Somanna: ಬಿಜೆಪಿಯಲ್ಲೇ ಉಳಿಯಲು ನಿರ್ಧರಿಸಿದ ವಿ.ಸೋಮಣ್ಣ; ಉಳಿಸಲು ಯಾರ ಪಾತ್ರವಿದೆ, ಅವರಿಗೆ ಸಿಕ್ಕ ಭರವಸೆಯಾದರೂ ಏನು
Jan 01, 2024 08:53 PM IST
ಮಾಜಿ ಸಚಿವ ವಿ.ಸೋಮಣ್ಣ ಅಸಮಾಧಾನ ಶಮನಗೊಳಿಸಿ ಬಿಜೆಪಿಯಲ್ಲೇ ಉಳಿಸಿಕೊಳ್ಳುವುದು ಖಚಿತವಾಗಿದೆ.
- ಮಾಜಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿಯಲ್ಲೇ ಮುಂದುವರೆಯುವ ತೀರ್ಮಾನ ಮಾಡಿದ್ದು. ಮುಂದಿನ ವಾರ ದೆಹಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡುವ ತೀರ್ಮಾನ ಮಾಡಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣೆ ಆರಂಭಕ್ಕೂ ಮೊದಲಿನಿಂದಲೂ ಬಿಜೆಪಿಯೊಂದಿಗೆ ಬೇಸರದಲ್ಲೇ ಇರುವ, ಚುನಾವಣೆ ಸೋಲಿನ ಬಳಿಕ ಪಕ್ಷದಿಂದ ಹೊರಹೋಗಲು ಮಾನಸಿಕವಾಗಿ ಸಿದ್ದರಾಗಿದ್ದ ಹಿರಿಯ ವೀರಶೈವ ಮುಖಂಡ, ಮಾಜಿ ಸಚಿವ ವಿ.ಸೋಮಣ್ಣ ಕೊನೆಗೂ ಬಿಜೆಪಿಯಲ್ಲೇ ಉಳಿಯಲು ನಿರ್ಧಾರ ಮಾಡಿದ್ದಾರೆ.
ಪಕ್ಷದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಆರಿಸಿದ ನಂತರ ಸೋಮಣ್ಣ ಬಹುತೇಕ ಬಿಜೆಪಿ ತ್ಯಜಿಸಿ ಕೈ ಹಿಡಿಯಲು ನಿರ್ಧಾರ ಮಾಡಿದ್ದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿ ತಮ್ಮ ಅಭಿಲಾಷೆಯನ್ನು ಹೇಳಿಕೊಂಡಿದ್ದರೂ ಹೈಕಮಾಂಡ್ ಯಡಿಯೂರಪ್ಪ ಅವರ ಅಣತಿಯನ್ನು ಮೀರಲು ಸಾಧ್ಯವಾಗಿರಲಿಲ್ಲ.
ಜೋಶಿ ಮಧ್ಯಸ್ಥಿಕೆ
ಇದೀಗ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸೋಮಣ್ಣ ಅವರನು ಭೇಟಿ ಮಾಡಿ ಚರ್ಚಿಸಿ ಅವರ ಕೋಪವನ್ನು ತಣಿಸುವ ಪ್ರಯತ್ನ ಮಾಡಿದ್ದು ಸಫಲರಾಗಿದ್ದಾರೆ.
ಮೂಲಗಳ ಪ್ರಕಾರ ಸೋಮಣ್ಣ ಅವರನ್ನು ವಿಧಾನಪರಿಷತ್ ಗೆ ಆಯ್ಕೆ ಮಾಡಲಾಗುವುದು. ನಂತರ ಮುಂಬರುವ ಚುನಾವಣೆಯಲ್ಲಿ ಅವರಿಗೆ ಅಥವಾ ಕುಟುಂಬದ ಸದಸ್ಯರೊಬ್ಬರಿಗೆ ಗೋವಿಂದರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡಲು ಜೋಶಿ ಭರವಸೆ ನಿಡಿದ್ದಾರೆ ಮತ್ತು ಸೋಮಣ್ಣ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಾರದಲ್ಲೇ ದೆಹಲಿ ಭೇಟಿ
ಈ ಭರವಸೆಯ ನಂತರ ಸೋಮಣ್ಣ ಇದೇ ತಿಂಗಳ 7 ಮತ್ತು 8ರಂದು ದೆಹಲಿಗೆ ತೆರಳಿ ಕೇಂದ್ರ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಸೋಮಣ್ಣ ಹಳೇ ಮೈಸೂರು ಭಾಗದ ಪ್ರಭಾವಿ ವೀರಶೈವ ಮುಖಂಡ ಮತ್ತು ಬೆಂಗಳೂರಿನಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.
ಒಂದು ವೇಳೆ ವೇಳೆ ಇವರು ಸಿಡಿದೆದ್ದರೆ ಬೆಂಗಳೂರು ದಕ್ಷಿಣ, ತುಮಕೂರು ಸೇರಿದಂತೆ ಮೂರ‍್ನಾಲ್ಕು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹೊಡೆತ ಬೀಳಬಹುದು ಎಂಬ ಆತಂಕದಿಂದ ಬಿಜೆಪಿ ಅವರ ಕೋಪವನ್ನು ಶಮನ ಮಾಡುವಲ್ಲಿ ಯಶಸ್ವಿಯಾಗಿದೆ.
ಹಳಸಿದ ಸಂಬಂಧಗಳು
ಯಡಿಯೂರಪ್ಪ ಮತ್ತು ಸೋಮಣ್ಣ ಅವರ ಸಂಬಂಧ ಸಂಪೂರ್ಣವಾಗಿ ಹಳಸಿದೆ. ಬೆಂಗಳೂರಿನಿಂದ ಎತ್ತಂಗಡಿ ಮಾಡಿಸಲು ಮತ್ತು ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ
ಸ್ಪರ್ಧಿಸುವಂತೆ ಮತ್ತು ಸೋಲುವಂತೆ ಮಾಡಿದ್ದು ಯಡಿಯೂರಪ್ಪ ಅವರ ಸಂಚು ಕಾರಣ ಎನ್ನುವುದು ರಾಜಕೀಯ ಅಂಗಳದಲ್ಲಿ ಈಗಲೂ ಚರ್ಚೆಯಲ್ಲಿರುವ ವಿಷಯ. ಮೇಲಾಗಿ ಹಿರಿಯ ಲಿಂಗಾಯತ ಮುಖಂಡರನ್ನೆಲ್ಲಾ ಬದಿಗೆ ಸರಿಸಿ ಮಗನ ಹಾದಿಗೆ ಯಾರೂ ಅಡ್ಡಿ ಬಾರದಂತೆ ಮಾಡುವಲ್ಲಿ ಯಡಿಯೂರಪ್ಪ ಜಯ ಸಾಧಿಸಿದ್ದರು ಎನ್ನುವ ಚರ್ಚೆಗಳು ಬಿಜೆಪಿ ವಲಯದಲ್ಲಿವೆ.
ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟು ದೊಡ್ಡ ತಪ್ಪು ಮಾಡಿದ್ದೇನೆ. ಜನವರಿ 10 ರೊಳಗೆ ಎಲ್ಲವೂ ಸರಿಹೋಗುವ ನಿರೀಕ್ಷೆ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸೋಮಣ್ಣ ಅವರು ಕಾಂಗ್ರೆಸ್ ಸೇರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೈ ಪಡೆಯ ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನೂ ನಡೆಸಿದ್ದರು. ವರಿಷ್ಠರಿಗೆ ದೂರು ಸಲ್ಲಿಸಲು ಸೋಮಣ್ಣ, ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಸೇರಿದಂತೆ ಅಸಮಾಧಾನಿತ ನಾಯಕರನ್ನು ಕರೆದೊಯ್ಯಲು ಸಿದ್ದತೆ ನಡೆಸಿದ್ದರು.
ಲೋಕಸಭೆಗೆ ಆಕಾಂಕ್ಷಿ
ಅವಕಾಶ ಸಿಕ್ಕಾಗಲೆಲ್ಲಾ ಬಿಜೆಪಿ ನಾಯಕರನ್ನು ನಿಂದಿಸುವ ಅವಕಾಶಗಳನ್ನು ಸೋಮಣ್ಣ ಕಳೆದುಕೊಳ್ಳುತ್ತಿರಲಿಲ್ಲ. ಕೇವಲ ಯಡಿಯೂರಪ್ಪ ಮಾತ್ರವಲ್ಲದೆ ಅನೇಕ ಬಿಜೆಪಿ ಮುಖಂಡರೊಂದಿಗೂ ಸೋಮಣ್ಣ ಅವರ ಸಂಬಂಧ ಅಷ್ಟಕ್ಕಷ್ಟೇ. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೂ ಮಧುರ ಬಾಂಧವ್ಯ ಹೊಂದಿಲ್ಲ.
ಸೋಮಣ್ಣ ಅವರನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಇದುವರೆಗೂ ನಿರ್ಧಾರ ಕೈಗೊಂಡಿಲ್ಲ. ವಯಸ್ಸಿನ ಕಾರಣಗಳಿಗಾಗಿ ಸೋಮಣ್ಣ ಅವರಿಗೂ ದೆಹಲಿಗೆ ಹೋಗುವ ಹಠ ಇಲ್ಲ. ವಿಧಾನಪರಿಷತ್ ಸದಸ್ಯತ್ವ ಲಭಿಸಿದರೆ ಬಿಜೆಪಿ ಪರ ವ್ಯಾಪಕ ಚುನಾವಣಾ ಪ್ರಚಾರ ನಡೆಸುವುದಾಗಿ ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಸೋಮಣ್ಣ ಪಕ್ಷದಲ್ಲೇ ಉಳಿದುಕೊಂಡಿರುವುದು ಬಿಜೆಪಿಗೆ ಆನೆ ಬಲವೇ ಸರಿ ಎನ್ನುವುದು ಬಿಜೆಪಿ ಮುಖಂಡರ ಅಭಿಪ್ರಾಯ.
(ವಿಶೇಷ ವರದಿ: ಎಚ್.ಮಾರುತಿ. ಬೆಂಗಳೂರು)