಳೂರು ನಗರ ಹೆಚ್ಚುವರಿ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರಿಗೆ ದೂರು ನೀಡಿದರೆ ಅವರೂ ಗಮನಹರಿಸಲಿಲ್ಲ ಎಂದು ಮಹಿಳೆ ಆರೋಪಿಸಿದ್ದರು. ನನ್ನ ಮೇಲೆಯೇ ಅಲೋಕ್ ಹಲ್ಲೆ ಮಾಡಿದ್ದಾರೆ. ಅಲ್ಲದೇ ನನ್ನ ಮೇಲೆಯೇ ದೂರು ದಾಖಲಿಸಿದ್ದಾರೆ ಎಂದು ಬೆಂಗಳೂರಿನ ನ್ಯಾಯಾಲಯದಲ್ಲಿ ಮಹಿಳೆ ದೂರು ದಾಖಲಿಸಿದ್ದರು.
ಇನ್ನು 2019ರಲ್ಲಿ ಅಲೋಕ್ ಕುಮಾರ್ ಅವರನ್ನು ವರ್ಗ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಭಾಸ್ಕರ್ ರಾವ್ ಅವರನ್ನು ನೇಮಿಸಲಾಗಿತ್ತು. ಈ ವೇಳೆ ಫೋನ್ ಕದ್ದಾಲಿಕೆ ಮಾಡಿದ ಕುರಿತು ಭಾಸ್ಕರ್ ರಾವ್ ದೂರು ನೀಡಿದ್ದರು. ಈ ಕುರಿತು ಸಿಬಿಐ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿತ್ತು. ಆದರ ಇದನ್ನು ಪ್ರಶ್ನಿಸಿ ಭಾಸ್ಕರರಾವ್ ನ್ಯಾಯಾಲಯ ಮೊರೆ ಹೋಗಿದ್ದರಿಂದ ತನಿಖೆಗೆ ಆದೇಶಿಸಲಾಗಿತ್ತು. ಈ ಕುರಿತು ತನಿಖೆ ಇನ್ನೂ ಪ್ರಗತಿ ಹಂತದಲ್ಲಿದೆ.
ವಿಭಾಗ