logo
ಕನ್ನಡ ಸುದ್ದಿ  /  ಕರ್ನಾಟಕ  /  Leopard In Bangalore: ಬೆಂಗಳೂರಲ್ಲಿ ಚಿರತೆ ಸೆರೆಗೆ ಅಖಾಡಕ್ಕೆ ಇಳಿದ ಅರಣ್ಯ ಇಲಾಖೆ: ಚಿರತೆ ಕಾರ್ಯಪಡೆಯಿಂದ ಕಾರ್ಯಾಚರಣೆ

Leopard in Bangalore: ಬೆಂಗಳೂರಲ್ಲಿ ಚಿರತೆ ಸೆರೆಗೆ ಅಖಾಡಕ್ಕೆ ಇಳಿದ ಅರಣ್ಯ ಇಲಾಖೆ: ಚಿರತೆ ಕಾರ್ಯಪಡೆಯಿಂದ ಕಾರ್ಯಾಚರಣೆ

HT Kannada Desk HT Kannada

Oct 31, 2023 12:06 PM IST

google News

ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಕಾರ್ಯಾಚರಣೆ ಶುರುವಾಗಿದೆ.

    • Bangalore leopard updates ಬೆಂಗಳೂರಿನ( Bangalore) ಅಪಾರ್ಟ್‌ ಮೆಂಟ್‌ ಬಳಿ ಕಾಣಿಸಿಕೊಂಡ ಚಿರತೆ ಸೆರೆಗೆ ಅರಣ್ಯ ಇಲಾಖೆ( Karnataka Forest department) ಚಿರತೆ ಕಾರ್ಯಪಡೆ ( Leopard Task Force) ಸಹಾಯದಿಂದ ಕಾರ್ಯಾಚರಣೆ ಶುರು ಮಾಡಿದೆ. 
ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಕಾರ್ಯಾಚರಣೆ ಶುರುವಾಗಿದೆ.
ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಕಾರ್ಯಾಚರಣೆ ಶುರುವಾಗಿದೆ.

ಬೆಂಗಳೂರು: ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌ ಪ್ರದೇಶಕ್ಕೆ ನುಗ್ಗಿದ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ಎರಡು ಮೂರು ದಿನದಿಂದ ಬೆಂಗಳೂರು ಆಗ್ನೇಯ ಭಾಗದ ಸಿಂಗಸಂದ್ರ, ಎಚ್‌ಎಸ್‌ಆರ್‌ ಲೇಔಟ್‌ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು ನಿವಾಸಿಗಳು ಆತಂಕ ಹೊರ ಹಾಕಿದ್ದರು. ಕೂಡ್ಲು ಗೇಟ್‌ನ ಎಂ.ಎಸ್‌.ಧೋನಿ ಅಂತರಾಷ್ಟ್ರೀಯ ಶಾಲೆ (MS Dhoni International school) ಸಮೀಪದಲ್ಲಿಯೇ ಚಿರತೆ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.

ಸೋಮವಾರ ರಾತ್ರಿಯೂ ಗಸ್ತಿನಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಚಿರತೆ ಕಾಣಿಸಿಕೊಂಡಿದೆ. ಕೂಡ್ಲು ಗೇಟ್‌ ಸಮೀಪದ ಖಾಲಿ ಕಟ್ಟಡವೊಂದರತ್ತ ಚಿರತೆ ಓಡಿ ಹೋಗಿದೆ. ಕೂಡಲೇ ಅರಣ್ಯ ಇಲಾಖೆಯವರಿಗೆ ಪೊಲೀಸರು ಮಾಹಿತಿ ನೀಡಿದ್ದರು. ಈಗಾಗಲೇ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಕ್ರಮ ವಹಿಸಿತ್ತಾದರೂ ಮಂಗಳವಾರ ಬೆಳಿಗ್ಗೆಯಿಂದಲೇ ಸೆರೆ ಕಾರ್ಯಾಚರಣೆ ಶುರು ಮಾಡಿತು.

ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ( PCCF) ಸುಭಾಷ್‌ ಮಳಖಡೆ ಅವರ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದೆ. ಬೆಂಗಳೂರು ನಗರ ಡಿಸಿಎಫ್‌ ರವೀಂದ್ರಕುಮಾರ್‌ ಅವರ ನೇತೃತ್ವದಲ್ಲಿ ಸೆರೆ ಕಾರ್ಯಾಚರಣೆ ಶುರುವಾಗಿದೆ. ಮೈಸೂರಿನಿಂದ ಇದಕ್ಕಾಗಿ ಹತ್ತು ಮಂದಿ ತಜ್ಞರ ತಂಡವನ್ನು ಕರೆಯಿಸಲಾಗಿದೆ. ಚಿರತೆ ಕಾರ್ಯಪಡೆಯನ್ನು ಈಗಾಗಲೇ ರಚಿಸಿದ್ದು, ಇದು ಮೈಸೂರಿನಲ್ಲಿ ಕಾರ್ಯನಿರ್ವಹಿಸಲಿದೆ. ಆ ತಂಡ ಚಿರತೆ ಪತ್ತೆಗೆ ಮುಂದಾಗಿದೆ.

ಇದಲ್ಲದೇ ಮೈಸೂರಿನಲ್ಲಿ ಚಿರತೆ ಸೆರೆ ಹಿಡಿಯುವಾಗ ಬಳಸಿದ್ದ ಥರ್ಮಲ್‌ ಢ್ರೋಣ್‌ ಅನ್ನು ಈ ಕಾರ್ಯಾಚರಣೆಗೆ ಬಳಸಲಾಗಿದೆ. ಅಂದರೆ ಐದು ಕಿ.ಮಿ ವ್ಯಾಪ್ತಿಯಲ್ಲಿ ಚಿರತೆ ಎಲ್ಲೆ ಇದ್ದರೂ ಢ್ರೋಣ್‌ ಚಿತ್ರಗಳಲ್ಲಿ ಸೆರೆಯಾಗಲಿದೆ. ಇದನ್ನಾಧರಿಸಿ ಕಾರ್ಯಾಚರಣೆ ನಡೆಸಬಹುದು.

ಚಿರತೆ ಇಲ್ಲಿಯೇ ಇರುವುದನ್ನು ಪೊಲೀಸರೂ ನೋಡಿ ಮಾಹಿತಿ ನೀಡಿದ್ಧಾರೆ. ನಿವಾಸಿಗಳಿಂದಲೂ ದೂರು ಬಂದಿದ್ದು., ಇದನ್ನು ಗಂಭೀರವಾಗಿಯೇ ಪರಿಗಣಿಸಿ ಸೆರೆ ಕಾರ್ಯಾಚರಣೆ ಆರಂಭಿಸಿದ್ದೇವೆ. ಮೊದಲು ಚಿರತ ಎಲ್ಲಿದೆ ಎನ್ನುವುದನ್ನು ಪತ್ತೆ ಮಾಡುತ್ತೇವೆ. ಆನಂತರ ಅರವಳಿಕೆ ನೀಡಿ ಸೆರೆ ಹಿಡಿಯಲು ಸಿದ್ದತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಪಿಸಿಸಿಎಫ್‌ ಸುಭಾಷ್‌ ಮಳಖಡೆ.

ಸಮೀಪದಲ್ಲಿಯೇ ಬನ್ನೇರಘಟ್ಟ ಅರಣ್ಯವಿದೆ. ಅಲ್ಲದೇ ಈ ಭಾಗದಲ್ಲಿ ಹಸುರಿನ ವಾತಾವರಣ ಇರುವುದರಿಂದ ಚಿರತೆ ಬಂದಿರಬಹುದು. ಈಗ ಜನ ಕೂಡ ನೋಡಿದ್ದಾರೆ. ಚಿರತೆ ಇದೆಯೋ ಇಲ್ಲವೋ ಎಂದು ಗುರುತಿಸುವುದೋ ಮೊದಲ ಸವಾಲಿನ ಕೆಲಸ. ಜನ ಭಯ ಬೀಳುವುದು ಬೇಡ. ಜನ ಸಹಕರಿಸಿದರೆ ಚಿರತೆ ಸೆರೆ ಹಿಡಿಯುತ್ತೇವೆ ಎಂದು ಡಿಸಿಎಫ್‌ ರವೀಂದ್ರಕುಮಾರ್‌ ಹೇಳಿದರು.

ಈ ಭಾಗದಲ್ಲಿ ಚಿರತೆಯ ಭಯ ಇರುವುದರಿಂದ ಪೊಲೀಸ್‌ ಭದ್ರತೆಯನ್ನು ಹಾಕಲಾಗಿದೆ. ಹೊಯ್ಸಳ ವಾಹನಗಳೂ ಗಸ್ತು ತಿರುಗುತ್ತಿವೆ. ಅರಣ್ಯ ಇಲಾಖೆ ವಾಹನದೊಂದಿಗೆ ಪೊಲೀಸರು ಇದ್ದಾರೆ ಎಂದು ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ