Crime News: ಹೆಚ್ಚಿದ ಹಣ ದೋಚುವ ಪ್ರಕರಣಗಳು, ಕರ್ನಾಟಕ ಸಿಐಡಿಯಲ್ಲಿ 2 ವಿಶೇಷ ವಿಭಾಗಗಳ ರಚನೆ
Dec 21, 2023 07:53 AM IST
ಕರ್ನಾಟಕ ಸಿಐಡಿ ಪೊಲೀಸ್ ಮತ್ತಷ್ಟು ಬಲಪಡಿಸಲಾಗಿದೆ. ಚಿನ್ನ ಮೈಮೇಲೆ ಹೇರಿಕೊಂಡು ಜನರಿಗೆ ಬೆದರಿಕೆ ಹಾಕುತ್ತಿದ್ದವನ ವಿರುದ್ದ ಬೆಂಗಳೂರು ಪೊಲೀಸರು ರೌಡಿಶೀಟರ್ ಪಟ್ಟಿ ತೆಗೆದಿದ್ದಾರೆ.
- Karnataka police updates ಕರ್ನಾಟಕದಲ್ಲಿ ತನಿಖೆಗೆ ಹೆಸರುವಾಸಿಯಾದ ಸಿಐಡಿ( CID) ವಿಭಾಗವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಏನೆಲ್ಲಾ ಬದಲಾವಣೆ ಆಗಿದೆ. ಇಲ್ಲಿದೆ ವಿವರ.
ಬೆಂಗಳೂರು: ಕರ್ನಾಟಕದಲ್ಲಿ ಆರ್ಥಿಕ ವಂಚನೆ ಪ್ರಕರಣಗಳ ಹೆಚ್ಚುತ್ತಿದೆ. ಪ್ರಕರಣಗಳ ಸ್ವರೂಪದಲ್ಲೂ ಭಾರೀ ಬದಲಾವಣೆ ಕಾಣುತ್ತಿದೆ. ಈ ಕಾರಣದಿಂದ ಕರ್ನಾಟಕದ ಅಪರಾಧಗಳ ತನಿಖಾ ವಿಭಾಗ( CID) ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ.
ಪ್ರಕರಣಗಳ ತನಿಖೆಗಾಗಿ ಕರ್ನಾಟಕ ಸಿಐಡಿ 2 ವಿಶೇಷ ವಿಭಾಗಗಳ ರಚನೆ ಮಾಡಿದ್ದು, ಘಟಕಗಳನ್ನು ಇನ್ನಷ್ಟು ವಿಸ್ತರಿಸಿದೆ. ಆರ್ಥಿಕ ಅಪರಾಧಗಳ ತನಿಖೆಯಲ್ಲಿ ವೃತ್ತಿಪರತೆ ತರುವುದು ಕರ್ನಾಟಕ ಪೊಲೀಸ್ ಉದ್ದೇಶ.
ಕರ್ನಾಟಕ ದೇಶದಲ್ಲೇ ಅತ್ಯುತ್ತಮ ಪೊಲೀಸ್ ಪಡೆ ಹೊಂದಿದೆ. ಅದರಲ್ಲೂ ತನಿಖಾ ವಿಚಾರದಲ್ಲಿ ಕರ್ನಾಟಕದ ಪೊಲೀಸರು ಮುಂಚೂಣಿಯಲ್ಲಿ ಇದ್ದಾರೆ. ಈಗ ಇನ್ನಷ್ಟು ಉತ್ತಮಗೊಳಿಸುವ ಕೆಲಸವೂ ನಡೆದಿದೆ.
ಹೇಗಿದೆ ಬದಲಾವಣೆ
ಅಧಿಕ ಲಾಭದ ಆಮಿಷವೊಡ್ಡಿ ಸಾರ್ವಜನಿಕರಿಂದ ಭಾರಿ ಪ್ರಮಾಣದಲ್ಲಿ ಹಣ ದೋಚುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಮತ್ತು ಪ್ರಕರಣಗಳ ನಿಯಂತ್ರಣಕ್ಕೆ ಅಪರಾಧ ತನಿಖಾ ದಳವು (ಸಿಐಡಿ) ಎರಡು ವಿಶೇಷ ವಿಭಾಗಗಳನ್ನು ರಚಿಸಿದೆ. ಆರ್ಥಿಕ ವಂಚನೆಗಳ ತನಿಖೆಗೆ ಠೇವಣಿ ವಂಚನೆ ವಿಭಾಗ ಹಾಗೂ ವೃತ್ತಿಪರ ಕ್ರಿಮಿನಲ್‌ಗಳ ಮೇಲೆ ಕಣ್ಗಾವಲಿಡಲು ಕ್ರಿಮಿನಲ್ ಗುಪ್ತದಳ ವಿಭಾಗ ರಚಿಸಲಾಗಿದೆ.
ಸಿಐಡಿಯಲ್ಲಿ ಹೊಸ ಎರಡು ವಿಭಾಗಗಳೂ ಸೇರಿದಂತೆ ಸದ್ಯ ಮೂರು ವಿಭಾಗಗಳು ಕಾರ್ಯಾಚರಣೆ ಮಾಡುತ್ತಿವೆ. ಮೂರೂ ವಿಭಾಗಗಳು ರಾಜ್ಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಿವೆ. ಆರ್ಥಿಕ ವಂಚನೆ ಪ್ರಕರಣ ಪತ್ತೆಗೆ ಎರಡು ವಿಭಾಗಕ್ಕೂ ಎಸ್ ಪಿ ದರ್ಜೆಯ ಅಧಿಕಾರಿಗಳು ನೇತೃತ್ವವಹಿಸಲಿದ್ದಾರೆ ಎನ್ನುತ್ತಾರೆ ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ.
2 ಎಸ್‌ಪಿ ಹುದ್ದೆ
ಸ್ಥಳೀಯ ಠಾಣೆಗಳ ರೌಡಿಪಟ್ಟಿಯಲ್ಲಿ ಹೆಸರಿರುವವರ ಮೇಲೆ ನಿಗಾ ವಹಿಸುವುದು ಹಾಗೂ ಕ್ರಿಮಿನಲ್‌ಗಳ ಚಲನವಲನ ಮಾಹಿತಿ ಸಂಗ್ರಹಕ್ಕೆ ಕ್ರಿಮಿನಲ್ ಗುಪ್ತದಳ ವಿಭಾಗ ಕೆಲಸ ಮಾಡಲಿದೆ.
ಸಿಐಡಿಯಲ್ಲಿ 62 ಡಿವೈಎಸ್‌ಪಿ ಹುದ್ದೆಗಳಿದ್ದವು. ಎರಡು ಹುದ್ದೆಗಳನ್ನು ವಾಪಸ್ ನೀಡಿ, ಎಸ್‌ಪಿ ಹುದ್ದೆಗಳನ್ನು ಸೃಜಿಸಲಾಗಿದೆ. ರಾಜ್ಯದಲ್ಲಿ ಆರು ವಲಯಗಳಿದ್ದು ಡಿವೈಎಸ್‌ಪಿ ನೇತೃತ್ವದಲ್ಲಿ ಇಬ್ಬರು ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ ತಂಡಗಳು ಕೆಲಸ ಮಾಡುತ್ತಿವೆ. ಡಿವೈಎಸ್ಪಿ ನೇತೃತ್ವದಲ್ಲಿ ವಲಯವಾರು ದಾಖಲಾದ ಪ್ರಕರಣಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಪ್ರಕರಣಗಳ ತನಿಖೆ
ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಲ್ಲಿ 903 ಪ್ರಕರಣಗಳು ತನಿಖೆ ಹಂತದಲ್ಲಿದ್ದವು. ಅವುಗಳಲ್ಲಿ, 290 ಪ್ರಕರಣಗಳ ತನಿಖೆ ಪೂರ್ಣಗೊಳಿಸಲಾಗಿದೆ. ಉಳಿದ 615 ಪ್ರಕರಣ ತನಿಖೆ ನಡೆಯುತ್ತಿದೆ. ಹೊಸ ವಿಭಾಗಗಳ ರಚನೆಯಿಂದ ಪ್ರಕರಣಗಳ ತ್ವರಿತ ತನಿಖೆಗೆ ಸಹಕಾರಿ ಆಗಲಿದೆ ಎನ್ನುವುದು ಸಿಐಡಿ ಡಿಜಿಪಿ ಡಾ.ಸಲೀಂ ಅಭಿಪ್ರಾಯ.
ರೀಲ್ ದಾಸನ ವಿರುದ್ದ ರೌಡಿಪಟ್ಟಿ
ಮೈತುಂಬಾ ಬಂಗಾರ ಹೇರಿಕೊಂಡು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಮಂಜುನಾಥ್ ಅಲಿಯಾಸ್ ದಾಸ ಎಂಬಾತನ ವಿರುದ್ಧ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ.
ಯಲಹಂಕ ಹಾಗೂ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಈತ ರೌಡಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಈತನ ರೌಡಿ ಚಟುವಟಿಕೆಗಳನ್ನು ಅಧರಿಸಿ ರೌಡಿಪಟ್ಟಿ ತೆರೆಯಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಆಸ್ತಿ ವ್ಯಾಜ್ಯದಲ್ಲಿ ಮಧ್ಯ ಪ್ರವೇಶಿಸಿ ಮಹಿಳೆಯರಿಬ್ಬರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ದಾಸನನ್ನು ಯಲಹಂಕ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.
ದಾಸ, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ವಿಡಿಯೊ ಮಾಡುತ್ತಿದ್ದ. ಜೊತೆಗೆ ಪದೇ ಪದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ: ಎಚ್ ಮಾರುತಿ. ಬೆಂಗಳೂರು)