Bangalore Crime: ಪಬ್‌ಗೆ ತೆರಳಿದ್ದಾಗ ಪ್ರಜ್ಞೆ ತಪ್ಪಿಸಿ ಅತ್ಯಾಚಾರ,ಯುವತಿ ದೂರು: ತನಿಖೆ ನಡೆಸಿದ ಬೆಂಗಳೂರು ಪೊಲೀಸರು
Dec 16, 2023 06:57 AM IST
ಬೆಂಗಳೂರಿನಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿರುವ ಕುರಿತು ಯುವತಿಯೊಬ್ಬರು ದೂರು ನೀಡಿದ್ಧಾರೆ.
- Bangalore crime updates ಬೆಂಗಳೂರಿನಲ್ಲಿ ಪಬ್‌ಗೆ ಹೋಗಿದ್ದಾಗ ಪ್ರಜ್ಞಾಹೀನಳಾಗಿದ್ದು, ಈ ವೇಳೆ ನನ್ನ ಮೇಲೆ ಅತ್ಯಾಚಾರವೆಸಗಿರುವ ಅನುಮಾನವಿದೆ ಎಂದು ಯುವತಿ ದೂರು ನೀಡಿದ್ದು, ಪೊಲೀಸರು( bengaluru police) ತನಿಖೆ ಶುರು ಮಾಡಿದ್ಧಾರೆ.
ಬೆಂಗಳೂರು: ಪಬ್‌ಗೆ ತೆರಳಿದ್ದ ಸಂದರ್ಭದಲ್ಲಿ ನನ್ನ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರುವ ಅನುಮಾನವಿದ್ದು, ತನಿಖೆ ನಡೆಸುವಂತೆ ಯುವತಿಯೊಬ್ಬರು ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನನ್ವಯ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಡಿಸೆಂಬರ್ 12ರಂದು ರಾತ್ರಿ ನಡೆದಿರುವ ಘಟನೆ ಕುರಿತು ಯುವತಿಯೊಬ್ಬರು ದೂರು ನೀಡಿದ್ದು, ಅತ್ಯಾಚಾರ (ಐಪಿಸಿ 376) ಆರೋಪದಡಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಾಕ್ಷಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ಆಗಿದ್ದೇನು?
ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಈ ದೂರು ನೀಡಿರುವ ಯುವತಿ, ಡಿ. 12ರಂದು ರಾತ್ರಿ ಕೋರಮಂಗಲದ ಪಬ್‌ವೊಂದಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಮದ್ಯ ಕುಡಿದಿದ್ದರು ಎಂದು ತಿಳಿದು ಬಂದಿದೆ. ನಂತರ ಯುವತಿ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಡಿ. 13ರಂದು ನಸುಕಿನಲ್ಲಿ ಪ್ರಜ್ಞೆ ಬಂದಾಗ ಅವರು ಆಡುಗೋಡಿ ಬಳಿ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜ್ಞೆ ಬಂದಾಗ ಯುವತಿ ಕೈಗಳ ಮೇಲೆ ಪರಚಿದ ಗಾಯಗಳಿದ್ದವು. ಸಮೀಪದ ಮನೆಯೊಂದಕ್ಕೆ ತೆರಳಿದ್ದ ಯುವತಿ ಅವರ ಸಹಾಯದಿಂದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಆಡುಗೋಡಿ ಠಾಣೆಯ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು. ನಂತರ, ಘಟನೆ ನಡೆದ ಸ್ಥಳದ ಆಧಾರದಲ್ಲಿ ಕೋರಮಂಗಲ ಠಾಣೆಗೆ ಮಾಹಿತಿ ತಿಳಿಸಿದ್ದರು ಎಂದು ಹೇಳಿವೆ.
ಅತ್ಯಾಚಾರ ಪುರಾವೆಗಳಿಲ್ಲ
ರಾತ್ರಿಯಿಂದ ಬೆಳಗಿನ ಜಾವದವರೆಗೆ ನನಗೆ ಪ್ರಜ್ಞೆ ಇರಲಿಲ್ಲ. ಈ ಸಂದರ್ಭದಲ್ಲಿ ಅಪರಿಚಿತರು ನನ್ನ ಮೇಲೆ ಅತ್ಯಾಚಾರ ನಡೆಸಿರುವ ಅನುಮಾನವಿದೆ ಎಂದು ಯುವತಿಯು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿಗೆ ಸಂಬಂಧಪಟ್ಟಂತೆ ಘಟನೆ ನಡೆದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಅತ್ಯಾಚಾರ ಎಸಗಿರುವುದಕ್ಕೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ.
ಯುವತಿ ಪಬ್‌ಗೆ ಹೋಗಿರುವುದು, ಮದ್ಯ ಕುಡಿದಿರುವುದು ಹಾಗೂ ಮದ್ಯದ ನಶೆಯಲ್ಲಿ ಅಲ್ಲಿಂದ ಹೊರಗೆ ಬಂದಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಜೊತೆಗೆ ರಸ್ತೆಯಲ್ಲಿ ಯುವತಿ ನಡೆದುಕೊಂಡು ಹೋಗುವಾಗ ಹಲವು ಬಾರಿ ಆಯತಪ್ಪಿ ಬಿದ್ದಿದ್ದಾರೆ. ಆಗ ಸಣ್ಣಪುಟ್ಟ ಗಾಯಗಳಾಗಿವೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಲಭ್ಯವಾಗಿವೆ. ಎಲ್ಲಿ ಬಿದ್ದಿದ್ದರೋ ಅಲ್ಲಿಯೇ ಯುವತಿ ಪ್ರಜ್ಞೆ ತಪ್ಪಿದ್ದರು. ಬೆಳಗಿನ ಜಾವ ಆಕೆಯೇ ಎದ್ದು ತಾವು ವಾಸಿಸುತ್ತಿದ್ದ ಪಿಜಿಗೆ ಹೋಗಿದ್ದರೆಂಬುದು ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಇದುವರೆಗೂ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಬಂದ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಖಾಸಗಿ ಕಂಪನಿ ನೌಕರ ಆತ್ಮಹತ್ಯೆ
ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಗಡಿಯಾರ ತಯಾರಿಕೆ ಕಂಪನಿಯೊಂದರ ಕಾರ್ಮಿಕ ಗೋವಿಂದರಾಜ್ ಎಂಬಾತ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶದ ಗುಡಿಬಂಡೆಯಗೋವಿಂದರಾಜ್( 26) 6 ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ತಾಯಿ, ಟಿ. ದಾಸರಹಳ್ಳಿ ಬಳಿಯ ಅಪಾರ್ಟ್‌ಮೆಂಟ್ ವೊಂದರಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೊಠಡಿಯೊಂದರಲ್ಲಿ ತಾಯಿ ಜೊತೆ ಗೋವಿಂದರಾಜ್ ವಾಸವಿದ್ದರು ಎಂದು ತಿಳಿದು ಬಂದಿದೆ.
ಗುರುವಾರ ಸಂಜೆ ಕೆಲಸ ಮುಗಿಸಿ ಗೋವಿಂದರಾಜ್ ಮನೆಗೆ ಮರಳಿದ್ದರು. ಆಗ ಅವರು ತಾಯಿಯ ಸೀರೆಯಿಂದ ಅಪಾರ್ಟ್‌ಮೆಂಟ್ ನ ಮೆಟ್ಟಿಲುಗಳ ಬಳಿಯ ಕಂಬಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಡಿಯಾರ ಕಂಪನಿಯ ವ್ಯವಸ್ಥಾಪಕ ಗುರುರಾಜಪ್ಪ ಹಾಗೂ ಮೇಲ್ವಿಚಾರಕ ನಂಜಪ್ಪ ನನಗೆ ರಜೆ ನೀಡುತ್ತಿರಲಿಲ್ಲ. ಕೆಲಸದ ಸ್ಥಳದಲ್ಲಿ ಕಿರುಕುಳ ನೀಡುತ್ತಿದ್ದರು. ರಜೆ ಕೇಳಿದ್ದಕ್ಕೆ, ಕೆಲಸದಿಂದ ತೆಗೆಯುವುದಾಗಿ ಹೆದರಿಸಿದ್ದರು ಎಂದು ಗೋವಿಂದರಾಜ್ ಮರಣಪತ್ರ ಬರೆದಿದ್ದಾರೆ. ಜೊತೆಗೆ, ವಿಡಿಯೊ ಸಹ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಗುರುರಾಜಪ್ಪ ಹಾಗೂ ನಂಜಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರೂ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಗೊತ್ತಾಗಿದೆ.
ಡಿ. 13 ಬುಧವಾರ ರಜೆ ಪಡೆದಿದ್ದ ಗೋವಿಂದರಾಜ್, ಗುರುವಾರ ಬೆಳಿಗ್ಗೆ ಕೆಲಸಕ್ಕೆ ಹಾಜರಾಗಿದ್ದರು. ರಜೆ ಪಡೆದಿದ್ದನ್ನು ಪ್ರಶ್ನಿಸಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದೇ ವಿಷಯಕ್ಕೆ ಗೋವಿಂದರಾಜ್ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಹದ್ಯೋಗಿಗಳು ಆರೋಪಿಸಿದ್ದಾರೆ.