Bangalore potholes: ಬೆಂಗಳೂರಿನಲ್ಲಿ ಗುಂಡಿ ಕಂಡು ಬಂದರೆ ಆ್ಯಪ್‌ಗೆ ಅಪ್ಲೋಡ್ ಮಾಡಿ, ಬಿಬಿಎಂಪಿಯನ್ನು ಎಚ್ಚರಿಸಿ, ಯಾವುದೀ ಆ್ಯಪ್
Jul 30, 2024 03:47 PM IST
ಬೆಂಗಳೂರಿನಲ್ಲಿ ಗುಂಡಿಗಳ ಮಾಹಿತಿಗೆ ಆ್ಯಪ್ ಬಳಕೆ ಮಾಡಬಹುದು
- BBMP News ಬೆಂಗಳೂರು ಬೃಹತ್ ನಗರಪಾಲಿಕೆಯು ಗುಂಡಿಗಳ ಪತ್ತೆಗೆ ಆ್ಯಪ್ ರೂಪಿಸಿದೆ. ಇದರ ವಿವರ ಇಲ್ಲಿದೆ.
ಬೆಂಗಳೂರು: ಬೆಂಗಳೂರಿಗೂ ಗುಂಡಿಗಳಿಗೂ ಬಿಡಿಸಲಾಗದ ನಂಟು. ಮಹಾನಗರದಲ್ಲಿ ಆಗ್ಗಾಗ್ಗೆ ಗುಂಡಿ ಮುಚ್ಚಿದರೂ ಮತ್ತೆ ಬೇರೆ ಕಡೆ ಗುಂಡಿಗಳು ಸೃಷ್ಟಿಯಾಗುತ್ತವೆ. ವಾಹನ ಸಂಚಾರ, ನಿರಂತರ ಬಳಕೆಯೂ ಇದಕ್ಕೆ ಕಾರಣ. ಬೆಂಗಳೂರು ನಗರದ ಉಸ್ತುವಾರಿಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುಂಡಿಗಳನ್ನು ಮುಚ್ಚುವ ಪ್ರಯತ್ನಕ್ಕೆ ಬೆಂಬಲ ನೀಡಿದ್ದರೂ ಗುಂಡಿಗಳನ್ನು ಪತ್ತೆ ಮಾಡಲು ಹೊಸ ಐಡಿಯಾವನ್ನೇ ಮಾಡಿದ್ದಾರೆ. ತಮ್ಮ ಬಡಾವಣೆ, ರಸ್ತೆಗಳಲ್ಲಿ ಗುಂಡಿ ಕಂಡು ಬಂದರೆ, ಇಲ್ಲವೇ ಬೆಂಗಳೂರಿಗೆ ಬಂದಾಗ ಯಾವುದೇ ಕಡೆ ಗುಂಡಿಯನ್ನು ನೋಡಿದವರು ಆ್ಯಪ್ ಮೂಲಕ ಮಾಹಿತಿ ನೀಡಿದರೆ ಕೂಡಲೇ ಅದನ್ನು ದುರಸ್ತಿಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು( BBMP) ಕ್ರಮವನ್ನು ತೆಗೆದುಕೊಳ್ಳಲಿದೆ. ಅಲ್ಲದೇ ಆ್ಯಪ್ ಮೂಲಕವೇ ಮಾಹಿತಿಯನ್ನೂ ನೀಡಲಿದೆ. ರಸ್ತೆ ಗುಂಡಿ ಗಮನ(Raste Gundi Gamana) ಎನ್ನುವ ಅಪ್ಲಿಕೇಶನ್ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಲಭ್ಯವಿದೆ. ಇದನ್ನು ಪ್ಲೇಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಂಡು ನಿಯಮಿತವಾಗಿ ಬಳಸಬಹುದು.
ಇದಲ್ಲದೇ ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ( AI) ಸಕ್ರಿಯಗೊಳಿಸಿದ ಕ್ಯಾಮೆರಾಗಳನ್ನು ಹೊಂದಿರುವ 15 ವಾಹನಗಳನ್ನು ನಿಯೋಜಿಸುವುದಾಗಿ ಬಿಬಿಎಂಪಿ ಘೋಷಿಸಿದೆ. ಗುಂಡಿಗಳ ಜೊತೆಗೆ, ಈ ಕ್ಯಾಮೆರಾಗಳು ಹಾನಿಗೊಳಗಾದ ಬೀದಿ ದೀಪಗಳು, ಫುಟ್ ಪಾತ್‌ಗಳಿಂದ ಆಗುವ ಅಪಾಯದ ಜತೆಗೆ ಇತರ ವಸ್ತುಗಳನ್ನು ಸಹ ಸೆರೆಹಿಡಿಯುತ್ತವೆ. ಸದ್ಯದಲ್ಲೇ ಕೆಲವು ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮರಾಗಳು ಅಳವಡಿಕೆಯಾಗಲಿವೆ.
ನಗರದ ಶೇ.96ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಆದರೂ ಗುಂಡಿ ನಿರ್ವಹಣೆ ಹಾಗೂ ನಿಖರ ಮಾಹಿತಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ರಸ್ತೆ ಗುಂಡಿಗಳನ್ನು ಸರಿಪಡಿಸಿ' ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜಿಪಿಎಸ್-ಸಕ್ರಿಯಗೊಳಿಸಿದ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ತಮ್ಮ ಪ್ರದೇಶದಲ್ಲಿನ ಗುಂಡಿಗಳ ಚಿತ್ರಗಳನ್ನು ಅಪ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರು ಒಟ್ಟಾಗಿ ಅಪ್ಲಿಕೇಶನ್ ಅನ್ನು ಬಳಸಲಿದ್ದು, ವರದಿಯಾದ ಗುಂಡಿಯ ಸ್ಥಿತಿಯನ್ನು ನಂತರ ನವೀಕರಿಸಲಾಗುವುದು. ಈ ಅಪ್ಲಿಕೇಶನ್ ನಾಗರಿಕ ಸಂಸ್ಥೆಗೆ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ತರುವ ನಿರೀಕ್ಷೆಯಿದೆ, ಇದು ಬೆಂಗಳೂರು ರಸ್ತೆಗಳ ಕೆಟ್ಟ ನಿರ್ವಹಣೆಗಾಗಿ, ವಿಶೇಷವಾಗಿ ಮಳೆಗಾಲದಲ್ಲಿ ಆಗುವ ತೊಂದರೆ ತಪ್ಪಿಸಲು ನೆರವಾಗಲಿದೆ ಎನ್ನುವುದು ಡಿ.ಕೆ.ಶಿವಕುಮಾರ್ ಅವರ ವಿಶ್ವಾಸದ ನುಡಿ.
ಬೆಂಗಳೂರಿನ ಒಟ್ಟು 157 ಕಿ.ಮೀ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಲಾಗುವುದು ಮತ್ತು ಇದು ಟೆಕ್ ರಾಜಧಾನಿಯನ್ನು ಗುಂಡಿ ಮುಕ್ತ ನಗರವನ್ನಾಗಿ ಮಾಡುತ್ತವೈಟ್ ಟಾಪಿಂಗ್ ಮುಂದಿನ 25 ವರ್ಷಗಳವರೆಗೆ ರಸ್ತೆಯನ್ನು ಹಾನಿಯಿಂದ ರಕ್ಷಿಸುತ್ತದೆ ಎಂಬುದು ಡಿಕೆಶಿ ಅವರ ಹೇಳಿಕೆ.
"ನಿಯಮಿತ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಸಾಮಾನ್ಯವಾಗಿ ಗುಂಡಿಗಳಿಗೆ ಒಳಗಾಗುತ್ತವೆ. ೧೮೦೦ ಕೋಟಿ ರೂ.ಗಳೊಂದಿಗೆ ನಗರದಾದ್ಯಂತ ವೈಟ್ ಟಾಪಿಂಗ್ ಮಾಡಲಾಗುವುದು. ಈ ಉಪಕ್ರಮವು ಮುಂದಿನ 25 ವರ್ಷಗಳವರೆಗೆ ರಸ್ತೆಗಳನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತದೆ. ನಗರದಲ್ಲಿ ಇಂತಹ ರಸ್ತೆಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೂಚಿಸಲಾಗಿದೆ" ಎಂದು ಅವರು ಕಳೆದ ವಾರ ಡಿಕೆಶಿ ಹೇಳಿದ್ದರು.