logo
ಕನ್ನಡ ಸುದ್ದಿ  /  ಕರ್ನಾಟಕ  /  Leopard In Bangalore: ಸೆರೆ ಸಿಕ್ಕ ಬೆಂಗಳೂರು ಚಿರತೆ ಸಾವು: ಸತತ 72 ಗಂಟೆ ಕಾರ್ಯಾಚರಣೆ ಅರಣ್ಯ ಇಲಾಖೆ ಬಳಿಕ ಬಲೆಗೆ ಬಿದ್ದಿತ್ತು

Leopard in Bangalore: ಸೆರೆ ಸಿಕ್ಕ ಬೆಂಗಳೂರು ಚಿರತೆ ಸಾವು: ಸತತ 72 ಗಂಟೆ ಕಾರ್ಯಾಚರಣೆ ಅರಣ್ಯ ಇಲಾಖೆ ಬಳಿಕ ಬಲೆಗೆ ಬಿದ್ದಿತ್ತು

Umesha Bhatta P H HT Kannada

Nov 01, 2023 09:27 PM IST

google News

ಬೆಂಗಳೂರಿನಲ್ಲಿ ಕಾಡಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

    • leopard captured ಬೆಂಗಳೂರಿನಲ್ಲಿ ಮೂರ್ನಾಲ್ಕು ದಿನದಿಂದ ಕಾಡುತ್ತಲೇ ಇದ್ದ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಬೆಂಗಳೂರಿನಲ್ಲಿ ಕಾಡಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಬೆಂಗಳೂರಿನಲ್ಲಿ ಕಾಡಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಬೆಂಗಳೂರು: ಕೊನೆಗೂ ಬೆಂಗಳೂರು ಚಿರತೆ ಸೆರೆ ಸಿಕ್ಕಿದೆ. ಆದರೆ ರಕ್ಷಣಾತ್ಮಕವಾಗಿ ಅದಕ್ಕೆ ಹಾರಿಸಿದ ಗುಂಡು ಅದನ್ನು ಘಾಸಿಗೊಳಿಸಿತ್ತು. ಹೀಗಾಗಿ ಅದರ ಪ್ರಾಣ ಉಳಿಸುವುದು ಸಾಧ್ಯವಾಗಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿ ಭಾಗದ ಹೊಸೂರು ರಸ್ತೆ ಕೂಡ್ಲುಗೇಟ್ ಬಳಿಯ ಎಇಸಿಎಸ್‌( AECS) ಲೇಔಟ್ ನಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಸತತ 72 ಗಂಟೆ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ವಿವಿಧ ತಂಡಗಳು ಕೊನೆಗೂ ಚಿರತೆಯನ್ನು ಪಾಳುಬಿದ್ದ ಕಟ್ಟಡದಲ್ಲಿಯೇ ಜೀವಂತವಾಗಿ ಹಿಡಿದಿವೆ. ಗಂಡು ಚಿರತೆ ಹತ್ತು ವರ್ಷವಾಗಿದ್ದು, ತೀವ್ರವಾಗಿ ಗಾಯಗೊಂಡಿದೆ.

ಬುಧವಾರ ಬೆಳಿಗ್ಗೆಯೇ ಚಿರತೆ ಸಿಕ್ಕಿ ಹಾಕಿಕೊಳ್ಳಬೇಕಾಗಿತ್ತು. ಆದರೆ ಸಿಬ್ಬಂದಿಗೆ ಗಾಯಗೊಳಿಸಿ ತಪ್ಪಿಸಿಕೊಂಡಿತ್ತು.ಮತ್ತೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಚಿರತೆ ಕಾರ್ಯಪಡೆಯ ಸಿಬ್ಬಂದಿ ಅದನ್ನು ಅಲ್ಲಿಯೇ ಸೆರೆ ಹಿಡಿದರು.

ಬೆಂಗಳೂರಿನಲ್ಲಿ ಸೆರೆ ಹಿಡಿದಿದ್ದ ಚಿರತೆ ಸಾವು

ಬೊಮ್ಮನಹಳ್ಳಿ ಪ್ರದೇಶದಲ್ಲಿ ಮೂರು ದಿನದಿಂದ ಜನರನ್ನು ಕಾಡಿದ್ದ ಚಿರತೆಯನ್ನು ಮಧ್ಯಾಹ್ನವೇ ಸೆರೆ ಹಿಡಿಯುವ ಕೊನೆ ಪ್ರಯತ್ನ ನಡೆಸಲಾಗಿತ್ತು. ಆಗ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ಹತ್ತು ವರ್ಷದ ಗಂಡು ಚಿರತೆ. ಬನ್ನೇರುಘಟ್ಟ ಜೈವಿಕ ಉದ್ಯಾನದ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲಿ ಸಾವು ಸಂಭವಿಸಿದೆ. ಬಳಿಕ ಮರಣೋತ್ತರ ನಡೆಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಗುಂಡು ಹಾರಿಸಲು ಕರ್ನಾಟಕ ಮುಖ್ಯ ವನ್ಯಜೀವಿ ಪಾಲಕರಾದ ಪಿಸಿಸಿಎಫ್ ಸುಭಾಷ್ ಮಳಖೆಡ್ ಅನುಮತಿ ನೀಡಿದ್ದರು. ಬೆಂಗಳೂರು ನಗರ ಡಿಸಿಎಫ್ ರವೀಂದ್ರಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು ಎಂದು ಎಪಿಸಿಸಿಎಫ್ ( ವನ್ಯಜೀವಿ) ಕುಮಾರ ಪುಷ್ಕರ್ ವಿವರ ನೀಡಿದರು.

ಬೆಂಗಳೂರು ಸೆರೆ ಸಿಕ್ಕಿದ್ದು ಹೀಗೆ

ಚಿರತೆಗೆ ಒಂದು ಕಡೆಯಿಂದ ಅರವಳಿಕೆ ನೀಡಿ ಮತ್ತೊಂದು ಕಡೆ ಬಲೆ ಹಾಕಿ ಸೆರೆ ಹಿಡಿಯಲಾಗಿದೆ ಎಂದು ಬೆಂಗಳೂರು ಸಿಸಿಎಫ್‌ ಲಿಂಗರಾಜು ಖಚಿತಪಡಿಸಿದ್ದಾರೆ. ಚಿರತೆಗೆ ಮೊದಲು ಬನ್ನೇರಘಟ್ಟದಲ್ಲಿ ಚಿಕಿತ್ಸೆ ನೀಡಿ ಮುಂದೆ ಅದನ್ನು ಕಾಡಿಗೆ ಬಿಡಬೇಕೋ ಅಥವಾ ಪುನವರ್ಸತಿ ಕೇಂದ್ರದಲ್ಲಿ ಇರಿಸಿಕೊಳ್ಳಬೇಕೋ ಎನ್ನುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನಿಸಲಿದ್ದಾರೆ.

ಶನಿವಾರ ರಾತ್ರಿ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯಲು ವಿಶೇಷ ತಂಡಗಳನ್ನು ರಚಿಸಲಾಗಿತ್ತು ಭಾನುವಾರದಿಂದ ಕಾರ್ಯಾಚರಣೆ ನಡೆದರೂ ಮಂಗಳವಾರದಿಂದ ತೀವ್ರಗೊಂಡಿತ್ತು. ಚಿರತೆ ಇರುವ ಸ್ಥಳ ಪತ್ತೆಯಾಗಿತ್ತು. ಕೃಷ್ಣಪ್ಪ ಕೈಗಾರಿಕಾ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ರಾತ್ರಿ ಹಗಲು ವಿಶೇಷ ತಂಡಗಳನ್ನು ರಚಿಸಿ ಈ ಶೋಧಕಾರ್ಯ ಮಾಡುತ್ತಲೇ ಇದ್ದರು. ಹೆಚ್ಚಿನ ಬೋನುಗಳನ್ನು ಇರಿಸಲಾಗಿದ್ದರೂ ಅದರತ್ತಲೂ ಚಿರತೆ ಸುಳಿದಿರಲಿಲ್ಲ.

ಚಿರತೆಯನ್ನು ಬೋನಿನಲ್ಲಿ ಇರಿಸಿಕೊಂಡು ಅಲ್ಲಿಂದ ಬನ್ನೇರಘಟ್ಟಕ್ಕೆ ಸಾಗಿಸಲಾಯಿತು. ಈ ವೇಳೆ ಕುತೂಹಲಿ ಜನ ಸೇರಿದ್ದರಿಂದ ಅವರನ್ನು ಚದುರಿಸಿ ಚಿರತೆಯನ್ನು ಕೊಂಡೊಯ್ಯಲಾಯಿತು.

ಸ್ಥಳಕ್ಕೆ ಶಾಸಕರ ಭೇಟಿ

ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಮಾಹಿತಿ ಪಡೆದರು. ಸತತ ಮೂರು ದಿನದಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಈ ಕುರಿತು ವಿವರಣೆ ಪಡೆದಿದ್ದರು. ಮಂಗಳವಾರವೂ ಆಗಮಿಸಿದ ಶಾಸಕರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಬುಧವಾರವೂ ಭೇಟಿ ನೀಡಿದ ಸತೀಶ್‌ ರೆಡ್ಡಿ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿರತೆ ದಾಳಿಯಿಂದ ಗಾಯಗೊಂಡ ಇಬ್ಬರಿಗೆ ವೈಯಕ್ತಿಕವಾಗಿ ಎರಡು ಲಕ್ಷ ರೂ.ಗಳನ್ನು ನೀಡುವುದಾಗಿ ಸತೀಶ್‌ ರೆಡ್ಡಿ ಪ್ರಕಟಿಸಿದರು.

ಇದನ್ನೂ ಓದಿರಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ