logo
ಕನ್ನಡ ಸುದ್ದಿ  /  ಕರ್ನಾಟಕ  /  ರಂಜಾನ್ ಆಹಾರ ಮೇಳಕ್ಕೆ ಫ್ರೇಜರ್‌ ಟೌನ್‌ ನಿವಾಸಿಗಳ ವಿರೋಧ; ವಾಯುಮಾಲಿನ್ಯದ ಆತಂಕದಿಂದ ಪೊಲೀಸ್, ಶಾಸಕರ ಸಹಕಾರ ಕೋರಿದ ನಾಗರಿಕರು

ರಂಜಾನ್ ಆಹಾರ ಮೇಳಕ್ಕೆ ಫ್ರೇಜರ್‌ ಟೌನ್‌ ನಿವಾಸಿಗಳ ವಿರೋಧ; ವಾಯುಮಾಲಿನ್ಯದ ಆತಂಕದಿಂದ ಪೊಲೀಸ್, ಶಾಸಕರ ಸಹಕಾರ ಕೋರಿದ ನಾಗರಿಕರು

Raghavendra M Y HT Kannada

Feb 25, 2024 02:08 PM IST

google News

ರಂಜಾನ್ ವೇಳೆ ಆಯೋಜಿಸುವ ಆಹಾರ ಮೇಳಕ್ಕೆ ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು, ಶಾಸಕ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

    • Ramzan Food Fair: ರಂಜಾನ್ ವೇಳೆ ಆಯೋಜಿಸುವ ಆಹಾರ ಮೇಳಕ್ಕೆ ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸರು, ಜನಪ್ರತಿನಿಧಿಗಳ ಸಹಕಾರ ಕೋರಿದ್ದಾರೆ.
ರಂಜಾನ್ ವೇಳೆ ಆಯೋಜಿಸುವ ಆಹಾರ ಮೇಳಕ್ಕೆ ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು, ಶಾಸಕ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ರಂಜಾನ್ ವೇಳೆ ಆಯೋಜಿಸುವ ಆಹಾರ ಮೇಳಕ್ಕೆ ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು, ಶಾಸಕ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಬೆಂಗಳೂರು: ರಂಜಾನ್‌ ಮಾಸದ ಅಂಗವಾಗಿ ಪ್ರತಿವರ್ಷ ಬೆಂಗಳೂರಿನ ಫ್ರೇಜರ್‌ ಟೌನ್‌ನಲ್ಲಿ ನಡೆಯುವ ಜನಪ್ರಿಯ ಆಹಾರ ಮೇಳಕ್ಕೆ ಈ ಬಾರಿ ತೀವ್ರ ವಿರೋಧ ವ್ಯಕ್ತವಾಗಿದೆ. ಆಹಾರ ಮೇಳವನ್ನು ನಿಷೇಧ ಮಾಡುವಂತೆ ಫ್ರೇಜರ್‌ ಟೌನ್‌ ನಿವಾಸಿಗಳು ಹೆಚ್ಚುವರಿ ಪೊಲೀಸ್‌ ಆಯುಕ್ತರು ಮತ್ತು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.

ಈ ವರ್ಷದ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ರಂಜಾನ್‌ ಉಪವಾಸ ಆರಂಭವಾಗಲಿದೆ. ಪ್ರತಿ ವರ್ಷ ಇಲ್ಲಿನ ಮಸೀದಿ ರಸ್ತೆ ಮತ್ತು ಎಂ ಎಂ ರಸ್ತೆಗಳಲ್ಲಿ 200 ಕ್ಕೂ ಹೆಚ್ಚು ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಇಲ್ಲಿ ರುಚಿಕರವಾದ ಬಿರಿಯಾನಿ, ಕಬಾಬ್ ಮತ್ತು ಹಲೀಮ್ ದೊರೆಯುತ್ತದೆ. ಈ ತಿನಿಸುಗಳನ್ನು ತಿನ್ನಲೆಂದೇ ಸಾವಿರಾರು ಜನ ಈ ರಸ್ತೆಗಳಿಗೆ ದಾಂಗುಡಿ ಇಡುತ್ತಾರೆ. ಆದರೆ ಇಲ್ಲಿನ ಸಾವಿರಾರು ನಿವಾಸಿಗಳಿಗೆ ತುಂಬಾ ಕಿರಿಕಿರಿ ಅನುಭವ ಉಂಟಾಗುತ್ತಿದೆ.

ಗ್ರಾಹಕರು, ಮಾಂಸದ ಖಾದ್ಯಗಳನ್ನು ಸೇವಿಸಿ ಪ್ಲೇಟ್‌, ತಟ್ಟೆ, ಲೋಟಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಮಾಂಸದ ತ್ಯಾಜ್ಯ ರಸ್ತೆಗಳಲ್ಲಿ ರಾಶಿ ರಾಶಿ ಬಿದ್ದಿರುತ್ತದೆ. ಸುಮಾರು ಒಂದು ತಿಂಗಳು ನಡೆಯುವ ಈ ಮೇಳದಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿವೆ. ಈ ಬಾರಿ ಯಾವುದೇ ಕಾರಣಕ್ಕೂ ಆಹಾರ ಮೇಳಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯ ಪುಲಕೇಶಿನಗರ ಶಾಸಕ ಎ ಸಿ ಶ್ರೀನಿವಾಸ್ ಅವರಿಗೆ ಮನವಿ ನೀಡಿದ್ದಾರೆ.

ಪುಲಕೇಶಿನಗರ ಪೊಲೀಸ್‌ ಠಾಣೆಯಲ್ಲಿ ನಿನ್ನೆ (ಫೆಬ್ರವರಿ 24, ಶನಿವಾರ) ನಡೆದ ಜನಸಂಪರ್ಕ ಸಭೆಯಲ್ಲಿ ಪೂರ್ವ ವಲಯದ ಹೆಚ್ಚುವರಿ ಪೊಲೀಸ್‌ ಆಯುಕ್ತ ರಮಣ್ ಗುಪ್ತಾ ಅವರಿಗೆ ಫ್ರೇಜರ್‌ ಟೌನ್‌ ಕ್ಷೇಮಾಭಿವೃದ್ಧಿ ಸಂಘ ಆಹಾರ ಮೇಳ ನಡೆಸುವುದು ಬೇಡ ಎಂದು ಕೇಳಿಕೊಂಡಿದ್ದಾರೆ.

ಆಹಾರ ಮೇಳ ವಿರೋಧದ ಹಿಂದಿನ ಕಾರಣ ತಿಳಿಸಿದ ಸೌದ್ ದಸ್ತಗೀರ್

ನಂತರ ಮಾತನಾಡಿದ ಸಂಘದ ಉಪಾಧ್ಯಕ್ಷ ಸೌದ್‌ ದಸ್ತಗೀರ್‌, ಫ್ರೇಜರ್‌ ಟೌನ್‌ನಲ್ಲಿ ಆಹಾರ ಮೇಳ ನಡೆಸುವುದು ಬೇಡ. ಕಲ್ಲಿದ್ದಲು ಮತ್ತು ಸೌದೆಯನ್ನು ಬಳಕೆ ಮಾಡುವುದರಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಶಬ್ದ ಮಾಲಿನ್ಯದಿಂದ ರಕ್ತದೊತ್ತಡ, ಕಿವಿ ಕೇಳಿಸದಿರುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಾತ್ರಿ ವೇಳೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಮಸ್ಯೆಗಳ ಪಟ್ಟಿಯನ್ನೇ ನೀಡುತ್ತಾರೆ.

ಮಧ್ಯಾಹ್ನ 3 ಗಂಟೆಯಿಂದ ತಡರಾತ್ರಿ 3 ಗಂಟೆಯವರೆಗೆ ವಹಿವಾಟು ನಡೆಯುತ್ತಿದ್ದು ನಿದ್ದೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಫ್ರೇಜರ್‌ ಟೌನ್‌ನಲ್ಲಿ ನಡೆಯುವ ಆಹಾರ ಮೇಳದ ವಿರುದ್ಧ ಅಭಿಯಾನ ಆರಂಭವಾಗಿದೆ. ಈ ಮೇಳದಲ್ಲಿ ಮಾಂಸದ ಆಹಾರ ಪದಾರ್ಥಗಳ ತಯಾರಿಕೆಗೆ ಸುಮಾರು ಮೂರು ಟನ್‌ನಷ್ಟು ಸೌದೆ ಉರಿಸಲಾಗುತ್ತಿದೆ. ಇದರ ಹೊಗೆಯಿಂದ ಮಕ್ಕಳು ಹಾಗೂ ವೃದ್ಧರಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆಹಾರ ಮೇಳ ನಡೆಸಲು ಅನುಮತಿ ನೀಡಿದ್ದು ಯಾರು ಎಂದು ತಿಳಿಯುತ್ತಿಲ್ಲ. ತ್ಯಾಜ್ಯ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ. ಸ್ಥಳೀಯರು ನೆಮ್ಮದಿಯಿಂದ ರಂಜಾನ್ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿ ಕೊಳ್ಳುತ್ತಾರೆ. ಆರೋಗ್ಯದ ಸಮಸ್ಯೆ ಜೊತೆಗೆ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತದೆ. ಪಾದಚಾರಿ ಮಾರ್ಗದ ಜೊತೆಗೆ ಈ ಎರಡೂ ರಸ್ತೆಗಳ ಅರ್ಧದಷ್ಟು ರಸ್ತೆಯನ್ನು ಆಹಾರ ಮೇಳಕ್ಕೆ ಮಳಿಗೆಗಳು ಅತಿಕ್ರಮಣ ಮಾಡಿ ಕೊಳ್ಳುತ್ತವೆ.

ಬೆಸ್ಕಾಂ ಅನುಮತಿ ಪಡೆಯದೇ ವಾಮಮಾರ್ಗದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಳ್ಳುತ್ತಾರೆ. ಸೀಮಿತ ಅವಧಿಯನ್ನು ಮೀರಿ ತಡರಾತ್ರಿಯವರೆಗೆ ವ್ಯಾಪಾರ ನಡೆಸುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ. ಇಲ್ಲಿ ತಯಾರಿಸುವ ಆಹಾರದ ಗುಣಮಟ್ಟ ಕಳಪೆಯಾಗಿದ್ದು ಯಾರೂ ಪರಿಶೀಲನೆ ಮಾಡುತ್ತಿಲ್ಲ. ರಸ್ತೆಗಳಲ್ಲೇ ಮದ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು ಬಾಟಲ್ ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಈ ರಸ್ತೆಗಳಲ್ಲಿ ಮಹಿಳೆಯರು ಓಡಾಟ ನಡೆಸುವುದು ಕಷ್ಟವಾಗುತ್ತಿದೆ. ಮಹಿಳೆಯರ ಶೋಷಣೆ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ. ತುರ್ತು ಸಮಯದಲ್ಲಿ ಹೊರ ಹೋಗಲು ಆಗುವುದಿಲ್ಲ. ಆಂಬುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಅಂತಲೂ ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯ ಶಾಸಕರು ಮತ್ತು ಪೊಲೀಸ್ ಇಲಾಖೆಯ ಮೇಲೆ ಜವಾಬ್ಧಾರಿ ಹೆಚ್ಚಿದ್ದು ಸಾರ್ವಜನಿಕರ ಸಹಾಯಕ್ಕೆ ಬರಬೇಕು ಎಂದು ಕೋರಿದ್ದಾರೆ.

(This copy first appeared in Hindustan Times Kannada website. To read more like this please visit kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ