ಫೆ 25ಕ್ಕೆ ಬೆಂಗಳೂರು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘಟನೆ ಪ್ರತಿಭಟನೆ; ಕಾರಣ ಇದೇ -Cubbon Park Walkers
Feb 24, 2024 12:03 PM IST
ಬೆಂಗಳೂರು ಕಬ್ಬನ್ ಪಾರ್ಕ್
- Bengaluru Cubbon Park Walkers: ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ 10 ಮಹಡಿ ಕಟ್ಟಡ ನಿರ್ಮಾಣ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಗೆಗೆ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಒತ್ತಾಯಿಸಿದೆ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಕಬ್ಬನ್ ಪಾರ್ಕ್‌ನಲ್ಲಿ 10 ಮಹಡಿಗಳ ಕಟ್ಟಡ ನಿರ್ಮಾಣ ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಇದಕ್ಕೆ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘಟನೆ ಸೇರಿದಂತೆ ವಿವಿಧ ಪರಿಸರ ಪ್ರೇಮಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಪರಿಣಾಮವಾಗಿ ಸರ್ಕಾರ ಯೋಜನೆ ಘೋಷಿಸಿದ ಕೆಲವೇ ದಿನಗಳಲ್ಲೇ ಕಬ್ಬನ್ ಪಾರ್ಕ್ ಯೋಜನೆಯನ್ನು ಕೈಬಿಟ್ಟು ಬೇರೆ ಕಡೆ 10 ಮಹಡಿ ಕಟ್ಟಡ ನಿರ್ಮಾಣಕ್ಕೆ ಬೇರೆ ಜಾಗ ಹುಡುಕಾಟ ಶುರುಮಾಡಿದೆ.
ಸದ್ಯ ಸರ್ಕಾರ ತಾತ್ಕಾಲಿಕವಾಗಿ ನಿರ್ಧಾರದಿಂದ ಹಿಂದೆ ಸರಿದಿದ್ದರೂ ಈ ಬಗ್ಗೆ ಅಧಿಕಾರಿಗಳು ಅಧಿಕೃತವಾಗಿ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ನಾಳೆ (ಫೆಬ್ರವರಿ 25, ಭಾನುವಾರ) ಪ್ರತಿಭಟನೆ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ನಡಿಗೆದಾರರ ಸಂಘದ ಅಧ್ಯಕ್ಷ, ಸರ್ಕಾರ ಕಬ್ಬನ್ ಪಾರ್ಕ್‌ಗೆ ಪರ್ಯಾಯವಾಗಿ ಬೇರೆ ಸ್ಥಳದ ಹುಡುಕಾಟ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ಬಹುಮಹಡಿ ಕಟ್ಟಡ ಕಟ್ಟುವುದಿಲ್ಲ, ಪರ್ಯಾಯ ಸ್ಥಳದ ಬಗ್ಗೆ ಅಧಿಕಾರಿಗಳು ಅಧಿಕೃತವಾಗಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳ ಅಧಿಕೃತ ಹೇಳಿಕೆಗೆ ಆಗ್ರಹಿಸಿ ಕಬ್ಬನ್ ಪಾರ್ಕ್‌ನಲ್ಲಿರುವ ಸೆಂಟ್ರಲ್ ಲೈಬ್ರರಿ ಬಳಿ ಭಾನುವಾರ (ಫೆಬ್ರವರಿ 25) ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘಟನೆ ನಿರ್ಧರಿಸಿದೆ. ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವ ಬಗ್ಗೆ ಈವರೆಗೆ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಸರ್ಕಾರದ ಸ್ಪಷ್ಟನೆ ಸಿಗುವವರೆಗೆ ನಾವೆಲ್ಲರೂ ಒಟ್ಟಾಗಿ ಪ್ರತಿಭಟನೆ ನಡೆಸೋದಾಗಿ ಸಂಘದ ಸದಸ್ಯರು ಹೇಳಿದ್ದಾರೆ.
ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಬಿಜೆಪಿಯಿಂದಲೂ ತೀವ್ರ ವಿರೋಧ
ಸರ್ಕಾರದ ಈ ಹಿಂದಿನ ಪ್ರಸ್ತಾವನೆಯ ಪ್ರಕಾರ, ಕಬ್ಬನ್ ಪಾರ್ಕ್‌ನಲ್ಲಿ ಪ್ರೆಸ್‌ಕ್ಲಬ್‌ಗೆ ತಾಗಿಕೊಂಡಿರುವ ಚುನಾವಣಾ ಆಯೋಗದ ಕಚೇರಿಯ ಹಳೆಯ ಕಟ್ಟಡ ತೆರವುಗೊಳಿಸಿ ಅಲ್ಲಿ 10 ಅಂತಸ್ತಿನ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಇದು ಹೈಕೋರ್ಟ್ ಆವರಣದಲ್ಲೇ ಇದೆ. ಇದಕ್ಕೆ ಕಬ್ಬನ್ ಪಾರ್ಕ್ ಕಾಲ್ನಡಿಗೆದಾರರ ಸಂಘ ವಿರೋಧ ವ್ಯಕ್ತಪಡಿಸಿತ್ತು. ರಾಜಕೀಯವಾಗಿ ಬಿಜೆಪಿಯಿಂದಲೂ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಬಹುಮಹಡಿ ಕಟ್ಟಡ ಕಟ್ಟಲು ದೊಡ್ಡ ಮರಗಳನ್ನು ಕಡಿಯಬೇಕಾಗುತ್ತದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.
(This copy first appeared in Hindustan Times Kannada website. To read more like this please logon to kannada.hindustantimes.com )